AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಹಮದಾಬಾದ್: ಪಟಾಕಿ ಕಾರ್ಖಾನೆಯಲ್ಲಿ ಪ್ರಬಲ ಸ್ಫೋಟ; 8 ಕಾರ್ಮಿಕರು ಸಾವು, ಹಲವರಿಗೆ ಗಂಭೀರ ಗಾಯ

ಅಹಮದಾಬಾದ್ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಎಂಟು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ, ಹಲವರಿಗೆ ಗಂಭೀರ ಗಾಯಗಳಾಗಿವೆ. ಪರವಾನಗಿ ರದ್ದಾಗಿದ್ದರೂ, ಈ ಕಾರ್ಖಾನೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ತನಿಖೆಯಿಂದ ಬಯಲಾಗಿದೆ. ಸಮೀಪದಲ್ಲಿದ್ದ ಆರ್‌ಎಎಫ್ ಸಿಬ್ಬಂದಿಯ ತ್ವರಿತ ಕಾರ್ಯಚರಣೆಯಿಂದ ಹೆಚ್ಚಿನ ಪ್ರಾಣಹಾನಿ ತಪ್ಪಿದೆ. ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಅಹಮದಾಬಾದ್: ಪಟಾಕಿ ಕಾರ್ಖಾನೆಯಲ್ಲಿ ಪ್ರಬಲ ಸ್ಫೋಟ; 8 ಕಾರ್ಮಿಕರು ಸಾವು, ಹಲವರಿಗೆ ಗಂಭೀರ ಗಾಯ
ಸ್ಫೋಟ
ನಯನಾ ರಾಜೀವ್
|

Updated on:Jul 18, 2026 | 5:37 PM

Share

ಅಹಮದಾಬಾದ್, ಜುಲೈ 18: ಗುಜರಾತ್‌ನ ಅಹಮದಾಬಾದ್ ನಗರದ ವಸ್ತ್ರಲ್ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಪ್ರಬಲ ಸ್ಫೋಟ(Blast) ಸಂಭವಿಸಿದೆ. ಇಲ್ಲಿನ ರಾಮೋಲ್-ಗತ್ರಾಡ್ ರಸ್ತೆಯ ಮೆಹಮೂದ್‌ಪುರ ಬಳಿ ಇರುವ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ ಎಂಟು ಜನ ಕಾರ್ಮಿಕರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಸ್ಫೋಟದ ತೀವ್ರತೆಗೆ ಇಡೀ ಕಾರ್ಖಾನೆಗೆ ದೈತ್ಯ ಬೆಂಕಿ ಹೊತ್ತಿಕೊಂಡಿದ್ದು, ಹಲವು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದುರಂತ ಸಂಭವಿಸಿದ ಕಾರ್ಖಾನೆಯ ಸಮೀಪದಲ್ಲೇ ಕ್ಷಿಪ್ರ ಕಾರ್ಯ ಪಡೆಯ (RAF) ಸೇನಾ ಶಿಬಿರವಿತ್ತು. ಶನಿವಾರ ಮಧ್ಯಾಹ್ನ ಭಾರಿ ಸದ್ದಿನೊಂದಿಗೆ ಸ್ಫೋಟ ಕೇಳಿಸುತ್ತಿದ್ದಂತೆ ಎಚ್ಚೆತ್ತ ಆರ್‌ಎಎಫ್ ಸಿಬ್ಬಂದಿ, ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರುವ ಮುನ್ನವೇ ಜೀವದ ಹಂಗು ತೊರೆದು ಸುಡುತ್ತಿದ್ದ ಕಾರ್ಖಾನೆಯೊಳಗೆ ನುಗ್ಗಿದ್ದಾರೆ. ಬೆಂಕಿಯ ಜ್ವಾಲೆಯ ನಡುವೆ ಸಿಲುಕಿದ್ದ ಹಲವಾರು ಗಾಯಗೊಂಡ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತಂದು ಆಸ್ಪತ್ರೆಗೆ ದಾಖಲಿಸುವ ಮೂಲಕ ದೊಡ್ಡ ಮಟ್ಟದ ಪ್ರಾಣಹಾನಿಯನ್ನು ತಪ್ಪಿಸಿದ್ದಾರೆ.

ನಂತರ ಸ್ಥಳಕ್ಕೆ ಧಾವಿಸಿದ 5 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹಾಗೂ ಆಂಬ್ಯುಲೆನ್ಸ್‌ಗಳು ಭಾರಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಅಹಮದಾಬಾದ್ ಮೇಯರ್ ಹಿತೇಶ್ ಬರೋಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದಾರೆ.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಚಲಿಸುತ್ತಿದ್ದ ಟ್ರಕ್ ಟೈರ್ ಸ್ಫೋಟ, ಮನೆಯೊಳಗೆ ನುಗ್ಗಿದ ಲಾರಿಗೆ, ಒಂದೇ ಕುಟುಂಬದ ಮೂವರು ಬಲಿ

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅತ್ಯಂತ ಆಘಾತಕಾರಿ ಸತ್ಯವೊಂದು ಬಯಲಾಗಿದೆ. ದುರಂತ ಸಂಭವಿಸಿದ ಈ ಪಟಾಕಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಕಾನೂನುಬಾಹಿರವಾಗಿ ಮತ್ತು ಅಕ್ರಮವಾಗಿ ನಡೆಸಲಾಗುತ್ತಿತ್ತು.

ಜಂಟಿ ಪೊಲೀಸ್ ಆಯುಕ್ತ (JCP) ಜೈಪಾಲ್ ಸಿಂಗ್ ರಾಥೋಡ್ ಅವರ ಪ್ರಕಾರ, ಈ ಮಾರಣಾಂತಿಕ ಘಟಕವನ್ನು ಮೆಹುಲ್ ದೋಡಿಯಾ ಎಂಬಾತ ನಡೆಸುತ್ತಿದ್ದ. ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಈತನ ಪಟಾಕಿ ಕಾರ್ಖಾನೆಯ ಪರವಾನಗಿಯನ್ನು ಸರ್ಕಾರ ಈಗಾಗಲೇ ರದ್ದುಗೊಳಿಸಿತ್ತು. ಆದರೂ ಈತ ಕಾನೂನಿಗೆ ಕಣ್ಣು ಮುಚ್ಚಿ, ಅಮಾಯಕ ಕಾರ್ಮಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಾ ಕದ್ದುಮುಚ್ಚಿ ಕಾರ್ಖಾನೆ ನಡೆಸುತ್ತಿದ್ದ ಎಂದು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದಾಗ ಒಳಗೆ 8 ರಿಂದ 10 ಜನ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ವಿಡಿಯೋ

ಅಧಿಕಾರಿಗಳು ಸದ್ಯಕ್ಕೆ ಘಟನಾ ಸ್ಥಳದಿಂದ ಎಂಟು ಜನರ ಸುಟ್ಟ ಶವಗಳನ್ನು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯಕ್ಕೆ ಸ್ಫೋಟಕ್ಕೆ ನಿಖರವಾದ ತಾಂತ್ರಿಕ ಕಾರಣ ತಿಳಿದುಬಂದಿಲ್ಲವಾದರೂ, ರಾಮೋಲ್ ಪೊಲೀಸರು ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಅಕ್ರಮವಾಗಿ ಕಾರ್ಖಾನೆ ನಡೆಸಿ ಎಂಟು ಜನರ ಸಾವಿಗೆ ಕಾರಣನಾದ ಮಾಲೀಕ ಮೆಹುಲ್ ದೋಡಿಯಾ ವಿರುದ್ಧ ‘ಸ್ಫೋಟಕ ಕಾಯ್ದೆ’ ಮತ್ತು ದೇಶದ ಕಠಿಣ ಕಾನೂನು ನಿಬಂಧನೆಗಳ ಅಡಿಯಲ್ಲಿ ಜಾಮೂನು ರಹಿತ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:36 pm, Sat, 18 July 26

Follow Us