
ಶಿಮ್ಲಾ, ಮೇ 31: ಹಿಮಾಚಲ ಪ್ರದೇಶದಲ್ಲಿ ಮೇ 17ರಂದು ನಡೆದಿದ್ದ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳ (Himachal Pradesh Local Bodies elections) ಫಲಿತಾಂಶ ಇವತ್ತು ಭಾನುವಾರ (ಮೇ 31) ಪ್ರಕಟವಾಗಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಜೈ ಎಂದಿದ್ದಾರೆ. ಪ್ರಮುಖ ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ವಿಜಯಪತಾಕೆ ಹಾರಿಸಿದೆ.
ರಾಜ್ಯದ ಅತ್ಯಂತ ಪ್ರಮುಖ ಮುನ್ಸಿಪಲ್ ಕಾರ್ಪೊರೇಷನ್‌ಗಳಾದ ಧರ್ಮಶಾಲಾ, ಸೋಲನ್ ಮತ್ತು ಮಂಡಿ ಪಾಲಿಕೆಗಳಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದು ಅಧಿಕಾರ ಹಿಡಿದಿದೆ. ಪಲಂಪುರ್ ಪಾಲಿಕೆಯನ್ನು ಮಾತ್ರ ಕಾಂಗ್ರೆಸ್ ಉಳಿಸಿಕೊಂಡಿದೆ. ಮಂಡಿ ಪಾಲಿಕೆಯ 15 ವಾರ್ಡ್ಗಳಲ್ಲಿ ಬಿಜೆಪಿ 12ರಲ್ಲಿ ಗೆದ್ದರೆ, ಕಾಂಗ್ರೆಸ್‌ಗೆ ದಕ್ಕಿದ್ದು ಒಂದು ಮಾತ್ರ. ಸೋಲನ್ನಲ್ಲಿ 17 ವಾರ್ಡ್ಗಳ ಪೈಕಿ ಬಿಜೆಪಿಗೆ 10, ಕಾಂಗ್ರೆಸ್‌ಗೆ 6 ಸಿಕ್ಕಿವೆ. ಧರ್ಮಶಾಲಾದ 17 ವಾರ್ಡ್ಗಳಲ್ಲಿ ಬಿಜೆಪಿಗೆ 11, ಕಾಂಗ್ರೆಸ್‌ಗೆ 5 ಸ್ಥಾನ ಸಿಕ್ಕಿದೆ. ಆದರೆ, ಪಲಂಪುರ್ನಲ್ಲಿ ಕಾಂಗ್ರೆಸ್‌ಗೆ 11, ಬಿಜೆಪಿಗೆ 4 ಸ್ಥಾನ ಸಿಕ್ಕಿವೆ.
ಇತರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ಕೇಕೆ ಹಾಕಿದೆ. 25 ನಗರಸಭೆ ಪೈಕಿ 18ರಲ್ಲಿ ಗದ್ದುಗೆ ಹಿಡಿದಿದೆ. 22 ನಗರ ಪಂಚಾಯಿತಿಗಳಲ್ಲಿ ಬಿಜೆಪಿ 12ರಲ್ಲಿ ಗೆದ್ದಿದೆ. ಕಾಂಗ್ರೆಸ್ ಆಡಳಿತ ಇರುವ ಹಿಮಾಚಲಪ್ರದೇಶ ಮುಂದಿನ ವರ್ಷ (2027) ವಿಧಾನಸಭಾ ಚುನಾವಣೆಗಳನ್ನು ಎದುರಿಸಲಿದೆ. ಅದಕ್ಕೆ ಮುನ್ನ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ವಿಧಾನಸಭಾ ಚುನಾವಣೆಯ ಮತದಾರನ ತೀರ್ಪಿಗೆ ದಿಕ್ಸೂಚಿಯಾಗಿರಬಹುದಾ?
ಇದನ್ನೂ ಓದಿ: ನೂತನ ಸಿಡಿಎಸ್ ಆಗಿ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅಧಿಕಾರ; ಸಶಸ್ತ್ರ ಪಡೆಗಳ ಬಲವರ್ಧನೆಗೆ ಆಲೋಚನೆ
ಈ ಅದ್ಭುತ ಗೆಲುವಿನ ಬೆನ್ನಲ್ಲೇ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಜೈರಾಮ್ ಠಾಕೂರ್ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. “ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಮತ್ತು ಆಡಳಿತ ವೈಫಲ್ಯಕ್ಕೆ ಈ ಫಲಿತಾಂಶವೇ ಕನ್ನಡಿಯಾಗಿದೆ. ಮತದಾರರು ಮುಖ್ಯಮಂತ್ರಿ ಸುಖು ಅವರ ನಾಯಕತ್ವವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ಗೆ ಆಂತರಿಕ ಪೆಟ್ಟು: ವಿಧಾನಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಹಿಡಿತ ಸಾಧಿಸಿದ್ದ ಕಾಂಗ್ರೆಸ್‌ಗೆ ಈ ನಗರ ಪ್ರದೇಶಗಳ ಫಲಿತಾಂಶ ಭಾರಿ ಆಘಾತ ನೀಡಿದೆ. ಮುಂಬರುವ ದಿನಗಳಲ್ಲಿ ಇದು ಪಕ್ಷದ ಒಳಗಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣದಲ್ಲಿ ಟ್ವಿಸ್ಟ್; ಬಂಧಿತ ಆರೋಪಿಗಳಿಗೆ ಮಾಜಿ ಶಾಸಕಿ ಲವ್ಲಿ ಮೈತ್ರಾರೊಂದಿಗೆ ನಿಕಟ ಸಂಪರ್ಕ
ಸ್ಥಳೀಯ ಮೂಲಸೌಕರ್ಯಗಳ ಅಭಿವೃದ್ಧಿ, ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ವಿಳಂಬ ನೀತಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಜನಕಲ್ಯಾಣ ಯೋಜನೆಗಳು ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎನ್ನಲಾಗಿದೆ. ಬಿಜೆಪಿಯ ಬಲಿಷ್ಠ ತಳಮಟ್ಟದ ಪ್ರಚಾರ ಮತ್ತು ಒಗ್ಗಟ್ಟಿನ ಹೋರಾಟವು ಪಕ್ಷಕ್ಕೆ ಈ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ.
ಈ ಜಯವು ಹಿಮಾಚಲ ಪ್ರದೇಶದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ತುಂಬಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಆಡಳಿತ ವೈಖರಿಯನ್ನು ಪುನರ್ ವಿಮರ್ಶಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ