AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಸ್‌ಪೋರ್ಟ್ ಕೇವಲ ಪ್ರಯಾಣ ದಾಖಲೆ, ಪೌರತ್ವದ ಪುರಾವೆಯಲ್ಲ:ವಿದೇಶಾಂಗ ಸಚಿವಾಲಯ

ವಿದೇಶಾಂಗ ಸಚಿವಾಲಯವು (MEA) ಪಾಸ್‌ಪೋರ್ಟ್ ಕೇವಲ ಅಂತರರಾಷ್ಟ್ರೀಯ ಪ್ರಯಾಣದ ದಾಖಲೆಯಾಗಿದೆ ಹೊರತು ಪೌರತ್ವದ ಪುರಾವೆಯಲ್ಲ ಎಂದು ಸ್ಪಷ್ಟಪಡಿಸಿದೆ. ತಂತ್ರಜ್ಞಾನದ ಬಳಕೆಯಿಂದ ಈಗ ಪಾಸ್‌ಪೋರ್ಟ್ ವಿತರಣೆಯನ್ನು 5 ಕೆಲಸದ ದಿನಗಳಿಗೆ ಇಳಿಸಲಾಗಿದೆ. ಇ-ಪಾಸ್‌ಪೋರ್ಟ್‌ಗಳು ನಕಲಿಗೆ ಬ್ರೇಕ್ ಹಾಕಲಿವೆ. 2027ರ ವೇಳೆಗೆ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಕೇಂದ್ರ ತೆರೆಯುವ ಗುರಿ ಹೊಂದಲಾಗಿದ್ದು, ಭಾರತೀಯರಿಗೆ ಸುಲಭ ವಿದೇಶಿ ಪ್ರಯಾಣ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ.

ಪಾಸ್‌ಪೋರ್ಟ್ ಕೇವಲ ಪ್ರಯಾಣ ದಾಖಲೆ, ಪೌರತ್ವದ ಪುರಾವೆಯಲ್ಲ:ವಿದೇಶಾಂಗ ಸಚಿವಾಲಯ
ಪಾಸ್​ಪೋರ್ಟ್​
ನಯನಾ ರಾಜೀವ್
|

Updated on: Jun 25, 2026 | 9:17 AM

Share

ಮುಖ್ಯಾಂಶಗಳು

  • ಪಾಸ್‌ಪೋರ್ಟ್ ಕೇವಲ ಪ್ರಯಾಣ ದಾಖಲೆಯಾಗಿದ್ದು, ಪೌರತ್ವದ ನಿರ್ಣಾಯಕ ಪುರಾವೆಯಾಗಿ ಪರಿಗಣಿಸಬಾರದು.
  • ತಂತ್ರಜ್ಞಾನದ ಸುಧಾರಣೆಯಿಂದಾಗಿ ಪಾಸ್‌ಪೋರ್ಟ್ ವಿತರಣೆಯ ಸಮಯವನ್ನು 5 ದಿನಗಳಿಗೆ ಇಳಿಸಲಾಗಿದೆ.
  • ಪ್ರಸ್ತುತ ಭಾರತದ ಒಟ್ಟು ಜನಸಂಖ್ಯೆಯ ಕೇವಲ ಶೇಕಡಾ ಹತ್ತರಷ್ಟು ಜನರ ಬಳಿ ಪಾಸ್‌ಪೋರ್ಟ್ ಇದೆ.

ನವದೆಹಲಿ, ಜೂನ್ 25: ಸರ್ಕಾರಿ ಸೌಲಭ್ಯಗಳು ಮತ್ತು ಪೌರತ್ವಕ್ಕೆ ಅರ್ಹತೆಯ ಪುರಾವೆಯಾಗಿ ಪಾಸ್‌ಪೋರ್ಟ್‌(Passport)ಗಳ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಗೊಂದಲಕ್ಕೆ ವಿದೇಶಾಂಗ ಸಚಿವಾಲಯ (MEA) ತೆರೆ ಎಳೆದಿದೆ. ಭಾರತೀಯ ಪಾಸ್‌ಪೋರ್ಟ್ ಕಟ್ಟುನಿಟ್ಟಾಗಿ ಒಂದು ಅಂತರರಾಷ್ಟ್ರೀಯ ಪ್ರಯಾಣ ದಾಖಲೆಯಾಗಿದೆಯೇ ಹೊರತು, ಅದನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಪರಿಗಣಿಸಬಾರದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ದೇಶದ ಪಾಸ್‌ಪೋರ್ಟ್ ಸೇವೆಗಳು ಹಾಗೂ ಜಾಗತಿಕ ಚಲನಶೀಲತೆಯ ಸುಧಾರಣೆಗಳ ಕುರಿತು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳು ಈ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ.

ಕೇವಲ 5 ದಿನಗಳಲ್ಲಿ ಕೈಗೆ ಪಾಸ್‌ಪೋರ್ಟ್

ತಂತ್ರಜ್ಞಾನದ ಬಳಕೆಯಿಂದಾಗಿ ಈಗ ಪಾಸ್‌ಪೋರ್ಟ್ ವಿತರಣೆಯ ಸಮಯವನ್ನು ಕೇವಲ 5 ಕೆಲಸದ ದಿನಗಳಿಗೆ ಇಳಿಸಲಾಗಿದೆ. ಇನ್ನು ಅರ್ಜಿದಾರರು ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ (PSK) ಕಳೆಯುವ ಸಮಯ 45 ನಿಮಿಷಗಳಿಗಿಂತ ಕಡಿಮೆಯಾಗಿದೆ.

ಕಳೆದ ವರ್ಷ ಮೇ ತಿಂಗಳಿನಿಂದ ದೇಶದಲ್ಲಿ ಹೊಸದಾಗಿ ವಿತರಿಸಲಾಗುತ್ತಿರುವ ಎಲ್ಲಾ ಪಾಸ್‌ಪೋರ್ಟ್‌ಗಳಲ್ಲಿ ಬಯೋಮೆಟ್ರಿಕ್ ಮಾಹಿತಿ ಒಳಗೊಂಡ ಸುರಕ್ಷಿತ ಎಲೆಕ್ಟ್ರಾನಿಕ್ ಚಿಪ್‌ಗಳನ್ನು (e-Passports) ಅಳವಡಿಸಲಾಗುತ್ತಿದೆ. ಇದು ನಕಲಿ ಪಾಸ್‌ಪೋರ್ಟ್ ದಂಧೆಗೆ ಬ್ರೇಕ್ ಹಾಕಲಿದ್ದು, ವಿದೇಶಿ ಗಡಿಗಳಲ್ಲಿ ಸುಲಭ ತಪಾಸಣೆಗೆ ನೆರವಾಗಲಿದೆ.

ಮತ್ತಷ್ಟು ಓದಿ: Legal Advice: ಪ್ರೇಮ ವಿವಾಹ ಅಥವಾ ಕೋರ್ಟ್‌ ಮ್ಯಾರೇಜ್‌ ಆಗಲು ಈ ದಾಖಲೆಗಳು ಬೇಕೇ ಬೇಕು

ಆರು ಪಟ್ಟು ವಿಸ್ತರಣೆ: ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಕೇಂದ್ರ

ಒಂದು ದಶಕದ ಹಿಂದೆ ತೀರಾ ಸೀಮಿತವಾಗಿದ್ದ ಪಾಸ್‌ಪೋರ್ಟ್ ವಿತರಣಾ ಜಾಲ ಈಗ ದೇಶಾದ್ಯಂತ ಭಾರಿ ಬೆಳವಣಿಗೆ ಕಂಡಿದೆ. ಸದ್ಯ ಭಾರತದಲ್ಲಿ 545 ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

2027 ರ ವೇಳೆಗೆ ದೇಶದ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಕನಿಷ್ಠ ಒಂದು ಪಾಸ್‌ಪೋರ್ಟ್ ಕೇಂದ್ರ ಇರುವಂತೆ ನೋಡಿಕೊಳ್ಳಲು ಸರ್ಕಾರ ನಿರ್ಧರಿಸಿದ್ದು, ಈ ವರ್ಷ ಹೊಸದಾಗಿ 20 ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ದೂರದ ಹಳ್ಳಿಗಳು ಮತ್ತು ಪ್ರವೇಶಿಸಲು ಕಷ್ಟವಿರುವ ಪ್ರದೇಶಗಳಿಗಾಗಿ ವಿಶೇಷ ಮೊಬೈಲ್ ಪಾಸ್‌ಪೋರ್ಟ್ ತಂಡಗಳನ್ನು ಕಳುಹಿಸಲಾಗುತ್ತಿದೆ.

ಕೇವಲ ಶೇ. 10 ರಷ್ಟು ಭಾರತೀಯರ ಬಳಿ ಮಾತ್ರ ಪಾಸ್‌ಪೋರ್ಟ್

ದೇಶದಲ್ಲಿ ಇಷ್ಟೆಲ್ಲಾ ಸೌಲಭ್ಯಗಳು ಸಿಗುತ್ತಿದ್ದರೂ, ಪ್ರಸ್ತುತ ಭಾರತದ ಒಟ್ಟು ಜನಸಂಖ್ಯೆಯ ಕೇವಲ ಶೇಕಡಾ 10 ರಷ್ಟು ಜನರ ಬಳಿ ಮಾತ್ರ ಪಾಸ್‌ಪೋರ್ಟ್ ಇದೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಪಾಸ್‌ಪೋರ್ಟ್ ವ್ಯಾಪ್ತಿಯನ್ನು ಎಲ್ಲರಿಗೂ ತಲುಪಿಸುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದೆ ಎಂದು ಸಚಿವಾಲಯ ಹೇಳಿದೆ.

ಭಾರತೀಯರಿಗೆ ಸುಲಭ ವಿದೇಶಿ ಪ್ರಯಾಣ ಮತ್ತು ವೀಸಾ ಸೌಲಭ್ಯಗಳು

ಪ್ರಸ್ತುತ ವಿಶ್ವದ 27 ದೇಶಗಳು ಭಾರತೀಯರಿಗೆ ವೀಸಾ-ಮುಕ್ತ (Visa-Free) ಪ್ರವೇಶ ನೀಡುತ್ತಿವೆ. ಇದರೊಂದಿಗೆ 47 ದೇಶಗಳು ‘ಆಗಮನದ ನಂತರ ವೀಸಾ’ (Visa on Arrival) ಮತ್ತು 66 ದೇಶಗಳು ಇ-ವೀಸಾ (e-Visa) ಸೌಲಭ್ಯವನ್ನು ವಿಸ್ತರಿಸಿವೆ. ಭಾರತವು ಈಗಾಗಲೇ ಯುಕೆ, ಆಸ್ಟ್ರೇಲಿಯಾ, ಯುರೋಪಿಯನ್ ಒಕ್ಕೂಟ ಸೇರಿದಂತೆ 25 ಪ್ರಮುಖ ರಾಷ್ಟ್ರಗಳೊಂದಿಗೆ 27 ಸುಗಮ ಸಂಚಾರ ಒಪ್ಪಂದಗಳಿಗೆ ಸಹಿ ಹಾಕಿದೆ.

ಅಲ್ಲದೆ, ವಿದೇಶಕ್ಕೆ ಉದ್ಯೋಗಕ್ಕೆ ಹೋಗುವ ಕಾರ್ಮಿಕರ ವಲಸೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ‘ಇ-ಮೈಗ್ರೇಟ್ 2.0’ ಪೋರ್ಟಲ್ ತರಲಾಗಿದ್ದು, ಇದರ ಮೂಲಕ 7 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಪ್ರಯೋಜನ ಪಡೆದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us