AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯರಸ್ತೆಯಲ್ಲಿ ಆಪರೇಷನ್ ಮಾಡಿ ರೋಗಿಯ ಜೀವ ಉಳಿಸಿದ ವೈದ್ಯರು

ಎರ್ನಾಕುಲಂನಲ್ಲಿ, ರಸ್ತೆ ಅಪಘಾತಕ್ಕೀಡಾದ ಯುವಕನ ಪ್ರಾಣ ಉಳಿಸಲು ಮೂವರು ವೈದ್ಯರು ಮಧ್ಯರಸ್ತೆಯಲ್ಲೇ ತುರ್ತು ಶಸ್ತ್ರಚಿಕಿತ್ಸೆ ನಡೆಸಿದರು. ಅಗತ್ಯ ವೈದ್ಯಕೀಯ ಉಪಕರಣಗಳ ಕೊರತೆಯಿದ್ದರೂ, ರೇಜರ್ ಬ್ಲೇಡ್ ಮತ್ತು ಪೇಪರ್ ಸ್ಟ್ರಾಗಳನ್ನು ಬಳಸಿ ಯುವಕನ ಉಸಿರಾಟವನ್ನು ಪುನಃಸ್ಥಾಪಿಸಿದರು. ವೈದ್ಯರ ಸಮಯಪ್ರಜ್ಞೆ ಮತ್ತು ಧೈರ್ಯವು ಗಾಯಾಳುವಿನ ಜೀವವನ್ನು ಉಳಿಸಿ, ಮಾನವೀಯತೆ ಮೆರೆದಿದ್ದಾರೆ.

ಮಧ್ಯರಸ್ತೆಯಲ್ಲಿ ಆಪರೇಷನ್ ಮಾಡಿ ರೋಗಿಯ ಜೀವ ಉಳಿಸಿದ ವೈದ್ಯರು
ವೈದ್ಯರು
ನಯನಾ ರಾಜೀವ್
|

Updated on:Dec 23, 2025 | 3:21 PM

Share

ಎರ್ನಾಕುಲಂ, ಡಿಸೆಂಬರ್ 23: ವೈದ್ಯೋ ನಾರಾಯಣೋ ಹರಿಃ ಅಂತಾರೆ, ವೈದ್ಯರು(Doctors) ದೇವರಂತೆ ಬಂದು ರೋಗಿಯನ್ನು ಕಾಪಾಡುತ್ತಾರೆ. ಹಾಗೆಯೇ ಎರ್ನಾಕುಲಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿಗೆ ಕೂಡಲೇ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಅವರ ಪ್ರಾಣ ಉಳಿಸಿರುವ ಘಟನೆ ವರದಿಯಾಗಿದೆ.

ರಸ್ತೆ ಮಧ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಯುವಕನಿಗೆ ಮೂವರು ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿದರು.ಎರ್ನಾಕುಲಂನ ದಕ್ಷಿಣ ಪರವೂರಿನಲ್ಲಿ ಈ ಘಟನೆ ನಡೆದಿದೆ.ಡಾ. ಮನೂಪ್, ಡಾ. ಥಾಮಸ್ ಪೀಟರ್ ಮತ್ತು ಅವರ ಪತ್ನಿ ಡಾ. ದಿಧಿಯಾ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಡಾ. ಮನೂಪ್ ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿದ್ದರೆ, ಡಾ. ಥಾಮಸ್ ಪೀಟರ್ ಮತ್ತು ಡಾ. ದಿಧಿಯಾ ಕೊಚ್ಚಿಯ ಇಂದಿರಾ ಗಾಂಧಿ ಸಹಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೊಲ್ಲಂನ ಲಿನು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅಪಘಾತದಲ್ಲಿ ಅವರಿಗೆ ಆದ ಗಾಯದ ನಂತರ ರಕ್ತ ಮತ್ತು ಕೊಳಕು ಶ್ವಾಸಕೋಶಕ್ಕೆ ಪ್ರವೇಶಿಸಿ ಉಸಿರಾಟದ ತೊಂದರೆ ಉಂಟಾಗಿದ್ದರಿಂದ ವೈದ್ಯರು ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದರು.

ಮತ್ತಷ್ಟು ಓದಿ: ಕಲಬುರಗಿ: ಕಿದ್ವಾಯಿ ಆಸ್ಪತ್ರೆಯಲ್ಲಿನ ಎಸಿ ಕಳ್ಳತನ: ವೈದ್ಯರ ವಿರುದ್ದವೇ ಗಂಭೀರ ಆರೋಪ

ಅಗತ್ಯ ವೈದ್ಯಕೀಯ ಉಪಕರಣಗಳು ಲಭ್ಯವಿಲ್ಲದ ಕಾರಣ ರೇಜರ್ ಬ್ಲೇಡ್‌ಗಳು ಮತ್ತು ಪೇಪರ್ ಸ್ಟ್ರಾಗಳನ್ನು ಬಳಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.ಕರ್ತವ್ಯದ ನಂತರ, ಡಾ. ಥಾಮಸ್ ಪೀಟರ್ ಮತ್ತು ಅವರ ಪತ್ನಿ ದಿಧಿಯಾ ಕ್ರಿಸ್‌ಮಸ್ ಆಚರಿಸಲು ದಕ್ಷಿಣ ಪರವೂರಿನ ಸೇಂಟ್ ಜಾನ್ಸ್ ದಿ ಬ್ಯಾಪ್ಟಿಸ್ಟ್ ಚರ್ಚ್‌ಗೆ ಹೋಗುತ್ತಿದ್ದರು.

ಚರ್ಚ್ ತಲುಪುವ ಸ್ವಲ್ಪ ಸಮಯದ ಮೊದಲು, ಅಪಘಾತದಲ್ಲಿ ಗಾಯಗೊಂಡ ಯುವಕರನ್ನು ಅವರು ನೋಡಿದರು. ಅವರಲ್ಲಿ ಒಬ್ಬನಿಗೆ ಯಾವುದೇ ಗಂಭೀರ ಗಾಯಗಳಿಲ್ಲದೆ ಎದ್ದು ನಿಂತಿದ್ದ. ಇನ್ನೊಬ್ಬ ಯುವಕ ಬಾಯಿಯಿಂದ ರಕ್ತಸ್ರಾವವಾಗುತ್ತಿದ್ದರೂ ಮಾತನಾಡುತ್ತಿದ್ದ. ಮೂರನೆಯವರಾದ ಲಿನು ಗಂಭೀರ ಸ್ಥಿತಿಯಲ್ಲಿದ್ದರು. ಆಸ್ಪತ್ರೆ ತಲುಪುವವರೆಗೂ ಯುವಕ ಬದುಕುಳಿಯುವುದಿಲ್ಲ ಎಂದು ಅವರಿಗೆ ಅರಿವಾದ ಕಾರಣ, ಮೂವರು ವೈದ್ಯರು ರಸ್ತೆಬದಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದರು.

ಸ್ಥಳೀಯರು ಅವರಿಗೆ ಪೇಪರ್ ಸ್ಟ್ರಾಗಳು ಮತ್ತು ಬ್ಲೇಡ್‌ಗಳನ್ನು ಕೊಟ್ಟರು, ಆದರೆ ಕೈಗವಸು ಇರಲಿಲ್ಲ.  ಸ್ಥಳೀಯರು ಇದಕ್ಕೆ ಸಹಕರಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸಹ ಅವರಿಗೆ ವಿಶ್ವಾಸ ತುಂಬಿದರು. ಆಂಬ್ಯುಲೆನ್ಸ್ ಬರುವ ಹೊತ್ತಿಗೆ ಲಿನು ಉಸಿರಾಡಲು ಪ್ರಾರಂಭಿಸಿದ್ದ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಡಾ. ಮನೂಪ್ ಲಿನು ಜೊತೆ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಹೋದರು. ಅವರು ಪ್ರಸ್ತುತ ಎರ್ನಾಕುಲಂ ವೆಲ್‌ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:20 pm, Tue, 23 December 25