AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಭಗವಂತ್ ಮಾನ್ ಗುರು ದ್ರೋಹಿ ಎಂದು ಘೋಷಿಸಿದ ಅಕಲ್ ತಖ್ತ್; ಚುನಾವಣೆಗೂ ಮೊದಲೇ ಆಪ್​ಗೆ ಹಿನ್ನಡೆ

ಪಂಜಾಬ್ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (AAP) ಮತ್ತು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಭಾರಿ ರಾಜಕೀಯ ಹಿನ್ನಡೆಯಾಗಿದೆ. ಸಿಖ್ ಧರ್ಮದ ಸರ್ವೋಚ್ಚ ಧಾರ್ಮಿಕ ಸಂಸ್ಥೆಯಾದ 'ಅಕಲ್ ತಖ್ತ್' ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು 'ಗುರು ದ್ರೋಹಿ' ಎಂದು ಘೋಷಿಸಿದೆ. ಧಾರ್ಮಿಕ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಈ ನಿರ್ಧಾರವು ಮುಂಬರುವ ಚುನಾವಣೆಯ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ.

ಸಿಎಂ ಭಗವಂತ್ ಮಾನ್ ಗುರು ದ್ರೋಹಿ ಎಂದು ಘೋಷಿಸಿದ ಅಕಲ್ ತಖ್ತ್; ಚುನಾವಣೆಗೂ ಮೊದಲೇ ಆಪ್​ಗೆ ಹಿನ್ನಡೆ
Bhagwant Mann Image Credit source: PTI
ಸುಷ್ಮಾ ಚಕ್ರೆ
|

Updated on: Jun 15, 2026 | 7:15 PM

Share

ಅಮೃತಸರ, ಜೂನ್ 15: ಪಂಜಾಬ್ ರಾಜಕಾರಣದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎದ್ದಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ (Bhagwant Mann) ಅವರನ್ನು ಸಿಖ್ ಧರ್ಮದ ಅತ್ಯುನ್ನತ ಧಾರ್ಮಿಕ ಪೀಠವಾದ ‘ಅಕಲ್ ತಖ್ತ್’ ಅಧಿಕೃತವಾಗಿ ಗುರು ದ್ರೋಹಿ ಎಂದು ಘೋಷಿಸಿದೆ. ಸಿಖ್ ಧರ್ಮದ ಸರ್ವೋಚ್ಚ ಸಂಸ್ಥೆಯ ಈ ಧಾರ್ಮಿಕ ಆದೇಶವು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿರುವ ಆಮ್ ಆದ್ಮಿ ಪಕ್ಷಕ್ಕೆ (AAP) ದೊಡ್ಡ ಆಘಾತವನ್ನು ನೀಡಿದೆ.

ಅಕಲ್ ತಖ್ತ್‌ನ ಜತ್ಹೇದಾರ್ ನೇತೃತ್ವದಲ್ಲಿ ನಡೆದ 5 ಮಂದಿ ಸಿಖ್ ಧರ್ಮಗುರುಗಳ ಉನ್ನತ ಮಟ್ಟದ ಸಭೆಯಲ್ಲಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಿಖ್ ಧರ್ಮದಲ್ಲಿ ‘ಅಕಲ್ ತಖ್ತ್’ ನೀಡುವ ಆದೇಶಗಳನ್ನು ಅತ್ಯಂತ ಪವಿತ್ರ ಮತ್ತು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಿಯಮಗಳ ಉಲ್ಲಂಘನೆ, ಸಿಖ್ ಧರ್ಮದ ಗೌರವಕ್ಕೆ ಚ್ಯುತಿ ತರುವುದು ಅಥವಾ ಧಾರ್ಮಿಕ ಸಂಸ್ಥೆಗಳ ಆದೇಶಗಳನ್ನು ನಿರ್ಲಕ್ಷಿಸುವ ವ್ಯಕ್ತಿಗಳ ವಿರುದ್ಧ ಇಂತಹ ಕಠಿಣ ಕ್ರಮ ಜರುಗಿಸಲಾಗುತ್ತದೆ.

ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಧಾರ್ಮಿಕ ಸಭೆಗಳು ಮತ್ತು ಗುರುದ್ವಾರಗಳ ಆವರಣದಲ್ಲಿ ಸಿಖ್ ಮರ್ಯಾದೆ ಹಾಗೂ ಸಂಪ್ರದಾಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಹಲವು ಸಿಖ್ ಸಂಘಟನೆಗಳು ಅಕಲ್ ತಖ್ತ್‌ಗೆ ದೂರು ನೀಡಿದ್ದವು. ಈ ಹಿಂದೆ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಅಕಲ್ ತಖ್ತ್ ಮುಂದೆ ಖುದ್ದಾಗಿ ಹಾಜರಾಗಿ ಸ್ಪಷ್ಟನೆ ನೀಡುವಂತೆ ಭಗವಂತ್ ಮಾನ್ ಅವರಿಗೆ ಆದೇಶಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಭಗವಂತ್ ಮಾನ್ ಈ ಧಾರ್ಮಿಕ ಸಮನ್ಸ್‌ಗಳನ್ನು ನಿರ್ಲಕ್ಷಿಸಿ ಸಭೆಗಳಿಗೆ ಗೈರಾಗಿದ್ದರು. ಇದು ಸಿಖ್ ಧರ್ಮದ ಸರ್ವೋಚ್ಚ ಪೀಠಕ್ಕೆ ಮಾಡಿದ ಅವಮಾನ ಎಂದು ಧರ್ಮಗುರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಅನಾರೋಗ್ಯದಿಂದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಸ್ಪತ್ರೆಗೆ ದಾಖಲು

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸಿಖ್ ಸಮುದಾಯದವರು ಭಗವಂತ್ ಮಾನ್ ಅವರೊಂದಿಗೆ ಯಾವುದೇ ಧಾರ್ಮಿಕ ಸಹಕಾರ ಅಥವಾ ನಂಟು ಹೊಂದಬಾರದು ಎಂಬ ಅರ್ಥದಲ್ಲಿ ಅವರನ್ನು ‘ಗುರು ದ್ರೋಹಿ’ ಎಂದು ಘೋಷಿಸಲಾಗಿದೆ. ಪಂಜಾಬ್‌ನಲ್ಲಿ ಸಿಖ್ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (SGPC) ಮತ್ತು ಅಕಲ್ ತಖ್ತ್‌ನ ನಿರ್ಧಾರಗಳು ಚುನಾವಣಾ ರಾಜಕಾರಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ, ಈ ನಿರ್ಧಾರದಿಂದ ಚುನಾವಣೆಗೂ ಮುನ್ನವೇ ಆಮ್ ಆದ್ಮಿ ಪಕ್ಷಕ್ಕೆ ಹಿನ್ನಡೆಯಾದಂತಾಗಿದೆ.

ಇದನ್ನೂ ಓದಿ: ಪಂಜಾಬ್​ನ ಅವಳಿ ಸ್ಫೋಟದ ಹಿಂದೆ ಬಿಜೆಪಿ ಕೈವಾಡ; ಸಿಎಂ ಭಗವಂತ್ ಮಾನ್ ಆರೋಪ

ಪಂಜಾಬ್‌ನಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಮುಖ್ಯಮಂತ್ರಿಯವರ ಮೇಲಿನ ಈ ಧಾರ್ಮಿಕ ನಿಷೇಧ ಅಥವಾ ನಕಾರಾತ್ಮಕ ಘೋಷಣೆ ದೊಡ್ಡ ಹಿನ್ನಡೆಯಾಗಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ (SAD) ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಆರಂಭಿಸಿವೆ. ಸಿಎಂ ಭಗವಂತ್ ಮಾನ್ ಅವರಿಗೆ ಪಂಜಾಬ್‌ನ ಸಂಸ್ಕೃತಿ ಮತ್ತು ಸಿಖ್ ಧರ್ಮದ ಮೇಲೆ ಗೌರವವಿಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More