ಸೇವಾಶುಲ್ಕ ಗ್ರಾಹಕರ ಪ್ರೀತಿ, ಕಡ್ಡಾಯವಲ್ಲ: ಹೋಟೆಲ್, ಬಾರ್-ರೆಸ್ಟೋರೆಂಟ್ ಬಿಸಿ ಮುಟ್ಟಿಸಿದ CCPA
ಹೋಟೆಲ್, ಬಾರ್-ರೆಸ್ಟೋರೆಂಟ್, ಕ್ಯಾಂಟೀನ್‌ಗಳಲ್ಲಿ ʼಸೇವಾ ಶುಲ್ಕʼ ಗ್ರಾಹಕರ ಐಚ್ಛಿಕವಾಗಿದೆ. ಹಾಗಿದ್ದರೂ ನಿಯಮ ಉಲ್ಲಂಘಿಸಿ ʼಸ್ವಯಂ ಸೇವಾ ಶುಲ್ಕʼ ವಿಧಿಸುತ್ತಿರುವುದರ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಸಮರ ಸಾರಿದ್ದು, ಗ್ರಾಹಕರಿಗೆ ಕಡ್ಡಾಯ ಸೇವಾಶುಲ್ಕ ಹಾಕಿದ ರೆಸ್ಟೋರೆಂಟ್‌ಗಳಿಗೆ ದಂಡ ಹಾಕಲಾಗಿದೆ. ಈ ಬಗ್ಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ.

ಮುಖ್ಯಾಂಶಗಳು
- ಗ್ರಾಹಕರಿಗೆ ಕಡ್ಡಾಯ ಸೇವಾಶುಲ್ಕ; 41 ರೆಸ್ಟೋರೆಂಟ್‌ಗಳಿಗೆ ದಂಡ
- ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸೂಚನೆ
- ರೆಸ್ಟೋರೆಂಟ್‌ಗಳ ಮೇಲೆ ಸ್ವಯಂ ಪ್ರೇರಿತ ಕ್ರಮಕ್ಕಿಳಿದ CCPA
ನವದೆಹಲಿ, (ಜುಲೈ 19): ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ (pralhad joshi) ಅವರ ಸೂಚನೆ ಮೇರೆಗೆ CCPA 41 ರೆಸ್ಟೋರೆಂಟ್‌ಗಳ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದೆ. ಗ್ರಾಹಕರಿಗೆ ಪೂರ್ವನಿಯೋಜಿತವಾಗಿ ʼಸೇವಾ ಶುಲ್ಕʼ ವಿಧಿಸುತ್ತಿದ್ದ ಹಿನ್ನೆಲೆಯಲ್ಲಿ Chaayos, Barbeque Nation, L’Opera French Bakery Private Limited ಮತ್ತಿತರರಿಗೆ ದಂಡ ವಿಧಿಸಿದೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH)ಗೆ ಬಂದ ದೂರುಗಳ ಆಧಾರದ ಮೇಲೆ ಗ್ರಾಹಕರಿಗೆ ಬಿಲ್‌ನಲ್ಲಿ ಪೂರ್ವನಿಯೋಜಿತವಾಗಿ ʼಸೇವಾ ಶುಲ್ಕ (service charge)ʼ ವಿಧಿಸುತ್ತಿದ್ದ 41 ರೆಸ್ಟೋರೆಂಟ್‌ಗಳ ವಿರುದ್ಧ CCPA ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಸೇವಾ ಶುಲ್ಕ ಗ್ರಾಹಕರಿಗೆ ಐಚ್ಛಿಕವಾಗಿದ್ದು, ಕಡ್ಡಾಯವಲ್ಲ. ಅವರೇ ಸ್ವಯಂಪ್ರೇರಿತವಾಗಿ ನೀಡಿದರೆ ಮಾತ್ರ ಸ್ವೀಕರಿಸತಕ್ಕದ್ದು ಎಂದು CCPA ಈ ಹಿಂದೆಯೇ ಆದೇಶಿಸಿದೆ. ಹಾಗಿದ್ದರೂ ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ಕೊಡುವ ಬಿಲ್‌ನಲ್ಲಿ ಮೊದಲೇ ಸೇವಾ ಶುಲ್ಕ ಸೇರಿಸಿಯೇ ಕೊಡುತ್ತಿರುವುದು ಗಮನಕ್ಕೆ ಬಂದಿದ್ದು, ಯಾವುದೇ ಕಾರಣಕ್ಕೂ ಸ್ವಯಂ ಆಗಿ ಸೇವಾಶುಲ್ಕ ವಿಧಿಸುವಂತಿಲ್ಲ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು CCPA ಕಟ್ಟೆಚ್ಚರ ನೀಡಿದೆ.
ಇದನ್ನೂ ಓದಿ: ಡಾರ್ಕ್ ಪ್ಯಾಟರ್ನ್ ಪ್ರದರ್ಶಿಸಿದ್ದಕ್ಕೆ ಸ್ಪೈಸ್ಜೆಟ್ಗೆ 1 ಲಕ್ಷ ರೂ ದಂಡ: ಪ್ರಲ್ಹಾದ ಜೋಶಿ ಸೂಚನೆ ಬೆನ್ನಲ್ಲೇ ಕಠಿಣ ಕ್ರಮ
ಸೇವಾ ಶುಲ್ಕ ಭರಿಸುವುದು ಸಂಪೂರ್ಣವಾಗಿ ಗ್ರಾಹಕರ ವಿವೇಚನೆಗೆ ಬಿಟ್ಟ ವಿಚಾರ. ಇದರಲ್ಲಿ ಒತ್ತಡ, ಒತ್ತಾಯ ಹಾಕುವಂತಿಲ್ಲ. ಬಿಲ್‌ನಲ್ಲೂ ಮೊದಲೇ ನಮೂದಿಸುವಂತಿಲ್ಲ ಎಂಬುದನ್ನು ಪುನರುಚ್ಚರಿಸಿರುವ CCPA, ಗ್ರಾಹಕ ಸಂರಕ್ಷಣಾ ಕಾನೂನನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸೂಚಿಸಿದೆ. ಅಲ್ಲದೇ, ಇಂತಹ ಅನ್ಯಾಯ ಕಂಡುಬಂದಲ್ಲಿ ಗ್ರಾಹಕರು ನೇರವಾಗಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (1915)ಗೆ ದೂರು ನೀಡುವಂತೆಯೂ ತಿಳಿಸಿದೆ.
The Central Consumer Protection Authority (CCPA) has initiated suo motu action against 41 restaurants for levying service charge by default, based on complaints received through the National Consumer Helpline (NCH).
Reaffirming that service charge is voluntary and entirely at… pic.twitter.com/bESSxvTX4U
— Pralhad Joshi (@JoshiPralhad) July 19, 2026
ಸೇವಾಶುಲ್ಕ ಗ್ರಾಹಕರ ಪ್ರೀತಿ: ಸೇವಾಶುಲ್ಕ ಎನ್ನುವುದು ಅತ್ಯುತ್ತಮ ಸೇವೆಗೆ ಗ್ರಾಹಕರು ಪ್ರೀತಿಯಿಂದ ಕೊಡುವುದಾಗಿದೆ. ಅದನ್ನು ಒತ್ತಾಯದಿಂದ ಪಡೆಯುವುದು ಮತ್ತು ಪೂರ್ವನಿಯೋಜಿತವಾಗಿ ವಿಧಿಸುವುದನ್ನು ತರವಲ್ಲ. ಮತ್ತಿದನ್ನು ಸಹಿಸುವುದಿಲ್ಲ. ಹೋಟೆಲ್, ರೆಸ್ಟೋರೆಂಟ್, ಕ್ಯಾಂಟೀನ್ ನ್ಯಾಯಯುತ, ಪಾರದರ್ಶಕ ಮತ್ತು ಗ್ರಾಹಕ-ಸ್ನೇಹಿ ಪದ್ಧತಿಗಳನ್ನು ಅನುಸರಿಸಬೇಕು. ಗ್ರಾಹಕರ ಹಕ್ಕುಗಳ ಉಲ್ಲಂಘನೆ ಬದಲು ಗ್ರಾಹಕರ ಹಿತ ಕಾಯಬೇಕು ಎಂದಿದ್ದಾರೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ.




