ಕರ್ನಾಟಕದಿಂದ ಚಾರ್ ಧಾಮ್ ಯಾತ್ರೆಗೆ ಹೋಗುವವರು ಈಗ ಪೂಜಾ ಫೀ ಎಷ್ಟು ಕೊಡಬೇಕು ಗೊತ್ತಾ?
ಚಾರ್ ಧಾಮ್ ಯಾತ್ರೆ 2026ರ ನಿಮಿತ್ತ ಬದ್ರಿನಾಥ್-ಕೇದಾರನಾಥ್ ದೇಗುಲಗಳಲ್ಲಿ ವಿಶೇಷ ಪೂಜೆ ಮತ್ತು ಆರತಿಗಳ ಶುಲ್ಕವನ್ನು ಬಿಕೆಟಿಸಿ ಹೆಚ್ಚಿಸಿದೆ. ಆದಾಗ್ಯೂ, ಸಾಮಾನ್ಯ ಭಕ್ತರಿಗೆ ದರ್ಶನ ಉಚಿತವಾಗಿಯೇ ಇರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ದರ ಹೆಚ್ಚಳವು ದೇಗುಲಗಳ ನಿರ್ವಹಣೆ ಮತ್ತು ಭಕ್ತರ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸುವ ಗುರಿ ಹೊಂದಿದೆ. ವಿಶೇಷ ಪೂಜೆಗಳಲ್ಲಿ ಭಾಗವಹಿಸುವ ಭಕ್ತರು ಮುಂಚಿತವಾಗಿ ಬುಕ್ಕಿಂಗ್ ಮಾಡಿಕೊಂಡು ನಿಗದಿತ ಶುಲ್ಕ ಪಾವತಿಸಬೇಕಿದೆ.

ವಿಶ್ವಪ್ರಸಿದ್ಧ ಚಾರ್ ಧಾಮ್ ಯಾತ್ರೆಗೂ ಮುನ್ನ ಬದ್ರಿನಾಥ್-ಕೇದಾರನಾಥ್ ಟೆಂಪಲ್ ಕಮಿಟಿ (ಬಿಕೆಟಿಸಿ)ಯಿಂದ ಭಕ್ತರಿಗೆ ಮಹತ್ವದ ಮಾಹಿತಿ ನೀಡಲಾಗಿದೆ. ಉಭಯ ದೇಗುಲಗಳಲ್ಲಿ ವಿಶೇಷ ಪೂಜೆ ಮತ್ತು ಆರತಿಗಳ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಬಿಕೆಟಿಸಿ ಸಭೆಯಲ್ಲಿ ಈ ನಿರ್ಧಾರವನ್ನು ಏಕಮತದಿಂದ ಅಂಗೀಕರಿಸಲಾಗಿದೆ. ಆದರೆ ಸಾಮಾನ್ಯ ದರ್ಶನ ಹಿಂದಿನಂತೆ ಉಚಿತವಾಗಿಯೇ ಮುಂದುವರಿಯಲಿದೆ. ಬಿಕೆಟಿಸಿ ನಿರ್ವಹಣೆಯಡಿ ಇರುವ ಈ ಎರಡೂ ಧಾಮಗಳಲ್ಲಿ ಪ್ರತಿದಿನ ಬೆಳಗ್ಗೆ-ಸಂಜೆ ವಿವಿಧ ಪೂಜೆಗಳು ಮತ್ತು ಆರತಿಗಳು ನಡೆಯುತ್ತವೆ. ಮಹಾಭಿಷೇಕ, ಅಭಿಷೇಕ, ಭೋಗ, ಅಖಂಡ ಜ್ಯೋತಿ ಸೇರಿದಂತೆ ಅನೇಕ ಧಾರ್ಮಿಕ ವಿಧಿಗಳು ಸಂಪನ್ನಗೊಳ್ಳುತ್ತವೆ. ಈ ವಿಶೇಷ ಪೂಜೆಗಳಲ್ಲಿ ಭಾಗವಹಿಸಲು ಭಕ್ತರು ಮುಂಚಿತವಾಗಿ ಬುಕ್ಕಿಂಗ್ ಮಾಡಬೇಕು ಹಾಗೂ ನಿಗದಿತ ಶುಲ್ಕ ಪಾವತಿಸಬೇಕಿದೆ. ಈಗಿನ ಹೊಸ ನಿರ್ಧಾರದಂತೆ ಈ ಶುಲ್ಕಗಳು ಹೆಚ್ಚಳಗೊಂಡಿವೆ.
| ಬದ್ರಿನಾಥ ಧಾಮದ ಹೊಸ ದರಗಳು | ||
| ಸೇವೆಯ ವಿವರ | ಹಿಂದನ ದರ (ರೂ. ಗಳಲ್ಲಿ) | ಹೊಸ ದರ (ರೂ. ಗಳಲ್ಲಿ) |
| ಶ್ರೀಮದ್ಭಾಗವತ ಕಥೆ | 51000 | 100000 |
| ವೇದ ಮತ್ತು ಗೀತಾ ಪಾಠ | 2500 | 3100 |
| ಕರ್ಪೂರ ಆರತಿ | 1951 | 3000 |
| ಬೆಳ್ಳಿ ಆರತಿ | 2731 | 5100 |
| ಮಹಾಭಿಷೇಕ | 4700 | 5500 |
| ಅಭಿಷೇಕ | 4500 | 5300 |
| ಅಖಂಡ ಜ್ಯೋತಿ (ವಾರ್ಷಿಕ) | 4951 | 6000 |
| ಸ್ವರ್ಣ ಆರತಿ | 5202 | 6100 |
| ಖೀರ್ ಭೋಗ | 1001 | 2100 |
| ಬಾಲ ಭೋಗ | 7301 | 10000 |
| ಮಹಾಭೋಗ | 32501 | 45000 |
ಇದನ್ನೂ ಓದಿ: ದೈವಾರಾಧನೆಯಲ್ಲಿ ‘ಮಡಿ’ ಎಂದರೆ ಭಯವಲ್ಲ, ಅದು ಪರಮ ಶುಚಿತ್ವದ ಸಂಕೇತ!
| ಕೆದಾರನಾಥ ಧಾಮದ ಹೊಸ ದರಗಳು | ||
| ಸೇವೆಯ ವಿವರ | ಹಿಂದನ ದರ (ರೂ. ಗಳಲ್ಲಿ) | ಹೊಸ ದರ (ರೂ. ಗಳಲ್ಲಿ) |
| ಲಘು ರುದ್ರಾಭಿಷೇಕ | 6100 | 7100 |
| ಮಹಾಭಿಷೇಕ | 9500 | 11500 |
| ರುದ್ರಾಭಿಷೇಕ | 7200 | 7500 |
| ದಿನಪೂರ್ತಿ ಪೂಜೆ | 28600 | 51000 |
| ಶಿವ ಸಹಸ್ರನಾಮ | 2000 | 2500 |
| ಅಖಂಡ ಜ್ಯೋತಿ | 28600 | 35000 |
| ಕರ್ಪೂರ ಆರತಿ | 1900 | 2400 |
| ಬಾಲ ಭೋಗ | 1000 | 1500 |
ಸಾಮಾನ್ಯ ದರ್ಶನ ಉಚಿತ
ಬಿಕೆಟಿಸಿ ಪ್ರಕಾರ, ಸಾಮಾನ್ಯ ಭಕ್ತರಿಗೆ ದರ್ಶನ ವ್ಯವಸ್ಥೆ ಹಳೆಯದಂತೆ ಉಚಿತವಾಗಿಯೇ ಇರುತ್ತದೆ. ಕೇವಲ ವಿಶೇಷ ಪೂಜೆ, ಆರತಿ ಮತ್ತು ವಿಧಿಗಳಿಗಾಗಿ ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಸಮಿತಿ ಅಧ್ಯಕ್ಷ ಹೆಮಂತ್ ದ್ವಿವೇದಿ ಹೇಳುವಂತೆ, ಪ್ರತಿವರ್ಷದಂತೆ ಈ ವರ್ಷವೂ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಹೊಸ ದರಗಳನ್ನು ಜಾರಿಗೆ ತರಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಚಾರಧಾಮ ಯಾತ್ರೆಗೂ ಮುನ್ನ ಕಮಿಟಿಯ ಈ ನಿರ್ಧಾರ ಪ್ರಾಮುಖ್ಯತೆ ಪಡೆದಿದೆ. ವಿಶೇಷ ಪೂಜೆಗಳಲ್ಲಿ ಭಾಗವಹಿಸುವ ಭಕ್ತರಿಗೆ ಈ ದರ ಏರಿಕೆಯ ಪರಿಣಾಮ ಬೀಳಬಹುದು. ಆದರೆ ಸಮಿತಿಯ ಪ್ರಕಾರ, ಈ ಹೆಚ್ಚುವರಿ ಶುಲ್ಕದಿಂದ ದೇವಸ್ಥಾನಗಳ ವ್ಯವಸ್ಥೆ ಮತ್ತು ಭಕ್ತರಿಗೆ ಸೌಲಭ್ಯಗಳು ಮತ್ತಷ್ಟು ಸುಧಾರಿಸಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:07 pm, Fri, 20 March 26
