ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು: ಲಸಿಕೆ ರಫ್ತಿಗೆ ತಾತ್ಕಾಲಿಕ ತಡೆ?
ಸೆರಮ್ನಿಂದ ಇಂಗ್ಲೆಂಡ್ಗೆ ರಫ್ತಾಗಬೇಕಿದ್ದ ಒಟ್ಟು ಲಸಿಕೆಯ ಪೈಕಿ ಕೇವಲ ಅರ್ಧದಷ್ಟು ಲಸಿಕೆ ಡೋಸ್ಗಳು ಮಾತ್ರ ಭಾರತದಿಂದ ರಫ್ತಾಗಿದೆ. ಲಸಿಕೆ ಅಭಿಯಾನವನ್ನು ನಿಧಾನವಾಗಿ ನಡೆಸಬೇಕಾದ ಅನಿವಾರ್ಯತೆಯ ಎಚ್ಚರಿಕೆಯನ್ನೂ ಸೆರಮ್ ನೀಡಿದೆ.
ದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊವಿಡ್-19 ವಿರುದ್ಧದ ಲಸಿಕೆ ರಫ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ಬ್ರಿಟನ್ನ ಜನಪ್ರಿಯ ದೈನಿಕದ ಜಾಲತಾಣ ‘ದಿ ಗಾರ್ಡಿಯನ್’ ವರದಿ ಮಾಡಿದೆ. ಕೊರೊನಾ ವಿರುದ್ಧ ಭಾರತದ ಸೆರಮ್ ಸಂಸ್ಥೆಯಲ್ಲಿ ತಯಾರಾಗಿರುವ ಆಸ್ಟ್ರಾಜೆನೆಕಾ ಲಸಿಕೆಯನ್ನು ಹೊರದೇಶಗಳಿಗೆ ರಫ್ತು ಮಾಡುವ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಭಾರತದ ಈ ನಡೆಯನ್ನು ರಾಯಿಟರ್ಸ್ ಸುದ್ದಿಸಂಸ್ಥೆ ಮೊದಲು ವರದಿ ಮಾಡಿತ್ತು. ಭಾರತದ ಈ ನಿರ್ಧಾರದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲದೊಂದಿಗೆ ಕೊರೊನಾ ಲಸಿಕೆ ಹಂಚಿಕೊಳ್ಳುವ ವ್ಯವಸ್ಥೆಯ ಭಾಗವಾಗಿದ್ದ ಸುಮಾರು 180 ದೇಶಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಭಾರತದ ಈ ನಿರ್ಧಾರವು ಆಸ್ಟ್ರಾಜೆನೆಕಾ ಲಸಿಕೆ ತಯಾರಿಕೆಯಲ್ಲಿ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೊಂದಿರುವ ವಿವಾದಾತ್ಮಕ ಪಾತ್ರವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ ಎಂದು ‘ಗಾರ್ಡಿಯನ್’ ವರದಿಯಲ್ಲಿ ಆಕ್ಷೇಪಿಸಿದೆ.
ಸೆರಮ್ನಿಂದ ಇಂಗ್ಲೆಂಡ್ಗೆ ರಫ್ತಾಗಬೇಕಿದ್ದ ಒಟ್ಟು ಲಸಿಕೆಯ ಪೈಕಿ ಕೇವಲ ಅರ್ಧದಷ್ಟು ಲಸಿಕೆ ಡೋಸ್ಗಳು ಮಾತ್ರ ಭಾರತದಿಂದ ರಫ್ತಾಗಿದೆ. ಲಸಿಕೆ ಅಭಿಯಾನವನ್ನು ಕೊಂಚ ನಿಧಾನವಾಗಿ ನಡೆಸಬೇಕಾದ ಅನಿವಾರ್ಯತೆಯ ಎಚ್ಚರಿಕೆಯನ್ನೂ ಸೆರಮ್ ನೀಡಿದೆ.
ಸೆರಮ್ ಸಂಸ್ಥೆಯ ಲಸಿಕೆ ಹಂಚಿಕೆ ಆದ್ಯತೆ ಹಾಗೂ ಲಸಿಕೆ ಉತ್ಪಾದನೆ ವಿಚಾರದಲ್ಲಿ ಪಾರದರ್ಶಕತೆಯ ಕೊರತೆ ಮೊದಲಿನಿಂದಲೂ ಇತ್ತು. ಅದರಿಂದ ವ್ಯತಿರಿಕ್ತ ಹೇಳಿಕೆಗಳು, ವಿಷಯಗಳ ಸೋರಿಕೆ, ಅನಾಮಧೇಯ ವಿವರಣೆಗಳೂ ಕಂಡುಬಂದಿತ್ತು. ಭಾರತದ ವಿದೇಶಾಂಗ ಇಲಾಖೆಯ ವೆಬ್ಸೈಟ್ ಮಾಹಿತಿ ಪ್ರಕಾರ ಕಳೆದ ಗುರುವಾರದ ಬಳಿಕ ಭಾರತದಿಂದ ಇತರ ಯಾವುದೇ ದೇಶಕ್ಕೆ ಲಸಿಕೆ ರಫ್ತು ಆಗಿಲ್ಲ. ಭಾರತವು ತನ್ನ ದೇಶದ ಜನರಿಗೆ ಲಸಿಕೆ ವಿತರಿಸಲು, ದೇಶದಲ್ಲಿ ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸಲು ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಕೊರೊನಾ ಪರಿಸ್ಥಿತಿ ಸ್ಥಿರವಾಗುವವರೆಗೆ ಯಾವುದೇ ಲಸಿಕೆ ರಫ್ತು ಆಗುವುದು ಕಷ್ಟಸಾಧ್ಯ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ಅವಕಾಶ ಪಡೆದುಕೊಳ್ಳಲು ಬಯಸುವುದಿಲ್ಲ. ಭಾರತದಲ್ಲೇ ದೊಡ್ಡ ಪ್ರಮಾಣದ ಜನತೆ ಲಸಿಕೆ ಪಡೆದುಕೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿರುವ ಬಗ್ಗೆ ರಾಯಿಟರ್ಸ್ ವರದಿ ಮಾಡಿದೆ.
ಕರ್ನಾಟಕದಲ್ಲಿ ಹೊಸ ನಿಯಮಾವಳಿಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಿಸಲು ರಾಜ್ಯ ಸರ್ಕಾರ ಹೊಸ ನಿಯಮಾವಳಿಗಳನ್ನು ಹೊರಡಿಸಿದೆ. ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಸಹಿತ ಚಂಡೀಗಡ, ರಾಜಸ್ಥಾನಗಳಲ್ಲಿ ಕೊವಿಡ್-19 ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರಾಜ್ಯದ ಪರಿಸ್ಥಿತಿ ನಿಯಂತ್ರಿಸಲು ರಾಜ್ಯ ಸರ್ಕಾರ ಇಂದು (ಮಾರ್ಚ್ 24) ಹೊಸ ನಿಯಮಾವಳಿಗಳ ಅಧಿಸೂಚನೆ ಹೊರಡಿಸಿದೆ.
ಇದನ್ನೂ ಓದಿ: ಭಾರತದಲ್ಲಿ ಡಿಜಿಟಲ್ ಪ್ರಮಾಣ ಪತ್ರ, ಅಮೆರಿಕದಲ್ಲಿ ಕಾಗದದ ದಾಖಲೆ: ಕೊರೊನಾ ಲಸಿಕೆ ಪ್ರಕ್ರಿಯೆ ಹೋಲಿಸಿದ ನಂದನ್ ನಿಲೇಕಣಿ
ಇದನ್ನೂ ಓದಿ: ಭಾರತದಲ್ಲಿ ರೂಪಾಂತರಿ ಕೊರೊನಾ ಪತ್ತೆ, ಅತಿಹೆಚ್ಚು ಸಕ್ರಿಯ ಪ್ರಕರಣಗಳಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು
Published On - 11:20 pm, Wed, 24 March 21