Rajasthan: ಮದುವೆ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟ, 5 ಸಾವು 49 ಮಂದಿಗೆ ಗಾಯ
ರಾಜಸ್ಥಾನದ ಜೋಧ್‌ಪುರದಲ್ಲಿ ಮದುವೆ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಸಾವನ್ನಪ್ಪಿದ್ದು, 49 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಜೋಧ್‌ಪುರ: ರಾಜಸ್ಥಾನದ (Rajasthan) ಜೋಧ್‌ಪುರದಲ್ಲಿ (Jodhpur) ಮದುವೆ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಸಾವನ್ನಪ್ಪಿದ್ದು, 49 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಗುರುವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟದ ಪ್ರಭಾವದಿಂದ ಶೇರ್ಗಢ ಉಪವಿಭಾಗದ ಭುಂಗ್ರಾ ಗ್ರಾಮದಲ್ಲಿ ಮನೆಯ ಒಂದು ಭಾಗವೂ ಕುಸಿದಿದೆ ಎಂದು ಅವರು ಹೇಳಿದರು.
ಗಾಯಗೊಂಡವರಲ್ಲಿ ಕೆಲವರಿಗೆ ಶೇ 80ರಿಂದ 100ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮದುಮಗ ಸುರೇಂದ್ರ ಸಿಂಗ್ ಅವರ ಮನೆಯಲ್ಲಿ ಮದುವೆ ಸಂಭ್ರಮಕ್ಕೆ ಅತಿಥಿಗಳು ಜಮಾಯಿಸಿದ್ದರು ಮತ್ತು ಅವರಿಗೆ ಊಟೋಪಚಾರ ಸಿದ್ಧಪಡಿಸಲಾಗಿತು. ಮನೆಯ ಸ್ಟೋರ್ ರೂಂನಲ್ಲಿ ಇರಿಸಲಾಗಿದ್ದ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ ಎಂದು ಜೋಧ್‌ಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅನಿಲ್ ಕಯಾಲ್ ಹೇಳಿದ್ದಾರೆ.
ಇದನ್ನು ಓದಿ; ಹೆಬ್ಬಾಳದ ಮಸೀದಿ ಬಳಿ ಸಿಲಿಂಡರ್ ಸ್ಫೋಟ; ಯಾವುದೇ ಪ್ರಾಣಾಪಾಯವಾಗಿಲ್ಲ- ಘಟನೆಯ ವಿಡಿಯೋ ಇಲ್ಲಿದೆ
ಮದುವೆ ಮನೆಯ ಇತರ ಅತಿಥಿಗಳು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಇಬ್ಬರು ಮಕ್ಕಳು ರತನ್ ಸಿಂಗ್ (5) ಮತ್ತು ಖುಷ್ಬೂ (4) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎಲ್ಲಾ ಗಾಯಾಳುಗಳನ್ನು ಎಂಜಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕಯಲ್ ಹೇಳಿದರು.
ಸ್ಫೋಟದಲ್ಲಿ 54 ಮಂದಿ ಗಾಯಗೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ತಿಳಿಸಿದ್ದಾರೆ. ಎಂಜಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ರಾಜ್ ಶ್ರೀ ಬೆಹ್ರಾ ಅವರು ಆಸ್ಪತ್ರೆಗೆ ಕರೆತರಲಾದ ಹತ್ತಕ್ಕೂ ಹೆಚ್ಚು ಗಾಯಾಳುಗಳು ಶೇಕಡಾ 80 ರಷ್ಟು ಸುಟ್ಟಗಾಯಗಳಾಗಿವೆ ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕೇಂದ್ರ ಸಚಿವ ಮತ್ತು ಜೋಧ್‌ಪುರ ಸಂಸದ ಗಜೇಂದ್ರ ಸಿಂಗ್ ಶೇಖಾವತ್ ಅವರು ಘಟನೆಯಲ್ಲಿ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು ಎಂದು ಪಿಟಿಐ ಹೇಳಿದೆ
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:43 am, Fri, 9 December 22