Big Breaking ಭೀಮಾ ಕೋರೆಗಾಂವ್ ಪ್ರಕರಣ: ವರವರ ರಾವ್‌ಗೆ ಸುಪ್ರೀಂಕೋರ್ಟ್ ಜಾಮೀನು
Varavara Rao ವೈದ್ಯಕೀಯ ಕಾರಣಗಳಿಗಾಗಿ ಶಾಶ್ವತ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ರಾವ್ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಯುಯು ಲಲಿತ್, ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ ಈ ಆದೇಶವನ್ನು ನೀಡಿದೆ
ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಭೀಮಾ ಕೋರೆಗಾಂವ್ (Bhima Koregaon Case) ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿತರಾಗಿರುವ 84ರ ಹರೆಯದ ಪಿ ವರವರ ರಾವ್ (P Varavara Rao) ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂಕೋರ್ಟ್ ಬುಧವಾರ ಜಾಮೀನು ನೀಡಿದೆ. ವೈದ್ಯಕೀಯ ಕಾರಣಗಳಿಗಾಗಿ ಶಾಶ್ವತ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ರಾವ್ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಯುಯು ಲಲಿತ್, ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ನೀಡಿದೆ. ಪೀಠವು ರಾವ್ ಅವರ ವಯಸ್ಸು, ಅವರ ವೈದ್ಯಕೀಯ ಪರಿಸ್ಥಿತಿಮತ್ತು ಅವರು ಕಳೆದ ಎರಡೂವರೆ ವರ್ಷ ಬಂಧನದ ಅವಧಿಯನ್ನು ಗಣನೆಗೆ ತೆಗೆದುಕೊಂಡಿತು. ಪ್ರಕರಣದ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ ಮತ್ತು ಆರೋಪಪಟ್ಟಿ ಸಲ್ಲಿಸಿದ್ದರೂ ಸಹ ಆರೋಪಗಳನ್ನು ರೂಪಿಸಲಾಗಿಲ್ಲ ಎಂದು ಪೀಠ ಗಮನಿಸಿದೆ.
ಈ ಹಿಂದೆ ನೀಡಲಾಗಿದ್ದ ಜಾಮೀನು ಸೌಲಭ್ಯವನ್ನು ಹಿಂದೆಗೆದುಕೊಳ್ಳುವಷ್ಟು ಕಾಲಾವಧಿಯಲ್ಲಿ ಮೇಲ್ಮನವಿದಾರರ ವೈದ್ಯಕೀಯ ಸ್ಥಿತಿ ಸುಧಾರಿಸಿಲ್ಲ. ಒಟ್ಟು ಸಂದರ್ಭಗಳನ್ನು ಪರಿಗಣಿಸಿ, ವೈದ್ಯಕೀಯ ಆಧಾರದ ಮೇಲೆ ಮೇಲ್ಮನವಿದಾರರು ಜಾಮೀನು ಪಡೆಯಲು ಅರ್ಹರಾಗಿರುತ್ತಾರ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದೇ ವೇಳೆ 3 ತಿಂಗಳ ನಂತರ ಶರಣಾಗಬೇಕು ಎಂದು ಬಾಂಬೆ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ನ್ಯಾಯಪೀಠ ರದ್ದು ಮಾಡಿದೆ.
ವರವರ ರಾವ್ ಅವರು ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯದ ಅನುಮತಿಯಿಲ್ಲದೆ ಗ್ರೇಟರ್ ಮುಂಬೈನಿಂದ ಹೊರಹೋಗಬಾರದು. ಯಾವುದೇ ರೀತಿಯಲ್ಲಿ ತನ್ನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು ಅಥವಾ ಯಾವುದೇ ಸಾಕ್ಷಿಗಳೊಂದಿಗೆ ಸಂಪರ್ಕದಲ್ಲಿರಬಾರದು ಅಥವಾ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ಪೀಠವು ಆದೇಶಿಸಿದೆ. ಮೇಲ್ಮನವಿದಾರನು ತನ್ನ ಆಯ್ಕೆಯ ವೈದ್ಯಕೀಯ ಆರೈಕೆಗೆ ಅರ್ಹರಾಗಿರುತ್ತಾರೆ. ಆದರೆ ಅವನು ಪಡೆದ ವೈದ್ಯಕೀಯ ಚಿಕಿತ್ಸೆ ಒಳಗೊಂಡಂತೆ ಅಂತಹ ಯಾವುದೇ ಬೆಳವಣಿಗೆಗಳ ಬಗ್ಗೆ ಎನ್ಐಎ ಅಧಿಕಾರಿಗಳ ಜತೆ ಸಂಪರ್ಕದಲ್ಲಿರಬೇಕು. ವೈದ್ಯಕೀಯ ಆಧಾರದ ಮೇಲೆ ಮಾತ್ರ ಜಾಮೀನು ನೀಡಲಾಗಿದೆ ಎಂದು ಪೀಠ ಸ್ಪಷ್ಟಪಡಿಸಿದೆ.
ನಾಲ್ಕು ವರ್ಷಗಳ ಹಿಂದೆ ಆಗಸ್ಟ್ 28, 2018 ರಂದು ಪ್ರಕರಣದಲ್ಲಿ ಬಂಧಿತರಾಗಿದ್ದ ರಾವ್ ಅವರು 2021 ರ ಫೆಬ್ರುವರಿ ವರೆಗೆ ಮುಂಬೈನ ತಲೋಜಾ ಜೈಲಿನಲ್ಲಿದ್ದರು, ಆಗ ಅವರಿಗೆ ಹೈಕೋರ್ಟ್ 6 ತಿಂಗಳ ವೈದ್ಯಕೀಯ ಜಾಮೀನು ನೀಡಿತ್ತು. ವೈದ್ಯಕೀಯ ಜಾಮೀನು ಕಾಲಕಾಲಕ್ಕೆ ವಿಸ್ತರಿಸಲಾಯಿತು. ಆದಾಗ್ಯೂ, ಈ ವರ್ಷ ಏಪ್ರಿಲ್ 13 ರಂದು, ಹೈಕೋರ್ಟ್ ಅವರಿಗೆ ಶಾಶ್ವತ ಜಾಮೀನು ನೀಡಲು ನಿರಾಕರಿಸಿದ್ದು ವೈದ್ಯಕೀಯ ಜಾಮೀನನ್ನು ತಾತ್ಕಾಲಿಕವಾಗಿ ಇನ್ನೂ ಮೂರು ತಿಂಗಳು ವಿಸ್ತರಿಸಿತು. ಮೂರು ತಿಂಗಳ ಅವಧಿಯ ನಂತರ ಜೈಲಿನಲ್ಲಿ ಶರಣಾಗುವಂತೆ ತಿಳಿಸಲಾಗಿದೆ. ಅವರ ವಿಶೇಷ ರಜಾಕಾಲ ಅರ್ಜಿಯನ್ನು ಪರಿಗಣಿಸುವಾಗ ಮುಂದಿನ ಆದೇಶದವರೆಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ಜಾಮೀನು ಅವಧಿಯನ್ನು ವಿಸ್ತರಿಸಿತು.
ರಾವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಆನಂದ್ ಗ್ರೋವರ್ ಅವರು ಪಾರ್ಕಿನ್ಸನ್ಸ್ ಕಾಯಿಲೆ ಸೇರಿದಂತೆ ವಿವಿಧ ರೀತಿಯ ಕೊಮೊರ್ಬಿಡಿಟಿಗಳನ್ನು ಹೊಂದಿದ್ದಾರೆ ಎಂದು ತಿಳಿಸಿದರು. ವಿಚಾರಣೆಯ ಹಂತದ ಬಗ್ಗೆ ಪೀಠವು ಕೇಳಿದಾಗ, ಅದು ಪ್ರಾರಂಭವಾಗಿಲ್ಲ ಮತ್ತು ಆರೋಪಗಳನ್ನು ಸಹ ರೂಪಿಸಲಾಗಿಲ್ಲ ಎಂದು ಗ್ರೋವರ್ ಉತ್ತರಿಸಿದರು.
“ವಿಚಾರಣೆಯು ಇಂದಿನಿಂದ ಪ್ರಾರಂಭವಾದರೂ ಕನಿಷ್ಠ 10 ವರ್ಷಗಳು ಬೇಕಾಗುತ್ತದೆ. 16 ಆರೋಪಿಗಳಿದ್ದಾರೆ ಎಂದು ಗ್ರೋವರ್ ಹೇಳಿದ್ದಾರೆ
ರಾಷ್ಟ್ರೀಯ ತನಿಖಾ ಸಂಸ್ಥೆಯ ಪರ ವಾದ ಮಂಡಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಆರೋಪಿಗಳು ಪದೇ ಪದೇ ಅರ್ಜಿ ಸಲ್ಲಿಸುವ ಮೂಲಕ ವಿಚಾರಣೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರಾವ್ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿಲ್ಲ. ಸ್ಕ್ಯಾನ್ ವರದಿಗಳು ಪಾರ್ಕಿನ್ಸನ್ಸ್ ಅನ್ನು ತೋರಿಸುವುದಿಲ್ಲ. ಅವರು ಕೇವಲ ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಿದ್ದಾರೆ
ರಾವ್ ಅವರು ಆಗಸ್ಟ್ 28, 2018 ರಿಂದ ಸುಮಾರು ಮೂರು ತಿಂಗಳ ಕಾಲ ಗೃಹಬಂಧನದಲ್ಲಿದ್ದರು. ನವೆಂಬರ್ 17, 2018 ರಂದು ಮಾತ್ರ ತಲೋಜಾ ಜೈಲಿಗೆ ಕರೆದೊಯ್ಯಲಾಯಿತು ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಹೇಳಿದ್ದಾರೆ. ತನಿಖಾಧಿಕಾರಿಗೆ ಕಸ್ಟಡಿ ವಿಚಾರಣೆಗೆ ಸಾಕಷ್ಟು ಅವಕಾಶವಿತ್ತು ಎಂದು ನ್ಯಾಯಮೂರ್ತಿ ಲಲಿತ್ ಹೇಳಿದಾಗ ಆ ಅವಧಿಯ ನಂತರವೂ ಅವರು ಹೆಚ್ಚಿನ ಸಮಯ ಆಸ್ಪತ್ರೆಯಲ್ಲಿದ್ದರು ಎಂದು ಎಎಸ್‌ಜಿ ಹೇಳಿದ್ದಾರೆ.
ಅವರು ಎರಡೂವರೆ ವರ್ಷಗಳಿಂದ ಬಂಧನದಲ್ಲಿದ್ದರು. ಅವರಿಗೀಗ 82 ವರ್ಷ. ಅವರು ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ನಿಮ್ಮ ಪ್ರಕರಣವಲ್ಲ” ಎಂದು ನ್ಯಾಯಮೂರ್ತಿ ಲಲಿತ್ ಹೇಳಿದರು.ವಿಚಾರಣೆ ಮುಗಿಯುವ ತಕ್ಷಣದ ನಿರೀಕ್ಷೆ ಇದ್ದರೆ, ನಾವು ಅರ್ಥಮಾಡಿಕೊಳ್ಳಬಹುದು. ವಿಚಾರಣೆ ಪೂರ್ಣಗೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ವಕೀಲರಾಗಿ ನಮಗೆ ಹೇಳುತ್ತೀರಾ?” ಎಂದು ನ್ಯಾಯಮೂರ್ತಿ ಲಲಿತ್ ಪ್ರಶ್ನಿಸಿದರು.
“ಒಂದೂವರೆ ವರ್ಷಗಳು ಎಂದು ಎಎಸ್‌ಜಿ ಹೇಳಿದಾಗ ಆರೋಪಿಗಳ ವಿರುದ್ಧದ ಅಪರಾಧಗಳಿಗೆ ಗರಿಷ್ಠ ಶಿಕ್ಷೆ ಏನು ಎಂದು ನ್ಯಾಯಮೂರ್ತಿ ಲಲಿತ್ ಕೇಳಿದರು, ಇದಕ್ಕೆ ಎಎಸ್ ಜಿ 10 ವರ್ಷಗಳು ಎಂದು ಉತ್ತರಿಸಿದರು.
Published On - 12:24 pm, Wed, 10 August 22