AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಏನು ಮಾಡಬೇಕು? ಎಫ್‌ಐಸಿಸಿಐ ನೀಡಿದ 10 ಸಲಹೆಗಳಿವು

ದೇಶಾದ್ಯಂತ, ಅದರಲ್ಲೂ ಮುಖ್ಯವಾಗಿ ಉತ್ತರ ಭಾರತ ಹಾಗೂ ದೆಹಲಿ-ಎನ್‌ಸಿಆರ್ ಭಾಗದಲ್ಲಿ ವಾಯು ಮಾಲಿನ್ಯ ತೀವ್ರ ಪರಿಸರ ಮತ್ತು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈ ಬಿಕ್ಕಟ್ಟನ್ನು ಎದುರಿಸಲು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (ಎಫ್‌ಐಸಿಸಿಐ) 'ಕ್ಲೀನ್ ಏರ್, ಹೆಲ್ತಿ ಏರ್' ಎಂಬ ಶೀರ್ಷಿಕೆಯ ಅಡಿಯಲ್ಲಿ ವಿಶೇಷ ವರದಿಯನ್ನು ಪ್ರಕಟಿಸಿದ್ದು, ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ 10 ಪ್ರಮುಖ ಪರಿಹಾರ ಕ್ರಮಗಳನ್ನು ಮಂಡಿಸಿದೆ. ಈ 10 ಪರಿಹಾರಗಳು ಸ್ಪಷ್ಟ ಹಂತಗಳಲ್ಲಿ ಹಾಗೂ ನಿಗದಿತ ಗುರಿಗಳೊಂದಿಗೆ ಜಾರಿಯಾದಾಗ ಮಾತ್ರ ದೀರ್ಘಕಾಲದ ಫಲಿತಾಂಶ ನೀಡಲು ಸಾಧ್ಯ ಎಂದು ತಿಳಿಸಲಾಗಿದೆ. ಆ ಸಲಹೆಗಳು ಯಾವುವು? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಏನು ಮಾಡಬೇಕು? ಎಫ್‌ಐಸಿಸಿಐ ನೀಡಿದ 10 ಸಲಹೆಗಳಿವು
Air Pollution
ಸುಷ್ಮಾ ಚಕ್ರೆ
|

Updated on: Nov 06, 2026 | 3:31 PM

Share

ನವದೆಹಲಿ, ನವೆಂಬರ್ 6: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ವಾಯು ಮಾಲಿನ್ಯದ ಪ್ರಮಾಣ ಹೆಚ್ಚುತ್ತಲೇ ಇದೆ. ಅದರಲ್ಲೂ ದೀಪಾವಳಿ ಸಮಯದಲ್ಲಿ ಹಾಗೂ ಚಳಿಗಾಲದ ಅಂತ್ಯದಲ್ಲಿ ವಾಯುಮಾಲಿನ್ಯದ ಅಧಿಕವಾಗಿರುತ್ತದೆ. ಭಾರತದಲ್ಲಿ ತೀವ್ರಗೊಳ್ಳುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಕೇವಲ ತಾತ್ಕಾಲಿಕ ಅಥವಾ ಋತುಮಾನದ ಕ್ರಮಗಳನ್ನು ಕೈಗೊಳ್ಳುವ ಬದಲು, ಆರೋಗ್ಯಕ್ಕೆ ಆದ್ಯತೆ ನೀಡುವ ಹಾಗೂ ನಿರಂತರ ವರ್ಷಪೂರ್ತಿ ಜಾರಿಯಲ್ಲಿರುವ ಸುಸ್ಥಿರ ತಂತ್ರಜ್ಞಾನ ಆಧಾರಿತ ಯೋಜನೆ ಜಾರಿಗೆ ಬರಬೇಕು ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (ಎಫ್‌ಐಸಿಸಿಐ) ತನ್ನ ವರದಿಯಲ್ಲಿ ಸಲಹೆ ನೀಡಿವೆ.

‘ಕ್ಲೀನ್ ಏರ್, ಹೆಲ್ತಿ ಇಂಡಿಯಾ’ ಹೆಸರಿನ ಈ ವರದಿಯಲ್ಲಿ ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮದ ಅಡಿಯಲ್ಲಿ PM2.5 ಕಣಗಳ ಪ್ರಮಾಣವನ್ನು ಕಡಿಮೆ ಮಾಡಲು ಸ್ಪಷ್ಟ ಗುರಿಗಳನ್ನು ನಿಗದಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಮಾಲಿನ್ಯ ನಿಯಂತ್ರಣಕ್ಕೆ ಎಫ್‌ಐಸಿಸಿಐ ನೀಡಿರುವ 10 ಪ್ರಮುಖ ಸಲಹೆಗಳು:

  1. ತೀವ್ರತರ ತನಿಖೆ ಮತ್ತು ಕಣಗಳ (PM2.5) ನಿಯಂತ್ರಣ:

ಕೇವಲ PM10 ಕಣಗಳ ಮೇಲೆ ಗಮನಹರಿಸದೆ, ಶ್ವಾಸಕೋಶ ಮತ್ತು ರಕ್ತನಾಳಗಳಿಗೆ ನೇರವಾಗಿ ಪ್ರವೇಶಿಸುವ ತೀವ್ರ ಅಪಾಯಕಾರಿ PM2.5 ಕಣಗಳನ್ನು ಕಡಿಮೆ ಮಾಡಲು ನಿರ್ದಿಷ್ಟ ಗುರಿ ಹೊಂದಿರಬೇಕು.

  1. ಅತಿ-ಸ್ಥಳೀಯ ಮಾಲಿನ್ಯ ಕೇಂದ್ರಗಳ ಗುರುತಿಸುವಿಕೆ:

ನಗರಗಳಲ್ಲಿ ವಾಹನ ದಟ್ಟಣೆ, ಕೈಗಾರಿಕೆಗಳು ಹಾಗೂ ತ್ಯಾಜ್ಯ ಸುಡುವ ಸ್ಥಳಗಳನ್ನು ತಕ್ಷಣವೇ ಗುರುತಿಸಲು ಹೈಪರ್‌ಲೋಕಲ್ ವಾಯು ಗುಣಮಟ್ಟ ಪರಿಶೀಲನಾ ನೆಟ್‌ವರ್ಕ್ ಸ್ಥಾಪಿಸಬೇಕು.

  1. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಧೂಳು ನಿಯಂತ್ರಣ:

ಕಟ್ಟಡ ನಿರ್ಮಾಣ, ಮಣ್ಣು ತೆಗೆಯುವುದು, ಟ್ರಕ್‌ಗಳ ಸಂಚಾರ ಹಾಗೂ ಕಟ್ಟಡ ತ್ಯಾಜ್ಯದಿಂದ ಭಾರಿ ಧೂಳು ಉತ್ಪತ್ತಿಯಾಗುತ್ತದೆ. ಕೇವಲ ನೀರು ಸಿಂಪಡಿಸುವುದು ಸಾಲದು. ನಿರ್ಮಾಣ ಸಾಮಗ್ರಿಗಳ ಸಂಗ್ರಹಣೆಯಿಂದ ಹಿಡಿದು ವಾಹನಗಳು ಹೊರಡುವ ಮುನ್ನ ಅವುಗಳನ್ನು ತೊಳೆಯುವವರೆಗೆ ಪ್ರತಿಯೊಂದು ಹಂತದಲ್ಲೂ ಧೂಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು.

  1. ಸ್ಮಾರ್ಟ್ ಸಂಚಾರ ನಿರ್ವಹಣೆ:

ವಾಹನಗಳು ಅನಗತ್ಯವಾಗಿ ಎಂಜಿನ್ ಚಾಲನೆಯಲ್ಲಿಟ್ಟುಕೊಂಡು ಸಿಗ್ನಲ್‌ಗಳಲ್ಲಿ ಕಾಯುವುದನ್ನು ತಪ್ಪಿಸಲು ಮತ್ತು ಇಂಧನ ಉರಿಯುವಿಕೆಯಿಂದ ಬಿಡುಗಡೆಯಾಗುವ ಹೊಗೆ ಕಡಿಮೆ ಮಾಡಲು ‘ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್‌ಗಳ’ ಬಳಕೆ ಮಾಡಬೇಕು. ಕ್ಯಾಮೆರಾ ಮತ್ತು ಸೆನ್ಸಾರ್‌ ಆಧಾರಿತ ಸ್ಮಾರ್ಟ್ ಸಂಚಾರ ವ್ಯವಸ್ಥೆಯು ದಟ್ಟಣೆಗೆ ತಕ್ಕಂತೆ ಸಿಗ್ನಲ್ ಸಮಯವನ್ನು ತಾನಾಗಿಯೇ ಬದಲಾಯಿಸುತ್ತದೆ. ಆದರೆ, ಇದು ಸಾರ್ವಜನಿಕ ಸಾರಿಗೆ ಮತ್ತು ವಿದ್ಯುತ್ ವಾಹನಗಳ (EVs) ಬಳಕೆಗೆ ಪೂರಕವೇ ಹೊರತು ಪರ್ಯಾಯವಲ್ಲ.

ಇದನ್ನೂ ಓದಿ: ಕರ್ನಾಟಕ ವಾಯು ಗುಣಮಟ್ಟ ವರದಿ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಹೇಗಿದೆ?

  1. ನೈಜ-ಸಮಯದ ಕೈಗಾರಿಕಾ ಮಾಲಿನ್ಯ ಮಾಪನ:

ಕೈಗಾರಿಕೆಗಳ ಹೊಗೆಕೊಳವೆಗಳಿಂದ ಹೊರಬರುವ ಮಾಲಿನ್ಯವನ್ನು ಡಿಜಿಟಲ್ ಹಾಗೂ ನೈಜ-ಸಮಯದಲ್ಲಿ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು.

  1. ಜನರೇಟರ್‌ಗಳಿಗೆ ಪರ್ಯಾಯ ಹೈಬ್ರಿಡ್ ಬ್ಯಾಟರಿ:

ಡೀಸೆಲ್ ಚಾಲಿತ ಪವರ್ ಬ್ಯಾಕಪ್ ಜನರೇಟರ್‌ಗಳ ಬದಲಿಗೆ ತಕ್ಷಣವೇ ಬ್ಯಾಟರಿ-ಹೈಬ್ರಿಡ್ ವ್ಯವಸ್ಥೆಯನ್ನ ಬಳಕೆಗೆ ತರಬೇಕು.

  1. ಇಟ್ಟಿಗೆ ಭಟ್ಟಿಗಳ ತಂತ್ರಜ್ಞಾನ ಬದಲಾವಣೆ:

ಸಾಂಪ್ರದಾಯಿಕ ಇಟ್ಟಿಗೆ ಭಟ್ಟಿಗಳನ್ನು ಹೊಗೆಯನ್ನು ಗಣನೀಯವಾಗಿ ತಡೆಯುವ ‘ಜಿಗ್‌ಜಾಗ್’ ತಂತ್ರಜ್ಞಾನಕ್ಕೆ ಪರಿವರ್ತಿಸಬೇಕು.

  1. ಕೃಷಿ ತ್ಯಾಜ್ಯ ಪರ್ಯಾಯ ಬಳಕೆ:

ಮರು ಬಿತ್ತನೆಗೆ ಕಡಿಮೆ ಸಮಯವಿರುವುದರಿಂದ ರೈತರು ಕೃಷಿ ತ್ಯಾಜ್ಯ ಹಾಗೂ ಹುಲ್ಲನ್ನು ಸುಡುತ್ತಾರೆ. ಇದಕ್ಕೆ ಪರಿಹಾರವಾಗಿ ತ್ಯಾಜ್ಯ ಸಂಗ್ರಹಿಸುವ ಯಂತ್ರಗಳನ್ನು ಒದಗಿಸಿ, ಹತ್ತಿರದ ಸಂಗ್ರಹಣಾ ಕೇಂದ್ರಗಳಲ್ಲಿ ರೈತರಿಗೆ ಹಣ ನೀಡಿ ಖರೀದಿಸಬೇಕು. ನಂತರ ಅದನ್ನು ಕಂಪ್ರೆಸ್ಡ್ ಬಯೋಗ್ಯಾಸ್ (CBG) ಘಟಕಗಳಿಗೆ ಅಥವಾ ಕೃಷಿ ಇಂಧನ ತಯಾರಕರಿಗೆ ಪೂರೈಸಬೇಕು.

ಇದನ್ನೂ ಓದಿ: ಕರ್ನಾಟಕ ವಾಯು ಗುಣಮಟ್ಟ ವರದಿ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಹೇಗಿದೆ?

  1. ತ್ಯಾಜ್ಯ ಮರುಬಳಕೆ:

ಪ್ಲಾಸ್ಟಿಕ್ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಮತ್ತು ನಿರ್ಮಾಣ ತ್ಯಾಜ್ಯಗಳನ್ನು ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಹಾಗೂ ಮೂಲಸೌಕರ್ಯ ಯೋಜನೆಗಳಲ್ಲಿ ಮರುಬಳಕೆ ಮಾಡಬೇಕು. ಪ್ಲಾಸ್ಟಿಕ್ ತ್ಯಾಜ್ಯ, ಫ್ಲೈ ಆಷ್ ಮತ್ತು ನಿರ್ಮಾಣ ತ್ಯಾಜ್ಯಗಳನ್ನು ಕಟ್ಟಡದ ಬ್ಲಾಕ್‌ಗಳು ಹಾಗೂ ಪ್ಯಾನಲ್‌ಗಳಾಗಿ ಪರಿವರ್ತಿಸಬಹುದು. ಇದರಿಂದ ತ್ಯಾಜ್ಯ ಸುಡುವುದು ತಪ್ಪುತ್ತದೆ ಜೊತೆಗೆ ಸಾಂಪ್ರದಾಯಿಕ ಕಟ್ಟಡ ಸಾಮಗ್ರಿಗಳ ತಯಾರಿಕೆಯಿಂದಾಗುವ ಮಾಲಿನ್ಯ ಕಡಿಮೆಯಾಗುತ್ತದೆ. ಆದರೆ, ಇಂತಹ ಉತ್ಪನ್ನಗಳನ್ನು ಕಟ್ಟುನಿಟ್ಟಾದ ಗುಣಮಟ್ಟ ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯ.

  1. ಆರೋಗ್ಯ ಸಿದ್ಧತೆ ಮತ್ತು ಅನುದಾನ ಸಂಯೋಜನೆ:

ಚಳಿಗಾಲದ ಮಾಲಿನ್ಯಕ್ಕೂ ಮುನ್ನವೇ ಆಸ್ಪತ್ರೆಗಳಲ್ಲಿ ಉಸಿರಾಟದ ಕಾಯಿಲೆಗಳ ವರದಿ ವ್ಯವಸ್ಥೆಯನ್ನು ಬಲಪಡಿಸುವುದು, ಶಾಲೆಗಳಲ್ಲಿ ಸುರಕ್ಷತಾ ಯೋಜನೆ ಜಾರಿಗೆ ತರುವುದು ಮತ್ತು ಸ್ವಚ್ಛ-ಗಾಳಿ ಯೋಜನೆಗಳಿಗೆ ಖಾಸಗಿ ಹೂಡಿಕೆ ಆಕರ್ಷಿಸಲು ಯೋಜನೆಗಳನ್ನು ಕ್ರೋಢೀಕರಿಸಬೇಕು.

ಎಫ್‌ಐಸಿಸಿಐ ಆರೋಗ್ಯ ಸೇವೆಗಳ ಸಮಿತಿ ನೀಡಿದ ವರದಿ ಪ್ರಕಾರ, ವಾಯು ಮಾಲಿನ್ಯವನ್ನು ಬರಿ ‘ಪರಿಸರ ಸಮಸ್ಯೆಯಾಗಿ’ ನೋಡದೆ ‘ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಪರಿಗಣಿಸಬೇಕು. ಮಾಲಿನ್ಯದ ಕಾರಣದಿಂದಾಗಿ ಭಾರತದ ಜಿಡಿಪಿಗೆ ಶೇ. 9ರಿಂದ 9.5ರಷ್ಟು ಆರ್ಥಿಕ ನಷ್ಟವಾಗುತ್ತಿದ್ದು, ಪ್ರತಿವರ್ಷ ಕೋಟ್ಯಂತರ ಹಣ ಆರೋಗ್ಯ ಸೇವೆಯ ವೆಚ್ಚಕ್ಕಾಗಿ ಅಪವ್ಯಯವಾಗುತ್ತಿದೆ ಎಂದು ಈ ವರದಿ ಬಹಿರಂಗಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More