ಕೋವಿಶೀಲ್ಡ್ ಎರಡು ಡೋಸ್ ನಡುವಿನ ಅಂತರ 6-8 ವಾರಗಳಿಷ್ಟಿರಬೇಕು ಎಂದ ಕೇಂದ್ರ ಸರ್ಕಾರ
Fight against Pandemic: ಎರಡು ಲಸಿಕೆ ಡೋಸ್ಗಳ ನಡುವಿನ ಪರಿಷ್ಕೃತ ಅಂತರ ಕುರಿತು ಹೊರಬಿದ್ದಿರುವ ಸೂಚನೆ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಡುತ್ತಿರುವ ಕೋವಿಶೀಲ್ಡ್ಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು, ಆಕ್ಸ್ಫರ್ಢ್ ಆಸ್ಟ್ರಾಜೆನಿಕಾ ಮತ್ತು ಭಾರತ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳಿಗೆ ಅಲ್ಲ.
ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಪರಿಣಾಮಕಾರಿ ಫಲಿತಾಂಶಗಳಿಗಾಗಿ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರ ಈಗಿನ 28 ದಿನಗಳ ಬದಲು 6-8 ವಾರಗಳಷ್ಟು ಇರಬೇಕೆಂದು ಕೇಂದ್ರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರದ ಮೂಲಕ ಸೂಚನೆ ನೀಡಿದೆ. 60ಕ್ಕಿಂತ ಹೆಚ್ಚಿನ ಪ್ರಾಯದ ಮತ್ತು ಇತರ ಅನಾರೋಗ್ಯಗಳಿಂದ ಬಳುತ್ತಿರುವ 45 ಕ್ಕಿಂತ ಜಾಸ್ತಿ ವಯಸ್ಸಿನ ನಾಗರಿಕರಿಗೆ ಲಸಿಕೆ ನೀಡುವ ಅಭಿಯಾನ ಶುರುವಾದ ನಂತರ ಕೇಂದ್ರದಿಂದ ಈ ಸೂಚನೆ ಹೊರಬಿದ್ದಿದೆ.
ಎರಡು ಲಸಿಕೆ ಡೋಸ್ಗಳ ನಡುವಿನ ಪರಿಷ್ಕೃತ ಅಂತರ ಕುರಿತು ಹೊರಬಿದ್ದಿರುವ ಸೂಚನೆ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಡುತ್ತಿರುವ ಕೋವಿಶೀಲ್ಡ್ಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು, ಆಕ್ಸ್ಫರ್ಢ್ ಆಸ್ಟ್ರಾಜೆನಿಕಾ ಮತ್ತು ಭಾರತ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳಿಗೆ ಅಲ್ಲ. ಪ್ರಸ್ತುತವಾಗಿ ಎರಡು ಡೋಸ್ಗಳ ನಡುವಿನ ಅಂತರ 28 ದಿನಗಳು ಅಥವಾ 4 ರಿಂದ 6 ವಾರಗಳಷ್ಟಿದೆ.
‘ಲಭ್ಯವಾಗುತ್ತಿರುವ ವೈಜ್ಞಾನಿಕ ಪುರಾವೆಗಳ ಹಿನ್ನೆಲೆಯಲ್ಲಿ ಕೊವಿಡ್-19 ಸೋಂಕಿನ ವಿರುದ್ಧ ಉಪಯೋಗಿಸಲ್ಪಡುತ್ತಿರುವ ಕೋವಿಶಿಲ್ಡ್ ಲಸಿಕೆಯ ಎರಡು ಡೋಸ್ಗಳ ನಡುವಿನ ಅಂತರವನ್ನು ರೋಗ ನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್ಟಿಎಜಿಐ) ಪರಿಷ್ಕರಿಸಿದೆ ಮತ್ತು ಕೊವಿಡ್-19 ಸೋಂಕು ನಿರ್ವಹಣೆಯ ರಾಷ್ಟ್ರೀಯ ತಜ್ಞರ ತಂಡ ಅದನ್ನು ಅನುಮೋದಿಸಿದೆ,’ ಎಂದು ಕೇಂದ್ರ ತಾನು ಬರೆದಿರುವ ಪತ್ರದಲ್ಲಿ ಹೇಳಿದೆ.
‘ಕೋವಿಶೀಲ್ಡ್ ಎರಡನೇ ಡೋಸನ್ನು 6ರಿಂದ 8 ವಾರಗಳ ನಂತರ ತೆಗೆದುಕೊಂಡಾಗ ಸೋಂಕಿನ ವಿರುದ್ಧ ಪ್ರತಿರೋಧಕ ಶಕ್ತಿ ಜಾಸ್ತಿಯಾಗಿರುವುದು ಕಂಡುಬಂದಿದೆ, ಆದರೆ ಅದಕ್ಕಿಂತ ಹೆಚ್ಚಿನ ಅವಧಿಯ ನಂತರ ಎರಡನೇ ಡೋಸ್ ತೆಗೆದುಕೊಳ್ಳವುದು ಸಲ್ಲದು,’ ಎಂದು ಪತ್ರದಲ್ಲಿ ಕೇಂದ್ರ ಹೇಳಿದೆ.
ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಸ್ವಯಂ ಸೇವಕರ ಮೂಲಕ ಸರ್ಕಾರ ಜನೆವರಿ 16ರಿಂದ ಆರಂಭಿಸಿರುವ ಲಸಿಕಾ ಆಭಿಯಾನದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳನ್ನು ಉಪಯೋಗಿಸಲಾಗುತ್ತಿದೆ. ಅಭಿಯಾನದ ಮೊದಲ ಭಾಗದಲ್ಲಿ ಕೋವಿಡ್ ಯೋಧರಿಗೆ ಲಸಿಕೆ ನೀಡಲಾಯಿತು.
ದೇಹದಲ್ಲಿ ರೋಗನಿರೋಧಕ ಪ್ರಕ್ರಿಯೆ ಸಂಪೂರ್ಣಗೊಳ್ಳಬೇಕಾದರೆ, 28 ದಿನಗಳ ಅಂತರದಲ್ಲಿ ಲಸಿಕೆಯ ಎರಡು ಡೋಸ್ಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಈ ಮೊದಲು ಹೇಳಿತ್ತು. ಸಾಮಾನ್ಯವಾಗಿ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡ ಎರಡು ವಾರಗಳ ನಂತರ ಸೋಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಬೆಳವಣಿಗೆ ಹೊಂದರಾರಂಭಿಸುತ್ತವೆ ಎಂದು ಸಚಿವಾಲಯ ಹೇಳಿತ್ತು.
ಜನೆವರಿಯಿಂದ ಇಲ್ಲಿಯವರಗೆ 4.5 ಕೋಟಿಗಿಂತ ಹೆಚ್ಚಿನ ಡೋಸ್ಗಳನ್ನು ಭಾರತದಾದ್ಯಂತ ನೀಡಲಾಗಿದೆ. ವಿಪರ್ಯಾಸದ ಸಂಗತಿಯೆಂದರೆ ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಮಾರ್ಚ್ 18ರಿಂದ ಕನಿಷ್ಠ 30,000 ಹೊಸ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಿವೆ.
ಕೇಂದ್ರ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಸೋಮವಾರದಂದು 46,951 ತಾಜಾ ಪ್ರಕರಣಗಳು ಬೆಳಕಿಗೆ ಬಂದಿದ್ದು ಇದು ಈ ವರ್ಷ ದಾಖಲಾಗಿರುವ ಅತಿಹೆಚ್ಚು ಪ್ರಕರಣಗಳ ಸಂಖ್ಯೆಯಾಗಿದೆ. ಭಾರತದಲ್ಲಿ ಇದುವರೆಗೆ 1,16,46,081 ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ:ಕೊವಿಶೀಲ್ಡ್, ಕೊವ್ಯಾಕ್ಸಿನ್ ಎರಡೂ ಲಸಿಕೆಗಳು ಕನ್ನಡಿಗರಿಗೆ ಸಿಗಲಿವೆ: ಡಾ.ಕೆ.ಸುಧಾಕರ್
Published On - 7:50 pm, Mon, 22 March 21