ರಾಮಾಯಣದ ಪೇಂಟಿಂಗ್​ನಿಂದ ಗಂಗಾಜಲದವರೆಗೆ; ನೇಪಾಳದ ಪ್ರಧಾನಿ ಬಾಲೆನ್ ಶಾಗೆ ಮೋದಿ ನೀಡಿದ ಉಡುಗೊರೆಗಳಿವು

ಭಾರತ ಮತ್ತು ನೇಪಾಳ ನಡುವಿನ ಸಂಬಂಧವು ಕೇವಲ ನೆರೆಯ ರಾಷ್ಟ್ರಗಳಿಗೆ ಸೀಮಿತವಾಗಿಲ್ಲ. ನಮ್ಮ ಸಂಸ್ಕೃತಿಗಳು, ಧರ್ಮಗಳು ಮತ್ತು ಸಂಪ್ರದಾಯಗಳು ಸಹ ಆಳವಾಗಿ ಹೆಣೆದುಕೊಂಡಿವೆ. ಈ ಸ್ನೇಹ ಮತ್ತು ಹಂಚಿಕೆಯ ಪರಂಪರೆಯು ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಬಾಲೆನ್ ಅವರಿಗೆ ನೀಡಿದ ವಿಶೇಷ ಉಡುಗೊರೆಗಳಲ್ಲಿ ಪ್ರತಿಫಲಿಸುತ್ತದೆ. 2 ದಿನಗಳ ಭಾರತ ಭೇಟಿಯಲ್ಲಿದ್ದ ಬಾಲೆನ್ ಶಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ನೇಪಾಳದ ಪ್ರಧಾನಿಗೆ ರಾಮಾಯಣದ ವಿಶೇಷ ಪೇಂಟಿಂಗ್, ಬನಾರಸ್‌ನ ರೇಷ್ಮೆ ಸ್ಟೋಲ್ ಮತ್ತು ವಾರಾಣಸಿಯಿಂದ ತಂದ ಗಂಗಾ ಜಲವನ್ನು ಉಡುಗೊರೆಯಾಗಿ ನೀಡಿದರು.

ರಾಮಾಯಣದ ಪೇಂಟಿಂಗ್​ನಿಂದ ಗಂಗಾಜಲದವರೆಗೆ; ನೇಪಾಳದ ಪ್ರಧಾನಿ ಬಾಲೆನ್ ಶಾಗೆ ಮೋದಿ ನೀಡಿದ ಉಡುಗೊರೆಗಳಿವು
Pm Modis Gifts To Nepal Pm
Image Credit source: PTI

Updated on: Nov 23, 2026 | 9:25 PM

ನವದೆಹಲಿ, ನವೆಂಬರ್ 23: ಭಾರತಕ್ಕೆ ಮೊದಲ ಭಾರಿ ಅಧಿಕೃತ ಭೇಟಿ ನೀಡಿರುವ ನೇಪಾಳದ ಪ್ರಧಾನಮಂತ್ರಿ ಬಾಲೆನ್ ಶಾ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ ಮತ್ತು ನೇಪಾಳದ ನಡುವಿನ ಶತಮಾನಗಳ ಹಳೆಯ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ನಾಗರಿಕ ಸಂಬಂಧಗಳನ್ನು ಪ್ರತಿಬಿಂಬಿಸುವ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ. ಆ ಕುರಿತಾದ ವಿವರವಾದ ಮಾಹಿತಿ ಇಲ್ಲಿದೆ.

ರಾಮಾಯಣದ ವಿಶೇಷ ಪೇಂಟಿಂಗ್:

Loading...

ಪ್ರಧಾನಿ ಮೋದಿ ಅವರು ನೇಪಾಳದ ಪ್ರಧಾನಿಗೆ ಕಲಾಂಕರಿ ಶೈಲಿಯಲ್ಲಿ ರಚಿಸಲಾದ ಸಂಪೂರ್ಣ ರಾಮಾಯಣ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಈ ವರ್ಣಚಿತ್ರವು ಭಗವಾನ್ ರಾಮನ ಜೀವನದ ಪ್ರಮುಖ ಘಟನೆಗಳನ್ನು, ಅವನ ಜನನದಿಂದ ವನವಾಸ, ರಾವಣನ ಮೇಲಿನ ವಿಜಯ ಮತ್ತು ಅಯೋಧ್ಯೆಗೆ ಮರಳುವವರೆಗೆ ಚಿತ್ರಿಸುತ್ತದೆ. ಈ ಕಲಾಕೃತಿಯನ್ನು ಆಂಧ್ರಪ್ರದೇಶದ ಸಾಂಪ್ರದಾಯಿಕ ಶ್ರೀಕಾಳಹಸ್ತಿ ಶೈಲಿಯಲ್ಲಿ ರಚಿಸಲಾಗಿದೆ. ಇದನ್ನು ಬಿದಿರಿನ ಪೆನ್ನುಗಳು ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಿ ಹತ್ತಿ ಬಟ್ಟೆಯ ಮೇಲೆ ಕೈಯಿಂದ ಚಿತ್ರಿಸಲಾಗಿದೆ.

Ramayan Painting

Ramayan Painting

ಭಾರತ ಮತ್ತು ನೇಪಾಳವನ್ನು ಬೆಸೆಯುವ ಅತ್ಯಂತ ಬಲವಾದ ಕೊಂಡಿಯೆಂದರೆ ಅದು ಶ್ರೀರಾಮ ಮತ್ತು ಸೀತಾಮಾತೆಯ ಪರಂಪರೆ. ಅಯೋಧ್ಯೆಯ ಶ್ರೀರಾಮ ಮತ್ತು ನೇಪಾಳದ ಜನಕಪುರದ (ಮಿಥಿಲಾ) ಸೀತಾದೇವಿಯ ವಿವಾಹ ಹಾಗೂ ರಾಮಾಯಣದ ಪ್ರಸಂಗಗಳನ್ನು ಒಳಗೊಂಡ ಈ ಕಲಾಕೃತಿಯು, ಎರಡೂ ದೇಶಗಳ ಜನರ ನಡುವಿನ  ಸಂಬಂಧ ಹಾಗೂ ಅಖಂಡ ಸಾಂಸ್ಕೃತಿಕ ಏಕತೆಯನ್ನು ಸಂಕೇತಿಸುತ್ತದೆ.

ಇದನ್ನೂ ಓದಿ: ಮೋದಿ–ಬಾಲೆನ್ ಶಾ ಭೇಟಿ, ಭಾರತದ ಮುಂದೆ ನೇಪಾಳದ ಪ್ರಮುಖ ಬೇಡಿಕೆಗಳೇನು? ರೈಲು, ವಿಮಾನ ಸಂಪರ್ಕದಿಂದ 2 ಬಿಲಿಯನ್ ಡಾಲರ್ ನೆರವಿನವರೆಗೆ ಚರ್ಚೆ

ಪವಿತ್ರ ಗಂಗಾಜಲ:

ಪವಿತ್ರ ಗಂಗಾ ನದಿಯ ಜಲವು ಭಾರತೀಯ ಸಂಸ್ಕೃತಿಯಲ್ಲಿ ಶುದ್ಧತೆ, ಆಧ್ಯಾತ್ಮಿಕತೆ ಮತ್ತು ಪಾವಿತ್ರ್ಯತೆಯ ಪ್ರತೀಕವಾಗಿದೆ. ಹಿಮಾಲಯದಿಂದ ಹರಿಯುವ ನದಿಗಳು ಭಾರತ ಮತ್ತು ನೇಪಾಳ ಎರಡೂ ದೇಶಗಳ ಜೀವನಾಡಿಯಾಗಿವೆ. ಕಾಶಿ ವಿಶ್ವನಾಥ ಮತ್ತು ಪಶುಪತಿನಾಥ ಕ್ಷೇತ್ರಗಳ ನಡುವಿನ ಆಧ್ಯಾತ್ಮಿಕ ನಂಟನ್ನು ಗಟ್ಟಿಗೊಳಿಸುವ ಸಂಕೇತವಾಗಿ ಪವಿತ್ರ ಗಂಗಾಜಲವನ್ನು ಉಡುಗೊರೆಯಾಗಿ ನೀಡಲಾಗಿದೆ.


ಪ್ರಧಾನಿ ಮೋದಿ ಅವರು ನೇಪಾಳದ ಪ್ರಧಾನಿಗೆ ವಾರಣಾಸಿಯಿಂದ ತಂದ ಗಂಗಾ ನೀರನ್ನು ಉಡುಗೊರೆಯಾಗಿ ನೀಡಿದರು. ಇದನ್ನು ವಿಶೇಷ ಹಿತ್ತಾಳೆಯ ಪಾತ್ರೆಯಲ್ಲಿ ಸಂಗ್ರಹಿಸಲಾಗಿತ್ತು. ಈ ಗಂಗಾ ನೀರನ್ನು ಕಾಶಿ ವಿಶ್ವನಾಥ ದೇವಾಲಯದ ಬಳಿಯ ಗಂಗಾ ನದಿಯಿಂದ ತರಲಾಯಿತು. ಈ ಉಡುಗೊರೆಯ ಧಾರ್ಮಿಕ ಮಹತ್ವವು ಕಾಶಿ ಮತ್ತು ಕಠ್ಮಂಡು ನಡುವಿನ ಆಧ್ಯಾತ್ಮಿಕ ಬಾಂಧವ್ಯಕ್ಕೆ ಸಂಬಂಧಿಸಿದೆ. ವಾರಣಾಸಿಯಲ್ಲಿ ಬಾಬಾ ವಿಶ್ವನಾಥ ಮತ್ತು ಕಠ್ಮಂಡುವಿನಲ್ಲಿರುವ ಭಗವಾನ್ ಪಶುಪತಿನಾಥ ಎರಡೂ ಶಿವನ ಪ್ರಮುಖ ದೇವಾಲಯಗಳಾಗಿವೆ. ಆದ್ದರಿಂದ, ಗಂಗಾ ನೀರಿನ ಈ ಉಡುಗೊರೆಯನ್ನು ಎರಡೂ ದೇಶಗಳ ನಡುವಿನ ಧಾರ್ಮಿಕ ನಂಬಿಕೆ ಮತ್ತು ಹಂಚಿಕೆಯ ಸಂಪ್ರದಾಯಗಳ ಸಂಕೇತವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ನೇಪಾಳವಿಲ್ಲದೆ ರಾಮನ ಕಥೆ ಪೂರ್ಣವಾಗದು, ಭಾರತ-ನೇಪಾಳ ಸಂಬಂಧಕ್ಕೆ ಹೊಸ ಬಲ: ಪ್ರಧಾನಿ ಮೋದಿ

ಸಾಂಪ್ರದಾಯಿಕ ಕರಕುಶಲ ವಸ್ತುಗಳು:

ನೇಪಾಳದ ಪ್ರಧಾನಿಗೆ ಬನಾರಸ್​​ನಲ್ಲಿ ತಯಾರಿಸಿದ ರೇಷ್ಮೆ ಸ್ಟೋಲ್ ನೀಡಲಾಗಿದೆ. ಈ ರೇಷ್ಮೆ ಸ್ಟೋಲ್ ಅನ್ನು ಗುಜರಾತ್‌ನಲ್ಲಿ ತಯಾರಿಸಿದ ಶ್ರೀಗಂಧದ ಪೆಟ್ಟಿಗೆಯಲ್ಲಿ ಇಟ್ಟು ಕೊಡಲಾಗಿದೆ. ಪೆಟ್ಟಿಗೆಯನ್ನು ಸಾಂಪ್ರದಾಯಿಕ ಮರಗೆಲಸ, ಕುಸುರಿ ವಿನ್ಯಾಸಗಳಿಂದ ಅಲಂಕರಿಸಲಾಗಿದೆ. ಈ ಉಡುಗೊರೆ ಭಾರತದ ಸಾಂಪ್ರದಾಯಿಕ ಕಲೆಗಳು, ಕರಕುಶಲ ವಸ್ತುಗಳು ಮತ್ತು ಅದರ ಕುಶಲಕರ್ಮಿಗಳ ಕಠಿಣ ಪರಿಶ್ರಮವನ್ನು ಪ್ರದರ್ಶಿಸುತ್ತದೆ.


ಭಾರತದ ಶ್ರೀಮಂತ ಕಲಾ ಪರಂಪರೆಯನ್ನು ಬಿಂಬಿಸುವ ವಿಶೇಷ ಕರಕುಶಲ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ, ನೇಪಾಳದ ಯುವ ನಾಯಕತ್ವದೊಂದಿಗೆ ಸಾಂಸ್ಕೃತಿಕ ಬಾಂಧವ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಂದೇಶವನ್ನು ಪ್ರಧಾನಿ ಮೋದಿ ರವಾನಿಸಿದ್ದಾರೆ.

ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಬಾಲೆನ್ ಶಾ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇಂಧನ ಸಹಕಾರ, ರೈಲು ಸಂಪರ್ಕ, ವ್ಯಾಪಾರ ವೃದ್ಧಿ ಮತ್ತು ಗಡಿ ನಿರ್ವಹಣೆಯಂತಹ ಮಹತ್ವದ ಒಪ್ಪಂದಗಳ ನಡುವೆ, ಈ ಸಾಂಸ್ಕೃತಿಕ ಉಡುಗೊರೆಗಳು ಎರಡೂ ನೆರೆಹೊರೆ ರಾಷ್ಟ್ರಗಳ ನಡುವಿನ ಆಳವಾದ ಐತಿಹಾಸಿಕ ಮತ್ತು ಧಾರ್ಮಿಕ ನಂಟನ್ನು ಮತ್ತೊಮ್ಮೆ ಜಗತ್ತಿಗೆ ಸಾರಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us