Air Ambulance Crash: ಒಂದು ಜೀವ ಉಳಿಸಲು ಏರ್ ಆಂಬ್ಯುಲೆನ್ಸ್ಗೆ 7 ಲಕ್ಷ ರೂ. ಕೊಟ್ಟಿದ್ರು, ಆದ್ರೆ 7 ಪ್ರಾಣ ಹೋಯ್ತು
ರಾಂಚಿ ಏರ್ ಆಂಬ್ಯುಲೆನ್ಸ್ ಅಪಘಾತವು ಒಂದು ಜೀವ ಉಳಿಸಲು ಮಾಡಿದ ಲಕ್ಷಾಂತರ ರೂಪಾಯಿಗಳ ಪ್ರಯತ್ನದ ದುರಂತ ಅಂತ್ಯವನ್ನು ಹೇಳುತ್ತದೆ. 7 ಲಕ್ಷ ರೂ. ನೀಡಿ, ಗಂಭೀರವಾಗಿ ಗಾಯಗೊಂಡ ರೋಗಿ ಸಂಜಯ್ ಶಾರನ್ನು ದೆಹಲಿಗೆ ಕರೆದೊಯ್ಯುವಾಗ ವಿಮಾನ ಅಪಘಾತಕ್ಕೀಡಾಗಿ, ರೋಗಿ ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಹವಾಮಾನ ವೈಪರೀತ್ಯದಿಂದಾದ ಈ ಘಟನೆ ಸ್ಥಳೀಯ ವೈದ್ಯಕೀಯ ಸೌಲಭ್ಯಗಳ ಕೊರತೆಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರಾಂಚಿ, ಫೆಬ್ರವರಿ 24: ಜಾರ್ಖಂಡ್‌ನ ರಾಂಚಿಯಲ್ಲಿ ಏರ್ ಆಂಬ್ಯುಲೆನ್ಸ್(Air Ambulance) ಅಪಘಾತಕ್ಕೀಡಾಗಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಜೀವವನ್ನು ಉಳಿಸಲು ಕುಟುಂಬ ಈ ಆಂಬ್ಯುಲೆನ್ಸ್ಗೆ 7 ಲಕ್ಷ ರೂ. ಪಾವತಿ ಮಾಡಿತ್ತು. ಆದರೆ ಅಪಘಾತದಲ್ಲಿ ಏಳು ಜನರ ಪ್ರಾಣ ಹೋಗಿದೆ. ಅಷ್ಟೇ ಅಲ್ಲದೆ ದೆಹಲಿಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಲು ಲಕ್ಷಗಟ್ಟಲೆ ಸಾಲವನ್ನೂ ಕೂಡ ಮಾಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಬೀಚ್‌ಕ್ರಾಫ್ಟ್ ಸಿ90 ಏರ್ ಆಂಬ್ಯುಲೆನ್ಸ್ ರಾಂಚಿಯಿಂದ ಸಂಜೆ 7.11 ಕ್ಕೆ ಹೊರಟಿತ್ತು. ಸುಮಾರು 20 ನಿಮಿಷಗಳ ನಂತರ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕ ಕಳೆದುಕೊಂಡಿತ್ತು.ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ಚತ್ರಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿತ್ತು. ಹೋಟೆಲ್ ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಂಜಯ್ ಶಾ ಎಂಬುವವರು ದೇಹದ ಶೇ.65ರಷ್ಟು ಭಾಗ ಸುಟ್ಟು ಹೋಗಿತ್ತು.
ಮತ್ತಷ್ಟು ಓದಿ: ಜಾರ್ಖಂಡ್ನಲ್ಲಿ ಏರ್ ಆಂಬ್ಯುಲೆನ್ಸ್ ಅಪಘಾತ, ರೋಗಿ ಸೇರಿ 7 ಮಂದಿ ಪ್ರಯಾಣಿಕರ ದುರ್ಮರಣ
ದೆಹಲಿಗೆ ಹೊರಟವರಲ್ಲಿ ಸಂಜಯ್ ಕುಮಾರ್, ಪತ್ನಿಅರ್ಚನಾ ದೇವಿ, ಸಂಬಂಧಿ ಧ್ರುವ್ ಕುಮಾರ್, ವೈದ್ಯ ವಿಕಾಸ್ ಕುಮಾರ್ ಗುಪ್ತಾ, ನರ್ಸ್ ಸಚಿನ್ ಕುಮಾರ್ ಮಿಶ್ರಾ ಮತ್ತು ಪೈಲಟ್‌ಗಳಾದ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್ ಮತ್ತು ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್ ಸೇರಿದ್ದಾರೆ. ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯ ಚಂದ್ವಾದಲ್ಲಿ ಸಂಜಯ್ ಹೋಟೆಲ್ ನಡೆಸುತ್ತಿದ್ದರು.
ಕಳೆದ ಸೋಮವಾರ, ಅವರ ಹೋಟೆಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಸಂಜಯ್ ಬೆಂಕಿಯಲ್ಲಿ ಸಿಲುಕಿಕೊಂಡಿದ್ದರು.ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಸ್ಥಿತಿ ಸುಧಾರಿಸದಿದ್ದಾಗ, ವೈದ್ಯರು ಅವರನ್ನು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು.
ಸಂಜಯ್ ಅವರ ಈ ಸ್ಥಿತಿಯಿಂದಾಗಿ ರಸ್ತೆ ಮೂಲಕ ಪ್ರಯಾಣಿಸಲು ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ ಅವರ ಕುಟುಂಬವು ಸಂಬಂಧಿಕರನ್ನು ಸಂಪರ್ಕಿಸಿ ಏರ್ ಆಂಬ್ಯುಲೆನ್ಸ್‌ಗಾಗಿ 7.5 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದುಕೊಂಡಿತು. ದೆಹಲಿಯಲ್ಲಿ ಅವರ ಚಿಕಿತ್ಸೆಗಾಗಿ ಸ್ವಲ್ಪ ಹಣವನ್ನು ಸಹ ಪಕ್ಕಕ್ಕೆ ಇಡಲಾಗಿತ್ತು. ಸಂಜಯ್ ಅವರ ಅಣ್ಣ ವಿಜಯ್ ಶಾ, ರಾಂಚಿ ವಿಮಾನ ನಿಲ್ದಾಣದಲ್ಲಿ ಅವರನ್ನು ಬೀಳ್ಕೊಡಲು ಹೋಗಿದ್ದರು.
ದಂಪತಿ ಇಬ್ಬರೂ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಅನಾಥವಾಗಿದ್ದಾರೆ. ರಾಂಚಿಯಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳಿದ್ದರೆ, ಸಂಜಯ್ ಅವರನ್ನು ಎಂದಿಗೂ ವಿಮಾನದಲ್ಲಿ ಕರೆದೊಯ್ಯುವ ಅಗತ್ಯವಿರಲಿಲ್ಲ ಎಂದು ಅವರು ದೂರಿದ್ದಾರೆ.
ಡಾ. ವಿಕಾಸ್ ಕುಮಾರ್ ಗುಪ್ತಾ ಅವರ ತಂದೆ ಬಜರಂಗಿ ಪ್ರಸಾದ್ ಅವರು ತಮ್ಮ ಮಗನನ್ನು ವೈದ್ಯನನ್ನಾಗಿ ಮಾಡಲು ತಮ್ಮ ಎಲ್ಲಾ ಭೂಮಿಯನ್ನು ಮಾರಿ ಡಾ. ಗುಪ್ತಾ ಅವರನ್ನು ರಾಂಚಿಯ ಸದರ್ ಆಸ್ಪತ್ರೆಯಲ್ಲಿ ನೇಮಿಸಲಾಗಿತ್ತು ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Tue, 24 February 26
