ಸಾಯುತ್ತೇನೆಂದ ಮಗನನ್ನು ಉಳಿಸಲು ಹೋದ ತಂದೆಯೂ ಬೆಟ್ಟದಿಂದ ಬಿದ್ದು ಸಾವು; ಶಾಕ್ನಿಂದ ಪ್ರಪಾತಕ್ಕೆ ಹಾರಿದ ತಾಯಿ!
ಮೊಬೈಲ್ ಫೋನ್‌ಗಾಗಿ ನಡೆದ ಕುಟುಂಬದ ಜಗಳವೊಂದು ಭೀಕರ ದುರಂತದಲ್ಲಿ ಅಂತ್ಯಗೊಂಡ ಘಟನೆ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. 19 ವರ್ಷದ ಯುವಕನೊಬ್ಬ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ, ಆತನನ್ನು ತಡೆಯಲು ಹೋದ ತಂದೆಯೂ ಬೆಟ್ಟದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಗಂಡ-ಮಗನ ಸಾವಿನ ಆಘಾತ ತಾಳಲಾರದೆ ತಾಯಿಯೂ ಬೆಟ್ಟದಿಂದ ಕೆಳಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು 19 ವರ್ಷದ ಕುನಾಲ್ ಚಾಂದಗುಡೆ, ಆತನ ತಂದೆ ಮುರಳೀಧರ್ ಚಾಂದಗುಡೆ (48) ಮತ್ತು ತಾಯಿ ಸಂಗೀತಾ ಎಂದು ಗುರುತಿಸಲಾಗಿದೆ.

ಮುಂಬೈ, ಆಗಸ್ಟ್ 21: ಮಹಾರಾಷ್ಟ್ರದ (Maharashtra) ರಾಯಗಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮಾಥೇರಾನ್ ಬಳಿ ಯುವಕನೊಬ್ಬನ ಹಠ ಇಡೀ ಕುಟುಂಬವನ್ನೇ ಬಲಿ ಪಡೆದ ಭೀಕರ ಹಾಗೂ ಹೃದಯವಿದ್ರಾವಕ ದುರಂತವೊಂದು ಸಂಭವಿಸಿದೆ. ಬೆಟ್ಟದ ತುದಿಯಲ್ಲಿದ್ದ 19 ವರ್ಷದ ಮಗನನ್ನು ರಕ್ಷಿಸಲು ಹೋದ ತಂದೆ ಆತನೊಂದಿಗೆ ನೂರಾರು ಅಡಿ ಆಳದ ಪ್ರಪಾತಕ್ಕೆ ಬಿದ್ದು ಮೃತಪಟ್ಟರೆ, ಈ ಆಘಾತವನ್ನು ತಾಳಲಾರದೆ ಆ ಯುವಕನ ತಾಯಿಯೂ ಅದೇ ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಹೊಸ ಮೊಬೈಲ್ ಫೋನ್ ಬೇಕು ಎಂದು ಪಟ್ಟು ಹಿಡಿದಿದ್ದ ಕುನಾಲ್, ತನ್ನ ಪೋಷಕರೊಂದಿಗೆ ಜಗಳವಾಡಿದ ನಂತರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ತಿಸಗಾಂವ್‌ನಲ್ಲಿರುವ ಖವಾಡ್ಯಾ ಬೆಟ್ಟಕ್ಕೆ ತೆರಳಿದ್ದನು. ಈ ವಿಷಯ ತಿಳಿದ ಆತನ ಪೋಷಕರು ಕೂಡಲೇ ಬೆಟ್ಟಕ್ಕೆ ಹೋಗಿ, ಮನೆಗೆ ಮರಳುವಂತೆ ಆತನ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಬೆಟ್ಟದ ತುದಿಯಲ್ಲಿ ನಿಂತು ಕೆಳಗೆ ಹಾರುವುದಾಗಿ ಹೆದರಿಸುತ್ತಿದ್ದ ಆ ಯುವಕ ಗಂಟೆಗಟ್ಟಲೆ ಅಲ್ಲೇ ನಿಂತಿದ್ದ. ಈ ವೇಳೆಗೆ ಪ್ರವಾಸಿಗರು ಮತ್ತು ಸ್ಥಳೀಯರು ಕೂಡ ಆತನನ್ನು ಅಲ್ಲಿಂದ ಕರೆತರಲು ಪ್ರಯತ್ನ ಮಾಡಿದ್ದರು.
ಇದನ್ನೂ ಓದಿ: ಬ್ಯಾಂಕ್ ನೌಕರನಿಂದ ಪತ್ನಿಗೆ ಗುಂಡಿಕ್ಕಿ ಹತ್ಯೆ; ಮನೆಗೆ ತೆರಳಿ ತಂಗಿಯನ್ನೂ ಕೊಂದು ತಾನೂ ಆತ್ಮಹತ್ಯೆ!
ಮಹಾರಾಷ್ಟ್ರದ ಬೆಟ್ಟವೊಂದರ ಅಂಚಿನಲ್ಲಿ ನಿಂತಿದ್ದ 19 ವರ್ಷದ ಯುವಕನಿಗೆ ಸುರಕ್ಷಿತವಾಗಿ ಕೆಳಗೆ ಬರುವಂತೆ ಆತನ ಹೆತ್ತವರು ಮತ್ತು ಸ್ಥಳೀಯರು ಸುಮಾರು 3 ಗಂಟೆಗಳ ಕಾಲ ಸತತವಾಗಿ ಮನವೊಲಿಸಲು ಯತ್ನಿಸಿದರು. ಆದರೆ, ಆತ ನಾನು ಬೆಟ್ಟದಿಂದ ಜಿಗಿಯುವುದಾಗಿ ಬೆದರಿಕೆ ಹಾಕುತ್ತಲೇ ಇದ್ದನು. ಈ ಆತಂಕದ ನಡುವೆ, ತಂದೆಯು ಮಗನನ್ನು ರಕ್ಷಿಸಲು ಮುಂದಾದಾಗ ಹಿಂದೆ ಹೆಜ್ಜೆಯಿಟ್ಟ ಯುವಕ ಬೆಟ್ಟದಿಂದ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬೀಳುತ್ತಿದ್ದ ಮಗನನ್ನು ಕಾಪಾಡಲು ಓಡಿದ ಅಪ್ಪ ಕೂಡ ಕೆಳಗೆ ಬಿದ್ದಿದ್ದಾರೆ. ಈ ಆಘಾತಕಾರಿ ದೃಶ್ಯವನ್ನು ನೋಡಿ ಶಾಕ್ ಆದ ಆ ಯುವಕನ ತಾಯಿ ಕೂಡ ಗಂಡ ಮತ್ತು ಮಗ ಬಿದ್ದ ಬೆಟ್ಟದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಇಡೀ ಕುಟುಂಬ ಸಾವನ್ನಪ್ಪಿದೆ.
ಮೃತರನ್ನು ನಗರದ ಝಲ್ತಾ ಫಾಟಾ ಪ್ರದೇಶದ ನಿವಾಸಿಗಳಾದ ಮುರಳೀಧರ್ ಚಾಂದಗುಡೆ (48), ಅವರ ಪತ್ನಿ ಸಂಗೀತಾ ಮತ್ತು ಅವರ 19 ವರ್ಷದ ಮಗ ಕುನಾಲ್ ಎಂದು ಪೊಲೀಸರು ಗುರುತಿಸಿದ್ದಾರೆ. ಹೊಸ ಮೊಬೈಲ್ ಫೋನ್ ಬೇಕು ಎಂದು ಪೋಷಕರೊಂದಿಗೆ ಜಗಳವಾಡಿದ್ದ ಕುನಾಲ್, ಕೋಪಗೊಂಡು ಬೆಟ್ಟದ ಮೇಲೇರಿದ್ದರಿಂದ ಬೆಳಿಗ್ಗೆ 10 ಗಂಟೆಗೆ ಈ ಹೈಡ್ರಾಮಾ ಶುರುವಾಗಿತ್ತು.
ಇದನ್ನೂ ಓದಿ: ಮದುವೆಯಾದ ಮೊದಲ ದಿನವೇ ನೀ ನನಗೆ ಇಷ್ಟ ಇಲ್ಲ ಎಂದ ಪತಿ: ಪ್ರಭಾವಿ ಸಚಿವರ ಆಪ್ತರಿಂದಲೇ ನಡೆಯಿತಾ ದೋಖಾ?
ಮಗನ ಮನವೊಲಿಸಿ ಮನೆಗೆ ಕರೆತರಲು ಮುರಳೀಧರ್ ಮತ್ತು ಸಂಗೀತಾ ಬೆಟ್ಟದ ಮೇಲಕ್ಕೆ ಹೋಗಿದ್ದರು. ಆದರೆ, ಆ ಯುವಕ ಅಪ್ಪ-ಅಮ್ಮನನ್ನು ಹೆದರಿಸಲು ಬೆಟ್ಟದ ತುದಿಯ ಬಂಡೆಯ ಮೇಲೆ ಹತ್ತಿ ನಿಂತಿದ್ದ. ಘಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು, ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಸ್ಥಳದಲ್ಲಿ ಜಮಾಯಿಸಿದರು. ಅಗ್ನಿಶಾಮಕ ಸಿಬ್ಬಂದಿ ಬೆಟ್ಟದ ಕೆಳಭಾಗದಲ್ಲಿ ಸೇಫ್ಟಿ ನೆಟ್ ಹಾಸಲು ಯತ್ನಿಸಿದರಾದರೂ, ಕುನಾಲ್ ಬೆಟ್ಟದ ಅಂಚಿನ ಉದ್ದಕ್ಕೂ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದುದರಿಂದ ಅವರ ಪ್ರಯತ್ನಗಳು ವಿಫಲವಾದವು.
ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮುರಳೀಧರ್ ಅವರು ಮಗನನ್ನು ಸಮಾಧಾನಪಡಿಸಲು ಹತ್ತಿರ ಹೋದಾಗ, ಕುನಾಲ್ ಬೆಟ್ಟದಿಂದ ಕೆಳಗೆ ಜಿಗಿದನು. ಆಗ ತಂದೆಯೂ ನಿಯಂತ್ರಣ ಕಳೆದುಕೊಂಡು ಬೆಟ್ಟದ ಮೇಲಿನಿಂದ ಕೆಳಗೆ ಬಿದ್ದರು. ತನ್ನ ಗಂಡ ಮತ್ತು ಮಗ ಪ್ರಪಾತಕ್ಕೆ ಬಿದ್ದು ಮೃತಪಟ್ಟಿರುವುದನ್ನು ಕಣ್ಣಾರೆ ಕಂಡ ಸಂಗೀತಾ, ಕೆಲವೇ ಕ್ಷಣಗಳಲ್ಲಿ ಬೆಟ್ಟದಿಂದ ಜಿಗಿದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




