ತೆಲಂಗಾಣ ಸಿಎಂ ಕೆಸಿಆರ್ ಘೋಷಿಸಿದ ಏರ್ಪೋರ್ಟ್ ಎಕ್ಸ್ಪ್ರೆಸ್ ಮೆಟ್ರೋ ಕೇವಲ ವಿಷಯಾಂತರದ ಹುನ್ನಾರ: ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ
‘ಹೈದರಾಬಾದ್ ಮೆಟ್ರೋ ನಿರ್ಮಾಣ ವಿಚಾರದಲ್ಲಿ ಕೆಸಿಆರ್ ಎಡವಿದ್ದಾರೆ. ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಸತತ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಕಿಶನ್ ರೆಡ್ಡಿ ಹೇಳಿದರು.
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (K Chandrashekhar Rao) ಅವರು ಏರ್ಪೋರ್ಟ್ ಎಕ್ಸ್ಪ್ರೆಸ್ ಮೆಟ್ರೋಗೆ ಶಿಲಾನ್ಯಾಸ ನೆರವೇರಿಸುವ ಮೂಲಕ ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಖಾತೆ ಸಚಿವ ಜಿ.ಕಿಶನ್ ರೆಡ್ಡಿ (G Kishan Reddy) ಆರೋಪಿಸಿದರು. ಹೈದರಾಬಾದ್ ಮೆಟ್ರೋ ಯೋಜನೆಯನ್ನು ಪೂರ್ಣಗೊಳಿಸಲು ವಿಫಲರಾಗಿರುವ ಅವರು, ಹೈದರಾಬಾದ್ನ ಬಹುಮಾದರಿ ಸಾರಿಗೆ ವ್ಯವಸ್ಥೆಗೆ (Hyderabad Multi-Modal Transport System – MMTS) ರಾಜ್ಯದ ಪಾಲಿನ ಅನುದಾನ ನೀಡುವಲ್ಲಿಯೂ ಎಡವಿದರು. ಇದೀಗ ತಮ್ಮ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಏರ್ಪೋರ್ಟ್ ಎಕ್ಸ್ಪ್ರೆಸ್ ಮೆಟ್ರೋಗೆ ಅಡಿಗಲ್ಲು ಹಾಕಿದ್ದಾರೆ ಎಂದು ದೂರಿದರು. ಡಿಸೆಂಬರ್ 9ರಂದು ಏರ್ಪೋರ್ಟ್ ಮೆಟ್ರೋಗೆ ಶಿಲಾನ್ಯಾಸ ನೆರವೇರಿಸುವುದಾಗಿ ಕೆಸಿಆರ್ ಘೋಷಿಸಿದ್ದರು.
‘ಹೈದರಾಬಾದ್ ಮೆಟ್ರೋ ನಿರ್ಮಾಣ ವಿಚಾರದಲ್ಲಿ ಕೆಸಿಆರ್ ಎಡವಿದ್ದಾರೆ. ಇದೀಗ ಹೊಸದಾಗಿ ಮತ್ತೊಂದು ಮೆಟ್ರೋ ಲೈನ್ಗೆ ಅಡಿಗಲ್ಲು ಹಾಕಿರುವ ಅವರ ನಡೆಯಿಂದ ನಮಗೆ ಅಚ್ಚರಿಯೇನೂ ಆಗಿಲ್ಲ. ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಸತತ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಕಿಶನ್ ರೆಡ್ಡಿ ಹೇಳಿದರು.
‘ಹೈದರಾಬಾದ್ ಮೆಟ್ರೋದ ಗ್ರೀನ್ ಲೈನ್ (ಕಾರಿಡಾರ್-2) ಸಿಕಂದರಾಬಾದ್ನ ಜುಬಿಲಿ ಬಸ್ ನಿಲ್ದಾಣದಿಂದ ಹೈದರಾಬಾದ್ನ ಓಲ್ಡ್ ಸಿಟಿಯನ್ನು ಚಾರ್ಮಿನಾರ್ ಮಾರ್ಗವಾಗಿ ಸಂಪರ್ಕ ಕಲ್ಪಿಸಬೇಕಿತ್ತು. ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಪ್ಪಂದವೂ ಆಗಿತ್ತು. ಆದರೆ, ಹೈದರಾಬಾದ್ನ ಮಹಾತ್ಮಾ ಗಾಂಧಿ ಬಸ್ ನಿಲ್ದಾಣದ ಅಫ್ಜಲ್ ಗಂಜ್ ಬಳಿಯೇ ಗ್ರೀನ್ ಲೈನ್ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದಾಗಿ ಓಲ್ಡ್ ಸಿಟಿಯ ಪಶ್ಚಿಮ ಭಾಗದಲ್ಲಿರುವ ಜನರು ಹಲವು ಕಷ್ಟಗಳನ್ನು ಅನುಭವಿಸುವಂತಾಗಿದೆ. ಓಲ್ಡ್ ಸಿಟಿಯ ಪೂರ್ವ ಭಾಗದಲ್ಲಿರುವ ಜನರು ಮಾಲಕ್ಪೆಟ್ ಮೆಟ್ರೋ ಸ್ಟೇಷನ್ ಮೆಟ್ರೋ ಜಾಲವನ್ನು ಬಳಸಿಕೊಳ್ಳಬಹುದಾಗಿದೆ. ಆದರೆ ಓಲ್ಡ್ ಸಿಟಿಯ ಪಶ್ಚಿಮ ಭಾಗದಲ್ಲಿರುವವರು ಮೆಟ್ರೋ ಮತ್ತು ಎಂಎಂಟಿಎಸ್ ಸಂಪರ್ಕಕ್ಕಾಗಿ ಹೆಚ್ಚಿನ ಹಣ ಮತ್ತು ಸಮಯವನ್ನು ವ್ಯಯಿಸಬೇಕಾಗಿದೆ’ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.
హైదరాబాద్ ఎయిర్ పోర్ట్ మెట్రోకు శంకుస్థాపన చేయటానికి సిద్ధమవుతున్న ఫార్మ్ హౌస్ ముఖ్యమంత్రి, రక్తం ఏరులై పారినా మెట్రో నిర్మాణాన్ని చేపట్టనీయం, ఎవ్వరినీ ఒక్క గజం కూడా తిరగనీయం అంటూ గతంలో తాను చేసిన హెచ్చరికలను ఈ సందర్భంగా గుర్తు చేసుకుంటే బాగుంటుంది!!#HyderabadMetro#FarmHouseCM pic.twitter.com/wD4eR9NEID
— G Kishan Reddy (@kishanreddybjp) December 8, 2022
‘ಅನುಮೋದನೆಗೊಂಡಿದ್ದ ಯೋಜನೆಯನ್ನು ಮುಖ್ಯಮಂತ್ರಿ ಏಕಪಕ್ಷೀಯವಾಗಿ ಬದಲಿಸಿದರು. ಇದರಿಂದಾಗಿ ಯೋಜನಾ ವೆಚ್ಚವು ₹ 3,500 ಕೋಟಿಗಳಷ್ಟು ಹೆಚ್ಚಾಯಿತು. ಯೋಜನೆ ಪೂರ್ಣಗೊಳ್ಳುವುದೂ ತಡವಾಯಿತು. ಈ ಮೊದಲು ಯೋಜನೆಯು 2016ಕ್ಕೆ ಪೂರ್ಣಗೊಂಡು ಅನುಷ್ಠಾನಗೊಳ್ಳಬೇಕು ಎಂಬ ಲೆಕ್ಕಾಚಾರವಿತ್ತು. ಅನುಷ್ಠಾನದಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಮೊದಲೇ ತೆಲಂಗಾಣ ಸರ್ಕಾರವು ಹೊಸ ಯೋಜನೆಗಳನ್ನು ಪ್ರಕಟಿಸುವ ಮೂಲಕ ಜನರ ಗಮನ ಬದಲಿಸಲು ಯತ್ನಿಸುತ್ತಿದೆ. ಮೆಟ್ರೋ ರೈಲು ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗದ ಮತ್ತು ಹೈದರಾಬಾದ್ ಎಂಎಂಟಿಎಸ್ ಯೋಜನೆಗೆ ರಾಜ್ಯದ ಪಾಲಿನ ಬಂಡವಾಳ ಒದಗಿಸಲು ವಿಫಲವಾದ ಸರ್ಕಾರವು ಹೊಸ ಯೋಜನೆ ಪ್ರಕಟಿಸುತ್ತಿದೆ’ ಎಂದು ಅವರು ಆಕ್ಷೇಪಿಸಿದ್ದಾರೆ.
‘ಎಂಎಂಟಿಎಸ್ 2ನೇ ಹಂತದ ಕಾಮಗಾರಿಯ ಬಗ್ಗೆ ದಕ್ಷಿಣ ಮಧ್ಯ ರೈಲ್ವೆ ಮತ್ತು ತೆಲಂಗಾಣ ಸರ್ಕಾರದ ನಡುವೆ ಒಡಂಬಡಿಕೆಯಾಗಿತ್ತು. ಈ ಯೋಜನೆಗಾಗಿ ಈವರೆಗೆ ₹ 832 ಕೋಟಿ ಮೊತ್ತವನ್ನು ವ್ಯಯಿಸಲಾಗಿದೆ. ಕಾಮಗಾರಿಯ ಒಟ್ಟು ಮೊತ್ತದ ಮೂರನೇ ಎರಡರಷ್ಟು ಭಾಗವನ್ನು ರಾಜ್ಯ ಸರ್ಕಾರವು ನೀಡಬೇಕಿತ್ತು. ಆದರೆ ಈ ಹಣ ನೀಡಲು ರಾಜ್ಯ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಕಾಮಗಾರಿ ಅನುಷ್ಠಾನ ತಡವಾಯಿತು. ಇದರಿಂದಾಗಿ ಕಾಮಗಾರಿ ವೆಚ್ಚವೂ ವಿಪರೀತ ಎನ್ನುವಷ್ಟು ಹೆಚ್ಚಾಯಿತು’ ಎಂದು ಕಿಶನ್ ರೆಡ್ಡಿ ವಿವರಿಸಿದ್ದಾರೆ.