Protect Afghan Women : ಅಫ್ಘಾನಿಸ್ತಾನದ ಪುರುಷರನ್ನು ಆ ನೆಲದ ಮಹಿಳೆಯರು ಏನೆಂದು ನೆನಪಿಟ್ಟುಕೊಳ್ಳುವರು?

The Stoning of Soraya : ‘ನಾಲ್ಕು ಮಕ್ಕಳಿಗೆ ತಾಯಿಯಾಗಿ ನೆಮ್ಮದಿಯಾಗಿ ಸಂಸಾರ ನಡೆಸುತ್ತಿದ್ದ ಸೊರೆಯ್ಯಾಳ ಗಂಡನಿಗೆ ಇನ್ನೊಬ್ಬಳನ್ನು ಮದುವೆಯಾಗಬೇಕಾಗಿದ್ದುದರಿಂದ ಹೆಂಡತಿಯನ್ನು ನಡತೆಗೆಟ್ಟವಳೆಂದು ಸಾಬೀತುಪಡಿಸುವ ಒಳಸಂಚೊಂದನ್ನು ಮುಲ್ಲಾನೊಂದಿಗೆ ಸೇರಿ ರೂಪಿಸುತ್ತಾನೆ.‘

Protect Afghan Women : ಅಫ್ಘಾನಿಸ್ತಾನದ ಪುರುಷರನ್ನು ಆ ನೆಲದ ಮಹಿಳೆಯರು ಏನೆಂದು ನೆನಪಿಟ್ಟುಕೊಳ್ಳುವರು?
ಸಾಂದರ್ಭಿಕ ಚಿತ್ರ. ಸೌಜನ್ಯ : ಎನ್​ಪಿಆರ್
Follow us
ಶ್ರೀದೇವಿ ಕಳಸದ
|

Updated on:Aug 24, 2021 | 11:59 AM

ಈ ಕಟ್ಟಿಕೊಂಡವರೆಲ್ಲ ದೇಶಬಿಟ್ಟು ಓಡಿಹೋಗಿ ಮಹಿಳೆಯರು ಮನೆಯಲ್ಲಿ ಬಂದಿಯಾಗಿದ್ದಾರೆಂದೇ ಅರ್ಥವಲ್ಲವೇ? ಅವರ ಮತ್ತು ಅವರ ಮಕ್ಕಳುಮರಿಗಳ  ಕ್ಷೇಮವನ್ನು ತಾಲೀಬಾನಿಗಳಿಗೊಪ್ಪಿಸಿ ಓಡಿಹೋಗುವ ಗಂಡಸರನ್ನು ಹೇಡಿಗಳೆಂದೋ, ಸ್ವಾರ್ಥಿಗಳು… ನೀಚರೂ ಎಂದು ನಮ್ಮ ಹೊಟ್ಟೆಯ ಸಂಕಟವನ್ನು ಹೊರಹಾಕಿ ಸುಮ್ಮನಿರಬಹುದೇನೋ.  ಆದರೆ ಇಡೀ ಅಫ್ಘಾನಿಸ್ತಾನದ ಪುರುಷರನ್ನು ಆ ನೆಲದ ಮಹಿಳೆಯರು ಏನೆಂದು ನೆನಪಿಟ್ಟುಕೊಳ್ಳುವರು? ಪರದೆಯ ಹಿಂದೆ ನಡೆದ ಅಂಥ ಕ್ರೌರ್ಯದ ಮುಖವನ್ನು ತಾಲೀಬಾನ್ ಅನಾವರಣಗೊಳಿಸಿತೆ? ಅಪಾಯದಲ್ಲಿದ್ದೇವೆ ನಮ್ಮನ್ನು ಪಾರುಮಾಡಿ ಎನ್ನುವ ಅವರ ಅಳಲನ್ನು ಕೇಳುವವರು ಯಾರು? ಬದುಕುವ ಹಕ್ಕುಗಳನ್ನು, ಮಾನ ಸಮ್ಮಾನಗಳನ್ನು ಅವರಿಗೆ ನೀಡಿ ಸ್ವಾಭಿಮಾನದಿಂದ ಬದುಕುವ ದಾರಿಗಳನ್ನು ಈ ತಾಲೀಬಾನಿಗಳು ನೀಡುತ್ತಾರೆಯೇ ?  

ದೆಹಲಿಯಲ್ಲಿ ವಾಸಿಸುತ್ತಿರುವ ಲೇಖಕಿ ರೇಣುಕಾ ನಿಡಗುಂದಿ ಅವರ ಬರಹ ಮತ್ತು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸೌರಭಾ ಕಾರಿಂಜೆ ಅವರ ಕವನ ನಿಮ್ಮ ಓದಿಗೆ.

ಕಾಬೂಲಿನ ವಿಮಾನ ನಿಲ್ದಾಣದಲ್ಲಿ ವಿಮಾನಿನ ಹಿಂದೆ ಅಕ್ಕಪಕ್ಕ ಸಮರೋಪಾದಿಯಲ್ಲಿ ದಿಕ್ಕೆಟ್ಟು ಓಡುತ್ತಿರುವ ಭಯಗ್ರಸ್ತ ಜನ ಜಂಗುಳಿಯ ಚಿತ್ರ ಮನಃಚಕ್ಷುವಿನಲ್ಲಿ ಅಚ್ಚೊತ್ತಿ ಹೋಗಿದೆ. ಆ ಸಾವಿರಾರು ಜನರ ಹಣೆಬರಹವನ್ನು ಹೊತ್ತೊಯ್ಯಲು  ವಿಮಾನ ಸಿದ್ಧವಿದೆಯೋ ಇಲ್ಲವೋ ಎಂಬ ಯೋಚನೆಯನ್ನೂ ಮಾಡದ ಜನ ಹೇಗಾದರೂ ಸರಿ ತಮ್ಮೊಬ್ಬರ ಜೀವ ಉಳಿದರೆ ಸಾಕೆಂದು ಕೈಗೆ ಸಿಕ್ಕವರನ್ನು ಆಚೆ ತಳ್ಳಿ ಮುನ್ನುಗ್ಗುತ್ತಿದ್ದ ಚಿತ್ರ ! ಆಕಾಶದಿಂದ ರೆಕ್ಕೆ ಕತ್ತರಿಸಿಕೊಂಡ ಪುಟ್ಟ ಹಕ್ಕಿ ಉದುರಿ ಬಿದ್ದಂತೆ ಭೂಮಿಗಪ್ಪಳಿಸಿ ಹೆಣವಾದವರನ್ನು ಮರೆಯಲಾಗುತ್ತದೆಯೇ ? ಇಲ್ಲಿ ಉಳಿದರೆ  ಸಾಯ್ತೀವಿ ಎನ್ನುವವರೆಲ್ಲ ಅದ್ಯಾವ ಧೈರ್ಯದಿಂದ ವಿಮಾನಿನ ಗಾಲಿಗಳಡಿ, ವಿಮಾನದ ರೆಕ್ಕೆಯ ಮೇಲೆ ಅಂಟಿಕೊಂಡರೆಂದು ಯೋಚಿಸಿದರೆ ಮೈನಡಗುತ್ತದೆ. ಎಂಥಾ ಬರ್ಬರ ದೃಶ್ಯಗಳವು !  ಇತಿಹಾಸವೂ ಬೆಚ್ಚಿಬೀಳಬಹುದು.

ತಾಲೀಬಾನ್ ರೀತಿ ರಿವಾಜುಗಳು ಅದೆಷ್ಟು ಬರ್ಬರವಾಗಿರಬಲ್ಲವು ಎಂದು ನೆನೆದರೆ ಮಲಾಲ ಯುಸೂಫ್  ನೆನಪಾಗುತ್ತಾಳೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲೀಬಾನ್ ನಿಷೇಧಿಸಿತ್ತು. ತನ್ನ ಹತ್ತು ಹನ್ನೆರಡನೇ ವಯಸ್ಸಿನಲ್ಲೇ ಮಲಾಲ ಸ್ವಾತ್ ಕಣಿವೆ’ಯಲ್ಲಿನ ಹೆಣ್ಣುಮಕ್ಕಳ  ಶಿಕ್ಷಣ, ಮತ್ತು ಮಹಿಳಾ ಹಕ್ಕುಗಳಪರ ತನ್ನ ಕ್ರಿಯಾತ್ಮಕ ಹೋರಾಟ ಆರಂಭಿಸಿದ್ದಳು. ಆ ಕಾರಣಕ್ಕಾಗಿಯೇ ತಾಲೀಬಾನಿಗಳು 2012 ರಲ್ಲಿ ಶಾಲಾ ಬಸ್ಸಿನಲ್ಲಿ ಬರುತ್ತಿದ್ದ ಮಲಾಲಳನ್ನು ಕೊಲ್ಲುವ ಉದ್ದೇಶದಿಂದಲೇ ತಲೆ ಮತ್ತು ಕುತ್ತಿಗೆಗೆ ಗುಂಡುಹಾರಿಸಿದ್ದರು. ಆದರೆ ಆಕೆ ಬದುಕುಳಿದಳು. ನೊಬೆಲ್ ಶಾಂತಿ ಪ್ರಶಸ್ತಿಗೆ ಪಾತ್ರಳಾದ ಮಲಾಲ ಯೂಸೂಫ್ ವಿಶ್ವಕ್ಕೆ ಗೊತ್ತು.

ಅಂಥ  ಧಾರ್ಮಿಕ ಕಟ್ಟರ್ ಪಂಥದ ತಾಲೀಬಾನ್ – “ತಾನು ಈಗ ಮೊದಲಿನಂತಿಲ್ಲ ನಾವು ಬದಲಾಗಿದ್ದೇವೆ ಮಾಧ್ಯಮ ( ಅಭಿವ್ಯಕ್ತಿ ಸ್ವತಂತ್ರ್ಯ?) ಸೇರಿ ಹೆಣ್ಣುಮಕ್ಕಳಿಗೆ ಎಲ್ಲ ರೀತಿಯ ಅಧಿಕಾರಗಳನ್ನು ಸಮ್ಮಾನವನ್ನು ಕೊಡುತ್ತದೆ” ಎನ್ನುವುದನ್ನು ಅಫ್ಘಾನಿನ ಯಾವ ಹೆಣ್ಣುಮಕ್ಕಳೂ ನಂಬುವುದಿಲ್ಲ. ತಾಲಿಬಾನಿಗಳಿಗೆ ಹೆಣ್ಣು ಪುರುಷನಿಗೆ ಸಮಾನಳಲ್ಲದ ತುಚ್ಛಳು, ಭೋಗದ ವಸ್ತು ಮಾತ್ರ. ಈಗಷ್ಟೇ ಗೊತ್ತಾದ ಸುದ್ದಿಯಂತೆ ಅಫ್ಘಾನಿನ  ಸರಕಾರಿ ಸುದ್ದಿವಾಹಿನಿಯ ನಿರೂಪಕಿಯ ಮೇಲೆ ತಾಲೀಬಾನ್ ನಿರ್ಬಂಧ ಹೇರಿದೆ. ನೀನು ಮಹಿಳೆ ಮನೆಗೆ ಹೋಗು” ಎಂದು ತಾಲೀಬಾನ್  ಅಧಿಕಾರಿಗಳು ನಿತ್ಯದಂತೆ ಕಾರ್ಯವಹಿಸಲು ಹೋಗಿದ್ದ ನಿರೂಪಕಿ ಶಬನಮ್ ದವ್ರಾನಳನ್ನು ಮನೆಗೆ ಅಟ್ಟಿದ್ದಾರೆ. ಭಯಗ್ರಸ್ಥ ವಾತಾವರಣವನ್ನು ಸೃಷ್ಟಿಸಿರುವ ತಾಲಿಬಾನ್ ಒಂದುಕಡೆ ತಾನು ಪ್ರಜಾಸತ್ತಾತ್ಮಕ ಆಡಳಿತವನ್ನು ನಡೆಸುವುದಿಲ್ಲ ಷರಿಯಾ ಕಾನೂನಿಯ ಪ್ರಕಾರವೇ ಆಡಳಿತವನ್ನು ನಡೆಸುತ್ತದೆಂದು ಸ್ಪಷ್ಟಪಡಿಸುತ್ತದೆ. ಇನ್ನೊಂದುಕಡೆ ತಾನು ಮಹಿಳೆಯರಿಗೆ ಎಲ್ಲಾ ನಾಗರಿಕ ಹಕ್ಕುಗಳನ್ನು ನೀಡುತ್ತದೆಂಬ ಗಾಳಿಮಾತನ್ನೂ ಆಡುತ್ತದೆ.

ಅದು ವಿಧಿಸುವ  “ಷರಿಯಾ ಕಾನೂನು” ಇಸ್ಲಾಮಿನ ಕಾನೂನು ವ್ಯವಸ್ಥೆ. ಪ್ರತಿಯೊಬ್ಬ ಮುಸಲ್ಮಾನನೂ ಪಾಲಿಸಬೇಕಾದ ಧಾರ್ಮಿಕ ಕಟ್ಟುಪಾಡುಗಳು ಅದರಲ್ಲಿವೆ. ಕಠಿಣಾತೀಕಠಿಣ ಶಿಕ್ಷೆಗಳಲ್ಲಿ ಅಪರಾಧಿಗೆ ಕೈಕತ್ತರಿಸುವ ಮತ್ತು ಕಲ್ಲು ಹೊಡೆದು ಸಾಯಿಸುವಂಥ ಕ್ರೂರ ಶಿಕ್ಷೆಗಳೂ ಇವೆ. ಈ ಸಂದರ್ಭಲ್ಲಿ “ದಿ ಸ್ಟೋನಿಂಗ್ ಆಫ್ ಸೊರೆಯ್ಯಾ” ಚಿತ್ರ ನೆನಪಾಗುತ್ತಿದೆ.  1986 ರಲ್ಲಿ ನಡೆದ ನೈಜ ಘಟನೆ ಕುರಿತು ಲೇಖಕ ಫ್ರೆದೌನ್ ಸಾಹೆಬ್ಜಾನ್ ಅವರು ಬರೆದ ‘ಲಾ ಫೆಮ್ಮೇ ಲ್ಯಾಪಿಡೀ’ ಪುಸ್ತಕದ  ಕಥೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ. 1994 ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಚರ್ಚೆಗೊಳಗಾದ ಪುಸ್ತಕ. ಮಾಡದ ತಪ್ಪಿಗಾಗಿ ನಡತೆಗೆಟ್ಟವಳೆಂಬ ಅಪವಾದ ಹೊರಿಸಿದ ಪುರುಷ ವ್ಯವಸ್ಥೆಯ ಕಲ್ಲು ಹೊಡೆತಕ್ಕೆ, (ಸ್ಟೋನಿಂಗ್ ) ಬಲಿಯಾಗಿ ಅಸುನೀಗಿದ ಅಮಾಯಕ ಹೆಣ್ಣೊಬ್ಬಳ ಕಥೆ ಹೇಳುವ ಈ ಪುಸ್ತಕವನ್ನು ಇರಾನ್ ನಿಷೇದಿಸಿದೆ. ಆದರೆ ನಿರ್ದೇಶಕ ಸೈರಸ್ ಸಿನಿಮಾ ಆಗಿಸಿ ಕಥೆಯನ್ನು ಗೆಲ್ಲಿಸಿದ್ದಾರೆ, ಈ ಸಿನಿಮಾ 2008ರಲ್ಲಿ ಟೊರಾಂಟೊ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉದ್ಘಾಟನಾ ಸಿನಿಮಾ ಆಗಿ ಮೊದಲು ಪ್ರದರ್ಶನಗೊಂಡಿತು.

ನಾಲ್ಕುಮಕ್ಕಳಿಗೆ ತಾಯಿಯಾಗಿ ನೆಮ್ಮದಿಯಾಗಿ ಸಂಸಾರ ನಡೆಸುತ್ತಿದ್ದ ಸೊರೆಯ್ಯಾಳ ಗಂಡನಿಗೆ ಇನ್ನೊಬ್ಬಳನ್ನು ಮದುವೆಯಾಗಬೇಕಾಗಿದ್ದುದರಿಂದ ಹೆಂಡತಿಯನ್ನು ನಡತೆಗೆಟ್ಟವಳೆಂದು ಸಾಬೀತುಪಡಿಸುವ ಒಳಸಂಚೊಂದನ್ನು ಮುಲ್ಲಾನೊಂದಿಗೆ ಸೇರಿ ರೂಪಿಸುತ್ತಾನೆ. ಕಾಮುಕ ಮುಲ್ಲಾನಿಗೂ ಸೊರೆಯ್ಯಾಳ ಮೇಲೆ ಆಸೆ. ಆಕೆ ಸೊಪ್ಪುಹಾಕುವುದಿಲ್ಲ. ಗಂಡಾಳಿಕೆಯ ಸಮಾಜದಲ್ಲಿ ಮಹಿಳೆಯರು ಅನುಭವಿಸುವ ಬೀಭತ್ಸಕರ ದೌರ್ಜನ್ಯವನ್ನು  ಬಿಚ್ಚಿಡುವ ಪರಿಯೇ ಮೈಮನಗಳನ್ನು ನಡುಗಿಸುತ್ತದೆ. ತನ್ನದೇನೂ ತಪ್ಪಿಲ್ಲದಿದ್ದರೂ ಚರಿತ್ರಹೀನಳ ಅಪವಾದ ಹೊತ್ತು ಗಂಡಸರಿಂದ ಕಲ್ಲು ಹೊಡೆಸಿಕೊಂಡು ಸಾಯುವ ಹೆಣ್ಣಿನ ಬದುಕಿನ ಬಗ್ಗೆ ಚಿತ್ರ ಮಾಡಿರುವ ನಿರ್ದೇಶಕ ಸೈರಸ್ ನೌರಸ್ತೇ, ಜಗತ್ತಿನಲ್ಲಿ ಧರ್ಮದ ಮುಸುಕಿನಲ್ಲಿ ನಡೆಯುವ ಕ್ರೌರ್ಯಗಳ ಹೊರತಾಗಿ ಮನುಷ್ಯಲೋಕದಲ್ಲಿ ಬದಲಾಗಬೇಕಾದುದು ಬಹಳಷ್ಟಿದೆ ಎಂಬುದನ್ನು ಜಗತ್ತಿಗೆ ತಿಳಿಸಿದ್ದಾರೆ.

Protect afghan women and children

ಸಾಂದರ್ಭಿಕ ಚಿತ್ರ. ಸೌಜನ್ಯ : ವೋಯಾ ನ್ಯೂಸ್

ಷರಿಯಾ ಕಾನೂನು ಸಹ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹೆಚ್ಚಿಸಬಹುದು. ಅವರ ಸ್ಥಿತಿಯನ್ನು ಇನ್ನಷ್ಟು ಅಸಹನೀಯಗೊಳಿಸಬಹುದಾಗಿದೆ. ಅದೆಷ್ಟು ಸೊರೆಯ್ಯಾರನ್ನು ಮಾಡದ ತಪ್ಪು ಹೊರೆಸಿ ಕಲ್ಲು ಹೊಡೆದು ಸಾಯಿಸುತ್ತಾರೋ! ಹೆಣ್ಣುಮಕ್ಕಳ ಬಗ್ಗೆಯೇ ನೂರಾರು ಕಟ್ಟುಪಾಡುಗಳನ್ನು ನಿರ್ಬಂಧಗಳನ್ನು ವಿಧಿಸಿ ಅವರನ್ನು ಅಸ್ಪೃಶ್ಯರನ್ನಾಗಿಸಿದ ಹಿಂದೂ ಮೂಲಭೂತವಾದಿಗಳ ‘ಮನುಸ್ಮೃತಿ’ ಹೇಗೋ ಹಾಗೇ ಅಥವಾ ಅದಕ್ಕಿಂತಲೂ ಕ್ರೂರವಾದ ಶಿಕ್ಷೆಯನ್ನು ಒಳಗೊಂಡ ಮುಸ್ಲಿಂ ಮೂಲಭೂತವಾದಿಗಳ  “ಶರಿಯಾ ಕಾನೂನು ಒಂದು ಆರೋಗ್ಯಕರವಾದ ಸಮ ಸಮಾಜವನ್ನು, ಪುರುಷರಂತೆಯೇ ಮಹಿಳೆಗೂ ಬದುಕುವ ಹಕ್ಕನ್ನು ನೀಡುತ್ತದೆಂಬುದು ದೂರದ ಮಾತು. ಅಫ್ಘಾನಿಸ್ತಾನದಿಂದ ಭಾರತದಲ್ಲಿ ವಾಸಿಸುತ್ತಿರುವ ಮತ್ತು ಇಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ ಯುವ ವಿದ್ಯಾರ್ಥಿನಿಯರು ಇನ್ನು ಆ ದೇಶಕ್ಕೆ ತಾವು ಹೋಗುವುದಿಲ್ಲ. ಅಲ್ಲಿ ಹೋದರೆ ತಮ್ಮನ್ನು ತಾಲಿಬಾನಿಗಳು  ಜೀವಂತ ಸಾಯಿಸುತ್ತಾರೆ. ತಮಗೆ ಓದುವ ಮತ್ತು ಉದ್ಯೋಗವನ್ನು ಮಾಡುವ ಅವಕಾಶವನ್ನೂ ಕೊಡುವುದಿಲ್ಲ. ಕೈದಿಗಳಂತೆ ನಾಲ್ಕು ಗೋಡೆಗಳಲ್ಲಿಯೇ ಬದುಕಬೇಕಾಗಬಹುದು’’ ಎನ್ನುತ್ತಾರೆ.  ಈಗ ಬದಲಾದ ಸನ್ನಿವೇಶದಲ್ಲಿ ಯಾರೂ ಆ ದೇಶಕ್ಕೆ ವಾಪಸ್ಸಾಗುವ ಬಗ್ಗೆ ಕನಸಿನಲ್ಲೂ ಯೋಚಿಸುವುದಿಲ್ಲ.

ಅವತ್ತು ನೋಡಿದ  ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬೆರಳೆಣಿಕೆಯ ಬುರ್ಖಾಧಾರಿ ಹೆಂಗಸರು ಕಂಡರೇ ಹೊರತು ಒಬ್ಬಳೇ ಒಬ್ಬ ಮಹಿಳೆ ಅಥವಾ ಮಕ್ಕಳು ವಿಮಾನ ನಿಲ್ದಾಣದಲ್ಲಿ ಕಾಣಿಸಲಿಲ್ಲ.  ಹಾಗಾದರೆ ಈ ಸಾವಿರಾರು ಗಂಡಸರೆಲ್ಲ ತಮ್ಮ ಕುಟುಂಬದ ತಾಯಿ-  ಹೆಂಡತಿ-  ಮಕ್ಕಳನ್ನು ಅವರ ಪಾಡಿಗೆ ಸಾಯಲು ಬಿಟ್ಟು ಓಡಿಹೋಗುತ್ತಿದ್ದಾರೆಂದೇ ಅಲ್ಲವೇ ಅರ್ಥ! ಇದನ್ನೇ ಮೊನ್ನಿನ ಪ್ರೈಂ ಟೈಮಿನಲ್ಲಿ ರವೀಶ್ ಕುಮಾರ್ ಗಮನ ಸೆಳೆದದ್ದು.

ಹೌದಲ್ಲವೇ? ಹಾಗಾದರೆ ಈ ಕಟ್ಟಿಕೊಂಡವರೆಲ್ಲ ದೇಶಬಿಟ್ಟು ಓಡಿಹೋಗಿ ಮಹಿಳೆಯರು ಮನೆಯಲ್ಲಿ ಬಂದಿಯಾಗಿದ್ದಾರೆಂದೇ ಅರ್ಥವಲ್ಲವೇ? ಅವರ ಮತ್ತು ಅವರ ಮಕ್ಕಳುಮರಿಗಳ  ಕ್ಷೇಮವನ್ನು ತಾಲಿಬಾನಿಗಳಿಗೊಪ್ಪಿಸಿ ಓಡಿಹೋಗುವ ಗಂಡಸರನ್ನು ಹೇಡಿಗಳೆಂದೋ, ಸ್ವಾರ್ಥಿಗಳು… ನೀಚರೂ ಎಂದು ನಮ್ಮ ಹೊಟ್ಟೆಯ ಸಂಕಟವನ್ನು ಹೊರಹಾಕಿ ಸುಮ್ಮನಿರಬಹುದೇನೋ.  ಆದರೆ ಇಡೀ ಅಫ್ಘಾನಿಸ್ತಾನದ ಪುರುಷರನ್ನು ಆ ನೆಲದ ಮಹಿಳೆಯರು ಏನೆಂದು ನೆನಪಿಟ್ಟುಕೊಳ್ಳುವರು? ಪರದೆಯ ಹಿಂದೆ ನಡೆದ ಅಂಥ ಕ್ರೌರ್ಯದ ಮುಖವನ್ನು ತಾಲಿಬಾನ್ ಅನಾವರಣಗೊಳಿಸಿತೆ? ಅಪಾಯದಲ್ಲಿದ್ದೇವೆ ನಮ್ಮನ್ನು ಪಾರುಮಾಡಿ ಎನ್ನುವ ಅವರ ಅಳಲನ್ನು ಕೇಳುವವರು ಯಾರು? ಬದುಕುವ ಹಕ್ಕುಗಳನ್ನು, ಮಾನ ಸಮ್ಮಾನಗಳನ್ನು ಅವರಿಗೆ ನೀಡಿ ಸ್ವಾಭಿಮಾನದಿಂದ ಬದುಕುವ ದಾರಿಗಳನ್ನು ಈ ತಾಲಿಬಾನಿಗಳು ನೀಡುತ್ತಾರೆಯೇ ?

ಇನ್ನು ಅಲ್ಲಿಯೇ ಉಳಿದುರುವವರಲ್ಲಿ ಮಹಿಳೆಯರ ಸ್ಥಿತಿ ಏನಾಗಬಲ್ಲದು ಎಂಬ ಯೋಚನೆಯೇ ನಮ್ಮನ್ನು ಅಸ್ವಸ್ಥಗೊಳಿಸುತ್ತದೆ. ನಾವು ಅಪಾಯದಲ್ಲಿದೇವೆ ನಮಗೆ ಸಹಾಯಮಾಡಿ ಎನ್ನುವ ಮಹಿಳೆಯರ ದನಿ ನಮ್ಮ ನಿದ್ದೆಗೆಡಿಸುತ್ತದೆ. ಅನಾಥರಾದ ಕಂದಮ್ಮಗಳ ಬತ್ತಿದ ಮುಖ ಕರುಳನ್ನಿರಿಯುತ್ತದೆ. ಧರ್ಮಾಂಧರ ಯುಗದಲ್ಲಿ ಭೂಮಿಯ ಗತಿಯನ್ನೇ ಹಿಂದಕ್ಕೆ ತಿರುಗಿಸುತ್ತಿದ್ದಾರೇನೋ ಎಂದು ಭಯವಾಗುತ್ತದೆ!

*

ಅಫ್ಘನ್ನಿನ ಕನ್ನಡಿಯೊಳಗೆ

ಗಂಡಸರೆಲ್ಲ ನೆಲದ ಸದ್ದಿಗೆ ಬೆಚ್ಚಿ ಬೆವೆತು

ಹಾರುವ ವಿಮಾನದ ರೆಕ್ಕೆಯ ಮೇಲೆಯಾದರೂ ಸರಿ

ಬಾನಾಡಿಯಾಗಬಯಸುವಾಗ, ಹೆಣ್ಮಕ್ಕಳು

ನೆಲಕ್ಕೇ ಆತು ಮಲಗಿರುವ ರಾಡಿ ಚಿತ್ರ.

ನಿನ್ನೆಯವರೆಗೆ ಶಾಲೆ ಕಾಲೇಜುಗಳಲ್ಲಿ

ಕನಸು ಬೆಳೆಸುತ್ತಿದ್ದವರೆಲ್ಲ ಇಂದು ಬಂದೂಕಿಗೆ ಹೆದರಿ

ಪದವಿಪತ್ರಗಳ ಬೆಂಕಿ ಎಬ್ಬಿಸುತ್ತಿರುವಾಗ

ತಣ್ಣೀರಲ್ಲಿ ತೋಯ್ದ ಎದೆಯೊಳಗೆ ಉರಿವ ಅಗ್ನಿ ಹಾಗೇ ಸ್ತಬ್ಧ.

ಮಕ್ಕಳೆಲ್ಲ ಯಾರದೋ ಸುಖದ ತುತ್ತಾಗಿ ಹೋಗುವಾಗ

ಹರೆಯ ಬಾಲ್ಯವನ್ನು ಹಾರಿದ ನಂತರದ ಕೊಚ್ಚೆಯಷ್ಟೇ.

ಬಂದೂಕಿನ ಬೊಗಳುವಿಕೆಯ ನಡುವೆ,

ನಾಳೆಯ ಮಕ್ಕಳು ಗರ್ಭದಲ್ಲೇ ನಲುಗುತ್ತವೆ.

ಬಾಂಬುಗಳ ಸದ್ದು ಕೇಳಿ ಕೇಳಿ ಇದೀಗ

ಹಕ್ಕಿಗಳಿಂಚರವೂ, ಕೊನೆಗೆ ಮೌನವೂ ಬೆದರಿಸುತ್ತದೆ,

ಮುಚ್ಚಿದ ಬಾಗಿಲುಗಳ ಮರೆಯಲ್ಲಿ

ಕಾಲ ಕೆಲ ಶತಮಾನದಷ್ಟು ಹಿಂದೆ ಸಾಗುತ್ತದೆ.

ಸಂಕಲೆಗಳ ನಡುವೆ ಭಿಕ್ಷೆಯಂತೆ

ನೀಡುವ ಸ್ವಾತಂತ್ರ್ಯ ಅಣಕಿಸುತ್ತದೆ,

ಬದುಕು ಕೊಟ್ಟು ಪಡೆಯುವುದಕ್ಕೆ ಇರುವ

ಸೊತ್ತಾಗಿರುವಾಗ ಅದರ ಭಾರ ಹೆಗಲು ಮುರಿಯುತ್ತದೆ.

ಇಲ್ಲಿ ಸಾವಿರ ಮೈಲಿಗಳಾಚೆ

ಬೆಳಕಿನ ಹಬ್ಬದ ಸಿಡಿಮದ್ದಿನ ಸದ್ದು

ನಾಳೆ ಬರಲಿರುವ ಬಂದೂಕನ್ನೇ ನೆನಪಿಸುವಾಗ,

ಕ್ರೌರ್ಯದಲ್ಲಿ ಅರಳುವ ಮಂದಿ

ಲೆಕ್ಕಾಚಾರ ಮಾಡಿ ಹೂಂಕರಿಸುವಾಗ,

ತೊಡುವ ಉಡುಪಿನ ಬಣ್ಣಗಳನ್ನೆಲ್ಲ ಮುಂದೊಮ್ಮೆ

ಕರಿಯದೋ ಕೇಸರಿಯದೋ ಮತ್ತೊಂದೋ

ನುಂಗಬಹುದೆಂಬ ಭಯ ಕಾಡುವಾಗ,

ಭಗವಂತನ ಜಯಕಾರದ ಬೊಬ್ಬಿರಿಯುವಿಕೆಯ ನಡುವೆ

ಮನುಜ ಮನುಜನ ನಡುವಿನ ದನಿ ಬತ್ತುವುದು ಕಂಡಾಗ,

ಈ ನೆಲವೂ ಆ ನೆಲವೂ ಒಂದಾಗಿ ಕಂಪಿಸುತ್ತದೆ.

ಇದನ್ನೂ ಓದಿ : Body Shaming ; ಸುಮ್ಮನಿರುವುದು ಹೇಗೆ? : ಪದಗಳಿಂದ ಇರಿಯದೇ ವರ್ತನೆಯಿಂದ ಸಾಯಿಸುವ ತಣ್ಣನೆಯ ಕ್ರೌರ್ಯ ಹೇಗಿರುತ್ತದೆ ಗೊತ್ತಾ?

ಇದನ್ನೂ ಓದಿ : ನಮ್ಮ ಹೆಗಲುಗಳಿಂದ ಸಂಸ್ಕೃತಿಯ ಭಾರ ಇಳಿಸಿ ನೋಡಿ!    

Published On - 10:52 am, Tue, 24 August 21

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್