AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್ ಹಿಡಿದವರೆಲ್ಲಾ ಜರ್ನಲಿಸ್ಟ್ ಆಗಲು ಸಾಧ್ಯವೇ?: ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕೋದ್ಯಮದ ಗಡಿಗಳ ಬಗ್ಗೆ ಸಿಜೆಐ ಪೀಠ ಮಹತ್ವದ ಪ್ರಶ್ನೆ

ಮೊಬೈಲ್ ಹಿಡಿದವರೆಲ್ಲಾ ಪತ್ರಕರ್ತರಾದರೆ ಸಮಾಜಕ್ಕೆ ಕಂಟಕ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಸ್ವತಂತ್ರ ಪತ್ರಕರ್ತರು, ಸಾಮಾಜಿಕ ಮಾಧ್ಯಮ ಕಂಟೆಂಟ್ ಕ್ರಿಯೇಟರ್‌ಗಳಿಗೆ ರಕ್ಷಣೆ ಕುರಿತು ವಿಚಾರಣೆ ನಡೆಸಿದ ಸುಪ್ರೀಂ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕೋದ್ಯಮದ ಗಡಿಗಳ ಬಗ್ಗೆ ಮಹತ್ವದ ಪ್ರಶ್ನೆಗಳನ್ನು ಎತ್ತಿದೆ. ನೈಜ ಪತ್ರಕರ್ತರು ಯಾರು, ಡಿಜಿಟಲ್ ಮಾಧ್ಯಮಗಳಿಗೆ ನಿಯಮಗಳ ಅಗತ್ಯವಿದೆಯೇ ಎಂಬ ಬಗ್ಗೆ ನ್ಯಾಯಾಲಯ ಪರಿಶೀಲನೆ ನಡೆಸಲಿದೆ.

ಮೊಬೈಲ್ ಹಿಡಿದವರೆಲ್ಲಾ ಜರ್ನಲಿಸ್ಟ್ ಆಗಲು ಸಾಧ್ಯವೇ?: ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕೋದ್ಯಮದ ಗಡಿಗಳ ಬಗ್ಗೆ ಸಿಜೆಐ ಪೀಠ ಮಹತ್ವದ ಪ್ರಶ್ನೆ
ಸುಪ್ರೀಂಕೋರ್ಟ್​ Image Credit source: PTI
ನಯನಾ ರಾಜೀವ್
|

Updated on: Oct 16, 2026 | 11:18 AM

Share

ನವದೆಹಲಿ, ಅಕ್ಟೋಬರ್ 16: ಪ್ರತಿಯೊಬ್ಬರೂ ಪತ್ರಕರ್ತರೆಂದು ಹೇಳಿಕೊಂಡರೆ ಹಲವು ಸಮಸ್ಯೆಗಳು ಎದುರಾಗಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರತಿಭಟನೆಗಳನ್ನು ವರದಿ ಮಾಡುವ ಸ್ವತಂತ್ರ ಪತ್ರಕರ್ತರು ಮತ್ತು ಸಾಮಾಜಿಕ ಮಾಧ್ಯಮದ ಕಂಟೆಂಟ್‌ ಕ್ರಿಯೇಟರ್‌ಗಳಿಗೆ ರಕ್ಷಣೆ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಷಯವನ್ನು ಪ್ರಸ್ತಾಪಿಸಿದೆ.

ಪ್ರತಿಭಟನೆಗಳನ್ನು ವರದಿ ಮಾಡುವ ಸ್ವತಂತ್ರ ಪತ್ರಕರ್ತರಿಗೆ ಪೊಲೀಸರು ಅಡ್ಡಿಪಡಿಸಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಮಾಧ್ಯಮ ಸಂಸ್ಥೆಗಳ ಗುರುತಿನ ಚೀಟಿ ಹೊಂದಿರುವ ಪತ್ರಕರ್ತರು ತಮ್ಮ ವೃತ್ತಿಪರ ಕೆಲಸ ಮಾಡಲು ಅವಕಾಶ ನೀಡುವಂತೆ ಪೊಲೀಸರಿಗೆ ಮಾರ್ಗಸೂಚಿ ರೂಪಿಸಬೇಕು ಎಂದು ವಾದಿಸಿದರು. ಈ ವೇಳೆ, ಎಲ್ಲರೂ ಪತ್ರಕರ್ತರಾಗಲು ಆರಂಭಿಸಿದರೆ ಸಮಸ್ಯೆಗಳು ಎದುರಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.

ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಪತ್ರಕರ್ತನಾಗುವ ಹಕ್ಕು ನೀಡುತ್ತದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದರು. ಮಾನ್ಯತೆ ಪಡೆದ ಪತ್ರಕರ್ತರು, ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಸ್ವತಂತ್ರ ಪತ್ರಕರ್ತರು ಮತ್ತು ಸಾಮಾಜಿಕ ಮಾಧ್ಯಮದ ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಯಾವ ರೀತಿಯ ರಕ್ಷಣೆ ನೀಡಬೇಕು ಎಂಬುದನ್ನು ನ್ಯಾಯಾಲಯ ಪರಿಗಣಿಸಬೇಕಿದೆ.

ಮತ್ತಷ್ಟು ಓದಿ: ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ

ಇನ್ನೊಂದೆಡೆ, ಮೊಬೈಲ್ ಫೋನ್ ಹೊಂದಿರುವ ಯಾರಾದರೂ ತಮ್ಮನ್ನು ಸ್ವತಂತ್ರ ಪತ್ರಕರ್ತರೆಂದು ಹೇಳಿಕೊಳ್ಳಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು. ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆ ಗಳಿಸಲು ಸುದ್ದಿಗಳನ್ನು ಸಂವೇದನಾಶೀಲವಾಗಿ ತೋರಿಸಬಹುದು ಎಂದರು. ಮಹಿಳಾ ಪತ್ರಕರ್ತರ ಸುರಕ್ಷತೆಯ ಜೊತೆಗೆ ಮಹಿಳಾ ಪೊಲೀಸ್ ಅಧಿಕಾರಿಗಳ ಸುರಕ್ಷತೆಯನ್ನೂ ಗಮನಿಸಬೇಕು ಎಂದು ಹೇಳಿದರು. ಈ ಪ್ರಕರಣದಲ್ಲಿ ಪತ್ರಕರ್ತರ ಹಕ್ಕುಗಳು ಮತ್ತು ಅವರಿಗೆ ನೀಡಬೇಕಾದ ರಕ್ಷಣೆಯ ಮಿತಿಗಳ ಕುರಿತು ಸುಪ್ರೀಂ ಕೋರ್ಟ್ ಹೆಚ್ಚಿನ ಪರಿಶೀಲನೆ ನಡೆಸಬೇಕಿದೆ.

ಸಿಜೆಐ ಸೂರ್ಯ ಕಾಂತ್ ಎಚ್ಚರಿಕೆ:

ಈ ವಾದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, “ನಾವು ಈ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪ್ರತಿಯೊಬ್ಬರೂ ತಾವೇ ಪತ್ರಕರ್ತರೆಂದು ಹೇಳಿಕೊಳ್ಳಲು ಶುರುಮಾಡಿದರೆ ಅದು ಎಲ್ಲರಿಗೂ ತಲೆನೋವಾಗಿ ಪರಿಣಮಿಸುತ್ತದೆ” ಎಂದರು.

ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಇಂದಿನ ಡಿಜಿಟಲ್ ಕಾಲದಲ್ಲಿ ಕೈಯಲ್ಲೊಂದು ಸ್ಮಾರ್ಟ್‌ಫೋನ್ ಇದ್ದರೆ ಸಾಕು, ತಾವೇ ಪತ್ರಕರ್ತರೆಂದು ಹೇಳಿಕೊಳ್ಳುತ್ತಿದ್ದಾರೆ. ಕೇವಲ ಲೈಕ್ಸ್, ವ್ಯೂವ್ಸ್ ಮತ್ತು ಹಣ ಗಳಿಸಲು ಘಟನೆಗಳನ್ನು ತಿರುಚಿ ಸಂವೇದನಾಶೀಲ ರೀಲ್ಸ್‌ಗಳನ್ನು ಮಾಡುತ್ತಿದ್ದಾರೆ. ಇಂಥವರಿಗೂ ಪತ್ರಕರ್ತರ ಸ್ಥಾನಮಾನ ಮತ್ತು ರಕ್ಷಣೆ ನೀಡಲು ಸಾಧ್ಯವಿಲ್ಲ. ಮಹಿಳಾ ಪತ್ರಕರ್ತರ ಘನತೆ ಕಾಪಾಡುವಷ್ಟೇ ಸಮಾನವಾಗಿ ಕರ್ತವ್ಯದಲ್ಲಿರುವ ಮಹಿಳಾ ಪೊಲೀಸ್ ಸಿಬ್ಬಂದಿಯ ಸುರಕ್ಷತೆಯನ್ನೂ ರಕ್ಷಿಸಬೇಕು” ಎಂದು ವಾದಿಸಿದರು.

ಡಿಜಿಟಲ್ ಮಾಧ್ಯಮಗಳಿಗೆ ಮಾರ್ಗಸೂಚಿ ಸಾಧ್ಯತೆ: ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮುಂತಾದ ವೇದಿಕೆಗಳಲ್ಲಿ ಸುದ್ದಿ ಮಾಡುವವರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ, ‘ನೈಜ ಪತ್ರಕರ್ತರು ಯಾರು’ ಮತ್ತು ‘ಕೇವಲ ಕಂಟೆಂಟ್ ಕ್ರಿಯೇಟರ್ಸ್ ಯಾರು’ ಎಂಬುದರ ನಡುವಿನ ರೇಖೆಯನ್ನು ಎಳೆಯಲು ಈ ಪ್ರಕರಣ ನಾಂದಿ ಹಾಡಲಿದೆ.

ವಿಶೇಷ ರಕ್ಷಣೆಯ ಮಾನದಂಡ: ಪೊಲೀಸರ ಲಾಠಿಚಾರ್ಜ್ ಅಥವಾ ಬಂಧನಗಳಿಂದ ವರದಿಗಾರರನ್ನು ರಕ್ಷಿಸಲು ಮಾಧ್ಯಮ ಸಂಸ್ಥೆಯ ಮಾನ್ಯತೆ ಕಡ್ಡಾಯವೇ ಅಥವಾ ಸ್ವತಂತ್ರ ನಾಗರಿಕ ಪತ್ರಕರ್ತರಿಗೂ ರಕ್ಷಣೆ ಇರಬೇಕೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ವಿಸ್ತೃತ ತೀರ್ಪು ನೀಡುವ ಸಾಧ್ಯತೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More