ಬಿಹಾರದಲ್ಲಿ ಬಿಜೆಪಿ ಯುಗ ಆರಂಭ; ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ
Bihar New CM: ಇಂದು ಪಾಟ್ನಾದಲ್ಲಿ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ. ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕನಾಗಿ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ. ಬಿಹಾರದ ಹಾಲಿ ಉಪ ಮುಖ್ಯಮಂತ್ರಿ ಆಗಿರುವ ಸಾಮ್ರಾಟ್ ಚೌಧರಿ ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಎನ್‌ಡಿಎ ಮೈತ್ರಿಕೂಟದ ನಾಯಕರು ಸಾಮ್ರಾಟ್ ಚೌಧರಿಯನ್ನು ಅಭಿನಂದಿಸಿದ್ದಾರೆ.

ಪಾಟ್ನಾ, ಏಪ್ರಿಲ್ 14: ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ಜೆಡಿಯು ನಾಯಕ ನಿತೀಶ್ ಕುಮಾರ್ (Nitish Kumar) ಇಂದು ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಪಾಟ್ನಾದಲ್ಲಿ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ (Samrat Chaudhary) ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಅವರು ಬಿಹಾರದ ಉಪಮುಖ್ಯಮಂತ್ರಿಯಾಗಿದ್ದಾರೆ. ಈ ಮೂಲಕ ಬಿಹಾರದಲ್ಲಿ ಮೊದಲ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಹೀಗಾಗಿ, ಇದು ಬಿಜೆಪಿ ಪಾಲಿಗೆ ಮಹತ್ವದ ಕ್ಷಣವಾಗಿದೆ.
ನಾಳೆ ಬಿಹಾರದ ಹೊಸ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಜ್ಯಸಭೆಗೆ ನಿತೀಶ್ ಕುಮಾರ್ ಆಯ್ಕೆಯಾಗಿರುವುದರಿಂದ ಬಿಹಾರದ ಸಿಎಂ ಸ್ಥಾನ ಖಾಲಿಯಾಗಿತ್ತು. ಹೀಗಾಗಿ, ಈ ಬಾರಿ ಬಿಜೆಪಿಗೆ ಸಿಎಂ ಸ್ಥಾನವನ್ನು ಜೆಡಿಯು ಬಿಟ್ಟುಕೊಟ್ಟಿದೆ. ಸಾಮ್ರಾಟ್ ಚೌಧರಿಯ ಪ್ರಮಾಣವಚನ ಸ್ವೀಕಾರ ಸಮಾರಂಭ ನಾಳೆ (ಏಪ್ರಿಲ್ 15) ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಸಾಮ್ರಾಟ್ ಚೌಧರಿ ಅವರ ಜೊತೆಗೆ, ಇಬ್ಬರು ಉಪಮುಖ್ಯಮಂತ್ರಿಗಳು ಸಹ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: ಬಿಹಾರದ ಮುಂದಿನ ಸಿಎಂ ನಿತೀಶ್ ಕುಮಾರ್ ಅಲ್ಲವಾ? ಬಿಜೆಪಿಯ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿ ಆಗ್ತಾರಾ?
ನಿತೀಶ್ ಕುಮಾರ್ 20 ವರ್ಷಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಿದ್ದವರು. ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಜೆಡಿಯು ಬದಲಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಳೆದ ಸರ್ಕಾರದ ಅವಧಿಯಲ್ಲೂ ಬಿಜೆಪಿ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಅದು ಬಿಜೆಪಿ ಮೈತ್ರಿಕೂಟದ ಸರ್ಕಾರವಾಗಿತ್ತು. ಆದರೆ, ಇದೀಗ ಬಿಜೆಪಿ ನಾಯಕನೇ ಸಿಎಂ ಆಗುತ್ತಿರುವುದರಿಂದ ಅಧಿಕೃತವಾಗಿ ಬಿಹಾರದಲ್ಲಿ ಬಿಜೆಪಿ ತನ್ನ ಖಾತೆ ತೆರೆದಂತಾಗಿದೆ. ನಾಳೆ ಬಿಹಾರದ 24ನೇ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ನಂತರ ಮುಖ್ಯಮಂತ್ರಿಯಾದ ಬಿಹಾರದ ಎರಡನೇ ನಾಯಕ ಎಂಬ ಹೆಗ್ಗಳಿಕೆಯೂ ಇವರದ್ದು.
ಇದನ್ನೂ ಓದಿ: ಬಿಹಾರದ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ; ಹೊಸ ಸರ್ಕಾರಕ್ಕೆ ಪೂರ್ಣ ಬೆಂಬಲದ ಪ್ರತಿಜ್ಞೆ
ಪ್ರಮುಖ ಒಬಿಸಿ ನಾಯಕ ಮತ್ತು ಪ್ರಸ್ತುತ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿರುವುದು ಮುಂಬರುವ ಚುನಾವಣಾ ಕದನಗಳಿಗೆ ಮುಂಚಿತವಾಗಿ ಬಿಹಾರದಲ್ಲಿ ತನ್ನ ಸಾಮಾಜಿಕ ನೆಲೆಯನ್ನು ಬಲಪಡಿಸಲು ಬಿಜೆಪಿಯ ಕಾರ್ಯತಂತ್ರವನ್ನು ಸೂಚಿಸುತ್ತದೆ. ಈಗಾಗಲೇ ನಾಳೆಯ ಪ್ರಮಾಣವಚನ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ರಾಜ್ಯ ರಾಜಧಾನಿ ಪಾಟ್ನಾದಲ್ಲಿ ಕಾರ್ಯಕ್ರಮ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Tue, 14 April 26




