ಸಮ್ಮೇದ್ ಶಿಖರ್​​ನ್ನು ಪ್ರವಾಸಿ ಸ್ಥಳವೆಂದು ಘೋಷಿಸಿದ ಜಾರ್ಖಂಡ್ ಸರ್ಕಾರ; ನಿರ್ಧಾರ ಖಂಡಿಸಿ ಇಂಡಿಯಾ ಗೇಟ್ ಮುಂದೆ ಜೈನರ ಪ್ರತಿಭಟನೆ

ಜಾರ್ಖಂಡ್‌ನ ಪರಸ್ನಾಥ್ ಬೆಟ್ಟಗಳಲ್ಲಿರುವ ಸಮ್ಮೇದ್ ಶಿಖರ್ಜಿ ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಪವಿತ್ರ ಸ್ಥಳವನ್ನು ಪ್ರವಾಸಿ ಸ್ಥಳವನ್ನಾಗಿ ಮಾಡುವ ನಿರ್ಧಾರ ಖಂಡಿಸಿ ಜನವರಿ 1 ರಂದು ಪ್ರವಾಸಿಗರನ್ನು ಸೆಳೆಯುವ ದೆಹಲಿಯ ಇಂಡಿಯಾ ಗೇಟ್  ಮುಂದೆ ಜೈನ ಸಮುದಾಯದ ಬೃಹತ್ ಪ್ರತಿಭಟನೆ ನಡೆಸಿದೆ

ಸಮ್ಮೇದ್ ಶಿಖರ್​​ನ್ನು ಪ್ರವಾಸಿ ಸ್ಥಳವೆಂದು ಘೋಷಿಸಿದ ಜಾರ್ಖಂಡ್ ಸರ್ಕಾರ; ನಿರ್ಧಾರ ಖಂಡಿಸಿ ಇಂಡಿಯಾ ಗೇಟ್ ಮುಂದೆ ಜೈನರ ಪ್ರತಿಭಟನೆ
ಇಂಡಿಯಾ ಗೇಟ್ ಮುಂದೆ ಜೈನರ ಪ್ರತಿಭಟನೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 01, 2023 | 7:32 PM

ಹೇಮಂತ್ ಸೋರೆನ್ (Hemant Soren) ನೇತೃತ್ವದ ಜಾರ್ಖಂಡ್ ಸರ್ಕಾರದ ಸಮ್ಮೇದ್ ಶಿಖರ್​​ನ್ನು (Sammed Shikharji) ಪ್ರವಾಸಿ ಸ್ಥಳವೆಂದು ಘೋಷಿಸಿದ ನಿರ್ಧಾರವನ್ನು ವಿರೋಧಿಸಿ ಜೈನ ಸಮುದಾಯದವರು (Jain community)ಭಾನುವಾರ ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸಿದರು. ಜಾರ್ಖಂಡ್‌ನ ಪರಸ್ನಾಥ್ ಬೆಟ್ಟಗಳಲ್ಲಿರುವ ಸಮ್ಮೇದ್ ಶಿಖರ್ಜಿ ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಪವಿತ್ರ ಸ್ಥಳವನ್ನು ಪ್ರವಾಸಿ ಸ್ಥಳವನ್ನಾಗಿ ಮಾಡುವ ನಿರ್ಧಾರ ಖಂಡಿಸಿ ಜನವರಿ 1 ರಂದು ಪ್ರವಾಸಿಗರನ್ನು ಸೆಳೆಯುವ ದೆಹಲಿಯ ಇಂಡಿಯಾ ಗೇಟ್  ಮುಂದೆ ಜೈನ ಸಮುದಾಯದ ಬೃಹತ್ ಪ್ರತಿಭಟನೆ ನಡೆಸಿದೆ. ಜಾರ್ಖಂಡ್ ಸರ್ಕಾರವು ಸಮ್ಮೇದ್ ಶಿಖರ್​​ನ್ನು ಪ್ರವಾಸಿ ತಾಣವಾಗಿ ಅಧಿಸೂಚನೆ ಮಾಡಿದ ನಂತರ ವಾರಗಳಿಂದ ಸಮ್ಮೇದ್ ಶಿಖರ್ಜಿ ಕುರಿತ ಚರ್ಚೆ ಕಾವೇರಿದೆ. ಮಧ್ಯಪ್ರದೇಶದ ಜೈನ ಸಮಾಜವು ಈ ನಿರ್ಧಾರವನ್ನು ವಿರೋಧಿಸಿ ಹಿಂದೆ ಬೀದಿಗಿಳಿದಿತ್ತು. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಪ್ರಧಾನಿ ಮೋದಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಪತ್ರ ಬರೆದು ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

24 ತೀರ್ಥಂಕರರಲ್ಲಿ 20 ಮಂದಿ (ಜೈನ ಆಧ್ಯಾತ್ಮಿಕ ನಾಯಕರು) ಸಮ್ಮೇದ್ ಶಿಖರ್ಜಿಯಲ್ಲಿ ಮೋಕ್ಷವನ್ನು ಪಡೆದರು ಎಂದು ನಂಬಲಾಗಿದೆ.  ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ವಿಶ್ವ ಹಿಂದೂ ಪರಿಷತ್ ಹೇಳಿಕೆ ನೀಡಿದ್ದು ಭಾರತದ ಎಲ್ಲಾ ಯಾತ್ರಾ ಸ್ಥಳಗಳ ಪಾವಿತ್ರ್ಯತೆಯನ್ನು ರಕ್ಷಿಸಲು ವಿಹಿಂಪ ತೀರ್ಮಾನಿಸಿದೆ ಎಂದು ಹೇಳಿದೆ. ಈ ಪ್ರದೇಶವನ್ನು ಪವಿತ್ರ ಪ್ರದೇಶವೆಂದು ಘೋಷಿಸಬೇಕು. ಮಾಂಸ ಮತ್ತು ಮಾದಕ ದ್ರವ್ಯಗಳನ್ನು ಒಳಗೊಂಡ ಯಾವುದೇ ಪ್ರವಾಸಿ ಚಟುವಟಿಕೆ ಇರಬಾರದು ಎಂದು ವಿಹಿಂಪ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸಿದ್ಧ ಕ್ಷೇತ್ರ ಪಾರ್ಶ್ವನಾಥ ಪರ್ವತದ ಅಭಿವೃದ್ಧಿ ಹಾಗೂ ಅಲ್ಲಿನ ಎಲ್ಲಾ ಯಾತ್ರಾಸ್ಥಳಗಳು ಅನುಯಾಯಿಗಳ ನಂಬಿಕೆಗೆ ಅನುಗುಣವಾಗಿ ಆಗುವಂತೆ ಜಾರ್ಖಂಡ್‌ನಲ್ಲಿ ತೀರ್ಥಯಾತ್ರೆ ಸಚಿವಾಲಯವನ್ನು ಶೀಘ್ರದಲ್ಲೇ ಸ್ಥಾಪಿಸಬೇಕು. ಸಂಬಂಧಿತ ಅಧಿಸೂಚನೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು. ಆದ್ದರಿಂದ ಸಿದ್ಧ ಪಾರ್ಶ್ವನಾಥ ಪರ್ವತ ಮತ್ತು ತೀರ್ಥರಾಜ್ ಸಮ್ಮೇದ್ ಶಿಖರವನ್ನು ಪ್ರವಾಸಿ ಪ್ರದೇಶಗಳಾಗಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ವಿಎಚ್‌ಪಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಮಹಾರಾಷ್ಟ್ರದ ನಾಸಿಕ್​​ನಲ್ಲಿರುವ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ಭಾರೀ ಬೆಂಕಿಗೆ ಮಹಿಳೆ ಸಾವು, 17 ಮಂದಿಗೆ ಗಾಯ

ಡಿಸೆಂಬರ್ 16, 2022 ರಂದು, ಗುಜರಾತ್‌ನ ಜೈನ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ. ಭಾನುವಾರದ ರಾಷ್ಟ್ರವ್ಯಾಪಿ ಪ್ರತಿಭಟನೆಯು ಆ ವಿಧ್ವಂಸಕತೆಯ ವಿರುದ್ಧವೂ ಆಗಿತ್ತು. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಮತ್ತು ಜಾರ್ಖಂಡ್ ಸರ್ಕಾರವು ನಿರ್ಧಾರವನ್ನು ರದ್ದುಗೊಳಿಸಬೇಕು ಎಂದು ಹೇಳಿದರು.

ಮುಂಬೈನಲ್ಲಿಯೂ ಜೈನ ಸಮುದಾಯದ ಪ್ರತಿಭಟನೆ, ಏನಿದು ಪಾಲಿತಾನಾ ದೇಗುಲ ವಿವಾದ?

ಮುಂಬೈನಲ್ಲಿ ಜೈನ ಸಮುದಾಯದ ಕನಿಷ್ಠ 50,000 ಜನರು ಗುಜರಾತ್‌ನ ಪಾಲಿತಾನಾದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಮದ್ಯದ ಮಾರಾಟವನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.ಏಕೆಂದರೆ ಸಮುದಾಯವು ನಗರವನ್ನು ಪವಿತ್ರ ಸ್ಥಳವೆಂದು ಪರಿಗಣಿಸುತ್ತದೆ. ಈ ಬಗ್ಗೆ ಸಮುದಾಯವು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದು ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಬಾರದು ಎಂದು ನ್ಯಾಯಾಲಯಗಳು ಹೇಳಿವೆ.

“ನಾವು ಪಲಿತಾನಾ ಮತ್ತು ಜಾರ್ಖಂಡ್ ಸರ್ಕಾರದ ನಿರ್ಧಾರದ ದೇವಸ್ಥಾನವನ್ನು ಧ್ವಂಸಗೊಳಿಸುವುದರ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ಗುಜರಾತ್ ಸರ್ಕಾರವು ಕ್ರಮ ಕೈಗೊಂಡಿದೆ ಆದರೆ ನಾವು ಅವರ ವಿರುದ್ಧ ಕಠಿಣ ಕ್ರಮವನ್ನು ಬಯಸುತ್ತೇವೆ (ದೇವಾಲಯವನ್ನು ಧ್ವಂಸ ಮಾಡಿದವರು). ಇಂದು 5 ಲಕ್ಷಕ್ಕೂ ಹೆಚ್ಚು ಜನರು ಬೀದಿಗಿಳಿದಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ ಎಂ.ಪಿ.ಲೋಧಾ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಜೈನ ಯಾತ್ರಾ ಕೇಂದ್ರವಾದ ಸಮ್ಮೇದ್ ಶಿಖರ್ಜಿಯನ್ನು ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಜಾರ್ಖಂಡ್ ಸರ್ಕಾರದ ನಿರ್ಧಾರದ ವಿರುದ್ಧ ಈ ತಿಂಗಳ ಆರಂಭದಲ್ಲಿ ಜೈನ ಸಮುದಾಯದ ಸಾವಿರಾರು ಭಕ್ತರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಇದೇ ರೀತಿಯ ಪ್ರತಿಭಟನೆಯನ್ನು ನಡೆಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ