AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Apprentice 2026: ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​; SBI ನ ಅಪ್ರೆಂಟಿಸ್ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪದವೀಧರರಿಗೆ 7,150 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜೂನ್ 15ರವರೆಗೆ ವಿಸ್ತರಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಲು ಇದೊಂದು ಸುವರ್ಣಾವಕಾಶ. ಮಾನ್ಯತೆ ಪಡೆದ ಪದವಿ ಹೊಂದಿರುವವರು ಅರ್ಹರು, ಮಾಸಿಕ 15,000 ರೂ. ಸ್ಟೈಫಂಡ್ ದೊರೆಯಲಿದೆ. ಆನ್‌ಲೈನ್ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ ಮೂಲಕ ಆಯ್ಕೆ ನಡೆಯುತ್ತದೆ. ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.

SBI Apprentice 2026: ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​; SBI ನ ಅಪ್ರೆಂಟಿಸ್ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾImage Credit source: Pinterest
ಅಕ್ಷತಾ ವರ್ಕಾಡಿ
|

Updated on: Jun 09, 2026 | 1:07 PM

Share

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಪದವೀಧರರಿಗೆ ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತೊಂದು ಸುವರ್ಣಾವಕಾಶ ನೀಡಿದೆ. ದೇಶಾದ್ಯಂತ ಖಾಲಿ ಇರುವ ಒಟ್ಟು 7,150 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಎಸ್‌ಬಿಐ ಅಧಿಕೃತವಾಗಿ ವಿಸ್ತರಿಸಿದೆ. ಈ ಹಿಂದೆ ನಿಗದಿಯಾಗಿದ್ದ ಕೊನೆಯ ದಿನಾಂಕ ಜೂನ್ 08 ಕ್ಕೆ ಮುಕ್ತಾಯಗೊಳ್ಳಬೇಕಿತ್ತಾದರೂ, ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ಅವಧಿಯನ್ನು ಈಗ ಜೂನ್ 15 ರವರೆಗೆ ವಿಸ್ತರಿಸಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಹತೆಗಳೇನು?

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Degree) ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಾಯೋಗಿಕ ಕೌಶಲ್ಯ ಅಭಿವೃದ್ಧಿ ಮತ್ತು ಸಮಗ್ರ ತರಬೇತಿಯನ್ನು ನೀಡುವ ಉದ್ದೇಶದಿಂದ ಈ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಅಧಿಕೃತ ಸ್ಥಳೀಯ ಭಾಷೆಯಲ್ಲಿ (ಉದಾಹರಣೆಗೆ ಕರ್ನಾಟಕದಲ್ಲಿ ಕನ್ನಡ) ಬರೆಯಲು, ಓದಲು ಮತ್ತು ಮಾತನಾಡಲು ಪ್ರಾವೀಣ್ಯತೆಯನ್ನು ಹೊಂದಿರಬೇಕಿರುವುದು ಕಡ್ಡಾಯವಾಗಿದೆ.

ವಯೋಮಿತಿ ಮತ್ತು ಆಕರ್ಷಕ ಸ್ಟೈಫಂಡ್ ವಿವರ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 1, 2026 ರ ಅನ್ವಯ ಕನಿಷ್ಠ 20 ವರ್ಷ ತುಂಬಿರಬೇಕು ಮತ್ತು ಗರಿಷ್ಠ 28 ವರ್ಷಗಳ ಒಳಗಿರಬೇಕು. ನಿಯಮಾವಳಿಗಳ ಪ್ರಕಾರ ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ. ಇನ್ನು ಈ ಅಪ್ರೆಂಟಿಸ್‌ಶಿಪ್ ಅವಧಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ರೂ. 15,000 ಸ್ಟೈಫಂಡ್ (Stipend) ನೀಡಲಾಗುತ್ತದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ; 6,565 ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಆಹ್ವಾನ

ಆನ್‌ಲೈನ್ ಲಿಖಿತ ಪರೀಕ್ಷೆ ಹೇಗಿರುತ್ತದೆ?

ಅಭ್ಯರ್ಥಿಗಳ ಅಂತಿಮ ಆಯ್ಕೆಯು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆಯನ್ನು ಆಧರಿಸಿರುತ್ತದೆ. ಈ ಆನ್‌ಲೈನ್ ಲಿಖಿತ ಪರೀಕ್ಷೆಯು ಜುಲೈ 2026 ರಲ್ಲಿ ನಡೆಯಲಿದ್ದು, ಒಟ್ಟು 100 ಅಂಕಗಳಿಗೆ 100 ಬಹು ಆಯ್ಕೆ (MCQ) ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ವ್ಯವಸ್ಥೆ ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೂ 1/4 ರಷ್ಟು ಅಂದರೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಪ್ರಾದೇಶಿಕ ಭಾಷೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ:

ಸಾಮಾನ್ಯ ಇಂಗ್ಲಿಷ್ ವಿಭಾಗವನ್ನು ಹೊರತುಪಡಿಸಿ, ಉಳಿದ ಮೂರು ವಿಭಾಗಗಳ ಪ್ರಶ್ನೆಗಳನ್ನು ಅಭ್ಯರ್ಥಿಗಳು ಇಂಗ್ಲಿಷ್, ಹಿಂದಿ ಸೇರಿದಂತೆ ತಾವು ಆಯ್ಕೆ ಮಾಡಿದ ಪ್ರಾದೇಶಿಕ ಭಾಷೆಯಲ್ಲಿ (ಕನ್ನಡದಲ್ಲಿಯೂ ಸಹ) ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಸ್ಥಳೀಯ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ಒಂದು ಪ್ರಮುಖ ವಿನಾಯಿತಿ ನೀಡಲಾಗಿದ್ದು, ಅಭ್ಯರ್ಥಿಗಳು ತಮ್ಮ 10ನೇ ಅಥವಾ 12ನೇ ತರಗತಿಯ ಅಂಕಪಟ್ಟಿಯಲ್ಲಿ ಸ್ಥಳೀಯ ಭಾಷೆಯನ್ನು (ಉದಾಹರಣೆಗೆ ಕನ್ನಡ) ಒಂದು ವಿಷಯವಾಗಿ ಅಧ್ಯಯನ ಮಾಡಿರುವುದಕ್ಕೆ ಪುರಾವೆಗಳನ್ನು ಹೊಂದಿದ್ದರೆ, ಅವರಿಗೆ ಸ್ಥಳೀಯ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಆಸಕ್ತರು ತಡ ಮಾಡದೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ ಭೇಟಿ ನೀಡಿ ಜೂನ್ 15ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More