ಡಿವೋರ್ಸ್ ಬೆನ್ನಲ್ಲೇ ಖ್ಯಾತ ಪತ್ರಕರ್ತೆ ಜೊತೆ ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ವಿವಾಹ
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಖ್ಯಾತ ಹಿರಿಯ ಪತ್ರಕರ್ತೆ ನಿಧಿ ರಾಜ್ದಾನ್ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇಂದು ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇಬ್ಬರೂ ತಮ್ಮ ಜೀವನದ ಹೊಸ ಅಧ್ಯಾಯವನ್ನು ಅಧಿಕೃತವಾಗಿ ಜಗತ್ತಿಗೆ ತಿಳಿಸಿದ್ದಾರೆ. ಒಮರ್ ಅಬ್ದುಲ್ಲಾ ಅವರು ತಮ್ಮ ಮೊದಲ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಂದ 2009ರಿಂದಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯ ಮೂಲಕ ಈ ವರ್ಷ ಜುಲೈನಲ್ಲಿ ವಿವಾಹ ವಿಚ್ಛೇದನ ಪಡೆದ ನಂತರ, ಈಗ ನಿಧಿ ರಾಜ್ದಾನ್ ಅವರೊಂದಿಗೆ ಎರಡನೇ ವಿವಾಹವಾಗಿದ್ದಾರೆ.

ಶ್ರೀನಗರ, ಅಕ್ಟೋಬರ್ 31: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಹಿರಿಯ ನಾಯಕ ಒಮರ್ ಅಬ್ದುಲ್ಲಾ ಹಾಗೂ ದೇಶದ ಪ್ರಸಿದ್ಧ ಹಿರಿಯ ಪತ್ರಕರ್ತೆ ನಿಧಿ ರಾಜ್ದಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇಬ್ಬರೂ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಒಮರ್ ಅಬ್ದುಲ್ಲಾ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದು “ನಿನ್ನೆ ನಮ್ಮ ಜೀವನದ ಹೊಸ ಪಯಣ ಆರಂಭವಾಯಿತು” ಎಂದು ಬರೆದುಕೊಂಡಿದ್ದಾರೆ. ನಿಧಿ ರಾಜ್ದಾನ್ ಅವರು ಒಮರ್ ಅವರನ್ನು ಟ್ಯಾಗ್ ಮಾಡಿ “ಇಟ್ಸ್ ಡನ್ ಬ್ರೋ!” ಎಂದು ಪೋಸ್ಟ್ ಮಾಡಿದ್ದಾರೆ.
ಒಮರ್ ಅಬ್ದುಲ್ಲಾಗೆ 2ನೇ ಮದುವೆ:
1994ರ ಸೆಪ್ಟೆಂಬರ್‌ನಲ್ಲಿ ಪಾಯಲ್ ಅಬ್ದುಲ್ಲಾ ಅವರನ್ನು ಮದುವೆಯಾಗಿದ್ದ ಒಮರ್ ಅಬ್ದುಲ್ಲಾ, 2009ರಿಂದ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇವರಿಗೆ ಜಹೀರ್ ಮತ್ತು ಜಮೀರ್ ಎಂಬ ಇಬ್ಬರು ಪುತ್ರರಿದ್ದಾರೆ. ಸುದೀರ್ಘ ಕಾನೂನು ಹೋರಾಟದ ನಂತರ, ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯ ಮೂಲಕ ಇಬ್ಬರ ನಡುವೆ ಸಮ್ಮತಿ ಏರ್ಪಟ್ಟು, 2026ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ಉಮರ್ ಮತ್ತು ಪಾಯಲ್ ಅವರ ವಿವಾಹ ವಿಚ್ಛೇದನವನ್ನು ಅನುಮೋದಿಸಿತ್ತು. ಅದಾದ ಮೂರೇ ತಿಂಗಳಲ್ಲಿ ಒಮರ್ ಅಬ್ದುಲ್ಲಾ ಮತ್ತೊಂದು ಮದುವೆಯಾಗಿದ್ದಾರೆ.
A new journey began yesterday 💍@Nidhi https://t.co/BXbdLq2d1H
— Omar Abdullah (@OmarAbdullah) October 31, 2026
ನಿಧಿ ರಾಜ್ದಾನ್ ಯಾರು?:
ನಿಧಿ ರಾಜ್ದಾನ್ ಅವರು ಎನ್‌ಡಿಟಿವಿ ವಾಹಿನಿಯಲ್ಲಿ ಸುದೀರ್ಘ 21 ವರ್ಷಗಳ ಕಾಲ ಹಿರಿಯ ನಿರೂಪಕಿಯಾಗಿ ಹಾಗೂ ರಾಜಕೀಯ-ವಿಶ್ಲೇಷಕಿಯಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. 2017ರಲ್ಲಿ ‘Left, Right and Centre: The Idea of India’ ಎಂಬ ಪುಸ್ತಕವನ್ನು ಕೂಡ ಬರೆದಿದ್ದಾರೆ. ನಿಧಿ ರಾಜ್ದಾನ್ ಈ ಹಿಂದೆ 2005ರಲ್ಲಿ ಪತ್ರಕರ್ತ ಮತ್ತು ಲೇಖಕ ನೀಲೇಶ್ ಮಿಶ್ರಾ ಅವರನ್ನು ಮದುವೆಯಾಗಿದ್ದು, 2007ರಲ್ಲಿ ವಿಚ್ಛೇದನ ಪಡೆದಿದ್ದರು. ಹೀಗಾಗಿ, ಅವರಿಗೂ ಇದು 2ನೇ ಮದುವೆಯಾಗಿದೆ.
It’s done bro 💍 @OmarAbdullah https://t.co/I3V5HnCz7C
— Nidhi Razdan (@Nidhi) October 31, 2026
ಅತ್ಯಂತ ನಿಕಟ ಸಂಬಂಧಿಕರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಮದುವೆ ನೆರವೇರಿದ್ದು, ಕಾರ್ಯಕ್ರಮದ ಹೆಚ್ಚಿನ ವಿವರಗಳನ್ನು ದಂಪತಿ ರಹಸ್ಯವಾಗಿಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




