
ಹೈದರಾಬಾದ್, ಆಗಸ್ಟ್ 24: ತಮ್ಮ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಬಲವಾಗಿ ಖಂಡಿಸಿದ್ದಾರೆ. ಈ ನಿರ್ಧಾರವು ಕೇವಲ ತಮಗೆ ನೀಡಿದ ನಿರಾಕರಣೆಯಲ್ಲ, ಬದಲಿಗೆ ಇಡೀ ತೆಲಂಗಾಣ ಜನತೆಗೆ ಎಸಗಿದ ಅವಮಾನವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಈ ತಿರಸ್ಕರಿಸುವಿಕೆಯ ಹಿಂದೆ ಗುಜರಾತ್‌ನ ಪ್ರಾಬಲ್ಯವಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. “ಇದು ತೆಲಂಗಾಣದ ಸ್ವಾಭಿಮಾನಕ್ಕೆ ಉಂಟಾದ ಧಕ್ಕೆ ಮತ್ತು ರಾಜ್ಯದ ಅಭಿವೃದ್ಧಿಗೆ ಮಾಡಿದ ಅಡ್ಡಿಯಾಗಿದೆ. ಕೇಂದ್ರ ಸರ್ಕಾರವು ತೆಲಂಗಾಣದ ಬಗ್ಗೆ ತಾರತಮ್ಯ ಮಾಡುತ್ತಿದ್ದು, ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಎಂ ರೇವಂತ್ ರೆಡ್ಡಿ ತಮ್ಮ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, “ತೆಲಂಗಾಣದ ಅಭಿವೃದ್ಧಿಗೆ ಸಹಕರಿಸಲು ಕೇಂದ್ರ ಸರ್ಕಾರಕ್ಕೆ ಮನಸ್ಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ತಾವೇ ಗುಜರಾತ್‌ನ ರಾಯಭಾರಿ ಎಂದು ಭಾವಿಸಿಕೊಂಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಎಲ್ಲ ರೀತಿಯ ಬೆಂಬಲ ನೀಡುವ ಎನ್ಡಿಎ ಸರ್ಕಾರ ಬೇರೆ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ತಳೆದಿದೆ. ಈ ರೀತಿಯಾಗಿ ಸರ್ವಾಧಿಕಾರಿ ರೀತಿಯಲ್ಲಿ ಸರ್ಕಾರವನ್ನು ನಡೆಸಲು ಸಾಧ್ಯವಿಲ್ಲ. ಇದನ್ನು ನಾವು ವಿರೋಧಿಸುತ್ತೇವೆ” ಎಂದು ವಾಗ್ದಾಳಿ ನಡೆಸಿದ್ದಾರೆ.
#WATCH | Hyderabad: On his US tour cancellation, Telangana CM Revanth Reddy says, “Telangana government has decided to take up Telangana Rising 2047 on December 7, 8 and 9th. We wanted to organize an investment summit in Telangana state. For that, we decided to travel to the UK… pic.twitter.com/pei7Eo8hGq
— ANI (@ANI) August 24, 2026
ಗುಜರಾತ್ಗೆ ಸಿಕ್ಕ ಅವಕಾಶ ನಮಗೆ ಯಾಕಿಲ್ಲ?:
ಗುಜರಾತ್ ಮುಖ್ಯಮಂತ್ರಿಗೆ ಅಮೆರಿಕಕ್ಕೆ ಭೇಟಿ ನೀಡಲು ಅನುಮತಿ ನೀಡಿದ ಕೇಂದ್ರ ಸರ್ಕಾರ, ತಮಗೆ ಮಾತ್ರ ಅನುಮತಿಯನ್ನು ನಿರಾಕರಿಸಿದೆ ಎಂದು ರೇವಂತ್ ರೆಡ್ಡಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಸಿಎಂ ರೇವಂತ್ ರೆಡ್ಡಿಯ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಣೆ ಕುರಿತು ಕೇಂದ್ರ ಸರ್ಕಾರದಿಂದ ಸ್ಪಷ್ಟನೆ
ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಯುಕೆ (UK) ಮತ್ತು ಅಮೆರಿಕ (US) ದೇಶಗಳಿಗೆ 10 ದಿನಗಳ ಪ್ರವಾಸಕ್ಕಾಗಿ ತೆರಳಿದ್ದರು. ಯುಕೆ ಪ್ರವಾಸವನ್ನು ಪೂರ್ಣಗೊಳಿಸಿ ಅವರು ಆಗಸ್ಟ್ 23ರಂದು ಹೈದರಾಬಾದ್‌ಗೆ ಮರಳುವ ನಿರೀಕ್ಷೆಯಿತ್ತು. ಯುಕೆ ಪ್ರವಾಸಕ್ಕೆ ರಾಜಕೀಯ ಅನುಮತಿ ದೊರೆತಿತ್ತು. ಆದರೆ ಅವರಿಗೆ ಅಮೆರಿಕ ಭೇಟಿಗೆ ಅನುಮತಿ ನಿರಾಕರಿಸಲಾಗಿತ್ತು.
CM Revanth Reddy Meets Public Representatives at Secretariat
సచివాలయం:
అందుబాటులో ఉన్న ప్రజా ప్రతినిధులతో ముగిసిన ముఖ్యమంత్రి రేవంత్ రెడ్డి సమావేశంహాజరైన ఉప ముఖ్యమంత్రి భట్టి విక్రమార్క, మంత్రులు ఉత్తమ్ కుమార్ రెడ్డి, తుమ్మల నాగేశ్వర్ రావు, పొంగులేటి శ్రీనివాస్ రెడ్డి, సీతక్క,… pic.twitter.com/gjyTfW4HED
— Congress for Telangana (@Congress4TS) August 24, 2026
ತಮ್ಮ ಪ್ರವಾಸದ ವೇಳೆ ಹಾರ್ವರ್ಡ್ ವಿಶ್ವವಿದ್ಯಾಲಯ, ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT), ಈಸ್ಟರ್ನ್ ವಿಶ್ವವಿದ್ಯಾಲಯ ಮತ್ತು ವರ್ಜೀನಿಯಾ ಟೆಕ್ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಲು ರೇವಂತ್ ರೆಡ್ಡಿ ಯೋಜಿಸಿದ್ದರು.
ರೇವಂತ್ ರೆಡ್ಡಿಗೆ ಅನುಮತಿ ನಿರಾಕರಿಸಿದ್ದು ಏಕೆ?:
ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಪ್ರಕಾರ, ರೇವಂತ್ ರೆಡ್ಡಿ ಅವರ ಪ್ರಸ್ತಾವಿತ ಅಮೆರಿಕ ಭೇಟಿಯು ರಾಜಕೀಯ ಅನುಮತಿ ನೀಡಲು ನಿಗದಿಪಡಿಸಲಾದ ಮಾನದಂಡಗಳನ್ನು ಪೂರೈಸಿಲ್ಲ. ಈ ಬಗ್ಗೆ ಮಾಹಿತಿ ನೀಡಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಮುಖ್ಯಮಂತ್ರಿಗಳು ಸೇರಿದಂತೆ ಇತರ ಪ್ರಮುಖ ಗಣ್ಯರ ಭೇಟಿಗೆ ರಾಜಕೀಯ ಅನುಮತಿ ನೀಡುವ ಮುನ್ನ ವಿದೇಶಾಂಗ ಸಚಿವಾಲಯವು ಅದನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರಸ್ತಾವಿತ ಕಾರ್ಯಕ್ರಮವು ಅವರು ಹೊಂದಿರುವ ಹುದ್ದೆಗೆ ಸೂಕ್ತವಾಗಿರಬೇಕು ಮತ್ತು ಪ್ರವಾಸದ ಉದ್ದೇಶಕ್ಕೆ ತಕ್ಕಂತಿರಬೇಕು. ಆದರೆ, ಈ ನಿರ್ದಿಷ್ಟ ಪ್ರಕರಣದಲ್ಲಿ ಅಮೆರಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಅದು ಸರಿಯಾಗಿರಲಿಲ್ಲ, ಆದ್ದರಿಂದ ಅನುಮತಿಯನ್ನು ನಿರಾಕರಿಸಲಾಗಿದೆ” ಎಂದು ಹೇಳಿದ್ದರು.
ಇದನ್ನೂ ಓದಿ: ದಕ್ಷಿಣ ಭಾರತವನ್ನು ಕೇಂದ್ರ ಸರ್ಕಾರ ಕೀಳಾಗಿ ಕಾಣುತ್ತಿದೆ; ಟಿವಿ9 ಶೃಂಗಸಭೆಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪ
ರಾಜಕೀಯ ಸಂಚು ಎಂದ ರೇವಂತ್ ರೆಡ್ಡಿ:
ತಮ್ಮ ಯುಕೆ ಪ್ರವಾಸದ ಸಮಯದಲ್ಲಿ ಮಾತನಾಡುವಾಗಲೂ ರೇವಂತ್ ರೆಡ್ಡಿ ಕೇಂದ್ರ ಸರ್ಕಾರದ ವಿರುದ್ಧ ‘ಸಂಚಿನ’ ಆರೋಪ ಮಾಡಿದ್ದರು. ಯುವಜನರ ಅಭಿವೃದ್ಧಿಯಂತಹ ವಿಷಯಗಳು ರಾಜಕೀಯಕ್ಕಿಂತ ಮಿಗಿಲಾಗಿರಬೇಕು ಎಂದು ಅವರು ಹೇಳಿದ್ದರು. ದೇಶದ ಹೊಸ ಶಿಕ್ಷಣ ನೀತಿಯ ಭಾಗವಾಗಿ ವಿಶ್ವದ ಅತ್ಯುತ್ತಮ ವಿದ್ಯಾಸಂಸ್ಥೆಗಳನ್ನು ತೆಲಂಗಾಣಕ್ಕೆ ತರುವುದಷ್ಟೇ ತಮ್ಮ ಭೇಟಿಯ ಏಕೈಕ ಉದ್ದೇಶವಾಗಿತ್ತು ಎಂದು ಅವರು ಹೇಳಿದ್ದರು.
ಸಿಎಂಗಳಿಗೆ ಅನುಮತಿ ನಿರಾಕರಿಸಿದ್ದು ಮೊದಲೇನಲ್ಲ:
ಮುಖ್ಯಮಂತ್ರಿಗಳಿಗೆ ಕೇಂದ್ರ ಸರ್ಕಾರ ರಾಜಕೀಯ ಅನುಮತಿ ನಿರಾಕರಿಸಿದ್ದು ಇದೇ ಮೊದಲಲ್ಲ. 2019ರಲ್ಲಿ ಆಗಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಡೆನ್ಮಾರ್ಕ್‌ಗೆ ಪ್ರಯಾಣಿಸಲು ವಿದೇಶಾಂಗ ಸಚಿವಾಲಯ ಅನುಮತಿ ನಿರಾಕರಿಸಿತ್ತು. ಅಲ್ಲದೆ, ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರಳಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೂ ಸಚಿವಾಲಯ ಅನುಮತಿ ನೀಡಿರಲಿಲ್ಲ. 2018ರಲ್ಲಿ ಪ್ರವಾಹದ ನಂತರ ಪರಿಹಾರ ನಿಧಿ ಸಂಗ್ರಹಿಸಲು ವಿದೇಶಕ್ಕೆ ತೆರಳಲು ಬಯಸಿದ್ದ ರಾಜ್ಯ ಸಚಿವರಿಗೆ ಅನುಮತಿ ನಿರಾಕರಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಆಗಿನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ