5 ರೂ.ಗೆ ತಟ್ಟೆ ತುಂಬ ಮೀನು ಊಟ; ಏನಿದು ಹೊಸ ಯೋಜನೆ?
ಪಶ್ಚಿಮ ಬಂಗಾಳ ಸರ್ಕಾರವು ಬಡವರು ಮತ್ತು ಕಾರ್ಮಿಕರಿಗಾಗಿ ಕೇವಲ 5 ರೂ.ಗೆ ಮೀನೂಟ ನೀಡುವ ಅತ್ಯಂತ ಜನಪ್ರಿಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಹೆಸರು ಮಚ್ಚೆ ಬಾತ್. ಬಡವರಿಗೆ ಮತ್ತು ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವಂತೆ ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ. ಮಚ್ಚ ಭಾತ್ ಬಂಗಾಳದ ಅಸ್ಮಿತೆಯ ಭಾಗವಾಗಿದ್ದು, ಯಾರ ಆಹಾರ ಪದ್ಧತಿಗೂ ಧಕ್ಕೆ ಬರುವುದಿಲ್ಲ ಎಂದು ಸಿಎಂ ಸುವೇಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಕೊಲ್ಕತ್ತಾ, ಮೇ 26: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಇಂದು ರಾಜ್ಯದ ಜನರಿಗೆ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಇವುಗಳಲ್ಲಿ 5 ರೂ.ಗೆ ಮೀನು ಊಟ, ಅನ್ನಪೂರ್ಣ ಯೋಜನೆ ಮತ್ತು ರಾಜ್ಯಾದ್ಯಂತ ಮದ್ಯದಂಗಡಿಗಳ ಕುರಿತು ಹೊಸ ನಿಯಮಗಳು ಕೂಡ ಸೇರಿವೆ. ಈ ಮೀನೂಟದಲ್ಲಿ ತಟ್ಟೆಯ ತುಂಬ ಬಿಸಿ ಬಿಸಿ ಅನ್ನ, ದಾಲ್ ಅಥವಾ ಬೇಳೆ ಸಾರು, ಒಂದು ಬಗೆಯ ತರಕಾರಿ ಪಲ್ಯ, ರುಚಿಕರವಾದ ಮೀನಿನ ಸಾರು ಅಥವಾ ಫಿಶ್ ಫ್ರೈ ನೀಡಲಾಗುವುದು. ಬುಧವಾರದಿಂದ ರಾಜ್ಯ ಸರ್ಕಾರವು ಅನ್ನಪೂರ್ಣ ಯೋಜನೆಗೆ ಫಾರ್ಮ್‌ಗಳನ್ನು ನೀಡಲು ಪ್ರಾರಂಭಿಸಲಾಗುತ್ತದೆ. ಇದರ ಅಡಿಯಲ್ಲಿ ಮಹಿಳೆಯರು ಪ್ರತಿ ತಿಂಗಳು 3,000 ಪಡೆಯುತ್ತಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮೀನು, ಮಾಂಸ, ಮೊಟ್ಟೆ ನಿಷೇಧ ಮಾಡುತ್ತದೆ ಎಂದು ಟಿಎಂಸಿ ಆರೋಪಿಸಿತ್ತು. ಆದರೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸಬ್ಸಿಡಿ ದರದಲ್ಲಿ ಮೀನು ಊಟ ನೀಡಲು ನಿರ್ಧರಿಸಿದೆ. ಈ ಮೂಲಕ ಟಿಎಂಸಿಗೆ ತಿರುಗೇಟು ನೀಡಿದೆ.
ಇದನ್ನೂ ಓದಿ: ಭವಾನಿಪುರ ಕ್ಷೇತ್ರ ಉಳಿಸಿಕೊಂಡು ನಂದಿಗ್ರಾಮದ ಶಾಸಕ ಸ್ಥಾನಕ್ಕೆ ಬಂಗಾಳದ ಸಿಎಂ ಸುವೇಂದು ಅಧಿಕಾರಿ ರಾಜೀನಾಮೆ
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಶಾಲೆಗಳು, ಕಾಲೇಜುಗಳು ಮತ್ತು ಪೂಜಾ ಸ್ಥಳಗಳ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಇನ್ನು ಮುಂದೆ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ವಾರಕ್ಕೆ 2 ಬಾರಿ 400 ಕ್ಯಾಂಟೀನ್‌ಗಳಲ್ಲಿ 5 ರೂ.ಗೆ ಮೀನು ಮತ್ತು ಅನ್ನ ಊಟವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಕೇವಲ 5 ರೂಪಾಯಿ ಮುಖಬೆಲೆಯ ಈ ಊಟದ ತಟ್ಟೆಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತದೆ. ವಾಸ್ತವವಾಗಿ ಈ ಒಂದು ಊಟದ ತಟ್ಟೆಯ ಒಟ್ಟು ವೆಚ್ಚ ಸುಮಾರು 20ರಿಂದ 25 ರೂ.ಗಳಾಗಿರುತ್ತದೆ. ಆದರೆ, ಬಡವರಿಗೆ ಹೊರೆಯಾಗಬಾರದು ಎಂದು ಗ್ರಾಹಕರಿಂದ ಕೇವಲ 5 ರೂ. ಪಡೆಯಲಾಗುತ್ತದೆ. ಉಳಿದ ಹಣವನ್ನು ಪಶ್ಚಿಮ ಬಂಗಾಳ ಸರ್ಕಾರವೇ ಭರಿಸುತ್ತದೆ.
ಇದನ್ನೂ ಓದಿ: ಬಂಗಾಳದಲ್ಲಿ ಮಮತಾ ಕಾಲದ ನಿಯಮಕ್ಕೆ ಬಿಜೆಪಿ ಬ್ರೇಕ್!: ಬಕ್ರೀದ್ ರಜೆ 1 ದಿನಕ್ಕೆ ಕಡಿತ, ಪ್ರಾಣಿ ವಧೆಗೂ ಕಠಿಣ ನಿಯಮ
ದಿನಗೂಲಿ ಕಾರ್ಮಿಕರು, ರಿಕ್ಷಾ ಚಾಲಕರು, ವಲಸೆ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ಪ್ರತಿದಿನ ಮಧ್ಯಾಹ್ನ ಅತ್ಯಂತ ಕಡಿಮೆ ದರದಲ್ಲಿ ಗೌರವಯುತವಾದ ಊಟ ನೀಡುವುದು ಇದರ ಗುರಿ. ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದರೂ ಇಲ್ಲಿ ಗುಣಮಟ್ಟ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಕೊಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದ ಪ್ರಮುಖ ನಗರಗಳ ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಆಸ್ಪತ್ರೆಗಳ ಹತ್ತಿರ ಈ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





