‘ತಾಕತ್ತಿದ್ದರೆ ನನ್ನ ಎದೆ ಮೇಲೆ ಬುಲ್ಡೋಜರ್ ಚಲಾಯಿಸಿ’; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು
ಶುಕ್ರವಾರ ರಾತ್ರಿ ಕಾಳೀಘಾಟ್‌ನಲ್ಲಿ ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (MITMC) ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಭೀಕರ ಘರ್ಷಣೆ ಹಾಗೂ ಅಭಿಷೇಕ್ ಬ್ಯಾನರ್ಜಿಯ ಕಚೇರಿಯ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೊಲೀಸರು ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಭಿಷೇಕ್ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, "ತಾಕತ್ತಿದ್ದರೆ ನನ್ನ ಎದೆಯ ಮೇಲೆಯೇ ಬುಲ್ಡೋಜರ್ ಚಲಾಯಿಸಿ ನೋಡಿ" ಎಂದು ಪೊಲೀಸರು ಹಾಗೂ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಕೊಲ್ಕತ್ತಾ, ನವೆಂಬರ್ 7: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ನಡೆದ ದಾಳಿ ಮತ್ತು ಕಲ್ಲು ತೂರಾಟ ಪ್ರಕರಣದ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಧೈರ್ಯವಿದ್ದರೆ ನನ್ನ ಮೇಲೆಯೇ ಬುಲ್ಡೋಜರ್ ಚಲಾಯಿಸಿ ನೋಡಿ” ಎಂದು ಬಿಜೆಪಿಗೆ ಬಹಿರಂಗ ಸವಾಲು ಹಾಕಿರುವ ಮಮತಾ ಬ್ಯಾನರ್ಜಿ, ತಮ್ಮ ಪಕ್ಷ ಮತ್ತು ನಾಯಕರನ್ನು ಕೇಂದ್ರ ಸಂಸ್ಥೆಗಳು ಹಾಗೂ ಗೂಂಡಾಗಿರಿಯ ಮೂಲಕ ಹೆದರಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಶುಕ್ರವಾರ ರಾತ್ರಿ ದಾಳಿ ನಡೆದ ನಂತರ ಅಭಿಷೇಕ್ ಬ್ಯಾನರ್ಜಿ ತಮ್ಮ ನಿವಾಸದ ಹೊರಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಇಂದು ಬೆಳಿಗ್ಗೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ, “ನಿಮ್ಮ ಬಳಿ ಎಷ್ಟು ಬುಲ್ಡೋಜರ್‌ಗಳಿವೆ? ಬನ್ನಿ, ನಮ್ಮ ದೇಹಗಳ ಮೇಲೆ, ನಮ್ಮ ಎದೆಯ ಮೇಲೆಯೇ ಅವುಗಳನ್ನು ಚಲಾಯಿಸಿ. ನಿಮಗೇನಾದರೂ ನಿಜವಾದ ಧೈರ್ಯವಿದ್ದರೆ ಮೊದಲು ನನ್ನ ಎದೆಯ ಮೇಲೆಯೇ ಬುಲ್ಡೋಜರ್ ಚಲಾಯಿಸಿ” ಎಂದು ಸವಾಲೆಸೆದರು.
ಇದನ್ನೂ ಓದಿ: ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಕಾಳೀಘಾಟ್ ಪೊಲೀಸ್ ಅಧಿಕಾರಿಯ ವಿರುದ್ಧ ಆಕ್ರೋಶ:
ಕಾಳೀಘಾಟ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯ (OC) ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಮಮತಾ ಬ್ಯಾನರ್ಜಿ, “ಅಭಿಷೇಕ್ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಲು ಯತ್ನಿಸಿದಾಗ ಆ ಅಧಿಕಾರಿ ಅತ್ಯಂತ ಅಸಭ್ಯವಾಗಿ ವರ್ತಿಸಿದ್ದಾರೆ. ಪೊಲೀಸರು ತಾವೇ ದೇವರಂತೆ ಆಡುತ್ತಿದ್ದಾರೆ. ನನಗೆ ಯಾರೊಂದಿಗೂ ವೈಯಕ್ತಿಕ ದ್ವೇಷವಿಲ್ಲ, ಆದರೆ ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಅವರು ಗೆರೆ ದಾಟಿದರೆ ನಾನು ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
#WATCH | Kolkata: Former West Bengal CM Mamata Banerjee says, “This is completely illegal. Look at the club in our area; they wouldn’t let us carry on with our activities all night long. Look at the ‘puja’ that has been set up right on the main road; it was granted illegal permission. A ‘puja’ was never held there before; it used to take place inside. Yesterday evening, around 9:00 PM, they placed it right at the road bend, effectively blocking access to our own ‘puja’. What is this? This is pure high-handedness and oppression. You want to bring in bulldozers? Go ahead—run your bulldozers over us, over our very bodies.”
— ANI (@ANI) November 7, 2026
ಕಲ್ಲು ತೂರಾಟ ಮತ್ತು ಲಾಠಿಚಾರ್ಜ್:
ಶುಕ್ರವಾರ ರಾತ್ರಿ ಅಭಿಷೇಕ್ ಬ್ಯಾನರ್ಜಿ ಬೆಂಬಲಿಗರು ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಕಲ್ಲು ತೂರಾಟ ನಡೆಯಿತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಾಠಿಚಾರ್ಜ್ ನಡೆಸಬೇಕಾಯಿತು. ಈ ಘಟನೆಯ ನಂತರ ಕೊಲ್ಕತ್ತಾ ಪೊಲೀಸರು ಅಭಿಷೇಕ್ ನಿವಾಸದ ಹೊರಗಿನ ರಸ್ತೆಯಲ್ಲಿ 2 ತಿಂಗಳ ಕಾಲ ನಿಷೇಧಾಜ್ಞೆ ಹೇರಿದ್ದಾರೆ.
ಇದನ್ನೂ ಓದಿ: ‘ಟಿಎಂಸಿ ಚಿಹ್ನೆ ವಿವಾದವನ್ನು 3 ತಿಂಗಳೊಳಗೆ ಬಗೆಹರಿಸಿ’; ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಮೊಳೆ ಜೋಡಿಸಿದ ಲಾಠಿಗಳಿಂದ ದಾಳಿ ಆರೋಪ:
ಬಿಜೆಪಿ ಕಾರ್ಯಕರ್ತರು ಮೊಳೆಗಳನ್ನು ಜೋಡಿಸಿದ್ದ ಕೋಲುಗಳನ್ನು ಬಳಸಿ ಹಲ್ಲೆ ನಡೆಸಿ, ತಮ್ಮ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ. ದಾಳಿಯ ಸಾಧ್ಯತೆಯ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಟ್ಯಾಗ್ ಮಾಡಿ 2 ದಿನಗಳ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಆತಂಕ ವ್ಯಕ್ತಪಡಿಸಿದ್ದಾಗಿಯೂ ಅವರು ತಿಳಿಸಿದ್ದಾರೆ. ರಾತ್ರಿಯಿಡೀ ಧರಣಿ ನಡೆಸಿದ ಅಭಿಷೇಕ್, ಇಂದು ಬೆಳಿಗ್ಗೆ ಪೊಲೀಸರ ಮಧ್ಯಸ್ಥಿಕೆಯ ನಂತರ ಮನೆಯೊಳಗೆ ಪ್ರವೇಶಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Sat, 7 November 26




