‘ಎಸ್​ಐಆರ್​​ನಿಂದ ನಿಮಗೇನೂ ತೊಂದರೆಯಾಗಿಲ್ಲ, ಅಮೆರಿಕಕ್ಕೆ ಹೋಗಿ ಪ್ರತಿಭಟಿಸಿ’; ನಟ ಇಮ್ರಾನ್​ ಖಾನ್​ಗೆ ಹೈಕೋರ್ಟ್‌ ತರಾಟೆ

ಭಾರತೀಯ ಮೂಲದ ವಿದೇಶಿ ಪ್ರಜೆ (OCI) ಕಾರ್ಡ್ ಹೊಂದಿರುವ ಬಾಲಿವುಡ್ ನಟ ಇಮ್ರಾನ್ ಖಾನ್ ಅವರನ್ನು ಬಾಂಬೆ ಹೈಕೋರ್ಟ್ ಇಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ. "ಒಸಿಐ ಕಾರ್ಡ್‌ದಾರರು ಈ ದೇಶದ ಕೃಪೆಯಲ್ಲಿದ್ದಾರೆ. ದೇಶದಲ್ಲಿದ್ದುಕೊಂಡು ಭಾರತದ ವಿರುದ್ಧ ಪ್ರತಿಭಟನೆ ನಡೆಸುವುದು ಮತ್ತು ವಿಮರ್ಶೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ" ಎಂದು ಕೋರ್ಟ್ ಹೇಳಿದೆ. ಆದರೂ ದೇಶ ತೊರೆಯುವ ಆದೇಶಕ್ಕೆ ತಾತ್ಕಾಲಿಕ ತಡೆ ನೀಡುವ ಮೂಲಕ ಹೈಕೋರ್ಟ್ ಇಮ್ರಾನ್ ಖಾನ್​ಗೆ ಕೊಂಚ ರಿಲೀಫ್ ನೀಡಿದೆ. ಇಮ್ರಾನ್ ಖಾನ್ ಅವರಿಗೆ ನೀಡಲಾಗಿದ್ದ 'ದೇಶ ತೊರೆಯುವ ನೋಟಿಸ್‌ಗೆ' ನೀಡಿರುವ ತಡೆಯಾಜ್ಞೆಯನ್ನು ಡಿಸೆಂಬರ್ 7ರವರೆಗೆ ವಿಸ್ತರಿಸಿದೆ.

ಎಸ್​ಐಆರ್​​ನಿಂದ ನಿಮಗೇನೂ ತೊಂದರೆಯಾಗಿಲ್ಲ, ಅಮೆರಿಕಕ್ಕೆ ಹೋಗಿ ಪ್ರತಿಭಟಿಸಿ; ನಟ ಇಮ್ರಾನ್​ ಖಾನ್​ಗೆ ಹೈಕೋರ್ಟ್‌ ತರಾಟೆ
ಇಮ್ರಾನ್​ ಖಾನ್
Image Credit source: PTI

Updated on: Nov 02, 2026 | 11:00 PM

ಮುಂಬೈ, ನವೆಂಬರ್ 2: ಮುಂಬೈನಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ಇಮ್ರಾನ್ ಖಾನ್ ಬಗ್ಗೆ ಬಾಂಬೆ ಹೈಕೋರ್ಟ್‌ ಇಂದು ತೀವ್ರ ಅಸಮಾಧಾನ ಹೊರಹಾಕಿದೆ. ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ.ಸಿ. ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇತ್ನಾ ಅವರಿದ್ದ ನ್ಯಾಯಪೀಠವು, “ಭಾರತೀಯ ಪ್ರಜೆಗಳು ಅನುಭವಿಸುವ ಸಂವಿಧಾನದ ವಿಧಿ 19 ರಡಿಯ ಹಕ್ಕುಗಳು (ವಾಕ್ ಮತ್ತು ಪ್ರತಿಭಟನಾ ಸ್ವಾತಂತ್ರ್ಯ) ಒಸಿಐ ಕಾರ್ಡ್‌ದಾರರಿಗೆ ಲಭ್ಯವಿರುವುದಿಲ್ಲ. ಒಬ್ಬ ಭಾರತೀಯ ಬೇರೆ ದೇಶಕ್ಕೆ ಹೋಗಿ ಹೀಗೆ ಪ್ರತಿಭಟನೆ ನಡೆಸಿದ್ದರೆ ಅದನ್ನು ಆ ದೇಶ ಸಹಿಸುತ್ತಿತ್ತೇ? ಅಮೆರಿಕದಲ್ಲಿದ್ದಿದ್ದರೆ ತಕ್ಷಣ ವಿಮಾನಕ್ಕೇರಿಸಿ ಭಾರತಕ್ಕೆ ಕಳುಹಿಸಿಬಿಡುತ್ತಿದ್ದರು. ನಿಮಗೆ ಬೇಕಿದ್ದರೆ ಅಮೆರಿಕಕ್ಕೆ ಹೋಗಿ ಪ್ರತಿಭಟನೆ ಮಾಡಿ. ನಿಮಗೆ ಎಸ್​ಐಆರ್​​ನಿಂದ ಯಾವುದೇ ಪರಿಣಾಮವೂ ಆಗುವುದಿಲ್ಲ ಎಂದಮೇಲೆ ನೀವು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಹಾಗಿಲ್ಲ” ಎಂದು ಹೇಳಿದೆ.

“ನೀವು ಬಾಲಿವುಡ್ ನಟ ಮತ್ತು ಸೆಲೆಬ್ರಿಟಿ. ನಿಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಮತ್ತು ನಡವಳಿಕೆಗಳು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತವೆ. ರಾಜಕೀಯ ಅಥವಾ ಚುನಾವಣಾ ಆಯೋಗದ ಎಸ್​ಐಆರ್​ ಪ್ರಕ್ರಿಯೆಯ ವಿಚಾರದಲ್ಲಿ ನಿಮಗೆ ಯಾವುದೇ ಸಂಬಂಧವಿಲ್ಲ” ಎಂದು ಹೈಕೋರ್ಟ್ ಎಚ್ಚರಿಸಿದೆ.

ಇದನ್ನೂ ಓದಿ: ದೇಶ ತೊರೆಯುವ ನೋಟಿಸ್ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಕ್ಷಮೆ ಯಾಚಿಸಿದ ಇಮ್ರಾನ್ ಖಾನ್:

ಬಾಂಬೆ ಹೈಕೋರ್ಟ್​ಗೆ ಬೇಷರತ್ ಕ್ಷಮಾಪಣೆ ಪತ್ರ ಸಲ್ಲಿಸಿರುವ ಇಮ್ರಾನ್ ಖಾನ್, “ನನಗೆ ಭಾರತ ದೇಶ ಮತ್ತು ಇಲ್ಲಿನ ಸಂವಿಧಾನದ ಮೇಲೆ ಅಪಾರವಾದ ಪ್ರೀತಿ ಹಾಗೂ ಗೌರವವಿದೆ” ಎಂದು ಹೇಳಿದ್ದಾರೆ. ಅಮೆರಿಕದ ಪೌರತ್ವ ಹೊಂದಿದ್ದು, ಭಾರತೀಯ ಮೂಲದ ವಿದೇಶಿ ಪ್ರಜೆ (OCI) ಕಾರ್ಡ್ ಪಡೆದಿರುವ 42 ವರ್ಷದ ನಟ ಇಮ್ರಾನ್ ಖಾನ್, ನೇರವಾಗಲಿ ಅಥವಾ ಪರೋಕ್ಷವಾಗಲಿ ಯಾವುದೇ ರೀತಿಯ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೈಕೋರ್ಟ್​ಗೆ ಲಿಖಿತ ಭರವಸೆ ನೀಡಿದ್ದಾರೆ.

ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇಮ್ರಾನ್ ಖಾನ್ ತಿಳಿಸಿರುವ ಪ್ರಮುಖ ಅಂಶಗಳು ಹೀಗಿವೆ.

“ಆಗಸ್ಟ್ ಕ್ರಾಂತಿ ಮೈದಾನದ ಬಳಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಏನು ಸಂಭವಿಸುತ್ತಿದೆ ಎಂಬುದನ್ನು ನೋಡಲು ಮಾತ್ರ ನಾನು ಅಲ್ಲಿಗೆ ಹೋಗಿದ್ದೆ. ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಯಾವುದೇ ಉದ್ದೇಶ ನನಗಿರಲಿಲ್ಲ. ನಾನು ಅಲ್ಲಿ ಯಾವುದೇ ಬೇಡಿಕೆಗಳನ್ನೂ ಇಟ್ಟಿಲ್ಲ ಅಥವಾ ಆ ಚಳವಳಿಯೊಂದಿಗೆ ನನ್ನನ್ನು ಗುರುತಿಸಿಕೊಳ್ಳಲು ಬಯಸಿರಲಿಲ್ಲ” ಎಂದು ಇಮ್ರಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.

“ಈ ಮಹಾನ್ ರಾಷ್ಟ್ರ ಮತ್ತು ಇದರ ಸಂವಿಧಾನದ ಮೇಲೆ ನನಗೆ ಪ್ರೀತಿ ಹಾಗೂ ಗೌರವವಿದೆ. ನನ್ನ 42 ವರ್ಷಗಳ ಜೀವಿತಾವಧಿಯಲ್ಲಿ 40 ವರ್ಷಗಳನ್ನು ನಾನು ಭಾರತದಲ್ಲೇ ಕಳೆದಿದ್ದೇನೆ. ಈ ದೇಶದ ಕಾನೂನು ಮತ್ತು ವ್ಯವಸ್ಥೆಯನ್ನು ನಾನು ಯಾವಾಗಲೂ ಗೌರವಿಸುತ್ತಾ ಬಂದಿದ್ದೇನೆ” ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ ತೊರೆಯುವಂತೆ ನೊಟೀಸ್​​: ನಟ ಇಮ್ರಾನ್ ಖಾನ್​ಗೆ ತಾತ್ಕಾಲಿಕ ನೆಮ್ಮದಿ

ಒಸಿಐ ಕಾರ್ಡ್‌ದಾರರು ರಾಜಕೀಯ ಪ್ರತಿಭಟನೆಗಳಲ್ಲಿ ಭಾಗವಹಿಸುವುದು ಕಾನೂನುಬಾಹಿರ ಎಂಬ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ (FRRO) ನಿಯಮದ ಅಡಿಯಲ್ಲಿ ಅವರಿಗೆ ದೇಶ ತೊರೆಯುವ ನೋಟಿಸ್ ನೀಡಲಾಗಿತ್ತು. ಆದರೆ, ಇಮ್ರಾನ್ ಖಾನ್​ನ ಕ್ಷಮಾಪಣೆಯನ್ನು ಪರಿಗಣಿಸಿರುವ ಹೈಕೋರ್ಟ್, ಅವರಿಗೆ ನೀಡಲಾಗಿರುವ ಮಧ್ಯಂತರ ತಡೆಯಾಜ್ಞೆ ಪರಿಹಾರವನ್ನು ಡಿಸೆಂಬರ್ 7ರವರೆಗೆ ವಿಸ್ತರಿಸಿದೆ.

ಭಾರತೀಯ ಪೌರತ್ವ ಪಡೆಯಲು ಸಲಹೆ: ‘

“ನಿಮಗೆ ಭಾರತ ದೇಶದ ವಿಚಾರಗಳಲ್ಲಿ ಇಷ್ಟೊಂದು ಆಸಕ್ತಿಯಿದ್ದರೆ ನೀವು ಭಾರತೀಯ ಪೌರತ್ವವನ್ನೇ ಏಕೆ ಪಡೆದುಕೊಳ್ಳಬಾರದು?” ಎಂದು ಕೋರ್ಟ್ ಪ್ರಶ್ನಿಸಿದೆ. ಭಾರತದ ಕಟ್ಟುನಿಟ್ಟಿನ ಕಾನೂನಿನ ಮಧ್ಯೆಯೂ, ಇಮ್ರಾನ್ ಖಾನ್ ಬಾಲ್ಯದಿಂದಲೂ ಭಾರತದಲ್ಲೇ ಬೆಳೆದಿದ್ದಾರೆ, ಭಾರತವು ‘ವಸುಧೈವ ಕುಟುಂಬಕಂ’ ತತ್ವದ ಮೇಲೆ ನಡೆಯುತ್ತದೆ. ಸರ್ಕಾರಕ್ಕೆ ಗಡಿಪಾರು ಮಾಡುವ ಸಾರ್ವಭೌಮ ಅಧಿಕಾರವಿದ್ದರೂ, ಇಮ್ರಾನ್ ಖಾನ್ ಬೇಷರತ್ ಕ್ಷಮೆ ಕೇಳಿರುವುದನ್ನು ಪರಿಗಣಿಸಿ ಅವರಿಗೆ ಒಂದು ಅವಕಾಶ ನೀಡಬಹುದು” ಎಂದು ತಿಳಿಸಿದ ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಮುಂದೂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us