ಕಾಂಗೋ, ಉಗಾಂಡಾದಲ್ಲಿ ಎಬೋಲಾ ರುದ್ರನರ್ತನ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಪ್ರಯಾಣಿಕರಿಗೆ ಮಹತ್ವದ ಸೂಚನೆ
ಕಾಂಗೋ, ಉಗಾಂಡಾದಲ್ಲಿ ಎಬೋಲಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಆಫ್ರಿಕನ್ ದೇಶಗಳಿಂದ ಬರುವ ಪ್ರಯಾಣಿಕರು ರೋಗಲಕ್ಷಣಗಳಿದ್ದರೆ ತಕ್ಷಣ ಆರೋಗ್ಯ ಡೆಸ್ಕ್ ಸಂಪರ್ಕಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಬೋಲಾ ಎನ್ನುವುದು ವೈರಾಣುಗಳಿಂದ ಉಂಟಾಗುವ ಅತ್ಯಂತ ತೀವ್ರವಾದ ಮತ್ತು ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿರುವ ಕಾರಣ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ನವದೆಹಲಿ, ಮೇ 22: ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ಅಬ್ಬರದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಪರಿಸ್ಥಿತಿ ಘೋಷಣೆ ಹಿನ್ನಲೆ ದೇಶದವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಕೇಂದ್ರ ಆರೋಗ್ಯ ಸಚಿವಾಲಯ ಕಟ್ಟುನಿಟ್ಟಿನ ಆದೇಶ ನೀಡಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಅಂತಾರಾಷ್ಟ್ರೀಯ ಆರೋಗ್ಯ ನಿಯಮಾವಳಿಗಳ ಹಿತದೃಷ್ಟಿಯಿಂದ ಆರೋಗ್ಯ ತಪಾಸಣೆ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳಿಗೆ ಸಹಕರಿಸಿ ಎಂದು ಸಲಹೆಯಲ್ಲಿ ತಿಳಿಸಲಾಗಿದೆ.
ಏನೆಲ್ಲ ಸೂಚನೆ?
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡಾ ಹಾಗೂ ದಕ್ಷಿಣ ಸೂಡಾನ್‌ನಿಂದ ಭಾರತಕ್ಕೆ ಬರುವ ಅಥವಾ ಆ ದೇಶಗಳ ಮೂಲಕ ಪ್ರಯಾಣಿಸುವವರು ಜ್ವರ, ದೌರ್ಬಲ್ಯ, ತಲೆನೋವು, ಸ್ನಾಯು ನೋವು, ವಾಂತಿ, ಅತಿಸಾರ, ಗಂಟಲು ನೋವು ಹಾಗೂ ಅಸ್ಪಷ್ಟ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಪಾಸಣೆಗೂ ಮುನ್ನ ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿ ಅಥವಾ ಆರೋಗ್ಯ ಡೆಸ್ಕ್ ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಜಗತ್ತಿಗೆ ಮತ್ತೊಂದು ಮಾರಣಾಂತಿಕ ವೈರಸ್ ಎಂಟ್ರಿ!, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಎಬೋಲಾ ಸೋಂಕು ದೃಢಪಟ್ಟ ಅಥವಾ ಶಂಕಿತ ವ್ಯಕ್ತಿಯ ರಕ್ತ ಅಥವಾ ದೇಹದ ದ್ರವಗಳ ಸಂಪರ್ಕಕ್ಕೆ ಬಂದಿರುವ ಇತಿಹಾಸವಿರುವವರೂ ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಸೂಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಸ್ತುತ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ದಾಖಲಾಗಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ (WHO) ಎಬೋಲಾ ಹರಡುವಿಕೆಯನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯೆಂದು ಘೋಷಿಸಿ ಎಚ್ಚರಿಕೆ ನೀಡಿತ್ತು. ಸೋಂಕು ಪತ್ತೆಯಾದ ನಂತರ ಅದರ ವೇಗದ ಹರಡುವಿಕೆ ಬಗ್ಗೆ WHO ಹಿರಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಎರಡು ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದು, ಒಂದರಲ್ಲಿ ಸಚಿವಾಲಯದ ಅಧಿಕಾರಿಗಳೊಂದಿಗೆ ಮತ್ತು ಮತ್ತೊಂದರಲ್ಲಿ ರಾಜ್ಯಗಳೊಂದಿಗೆ ಸಿದ್ಧತೆ ಕುರಿತು ಚರ್ಚಿಸಲಾಗಿದೆ.
ಸೋಂಕು ಹೇಗೆ ಹರಡುತ್ತೆ?
ಎಬೋಲಾ ಎನ್ನುವುದು ವೈರಾಣುಗಳಿಂದ ಉಂಟಾಗುವ ಅತ್ಯಂತ ತೀವ್ರವಾದ ಮತ್ತು ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿದೆ. ಸೋಂಕಿತ ವ್ಯಕ್ತಿಯ ರಕ್ತ, ಎಂಜಲು, ಬೆವರು, ಕಣ್ಣೀರು, ವಾಂತಿ, ಮಲ, ತಾಯಿಯ ಹಾಲು ಸೇರಿದಂತೆ ದೇಹದ ದ್ರವಗಳ ನೇರ ಸಂಪರ್ಕದಿಂದ ಸೋಂಕು ಹರಡುತ್ತದೆ. ಸೋಂಕಿನಿಂದ ಮೃತಪಟ್ಟವರ ದೇಹದ ಸಂಪರ್ಕದಿಂದಲೂ ಇದು ಹರಡಬಹುದು. ಈ ರೋಗದ ಬಹುತೇಕ ಲಕ್ಷಣಗಳು ಜ್ವರದಂತೆಯೇ ಕಂಡುಬರುತ್ತವೆ . ಜ್ವರ, ತಲೆನೋವು, ಸ್ನಾಯು ಮತ್ತು ಸಂಧಿ ನೋವು ಕಾಣಿಸಿಕೊಳ್ಳಬಹುದು. ಆದರೆ ಅಸ್ಪಷ್ಟ ಆಂತರಿಕ ಮತ್ತು ಬಾಹ್ಯ ರಕ್ತಸ್ರಾವವು ಎಬೋಲಾದ ವಿಶೇಷ ಲಕ್ಷಣಗಳಲ್ಲಿ ಒಂದಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

