Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
*
ಕೃತಿ : ಮಹಾವೃಕ್ಷ (ಕಾದಂಬರಿ)
ಲೇಖಕರು : ಕಂನಾಡಿಗ ನಾರಾಯಣ
ಪುಟ : 144
ಬೆಲೆ : ರೂ. 160
ಮುಖಪುಟ ವಿನ್ಯಾಸ : ಸೌಮ್ಯ ಕಲ್ಯಾಣಕರ್
ಪ್ರಕಾಶನ : ನವಕರ್ನಾಟಕ ಪ್ರಕಾಶನ, ಬೆಂಗಳೂರು
*
ಮರವೊಂದು ಈ ಬಗೆಯ ಸ್ವಾತಂತ್ರ್ಯವನ್ನು ದಕ್ಕಿಸಿಕೊಂಡಿದ್ದರಿಂದಲೇ ನಮಗೆ ಗೊತ್ತಿರುವ ಕತೆಗಳನ್ನು ಭಿನ್ನ ದೃಷ್ಟಿಯಿಂದ ಓದುಗರೆದುರು ನಿರೂಪಿಸಲು ಕಂನಾಡಿಗಾ ನಾರಾಯಣರಿಗೆ ಸಾಧ್ಯವಾಗಿದೆ. ಕನ್ನಡದ ಮಕ್ಕಳ ಹೃದಯವನ್ನು ನೇರವಾಗಿ ತಟ್ಟುವ ಗೋವಿನ ಹಾಡು ಇಲ್ಲಿ ಬಂದ ಪರಿಯನ್ನೇ ನೋಡಬಹುದು. ಹಾಡಿನ ಮಾಮೂಲು ಕೊನೆಯಲ್ಲಿ ಬರುವ …ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು ಎಂಬ ಸಾಲುಗಳು ಪ್ರೌಢ ಓದುಗರಿಗೆ ಅಸಹಜವಾಗಿ ಕಾಣುತ್ತದೆ. ಆದರೆ ಈ ಕಾದಂಬರಿಯಲ್ಲಿ ಚಂಡವ್ಯಾಘ್ರನ ಸಾವು ಅರಳೀಮರಕ್ಕೆ ಬೇರೆ ರೀತಿಯಲ್ಲೇ ಕಾಣುತ್ತದೆ. ಕಾಳಿಂಗ ಗೊಲ್ಲನ ಕೊನೆಯ ಮಗನ ಮೂಲಕ ಆ ಹಾಡು ಏಕೆ, ಹೇಗೆ ಹುಟ್ಟಿತು ಎಂಬುದೂ ಇಲ್ಲಿ ರಸಬದ್ಧವಾಗಿ ಬಂದಿದೆ.
ನಾಗೇಶ ಹೆಗಡೆ, ಲೇಖಕ, ಪತ್ರಕರ್ತ
ಅದಾಗಲೇ ಊರುಬಿಟ್ಟು ಇಪ್ಪತ್ತೈದು ವರ್ಷಗಳೇ ಆಗಿದ್ದರೂ ತಿಂಗಳಿಗೊಂದಾವರ್ತಿಯಾದರೂ ಊರಿಗೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ಒಂದು ದಿನ ಹೀಗೆ ಶಿವಮೊಗ್ಗದ ತಪ್ಪಲಿನ ನನ್ನೂರಿಗೆ ಹೋದಾಗ ದೂರದಿಂದಲೇ ಬೋಳುಬೋಳು ಅನ್ನಿಸಿತು. ಹೃದಯ ಭಾಗದಲ್ಲೇ ಏನೋ ಕಳಕೊಂಡ ಭಾವ. ನಾನು ಊರುಬಿಟ್ಟ ನಂತರ ನನ್ನೂರಿಗೆ ಬಂದು ನೆಲೆಸಿರುವ ಸಹಪಾಠಿ ಗೆಳೆಯ ಕುಂಸಿ ಉಮೇಶನನ್ನ ಕರೆದುಕೊಂಡು ಹೋಗಿ ನೋಡಿದರೆ, ಸುಮಾರು ಇನ್ನೂರು-ಮುನ್ನೂರು ವರ್ಷಗಳ ಬೃಹತ್ ಅರಳೀಮರವನ್ನು ಅದರ ಸುಳಿವೂ ಇರದಂತೆ ಬೇರುಸಹಿತ ಕತ್ತರಿಸಿದ್ದಾರೆ! ಬೇರು-ಕೊಂಬೆಗಳನ್ನು ಕತ್ತರಿಸಿದ ಅದರ ಬೊಡ್ಡೆಯನ್ನು ಪಕ್ಕದಲ್ಲೇ ಇದ್ದ, ನಾನು ಪ್ರಾಥಮಿಕ-ಮಾಧ್ಯಮಿಕ ಓದಿದ್ದ ಶಾಲೆಯ ಕಾಂಪೌಂಡಿಗೆ ಒರಗಿಸಿದ್ದಾರೆ! ಅದರ ಬುಡವಿದ್ದ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತನ್ನ ಹೆಬ್ಬಾವಿನಂಥ ಮೈಯ್ಯನ್ನು ಅಗಲಿಸಿ ಮಲಗಿಕೊಂಡಿದೆ. ಆಗಲೇ ಒಂದು ದಟ್ಟ ವಿಷಾದ ನನ್ನನ್ನು ಆವರಿಸಿತು. ಪಕ್ಕದಲ್ಲೇ ಇದ್ದ ಗೆಳೆಯ ಇದರ ಬಗ್ಗೆ ಒಂದು ಕಾದಂಬರಿಯನ್ನೇ ಬರೆಯಬಹುದು ನೋಡು ಎಂದು ಸಲಹೆ ನೀಡಿದ.
ಕಂನಾಡಿಗಾ ನಾರಾಯಣ, ಲೇಖಕ
*
ಸುತ್ತಲೂ ಉಸಿರುಗಟ್ಟಿಸುವ ಹೊಗೆಯ ವಾಸನೆ. ಗಾಳಿಗೆ ಬೂದಿಯು ಹಾರುತ್ತ ಮೈತುಂಬ ಅಡರುತ್ತಿದ್ದರೆ ಎಂಥ ನಿರ್ವಾತ ಪ್ರದೇಶದಲ್ಲಿ ನಾನಿದ್ದೇನಲ್ಲ ಎಂದು ಭಯವಾಗುತ್ತಿತ್ತು. ಅವತ್ತಿಂದ ಗುಂಪುಗುಂಪಾಗಿ ಬಾಳುತ್ತಿದ್ದ ನಾನಿಂದು ಏಕಾಂಗಿ ಎಂದು ನನಗೇ ಅನ್ನಿಸಲಾರಂಭಿಸಿತು. ಅಂಥ ವೇಳೆ ತೂರಿಬಂದ ಒಂದು ಪರಿಮಳ ಜೀವಂತಿಕೆಯ ಸಿಂಚನವನ್ನು ಸಿಂಪಡಿಸಿದAತಾಯಿತು. ಯಾವುದೋ ಮಲ್ಲಿಗೆಯೋ, ಸಂಪಿಗೆಯೋ, ಸುರಗಿಯೋ, ಇನ್ಯಾವುದೋ ಸೌಗಂಧಿಕ ಪುಷ್ಪವೋ ಸುವಾಸನೆಯನ್ನು ಬೀರುತ್ತಲಿತ್ತು… ನನ್ನ ತುದಿಯಲ್ಲಿ ಅಳಿದುಳಿದಿದ್ದ ಎಲೆಗಳನ್ನು ಕನ್ನಡಿಯಂತೆ ಎಲ್ಲ ಕಡೆಗೆ ತಿರುಗಿಸಿ ಪ್ರತಿಫಲನವನ್ನು ಗ್ರಹಿಸಿದೆ. ಎಲ್ಲೂ ಅಲ್ಲ, ನಾನು ಬೇರೂರಿದ್ದ ನದಿಯ ನೀರಿಗೆ ತನ್ನ ಬೇರನ್ನೂ ಹರಿಬಿಟ್ಟಿದ್ದ ಜಾಲಾರ ಮರ ವಸಂತಕ್ಕೆ ತನ್ನ ಅಚ್ಚಬಿಳಿಯ ಹೂಗಳನ್ನು ಗೊಂಚಲು ಗೊಂಚಲಾಗಿ ತೂಗಿಬಿಟ್ಟಿತ್ತು. ಅದರ ಸುಗಂಧಭರಿತ ವಾಸನೆ ಗಾಳಿಯಲ್ಲೆಲ್ಲ ಪಸರಿಸಿ ಇಡೀ ಕಾಡಿಗೆ ಕಾಡೇ ಆ ವನಸುಮಕ್ಕೆ ಮಾರುಹೋಗಿತ್ತು. ನದಿಯ ಮಧ್ಯೆ ನಡುಗಡ್ಡೆಯಲ್ಲಿ ಪವಡಿಸಿದ್ದರಿಂದ, ಬೆಂಕಿಯ ಕೆನ್ನಾಲಿಗೆ ಅಲ್ಲೀವರೆಗೆ ಚಾಚಲು ಸಾಧ್ಯವಿಲ್ಲವಾಗಿದ್ದರಿಂದ ಬಚಾವಾಗಿ ನಳನಳಿಸುತ್ತ ನಮ್ಮಗಳೆಲ್ಲರ ಹೊಟ್ಟೆ ಉರಿಸುತ್ತಿತ್ತು…
ಎಲ್ಲಿ ಮಳೆಯಾಯಿತೋ ಏನೋ ಎನ್ನುವಂತೆ ಮಣ್ಣಿನ ವಾಸನೆಯ ಘಾಟು ನನ್ನವರೆಗೂ ಅಡರಿತು.
ನಾನು ಸುಟ್ಟುಹೋದ ನಂತರ ನನ್ನ ಸಂವೇದನಾಂಗಗಳೆಲ್ಲ ಮುರುಟಿ ಹೋಗಿದ್ದಾವೆಂದುಕೊಂಡಿದ್ದೆ. ಆದರೆ ಹಾಗೇನಾಗಿರಲಿಲ್ಲ. ಹೂವಿನ ವಾಸನೆ, ಮಣ್ಣಿನ ವಾಸನೆಯನ್ನೆಲ್ಲ ಗ್ರಹಿಸುತ್ತಿದ್ದೇನೆಂದರೆ, ನನ್ನಲ್ಲಿನ್ನೂ ಸಂವೇದನೆ ಉಳಿದುಕೊಂಡಿದೆ, ನಾನಿನ್ನೂ ಬದುಕಿದ್ದೇನೆಂದೇ ಅರ್ಥವಲ್ಲವೇ?
ಅಷ್ಟರಲ್ಲಿ ಕುದುರೆಗಳ ಖುರಪುಟ ಕೇಳಿ ಆತಂಕವಾಯಿತು. ಅಂದು ಆನೆಯನ್ನು ಹಿಡಿಯಲು ಬಂದಿದ್ದಂಥ ಜನಗಳಿಗಿಂತ ಕುದುರೆಯ ಬೆನ್ನೇರಿ ಬಂದ ಈ ಜನ ಬಹಳ ಶಿಸ್ತುಬದ್ಧರಾಗಿದ್ದರು. ಎಲ್ಲರೂ ಒಂದೇ ರೀತಿಯ ಬಟ್ಟೆಗಳನ್ನು ತೊಟ್ಟಿದ್ದರು. ಬಹುಶಃ ಯಾವುದೋ ರಾಜನ ಕಡೆಯವರಿರಬೇಕು. ಯಾವುದೋ ಯಾಕೆ, ಈ ಪ್ರದೇಶದ ರಾಜನ ಕಡೆಯವರೇ ಆಗಿರಬೇಕು. ಬಂದವರಲ್ಲಿ ನೂರಾರು ಜನ ಒಣಗಿದ ಬರಚಲು ಗಿಡಗಳ ಬುಡಗಳನ್ನೇ ಕತ್ತರಿಸಿ ಪೊರಕೆಯಂತೆ ಮಾಡಿಕೊಂಡು, ಇನ್ನೂ ಉರಿಯುತ್ತಲೇ ಇದ್ದ ಕಾಡ್ಗಿಚ್ಚಿಗೆ ಹುಚ್ಚು ನಾಯಿಗೆ ಬಡಿಯುವಂತೆ ಬಡಿದು ಬಡಿದು ಬೆಂಕಿಯನ್ನು ಆರಿಸುತ್ತಿದ್ದರು. ಇನ್ನು ಕೆಲವರು ನದಿಯಿಂದ ಬಿಂದಿಗೆಯಲ್ಲಿ ನೀರನ್ನು ತುಂಬಿಕೊಂಡು ಹೋಗಿ ಸುರಿಸುರಿದು ಆರಿಸುತ್ತಿದ್ದರು…
ಇನ್ನೊಂದು ಗುಂಪು ನನ್ನ ಕಡೆಗೂ ಆಗಮಿಸಿತು. ಕಾಡಿಗೆ ಬೆಂಕಿ ಬಿದ್ದಿದ್ದರಿಂದ ಉಂಟಾಗಿರುವ ಹಾನಿಯ ಬಗ್ಗೆ ವರದಿ ಮಾಡಲು ಈ ನಾಡಿನ ಮಹಾರಾಜ ತನ್ನ ಅಧಿಕಾರಿಗಳನ್ನು ಕಳುಹಿಸಿದ್ದನಂತೆ. ಅವರು ಇಡೀ ಕಾಡನ್ನೆಲ್ಲ ಅಲೆದಾಡಿ ಪರಿಶೀಲಿಸಿದರು. ಅವರಲ್ಲಿ ಒಬ್ಬಾತ ತನ್ನ ತಲೆಯೆತ್ತಿ ನನ್ನ ಸುಳಿಯವರೆಗೆ ನೋಡಿ ಹೌಹಾರಿದ. ‘ಅಯ್ಯೋ ದೇವರ ಮರವೂ ಸುಟ್ಟುಹೋಗಿದೆ’ ಎಂದ. ಎಲ್ಲರೂ ನನ್ನತ್ತ ತಿರುಗಿದರು. ಕೆಲವರು ಕಾಲಲ್ಲಿನ ಪಾದರಕ್ಷೆಗಳನ್ನು ಕಳಚಿ ನನ್ನ ಬೊಡ್ಡೆಗೆ ತಲೆಯಿಟ್ಟು ನಮಸ್ಕರಿಸಿದರು. ನಾನು ಯಾವ ಜಾತಿಯ ಮರವೆಂದಾಗಲೀ, ನನ್ನ ಮೌಲ್ಯವೇನೆಂದಾಗಲೀ ಅಲ್ಲಿಯವರೆಗೆ ನನಗೆ ತಿಳಿದಿರಲಿಲ್ಲ. ನಾನು ದೈವಾಂಶ ಸಂಭೂತ ವಂಶಕ್ಕೆ ಸೇರಿದ್ದೇನೆಂದು ತಿಳಿದಾದ ನಂತರ ನನಗೆ ಏನೋ ಒಂಥರ ಮೇಲರಿಮೆ ಬಂದಂತಾಯಿತು. ಅವರಲ್ಲಿ ಒಬ್ಬಾತ ‘ಇಂಥ ದಟ್ಟ ಕಾಡಿನಲ್ಲಿ ಅಶ್ವತ್ಥ ವೃಕ್ಷ ಹೇಗೆ ಹುಟ್ಟಿ ಬೆಳೆಯಿತೋ?’ ಎಂದು ಆಶ್ಚರ್ಯ ವ್ಯಕ್ತಪಡಿಸಿದ. ಅಂದರೆ ನನ್ನದು ಅಶ್ವತ್ಥ ವೃಕ್ಷದ ಜಾತಿಯೆಂಬುದು ತಿಳಿಯಿತು. ಆಗಿನಿಂದಲೂ ಕಾಡಿನಲ್ಲಿ ನನ್ನಂಥ ವರ್ಗಕ್ಕೆ ಸೇರಿದ ಒಂದೂ ಮರವಿಲ್ಲವಲ್ಲ ಎಂದು ಸಂಶಯಪಡುತ್ತಿದ್ದುದಕ್ಕೆ ಅನುಸಾರವಾಗಿ ನನ್ನದು ಅಪೂರ್ವವಾದ ಜಾತಿಯೆಂಬುದು ಮನವರಿಕೆಯಾಯಿತು. ಆದಾಗ್ಯೂ ನನ್ನ ಜಾತಿಯ ಮರಗಳು ಈ ಕಾಡಿನಲ್ಲಿ ಇಲ್ಲವೆಂದಾದರೆ ನನ್ನ ತಾಯಿ ಇನ್ನೆಷ್ಟು ದೂರದವಳಿರಬೇಕು ಎಂಬ ಸಂಶಯ ಮತ್ತೆ ನನ್ನನ್ನು ಕಾಡಲಾರಂಭಿಸಿತು. ಇನ್ನೊಬ್ಬ, ‘ಬುದ್ಧನಿಗೆ ಜ್ಞಾನೋದಯವಾದ ಬೋಧಿವೃಕ್ಷ ಏನಿದೆಯಲ್ಲ, ಅದು ಇದೇ ಜಾತಿಯದೆ’ ಎಂದ. ಹಾಗಾದರೆ ನನ್ನ ಮೂಲ ಎಲ್ಲೆಲ್ಲೋ ಅಡಗಿದೆ ಎಂಬುದಂತೂ ಮನವರಿಕೆಯಾಯಿತು.
ಸುಯ್ಯನೆ ಸುರುಳಿಯಂತೆ ಸುಳಿದಾಡಿಕೊಂಡು ಬಂದ ಸುಳಿಗಾಳಿ ಹೇಳಿತು- ಅವತ್ತು ಆನೆಯನ್ನು ಖೆಡ್ಡಾಕ್ಕೆ ಕೆಡವಿ ಎಳೆದುಕೊಂಡು ಹೋದರಲ್ಲ, ಆ ಮಹಾರಾಜನ ಕಡೆಯವರೇ ಇವರೆಂದು. ಆ ರಾಜನ ಬಳಿ ಹತ್ತು ಸಾವಿರಕ್ಕೂ ಹೆಚ್ಚಿನ ದಷ್ಟಪುಷ್ಟವಾದ ಆನೆಗಳಿವೆಯಂತೆ. ಅವುಗಳಲ್ಲೆಲ್ಲ ಸೌಮ್ಯವಾದ, ಮರಿಯಿದ್ದಾಗಿನಿಂದಲೂ ಮನುಷ್ಯರ ಸಹವಾಸ ಮಾಡಿರುವ ಆನೆಯನ್ನು ಪಟ್ಟದಾನೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರಂತೆ. ಅದರ ಕುತ್ತಿಗೆ ಮೇಲೆ ಕುಳಿತ ಮಾವುತ ತನ್ನ ಕೈಯ್ಯಲ್ಲಿರುವ ಮಂತ್ರದಂಡದಂಥ ಅಂಕುಶದಿಂದ ಅದನ್ನು ನಿಯಂತ್ರಿಸುತ್ತಾನಂತೆ. ಅದರ ಬೆನ್ನ ಮೇಲೆ ಚಿನ್ನದ ಅಂಬಾರಿಯನ್ನು ಕಟ್ಟಿ, ಅದರ ನೆರಳಲ್ಲಿ ರಾಜಗಾಂಭೀರ್ಯದಿಂದ ಕುಳಿತ ಮಹಾರಾಜ ಸಿಂಹಾವಲೋಕನ ಮಾಡುತ್ತಲೇ ರಾಜ್ಯದ ಎಲ್ಲ ಸ್ಥಿತಿಗತಿಗಳನ್ನೂ ಅರ್ಥಮಾಡಿಕೊಂಡು ಬಿಡುತ್ತಾನಂತೆ. ಅಷ್ಟು ಬುದ್ಧಿವಂತನಂತೆ ಆತ. ಆತನನ್ನು ಮೀರಿಸುವಂಥ ರಾಜ ಈ ಭೂಮಿಯ ಮೇಲೆಯೇ ಇಲ್ಲವಂತೆ. ಅದೇನು ಗತ್ತು, ಅದೇನು ಗೈರತ್ತು! ಅಷ್ಟೇ ಅಲ್ಲ, ಅದೆಂಥ ಅಂದ, ಚೆಂದವಂತೆ. ಅಂಥ ರಾಜಕಳೆ ಹೊಂದಿರುವ ಇನ್ನೊಬ್ಬ ಸ್ಫುರದ್ರೂಪಿಯನ್ನು ಇದುವರೆಗೆ ಯಾರೂ ಕಂಡೇ ಇಲ್ಲವಂತೆ. ಆತನ ಸೊಬಗು, ಸೌಂದರ್ಯವನ್ನು ಲಾವಣಿ ಮಾಡಿ ಹಾಡುತ್ತಾರಂತೆ. ವರ್ಷಕ್ಕೊಮ್ಮೆ ದಸರಾ ಉತ್ಸವಕ್ಕೆ ಮಹಾನವಮಿ ದಿಬ್ಬದವರೆಗೂ ಆನೆ ಮೇಲೆ ಅಂಬಾರಿ ಒಳಗೆ ಕುಳಿತು ರಾಜಗಾಂಭೀರ್ಯದಿಂದ ಬರುತ್ತಿದ್ದರೆ, ದಾರಿಯ ಎರಡೂ ಕಡೆ ನಿಂತ ಜನ ಸ್ವತಃ ಶ್ರೀಕೃಷ್ಣನೇ ಬಂದಂತೆ ಭಾವಿಸಿ ಎರಡೂ ಕೈ ಎತ್ತಿ ಮುಗಿಯುತ್ತಿದ್ದರಂತೆ. ಆತನ ಕೊರಳ ತುಂಬ ಮುತ್ತು ರತ್ನ ಪಚ್ಚೆಗಳಿಂದ ಅಲಂಕೃತವಾದ ಸರಗಳೇ ತುಂಬಿವೆಯಂತೆ. ತಲೆಯ ಮೇಲಿನ ಕಿರೀಟದ ತುಂಬ ಫಳ ಫಳ ಹೊಳೆವ ವಜ್ರದ ಹರಳುಗಳು, ಅವುಗಳ ಮಧ್ಯೆ ಹಣೆಯ ಮೇಲೆ ಸರಿಯಾಗಿ ಎದ್ದು ಕಾಣುವಂಥ ನೀಲಿ ಮುತ್ತಿನ ನತ್ತು… ತಲೆ ಮೇಲೆ ಅಂಥ ಮಣಭಾರದ ಕಿರೀಟವನ್ನು ಏಕೆ ಹಾಗೆ ಹಾಕಿಕೊಳ್ಳಬೇಕು ಎಂಬ ಸರಳ ಪ್ರಶ್ನೆ ನನ್ನದಾಗಿತ್ತು.
ಈ ಕಾದಂಬರಿಯ ಖರೀದಿಗೆ ಸಂಪರ್ಕಿಸಿ : ನವಕರ್ನಾಟಕ ಪ್ರಕಾಶನ
ಇದನ್ನೂ ಓದಿ : Konkani : ಅಚ್ಚಿಗೂ ಮೊದಲು ; ಮಹಾಬಳೇಶ್ವರ ಸೈಲ್ ಅವರ ‘ಅದೃಷ್ಟ’ ಕಾದಂಬರಿ ಇಂದಿನಿಂದ ಲಭ್ಯ
ಇದನ್ನೂ ಓದಿ : Odinangala : ವರ್ಷಾಂತ್ಯ ವಿಶೇಷ ; ‘ಇಂಥದೊಂದು ಪುಸ್ತಕ ಕನ್ನಡಕ್ಕೆ ಬೇಕು’ ಎಚ್ಎಸ್ ರಾಘವೇಂದ್ರ ರಾವ್ ‘ಓದಿನಂಗಳ’ದೊಳಗೆ ಹೇಳುತ್ತಿದ್ದಾರೆ