ಜಾರ್ಖಂಡ್ನಲ್ಲಿ ಭೀಕರ ರಸ್ತೆ ಅಪಘಾತ, ಮದುವೆಯ ಬ್ಯಾಂಡ್ ವಾಹನಕ್ಕೆ ಲಾರಿ ಡಿಕ್ಕಿ, 7 ಮಂದಿ ಸಾವು
ಜಾರ್ಖಂಡ್‌ನ ರಾಮಗಢದಲ್ಲಿ ಕಲ್ಲಿದ್ದಲು ಲಾರಿ ಮತ್ತು ಮದುವೆ ಬ್ಯಾಂಡ್ ವಾಹನದ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾನೆ. ಮೃತಪಟ್ಟವರೆಲ್ಲರೂ ಮದುವೆ ಬ್ಯಾಂಡ್ ಸದಸ್ಯರಾಗಿದ್ದರು. NH-23 ರಸ್ತೆ ಸುರಕ್ಷತೆ ಕೊರತೆ ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳು ಭದ್ರತಾ ಕ್ರಮಗಳ ಭರವಸೆ ನೀಡಿದ್ದಾರೆ.

ಮುಖ್ಯಾಂಶಗಳು
- ಜಾರ್ಖಂಡ್‌ನ ರಾಮಗಢದಲ್ಲಿ ಮಧ್ಯರಾತ್ರಿ ಭೀಕರ ಅಪಘಾತ
- ಅಪಘಾತದಲ್ಲಿ ಕನಿಷ್ಠ ಏಳು ಜನ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾರೆ
- ಮೃತರೆಲ್ಲರೂ ಶುಭ ಸಮಾರಂಭಗಳಲ್ಲಿ ಸಂಗೀತ ನುಡಿಸುವ ಬ್ಯಾಂಡ್ ತಂಡದವರಾಗಿದ್ದಾರೆ
ರಾಂಚಿ, ಜೂನ್ 26: ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಕಲ್ಲಿದ್ದಲು ತುಂಬಿದ್ದ ಟ್ರಕ್ ಹಾಗೂ ಪ್ರಯಾಣಿಕರ ವಾಹನದ ನಡುವೆ ಮಧ್ಯರಾತ್ರಿ ಭೀಕರ ಅಪಘಾತ(Accident)ಸಂಭವಿಸಿದೆ. ಈ ಅಪಘಾತದಲ್ಲಿ ಕನಿಷ್ಠ ಏಳು ಜನರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಪ್ರಯಾಣಿಕರು ಇದ್ದ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪೊಲೀಸರ ವಿವರಗಳ ಪ್ರಕಾರ, ಮೃತಪಟ್ಟವರೆಲ್ಲರೂ ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಸಂಗೀತ ನುಡಿಸುವ ಬ್ಯಾಂಡ್ ತಂಡದ ಸದಸ್ಯರಾಗಿದ್ದಾರೆ.
ಇವರೆಲ್ಲರೂ ಹಜಾರಿಬಾಗ್ ಜಿಲ್ಲೆಯ ಬಾಲ್ಸಾಗ್ರ ಗ್ರಾಮದಲ್ಲಿ ನಡೆದಿದ್ದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ತಮ್ಮ ವಾಹನದಲ್ಲಿ ತಡರಾತ್ರಿ ಮನೆಗೆ ವಾಪಸ್ ಆಗುತ್ತಿದ್ದರು. ರಾತ್ರಿ 12 ಗಂಟೆಯ ಸುಮಾರಿಗೆ ರಾಜ್ರಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ (NH) 23ಬಳಿ ಬಂದಾಗ ಓವರ್‌ಟೇಕ್ ಮಾಡಲು ಹೋದ ಕಲ್ಲಿದ್ದಲು ತುಂಬಿದ ಟ್ರಕ್ ಇವರ ಗಾಡಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ಸದ್ದು ಕೇಳಿ ಹೆದ್ದಾರಿ ಪಕ್ಕದಲ್ಲಿದ್ದ ಜನರು ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ವಿಷಯ ತಿಳಿದು ತಕ್ಷಣ ಬಂದ ಪೊಲೀಸರು ಸಾರ್ವಜನಿಕರ ಸಹಾಯದಿಂದ ಎಲ್ಲರನ್ನೂ ರಾಮಗಢದ ಸದರ್ ಆಸ್ಪತ್ರೆಗೆ ಸಾಗಿಸಿದರು.
ಆಸ್ಪತ್ರೆಯ ಸಿವಿಲ್ ಸರ್ಜನ್ ಅನಿಲ್ ಕುಮಾರ್ ಮಾತನಾಡಿ, ಆಸ್ಪತ್ರೆಗೆ ಕರೆತಂದ ಎಂಟು ಜನರಲ್ಲಿ ಏಳು ಮಂದಿ ಈಗಾಗಲೇ ಮೃತಪಟ್ಟಿದ್ದರು. ತಲೆಗೆ ಗಂಭೀರ ಗಾಯವಾಗಿದ್ದ ಮತ್ತೊಬ್ಬ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ: ಪ್ರತ್ಯೇಕ ದುರಂತಗಳಲ್ಲಿ ನಾಲ್ವರ ದುರ್ಮರಣ, ಮೂವರಿಗೆ ಗಾಯ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸ್ಥಳೀಯರು ಮತ್ತು ಮೃತರ ಕುಟುಂಬಸ್ಥರು ರಾಷ್ಟ್ರೀಯ ಹೆದ್ದಾರಿ 23 ಅನ್ನು ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ರಸ್ತೆಯ ಇಕ್ಕೆಲಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಈ ಲಾರಿ-ಬಾರ್ಲಾಂಗ್ ಮಾರ್ಗವು ಅತ್ಯಂತ ಅಪಾಯಕಾರಿಯಾಗಿದ್ದು, ಕಳೆದ ನಾಲ್ಕೇ ದಿನಗಳಲ್ಲಿ ಸಂಭವಿಸುತ್ತಿರುವ ಎರಡನೇ ದೊಡ್ಡ ಅಪಘಾತ ಇದಾಗಿದೆ. ಆದರೂ ಅಧಿಕಾರಿಗಳು ಇಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಜನರು ಆರೋಪಿಸಿದರು.
ವಿಡಿಯೋ
झारखंड के रामगढ़ जिले में गुरुवार देर रात एक भीषण सड़क हादसे में सात लोगों की मौत हो गई, जबकि एक की हालत गंभीर है। #jharkhand pic.twitter.com/CvY0GkYqzN
— NBT Bihar (@NBTBihar) June 26, 2026
ಕೊನೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಈ ಮಾರ್ಗದಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಗೊಂಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:40 am, Fri, 26 June 26




