ಮತದಾರರ ನೊಂದಣಿ ಪ್ರಕ್ರಿಯೆಗೆ ಫಾರ್ಮ್ 6 ಜೊತೆಗೆ ಮ್ಯಾಪಿಂಗ್ ಡಿಕ್ಲರೇಶನ್ ಕೊಡಬೇಕಾ? ಚುನಾವಣಾ ಆಯೋಗದಿಂದ ಸ್ಪಷ್ಟನೆ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ನಡೆಯುವ ರಾಜ್ಯಗಳಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಫಾರ್ಮ್ 6 ಜೊತೆ ಮ್ಯಾಪಿಂಗ್ ಡಿಕ್ಲರೇಶನ್ ಸಲ್ಲಿಕೆ ಕಡ್ಡಾಯ. ಆದರೆ, ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿಲ್ಲದ ರಾಜ್ಯಗಳಲ್ಲೂ ಈ ಡಿಕ್ಲರೇಶನ್ ಸಲ್ಲಿಸಬೇಕಾ? ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಸ್ಪಷ್ಟಪಡಿಸಿದ್ದು, ಆ ರಾಜ್ಯಗಳಲ್ಲಿ ಮ್ಯಾಪಿಂಗ್ ಘೋಷಣೆ ಅಗತ್ಯ ಇಲ್ಲ ಎಂದಿದೆ.

ನವದೆಹಲಿ, ಸೆಪ್ಟೆಂಬರ್ 27: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ನಡೆಯದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಫಾರ್ಮ್ 6 ಜೊತೆ ಮ್ಯಾಪಿಂಗ್ ಡಿಕ್ಲರೇಶನ್ (Mapping Declaration) ನೀಡುವುದು ಅಗತ್ಯ ಇರುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಹೊಸದಾಗಿ ಮತದಾರರಾಗಿ ನೋಂದಾಯಿಸಿಕೊಳ್ಳಲು ಸಲ್ಲಿಸುವ ಫಾರ್ಮ್ 6 ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಕೊಡಲಾಗುತ್ತದೆ. ಎಸ್‌ಐಆರ್ ಪ್ರಕ್ರಿಯೆ ಇರುವೆಡೆ ಈ ಫಾರ್ಮ್ 6 ಜೊತೆಗೆ ಮ್ಯಾಪಿಂಗ್ ಡಿಕ್ಲರೇಶನ್ ಅನ್ನೂ ಸಲ್ಲಿಸಬೇಕಾಗುತ್ತದೆ. ಎಸ್‌ಐಆರ್ ನಡೆಯುತ್ತಿಲ್ಲದ ಪ್ರದೇಶಗಳಲ್ಲೂ ಈ ಡಿಕ್ಲರೇಶನ್ ಸಲ್ಲಿಸಬೇಕಾ ಎಂಬ ಗೊಂದಲಕ್ಕೆ ಚುನಾವಣಾ ಆಯೋಗ ತೆರೆ ಎಳೆದಿದೆ.
ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆ ನಡೆಯದಿರುವ ರಾಜ್ಯಗಳಲ್ಲಿ (ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳು ಸೇರಿದಂತೆ) ಎಸ್‌ಐಆರ್ ಪೂರ್ವದಲ್ಲಿದ್ದ ಹಳೆಯ ಫಾರ್ಮ್ 6 ಮಾದರಿಯೇ ತಕ್ಷಣದಿಂದ ಜಾರಿಗೆ ಬರಲಿದೆ. 1960 ರ ‘ಇಲೆಕ್ಟರ್ಸ್ ನೋಂದಣಿ ನಿಯಮಾವಳಿ’ಯಂತೆಯೇ ಅರ್ಜಿ ಸ್ವೀಕರಿಸಲಾಗುತ್ತದೆ.
ಇದನ್ನೂ ಓದಿ: ‘ಚಿಪ್‌ಗಳಿಂದ ಶಿಪ್‌ಗಳವರೆಗೆ ರಕ್ಷಣಾ ವಲಯದಲ್ಲಿ ಭಾರತ ಸಂಪೂರ್ಣ ಸ್ವಾವಲಂಬಿಯಾಗಬೇಕು’ – ರಾಜನಾಥ್ ಸಿಂಗ್ ಕರೆ
ಎಸ್‌ಐಆರ್ ನಡೆಯುತ್ತಿರುವ 12 ರಾಜ್ಯಗಳಿಗೆ ನಿಯಮ ಕಡ್ಡಾಯ: ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಮತದಾರರು ಫಾರ್ಮ್ 6 ಜೊತೆಗೆ ತಮ್ಮ ಅಥವಾ ತಮ್ಮ ಪೋಷಕರ/ಪತಿಯ ಇಪಿಐಸಿ (EPIC) ಸಂಖ್ಯೆ ಮತ್ತು ಕಳೆದ ಎಸ್‌ಐಆರ್ ಪಟ್ಟಿಯ ವಿವರಗಳನ್ನು ಒಳಗೊಂಡ ಮ್ಯಾಪಿಂಗ್ ಸ್ವಯಂ ಘೋಷಣಾಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
ಸುಪ್ರೀಂ ಕೋರ್ಟ್ ಆದೇಶ ಮತ್ತು ಆಯೋಗದ ಸಮರ್ಥನೆ
ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಫಾರ್ಮ್ 6 ಜೊತೆಗೆ ಮ್ಯಾಪಿಂಗ್ ಘೋಷಣಾಪತ್ರವನ್ನು ಪಡೆದುಕೊಳ್ಳುವುದನ್ನು ದೇಶದ ಅತ್ಯುನ್ನತ ನ್ಯಾಯಾಲಯ (Supreme Court) ಎತ್ತಿಹಿಡಿದಿದೆ ಎಂದು ಮೂವರ ಸದಸ್ಯರನ್ನೊಳಗೊಂಡ ಪೂರ್ಣ ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ.
ಈ ನಿರ್ಧಾರವನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಎಸ್. ಎಸ್. ಸಂಧು ಹಾಗೂ ವಿವೇಕ್ ಜೋಶಿ ಅವರನ್ನೊಳಗೊಂಡ ಪೂರ್ಣ ಆಯೋಗದ ಸಮ್ಮತಿಯೊಂದಿಗೆ ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ಕಂಟಕ ತರುವ ಪ್ರತಿ ಪಿತೂರಿಯಲ್ಲಿ ಕಾಂಗ್ರೆಸ್ ಭಾಗಿ: ಸಿಎಂ ಯೋಗಿ ಆದಿತ್ಯನಾಥ್ ನೇರ ವಾಗ್ದಾಳಿ
ರಾಜಕೀಯ ಚರ್ಚೆ ಮತ್ತು ಹಿನ್ನೆಲೆ
ಫಾರ್ಮ್ 6 ರ ಸ್ವರೂಪವನ್ನು ಏಕಪಕ್ಷೀಯವಾಗಿ ಬದಲಾಯಿಸಲಾಗಿದೆ ಎಂದು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಇತ್ತೀಚೆಗೆ ಆಕ್ಷೇಪ ಎತ್ತಿದ್ದವು. ಆದರೆ ಆಯೋಗವು 2025 ರ ಜೂನ್ 24 ರಂದು ಬಿಹಾರದಲ್ಲಿ ಜಾರಿಗೆ ತಂದ ಮೊದಲ ಎಸ್‌ಐಆರ್ ಆದೇಶದಿಂದ ಹಿಡಿದು ಇತ್ತೀಚಿನ ಹಂತಗಳವರೆಗೂ ಎಲ್ಲಾ ನಿರ್ಧಾರಗಳನ್ನು ಆಯೋಗವು ಸರ್ವಾನುಮತದಿಂದಲೇ ತೆಗೆದುಕೊಂಡಿದೆ ಎಂದು ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಈ ಸ್ಪಷ್ಟನೆಯಿಂದಾಗಿ ಎಸ್‌ಐಆರ್-ರಹಿತ ರಾಜ್ಯಗಳಲ್ಲಿ ಹೊಸದಾಗಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವ ಕೋಟ್ಯಂತರ ಯುವಕರಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತಷ್ಟು ಸರಳವಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:04 pm, Sun, 27 September 26




