ಮಗುವಿಗೆ ಔಷಧಿ ಕೊಡುವ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ; ದೆಹಲಿಯ ಟೆಕ್ಕಿಯನ್ನು ಹೊಡೆದು ಕೊಂದ ಅತ್ತೆ-ಮಾವಂದಿರು

ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಕುಟುಂಬದ 6 ಜನರಿಂದ ದೆಹಲಿಯ ಸಾಫ್ಟ್​ವೇರ್ ಇಂಜಿನಿಯರ್ ಒಬ್ಬರು ಭೀಕರವಾಗಿ ಹತ್ಯೆಗೀಡಾಗಿದ್ದಾರೆ. 31 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್‌ ವಿನಯ್ ಗುಪ್ತಾ ತಮ್ಮ ಮನೆಯಲ್ಲಿದ್ದಾಗ ಈ ಮಾರಣಾಂತಿಕ ಹಲ್ಲೆ ನಡೆದಿದೆ. ತಮ್ಮ ಸೊಸೆಯೇ ಈ ಕೊಲೆಯನ್ನು ಸಂಚು ರೂಪಿಸಿ ಮಾಡಿಸಿದ್ದಾಳೆ ಮತ್ತು ಉದ್ದೇಶಪೂರ್ವಕವಾಗಿಯೇ ಮುಂಚಿತವಾಗಿ ಸಿಸಿಟಿವಿಯನ್ನು ಆಫ್ ಮಾಡಿದ್ದಾಳೆ ಎಂದು ಆರೋಪಿಸಿದ ಮೃತ ಟೆಕ್ಕಿಯ ತಾಯಿ, ಆಕೆಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಮಗುವಿಗೆ ಔಷಧಿ ಕೊಡುವ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ; ದೆಹಲಿಯ ಟೆಕ್ಕಿಯನ್ನು ಹೊಡೆದು ಕೊಂದ ಅತ್ತೆ-ಮಾವಂದಿರು
Vinay Gupta And Rekha
Image Credit source: x

Updated on: Aug 22, 2026 | 9:50 PM

ನವದೆಹಲಿ, ಆಗಸ್ಟ್ 22: ಪತ್ನಿಯೊಂದಿಗೆ ನಡೆದ ಸಣ್ಣ ಕಲಹದ ಹಿನ್ನೆಲೆಯಲ್ಲಿ 31 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರನ್ನು ಅವರ ಅತ್ತೆ, ಮಾವ ಮತ್ತು ನಾದಿನಿಯ ಕುಟುಂಬದವರು ದೆಹಲಿಯ (Delhi) ಮನೆಯಲ್ಲೇ ಹೊಡೆದು ಕೊಂದಿರುವ ಭೀಕರ ಘಟನೆ ನಡೆದಿದೆ. ಮೃತನ ಕುಟುಂಬಸ್ಥರು ಆತನ ಪತ್ನಿ ಮತ್ತು ಆಕೆಯ ಕುಟುಂಬದ 6ರಿಂದ 7 ಜನರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಮೃತ ದುರ್ದೈವಿಯನ್ನು ವಿನಯ್ ಗುಪ್ತಾ ಎಂದು ಗುರುತಿಸಲಾಗಿದೆ. ಇವರಿಗೆ ಸುಮಾರು ಮೂರೂವರೆ ವರ್ಷಗಳ ಹಿಂದೆ ರೇಖಾ ಎಂಬಾಕೆಯೊಂದಿಗೆ ವಿವಾಹವಾಗಿತ್ತು. ಈ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಅವಳಿ ಮಕ್ಕಳಿದ್ದಾರೆ. ವಿನಯ್ ನೋಯ್ಡಾದ ‘ಅಡೋಬ್’ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದರು. ಅವರ ವಾರ್ಷಿಕ ವೇತನ ಪ್ಯಾಕೇಜ್ ಸುಮಾರು 60 ಲಕ್ಷವಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿನಯ್ ಅವರ ತಾಯಿಯ ಪ್ರಕಾರ, ವಿನಯ್​ ಹಾಗೂ ರೇಖಾ ಅವರ ಅವಳಿ ಮಕ್ಕಳಲ್ಲೊಬ್ಬರಿಗೆ ಔಷಧ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ಜಗಳ ಪ್ರಾರಂಭವಾಗಿತ್ತು. ವಿನಯ್ ಗಟ್ಟಿಯಾದ ದನಿಯಲ್ಲಿ ಮಾತನಾಡಿದ್ದಕ್ಕೆ ಕೋಪಗೊಂಡ ರೇಖಾ, ಜಗಳದ ನಂತರ ಮನೆಯಿಂದ ಹೊರಟುಹೋಗಿ, ಕೇವಲ 10 ನಿಮಿಷಗಳಲ್ಲಿ ತನ್ನ ತವರು ಮನೆಯವರೊಂದಿಗೆ ಹಿಂತಿರುಗಿದ್ದಳು.

ರೇಖಾ ತನ್ನ ಇಬ್ಬರು ಅಣ್ಣಂದಿರು, ಅತ್ತಿಗೆ, ತಂದೆ, ಚಿಕ್ಕಪ್ಪ ಮತ್ತು ಮತ್ತೊಬ್ಬ ವ್ಯಕ್ತಿಯೊಂದಿಗೆ ಮನೆಗೆ ಆಗಮಿಸಿದ್ದಳು. ತಕ್ಷಣವೇ ಆಕೆಯ ಕುಟುಂಬಸ್ಥರು ಮನೆಯ ಒಳಗಿದ್ದ ವಿನಯ್ ಮೇಲೆ ಏಕಾಏಕಿ ಭೀಕರ ಹಲ್ಲೆ ನಡೆಸಿದರು ಎಂದು ವಿನಯ್ ಕುಟುಂಬ ಆರೋಪಿಸಿದೆ. ಮನೆಗೆ ಬಂದ ಅವರಿಗೆ ನೀರು ಮತ್ತು ತಿಂಡಿ ತರಲು ವಿನಯ್ ತಾಯಿ ಅಡುಗೆ ಮನೆಗೆ ಹೋಗಿದ್ದಾಗ ಈ ದಾಳಿ ಪ್ರಾರಂಭವಾಗಿತ್ತು. ಅಲ್ಲದೆ, ಹಲ್ಲೆ ಮಾಡುವ ಮುನ್ನ ವಿನಯ್ ಸ್ವತಃ ತನ್ನ ಅತ್ತೆ-ಮಾವಂದಿರಿಗೆ ನೀರು ತಂದುಕೊಟ್ಟಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಾಯುತ್ತೇನೆಂದ ಮಗನನ್ನು ಉಳಿಸಲು ಹೋದ ತಂದೆಯೂ ಬೆಟ್ಟದಿಂದ ಬಿದ್ದು ಸಾವು; ಶಾಕ್​ನಿಂದ ಪ್ರಪಾತಕ್ಕೆ ಹಾರಿದ ತಾಯಿ!

ಕುಟುಂಬದ ಆರೋಪಗಳ ಪ್ರಕಾರ, ರೇಖಾಳ ಮನೆಯವರು ವಿನಯ್ ಅವರನ್ನು ಮಂಚದ ಮೇಲೆ ತಳ್ಳಿ ಬಲವಾಗಿ ಹೊಡೆದಿದ್ದಾರೆ, ಕುತ್ತಿಗೆ ಹಿಸುಕಿದ್ದಾರೆ ಹಾಗೂ ಎದೆಗೆ ಕೈ ಮತ್ತು ಕಾಲುಗಳಿಂದ ಸತತವಾಗಿ ಒದ್ದಿದ್ದಾರೆ. ವಿನಯ್ ಅವರ ಪೋಷಕರು ಮಗನನ್ನು ರಕ್ಷಿಸಲು ಮಧ್ಯಪ್ರವೇಶಿಸಿದರಾದರೂ, ಅವರ ಮೇಲೆಯೂ ದಾಳಿ ನಡೆಸಿ ಹಲ್ಲೆಯನ್ನು ಮುಂದುವರಿಸಿದ್ದಾರೆ. ಮೊದಲೇ ಈ ಕೊಲೆಯ ಪ್ಲಾನ್ ಮಾಡಿದ್ದ ರೇಖಾ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದಳು ಎಂದು ವಿನಯ್ ಕುಟುಂಬ ಆರೋಪಿಸಿದೆ. ಮನೆಯ ಹೊರಗಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ರೇಖಾ ಕೆಂಪು ಬಣ್ಣದ ಡ್ರೆಸ್ ಮತ್ತು ಆಕೆಯ ಅತ್ತಿಗೆ ನೀಲಿ ಬಣ್ಣದ ಡ್ರೆಸ್ ಧರಿಸಿರುವುದು ಹಾಗೂ ರೇಖಾಳ ಇಬ್ಬರು ಅಣ್ಣಂದಿರು, ತಂದೆ ಮತ್ತು ಮತ್ತೊಬ್ಬ ವ್ಯಕ್ತಿ ಕಾರಿನಲ್ಲಿ ಬಂದು ಇಳಿಯುವುದು ಸೆರೆಯಾಗಿದೆ.

ಹಲ್ಲೆಯ ನಂತರ, ತೀವ್ರವಾಗಿ ಗಾಯಗೊಂಡಿದ್ದ ವಿನಯ್ ಅವರನ್ನು ಪಕ್ಕದ ಮನೆಯವರೊಬ್ಬರು ಹೆಗಲ ಮೇಲೆ ಹೊತ್ತು ಹೊರಗೆ ಕರೆತಂದರು. ವಿನಯ್ ಅವರಿಗೆ ನಿಲ್ಲಲು ಸಾಧ್ಯವಾಗದಿದ್ದಾಗ, ನೆರೆಹೊರೆಯವರು ಅವರನ್ನು ಕುರ್ಚಿಯ ಮೇಲೆ ಕುಳ್ಳಿರಿಸಲು ನೆರವಾದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.

ವಿನಯ್ ತಾಯಿ ಹೇಳಿದ್ದೇನು?:

“ನಮ್ಮ ಮನೆಯ ಬಾಗಿಲು ತೆರೆದಿತ್ತು, ಅವರು ನೇರವಾಗಿ ಮಹಡಿಯ ಮೇಲೆ ಬಂದರು. ಆಗ ನನ್ನ ಗಂಡ ‘ಏನೂ ತೊಂದರೆಯಿಲ್ಲ, ಅವರು ನಮ್ಮ ಬೀಗರು. ಕೂರಿಸಿ ಮಾತನಾಡೋಣ’ ಎಂದು ಹೇಳಿದರು. ನಾನು ‘ಮಗನೇ, ಎಸಿ ಆನ್ ಮಾಡು, ಅವರಿಗೆ ನೀರು ಕೊಡು’ ಎಂದು ಹೇಳಿದೆ. ನಾನು ಅವರಿಗೆ ಒಂದು ಲೋಟ ನೀರು ಕೊಡಲು ಅಡುಗೆಮನೆಗೆ ಹೋದೆ. ನೀರು ತರುವಷ್ಟರಲ್ಲಿ ಅವರು ನನ್ನ ಮಗನನ್ನು ಕೆಳಗೆ ಬೀಳಿಸಿ ಹಿಡಿದುಕೊಂಡಿದ್ದರು. ಆತನನ್ನು ಮಂಚದ ಮೇಲೆ ತಳ್ಳಿ, ಕುತ್ತಿಗೆಯನ್ನು ಬಲವಾಗಿ ಹಿಸುಕಿದರು. ಹೊಟ್ಟೆಗೆ ಕಾಲಿನಿಂದ ಒದ್ದು, ಥಳಿಸಿದರು” ಎಂದು ಹೇಳುತ್ತಾ ವಿನಯ್ ತಾಯಿ ರೋದಿಸಿದ್ದಾರೆ.

ಇದನ್ನೂ ಓದಿ: ಬ್ಯಾಂಕ್ ನೌಕರನಿಂದ ಪತ್ನಿಗೆ ಗುಂಡಿಕ್ಕಿ ಹತ್ಯೆ; ಮನೆಗೆ ತೆರಳಿ ತಂಗಿಯನ್ನೂ ಕೊಂದು ತಾನೂ ಆತ್ಮಹತ್ಯೆ!

“ಆತನ ತಂದೆಯನ್ನು ಪಕ್ಕಕ್ಕೆ ತಳ್ಳಿದರು. ನಾನು ಮಗನನ್ನು ರಕ್ಷಿಸಲು ಹೋದಾಗ ನನ್ನನ್ನೂ ಪಕ್ಕಕ್ಕೆ ತಳ್ಳಿದರು. ನಂತರ ನಾನು ಇಲ್ಲಿದ್ದ ನೆರೆಹೊರೆಯವರನ್ನು ಕರೆದೆ. ಅವರು ಬರುವಷ್ಟರಲ್ಲಿ ಅವರು ನನ್ನ ಮಗನನ್ನು ಹಿಗ್ಗಾಮುಗ್ಗ ಥಳಿಸಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಆತ ಮೃತಪಟ್ಟ. ನನಗಿದ್ದದ್ದು ಒಬ್ಬನೇ ಮಗ” ಎಂದು ಅವರು ಹೇಳಿದ್ದಾರೆ. ವಿನಯ್ ಗುಪ್ತಾ ಅವರ ತಂದೆ ಕ್ಯಾನ್ಸರ್ ರೋಗಿಯಾಗಿದ್ದಾರೆ.

ವಿನಯ್​ನ ತಾಯಿಯ ಜೊತೆ ಪದೇಪದೆ ಜಗಳವಾಡುತ್ತಿದ್ದ ರೇಖಾ ತನ್ನ ಗಂಡನ ಜೊತೆ ಮೂರನೇ ಮಹಡಿಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ. ಸಣ್ಣಪುಟ್ಟ ವಿಷಯಗಳಿಗೆ ದಂಪತಿಗಳ ನಡುವೆ ಜಗಳವಾಗುತ್ತಿತ್ತು. ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ತಾವು ಭಾವಿಸಿದ್ದಾಗಿ ಮೃತರ ತಂದೆ ಹೇಳಿದ್ದಾರೆ. ಆದರೆ, ಈ ಪರಿಸ್ಥಿತಿ ಅಂತಿಮವಾಗಿ ಕೊಲೆಗೆ ತಿರುಗುತ್ತದೆ ಎಂದು ತಾವು ನಿರೀಕ್ಷಿಸಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ವಿನಯ್ ಪತ್ನಿ ರೇಖಾ, ಆಕೆಯ ಇಬ್ಬರು ಸಹೋದರರು ಮತ್ತು ಮತ್ತೊಬ್ಬ ಆರೋಪಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us