ಅಸ್ಸಾಂ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಹಿಮಂತ ಬಿಸ್ವ ಶರ್ಮಾ ಆಯ್ಕೆ: ಮೇ 12ಕ್ಕೆ ಪ್ರಮಾಣ ವಚನ ಸ್ವೀಕಾರ
Himanta Biswa Sarma Set for Second CM Term: ಹಿಮಂತ ಬಿಸ್ವ ಶರ್ಮಾ ಅವರು ಎರಡನೇ ಬಾರಿಗೆ ಅಸ್ಸಾಂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಇಂದು ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಅಸ್ಸಾಂನಲ್ಲಿ ಬಿಜೆಪಿಯನ್ನು ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ತರುವಲ್ಲಿ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಮೇ 12ರಂದು ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಗುವಾಹಟಿ, ಮೇ 10: ಹಿಮಂತ ಬಿಸ್ವ ಶರ್ಮಾ (Himanta Biswa Sarma) ಅವರು ಎರಡನೇ ಬಾರಿಗೆ ಅಸ್ಸಾಂನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಇಂದು ನಡೆದ ಎನ್‌ಡಿಎ (NDA) ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಹಿಮಂತ ಬಿಸ್ವ ಶರ್ಮಾ ಅವರು ಮೇ 12 ರಂದು ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅಸ್ಸಾಮ್ ರಾಜಧಾನಿ ಗುವಾಹಟಿಯಲ್ಲಿ ಭಾನುವಾರ ನಡೆದ ಪ್ರಮುಖ ಸಭೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಎಜಿಪಿ (AGP) ಮತ್ತು ಯುಪಿಪಿಎಲ್ (UPPL) ಶಾಸಕರು ಶರ್ಮಾ ಅವರನ್ನು ತಮ್ಮ ನಾಯಕನೆಂದು ಘೋಷಿಸಿದರು. ಅಸ್ಸಾಂನಲ್ಲಿ ಬಿಜೆಪಿಯನ್ನು ಸತತವಾಗಿ ಎರಡನೇ ಬಾರಿಗೆ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶರ್ಮಾ ಅವರಿಗೆ ಹೈಕಮಾಂಡ್ ಮತ್ತೊಮ್ಮೆ ಮನ್ನಣೆ ನೀಡಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ 10 ಲಕ್ಷ ಕೋಟಿ ರೂ ಸಾಲದ ಫಜೀತಿ; ಇಲ್ಲಿದೆ ಅತಿಹೆಚ್ಚು ಸಾಲ ಇರುವ ರಾಜ್ಯಗಳ ಪಟ್ಟಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಿಜೆಪಿ ಶಾಸಕಾಂಗ ಪಕ್ಷ ಹಾಗೂ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಇದರಲ್ಲಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ಅವರ ಹೆಸರನ್ನು ಪ್ರಸ್ತಾಪಿಸಿ ಎಂಟು ನಿರ್ಣಯಗಳ ಸಲ್ಲಿಕೆಯಾಯಿತು. ರಂಜೀತ್ ಕುಮಾರ್ ದಾಸ್, ಬಿಸ್ವಜಿತ್ ದೈಮರಿ, ರಾಮೇಶ್ವರ್ ತೇಲಿ, ಅಶೋಕ್ ಸಿಂಘಾಲ್, ಪಿಜುಶ್ ಹಜಾರಿಕಾ ಮೊದಲಾದ ಹಿರಿಯ ನಾಯಕರು ಹಿಮಂತರ ಹೆಸರನ್ನು ಮುಂದಿಟ್ಟರು. ಸಭೆಯಲ್ಲಿದ್ದ ಬಹುತೇಕ ಎಲ್ಲಾ ಸದಸ್ಯರೂ ಈ ನಿರ್ಣಯಗಳನ್ನು ಬೆಂಬಲಿಸಿದರು. ಇದರೊಂದಿಗೆ ಹಿಮಂತ ಅವರು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದರು.
ಇತ್ತೀಚೆಗೆ ನಡೆದ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿತ್ತು. 126 ಕ್ಷೇತ್ರಗಳ ಪೈಕಿ ಎನ್‌ಡಿಎ 102 ಸ್ಥಾನ ಗಳಿಸಿತು. ಈ ಮೈತ್ರಿಕೂಟದಲ್ಲಿ ಬಿಜೆಪಿಯೊಂದೇ 82 ಸ್ಥಾನ ಪಡೆದಿದೆ. ಎಜಿಪಿ ಮತ್ತು ಬಿಒಪಿಎಫ್ ತಲಾ 20 ಸ್ಥಾನ ಗಳಿಸಿವೆ.
ಇದನ್ನೂ ಓದಿ: ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ?
ಮೇ 12, ಮಂಗಳವಾರ ನಡೆಯುವ ಈ ಕಾರ್ಯಕ್ರಮದೊಂದಿಗೆ ಅಸ್ಸಾಂನಲ್ಲಿ ಹೊಸ ಸರ್ಕಾರದ ಆಡಳಿತ ಅಧಿಕೃತವಾಗಿ ಆರಂಭವಾಗಲಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಹಿಮಂತ ಬಿಸ್ವ ಶರ್ಮಾ ಅವರ ಆಡಳಿತ ವೈಖರಿ ಮತ್ತು ಈಶಾನ್ಯ ಭಾರತದಲ್ಲಿ ಬಿಜೆಪಿಯನ್ನು ಬಲಪಡಿಸಿದ ಅವರ ಕಾರ್ಯತಂತ್ರವೇ ಈ ಪುನರಾಯ್ಕೆಗೆ ಪ್ರಮುಖ ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




