‘ನನ್ನ ಉದ್ದೇಶ ಯಾರನ್ನೂ ನೋಯಿಸುವುದಾಗಿರಲಿಲ್ಲ’; ವಿಧಾನಸಭಾ ಭಾಷಣದ ವಿವಾದಕ್ಕೆ ಸಿಎಂ ವಿಜಯ್ ಸ್ಪಷ್ಟನೆ

ತಮಿಳುನಾಡು ಮುಖ್ಯಮಂತ್ರಿ ವಿಜಯ್ ತಮ್ಮ ಎಕ್ಸ್​ ಪೇಜಿನಲ್ಲಿ ವಿಧಾನಸಭೆಯಲ್ಲಿನ ತಮ್ಮ ವರ್ತನೆ ಯಾರನ್ನೂ ವೈಯಕ್ತಿಕವಾಗಿ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಯಲ್ಲಿ ಪೊಲೀಸ್ ಸಬ್ಸಿಡಿ ವಿನಂತಿಯ ಸಮಯದಲ್ಲಿ, ನನ್ನ ಪ್ರತಿಕ್ರಿಯೆಯ ಸಮಯದಲ್ಲಿ ನನ್ನ ದೇಹ ಭಾಷೆ ಆಕಸ್ಮಿಕವಾಗಿತ್ತು. ಅದು ಯಾವುದೇ ದುರುದ್ದೇಶವನ್ನು ಹೊಂದಿರಲಿಲ್ಲ, ಆದ್ದರಿಂದ ದಯವಿಟ್ಟು ಅದನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ನಾನು ವಿನಂತಿಸುತ್ತೇನೆ ಎಂದಿದ್ದಾರೆ.

ನನ್ನ ಉದ್ದೇಶ ಯಾರನ್ನೂ ನೋಯಿಸುವುದಾಗಿರಲಿಲ್ಲ; ವಿಧಾನಸಭಾ ಭಾಷಣದ ವಿವಾದಕ್ಕೆ ಸಿಎಂ ವಿಜಯ್ ಸ್ಪಷ್ಟನೆ
Cm Joseph Vijay
Image Credit source: TV9

Updated on: Sep 08, 2026 | 8:10 PM

ಚೆನ್ನೈ, ಸೆಪ್ಟೆಂಬರ್ 8: ತಮಿಳುನಾಡು ವಿಧಾನಸಭೆಯಲ್ಲಿ ಪೋಲಿಸ್ ಹಾಗೂ ಅಗ್ನಿಶಾಮಕ ಸೇವೆಗಳ ಇಲಾಖೆಯ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆಯ ತಮ್ಮ ‘ದೇಹಭಾಷೆ’ (ಬಾಡಿ ಲಾಂಗ್ವೇಜ್) ಕುರಿತಾಗಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಇಂದು ಸ್ಪಷ್ಟನೆ ನೀಡಿದ್ದಾರೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥರೂ ಆಗಿರುವ ಅವರು, ಭಾಷಣದ ವೇಳೆ ತಮ್ಮ ಗಲ್ಲವನ್ನು ಮುಟ್ಟಿಕೊಂಡ ಭಂಗಿಯು ಯಾವುದೇ ರೀತಿಯಲ್ಲೂ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ತಿಳಿಸಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ಟಿವಿಕೆ ಪಕ್ಷದ ಅಧ್ಯಕ್ಷ ಹಾಗೂ ಸಿಎಂ ವಿಜಯ್ ಮತ್ತು ಡಿಎಂಕೆ ಪಕ್ಷದ ನಡುವಿನ ಸೈದ್ಧಾಂತಿಕ ಸಮರ ತೀವ್ರಗೊಂಡಿದೆ. ವಿಧಾನಸಭಾ ಅಧಿವೇಶನದ ಭಾಷಣದಲ್ಲಿ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರ ಅಧಿಕಾರಾವಧಿಯನ್ನು ಟೀಕಿಸುವ ವೇಳೆ, ಅವರ ದೇಹದ ಸ್ವರೂಪದ ವ್ಯಂಗ್ಯ ಮಾಡುವಂತಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಿಎಂ ವಿಜಯ್ ಸ್ಪಷ್ಟನೆ ನೀಡಿದ್ದಾರೆ.


ಘಟನೆಯ ಹಿನ್ನೆಲೆಯೇನು?:

ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ್ದ ಸಿಎಂ ವಿಜಯ್, ಮಾಜಿ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರ ದೇಹಕ ಭಂಗಿ ಅಥವಾ ನಡಿಗೆಯನ್ನು ಅನುಕರಿಸುವಂತೆ ವ್ಯಂಗ್ಯವಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದು ‘ಬಾಡಿ ಶೇಮಿಂಗ್’ ಹಾಗೂ ವ್ಯಕ್ತಿಗತ ನಿಂದನೆ ಎಂದು ಡಿಎಂಕೆ ನಾಯಕರು ಆರೋಪಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: ತಮಿಳುನಾಡಿನ 50ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧ; ವಿಜಯ್ ಸರ್ಕಾರದಿಂದ ಹೊಸ ನಿಯಮ

ಸಾರ್ವಜನಿಕ ಮದ್ಯ ಮಾರಾಟ ಸಂಸ್ಥೆ ‘ಟಾಸ್ಮಾಕ್’ನಲ್ಲಿ (TASMAC) ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವರದಿಗಳನ್ನು ಉಲ್ಲೇಖಿಸಿ ವಿಜಯ್ ಅವರು ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ವಿಧಾನಸಭೆಯಲ್ಲಿ ಭಾರಿ ಗದ್ದಲ ಉಂಟಾಗಿತ್ತು. ಈ ವೇಳೆ ಅವರು ಮೀಸಾ ಕಾಯ್ದೆ ಮತ್ತು ಸರ್ಕಾರಿಯಾ ಆಯೋಗದ ವರದಿಗಳನ್ನು ಪ್ರಸ್ತಾಪಿಸಿದ ನಂತರ ಡಿಎಂಕೆ ಶಾಸಕರು ಸಭಾತ್ಯಾಗ ಮಾಡಿದ್ದರು. ಈ ವೇಳೆ ಅವರು ಆರೋಪಿಗಳ ಪಟ್ಟಿಯಲ್ಲಿ ಸ್ಟಾಲಿನ್ ಹೆಸರು ಯಾಕಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳುತ್ತಾ ಗಲ್ಲದ ಮೇಲೆ ಕೈಯಿಟ್ಟು ಸ್ಟಾಲಿನ್ ಅವರನ್ನು ಇಮಿಟೇಟ್ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.


ಭಾಷಣದ ವೇಳೆ ವಿಜಯ್ ಅವರು ತಮ್ಮ ಒಂದು ಕೈಯಿಂದ ಗಲ್ಲವನ್ನು ಮೇಲೆತ್ತಿ ಹಿಡಿದುಕೊಂಡಂತೆ ಮಾಡಿದ ಭಂಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. 1975ರ ತುರ್ತುಪರಿಸ್ಥಿತಿಯ ಮೀಸಾ ಬಂಧನದ ಸಮಯದಲ್ಲಿ ದವಡೆಯ ಮೂಳೆ ಮುರಿತಕ್ಕೊಳಗಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರನ್ನು ಗೇಲಿ ಮಾಡಲು ಈ ಭಂಗಿ ಬಳಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ಇದನ್ನೂ ಓದಿ: ‘ಧೈರ್ಯವಿದ್ದರೆ ವಿಧಾನಸಭೆಯಲ್ಲಿ ಉತ್ತರಿಸಿ’; ಕಾವೇರಿ ಸಮಸ್ಯೆ ಕುರಿತು ಸಿಎಂ ವಿಜಯ್‌ಗೆ ಉದಯನಿಧಿ ಸ್ಟಾಲಿನ್ ಸವಾಲು

ವಿಜಯ್ ಸ್ಪಷ್ಟನೆ:

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮುಖ್ಯಮಂತ್ರಿ ವಿಜಯ್, “ಸೆಪ್ಟೆಂಬರ್ 7ರಂದು ವಿಧಾನಸಭೆಯಲ್ಲಿ ಪೋಲಿಸ್ ಇಲಾಖೆಯ ಬೇಡಿಕೆಗಳ ಕುರಿತು ಉತ್ತರ ನೀಡುವಾಗ ಆಕಸ್ಮಿಕವಾಗಿ ಕಂಡುಬಂದ ನನ್ನ ದೇಹಭಾಷೆಯು ಯಾವುದೇ ತಪ್ಪು ಉದ್ದೇಶದಿಂದ ಮಾಡಿದ್ದಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಆದ್ದರಿಂದ, ಇದನ್ನು ಯಾರದೇ ವೈಯಕ್ತಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶಪೂರ್ವಕ ಕೃತ್ಯ ಎಂದು ಅರ್ಥೈಸಬಾರದು ಎಂದು ವಿನಂತಿಸುತ್ತೇನೆ” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us