ಪ್ಯಾಲೆಸ್ಟೀನ್ ಧ್ವಜದ ಸ್ಟಿಕರ್ ಅಂಟಿಸಿಕೊಂಡು ಆಡಿದ ಕಾಶ್ಮೀರೀ ಕ್ರಿಕೆಟಿಗ; ಪೊಲೀಸರಿಂದ ವಿಚಾರಣೆ
Jammu Kashmir cricketer Furqan Bhat creates controversy by wearing Palestine flag: ಸ್ಥಳೀಯ ಕಾಶ್ಮೀರೀ ಕ್ರಿಕೆಟಿಗನೊಬ್ಬ ಹೆಲ್ಮೆಟ್ ಮೇಲೆ ಪ್ಯಾಲೆಸ್ಟೀನ್ ಧ್ವಜದ ಸ್ಟಿಕರ್ ಹಾಕಿಕೊಂಡು ಆಡಿದ ವಿವಾದಾತ್ಮಕ ಘಟನೆ ನಡೆದಿದೆ. ಜಮ್ಮು ಕಾಶ್ಮೀರ ಚಾಂಪಿಯನ್ಸ್ ಲೀಗ್ ಟೂರ್ನಿಯ ಪಂದ್ಯವೊಂದರಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಆಟಗಾರ ಫರ್ಖಾನ್ ಭಟ್ ಹಾಗೂ ಟೂರ್ನಿ ಆಯೋಜಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಶ್ರೀನಗರ್, ಜನವರಿ 2: ಜಮ್ಮು ಮತ್ತು ಕಾಶ್ಮೀರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರನೊಬ್ಬ ಪ್ಯಾಲೆಸ್ಟೀನ್ ಧ್ವಜ ಹಾಕಿಕೊಂಡು ಆಡುವ ಮೂಲಕ ವಿವಾದ ಸೃಷ್ಟಿಸಿದ್ದಾನೆ. ಆ ಆಟಗಾರನ ಹೆಸರು ಫರ್ಖಾನ್ ಭಟ್ (Furqan Bhat). ಈತ ಜೆಕೆ11 ತಂಡದ ಆಟಗಾರ. ನಿನ್ನೆ ಗುರುವಾರ (ಜ. 1) ಜಮ್ಮು ಟ್ರೇಲ್ಬ್ಲೇಜರ್ಸ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ಬ್ಯಾಟಿಂಗ್ ಮಾಡುವಾಗ ಪ್ಯಾಲೆಸ್ಟೀನ್ ಬಾವುಟದ (Palestine flag) ಸ್ಟಿಕರ್ ಅಂಟಿಸಲಾದ ಹೆಲ್ಮೆಟ್ ಧರಿಸಿದ್ದು ಬೆಳಕಿಗೆ ಬಂದಿದೆ.
ಪೂರ್ವಾನುಮತಿ ಇಲ್ಲದೇ ಇನ್ನೊಂದು ದೇಶದ ಬಾವುಟ ಧರಿಸುವುದು ನಿಯಮ ಬಾಹಿರ. ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಪೊಲೀಸರು ಫರ್ಖಾನ್ ಭಟ್ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ದೇಶದ್ರೋಹ ಆರೋಪಿ ಉಮರ್ ಖಾಲೀದ್ಗೆ ನ್ಯೂಯಾರ್ಕ್ ಮೇಯರ್ ಕಾಳಜಿ ಪತ್ರ; 8 ಅಮೆರಿಕನ್ ಜನಪ್ರತಿನಿಧಿಗಳಿಂದಲೂ ಬೆಂಬಲ
ಈ ಹಿಂದೆ ಭಾರತದ ಕೆಲವೆಡೆ ಜನರು ಪ್ಯಾಲೆಸ್ಟೀನ್ಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ, ಮೆರವಣಿಗೆ ಇತ್ಯಾದಿ ಮಾಡಿರುವುದುಂಟು. ಕ್ರಿಕೆಟಿಗ ಫರ್ಖಾನ್ ಭಟ್ ಅವರು ಪ್ಯಾಲೆಸ್ಟೀನ್ ಧ್ವಜವನ್ನು ಯಾವ ಕಾರಣಕ್ಕೆ ಹಾಕಿದ್ದರು ಎಂಬುದು ಗೊತ್ತಾಗಿಲ್ಲ. ಪ್ಯಾಲೆಸ್ಟೀನ್ಗೆ ಬೆಂಬಲ ಸೂಚಕವಾಗಿ ಇದನ್ನು ಧರಿಸಿದ್ದರೋ, ಅಥವಾ ಇನ್ಯಾರದೋ ಒತ್ತಡಕ್ಕೆ ಇದನ್ನು ಧರಿಸಿದ್ದರೋ ಎಂಬ ವಿವರ ಗೊತ್ತಾಗಬೇಕಿದೆ.
ಇದೇ ವೇಳೆ, ಪೊಲೀಸರು ಜಮ್ಮು ಕಾಶ್ಮೀರ ಚಾಂಪಿಯನ್ಸ್ ಲೀಗ್ ಮೇಲೆ ನಿಗಾ ಇರಿಸಿದ್ದಾರೆ. ಟೂರ್ನಿಯ ಆಯೋಜಕ ಝಾಹಿದ್ ಭಟ್ ಅವರನ್ನೂ ಪೊಲೀಸರು ವಿಚಾರಣೆ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಮೇಲೂ ದೃಷ್ಟಿ ಹಾಕಲಾಗಿದೆ. ಆದರೆ, ತನಗೂ ಈ ಟೂರ್ನಿಗೂ ಸಂಬಂಧ ಇಲ್ಲ. ಫರ್ಖಾನ್ ಭಟ್ ತಮ್ಮ ಅಸೋಸಿಯೇಶನ್ನ ಸದಸ್ಯನೂ ಅಲ್ಲ ಎಂದು ಜೆಕೆಸಿಎ ಹೇಳಿದೆ.
ಇದನ್ನೂ ಓದಿ: ಶ್ರವಣಕುಮಾರನ ಸಾಹಸ… ಟೆಂಪೋ ಡ್ರೈವರ್ ಆಗಿದ್ದವ ನಾಲ್ಕೇ ವರ್ಷದಲ್ಲಿ ವಿಮಾನ ಸಂಸ್ಥೆ ಕಟ್ಟಿದ ಕಥೆ..!
ಪ್ಯಾಲೆಸ್ಟೀನ್ ವಿಚಾರ ಭಾರತದ ರಾಜತಾಂತ್ರಿಕ ಸ್ಥಿತಿಗೆ ಸೂಕ್ಷ್ಮವಾಗಿದೆ. ಹೀಗಾಗಿ, ಭಾರತದೊಳಗೆ ಪ್ಯಾಲೆಸ್ಟೀನ್ ಪರವಾಗಿಯಾಗಲೀ, ವಿರೋಧವಾಗಿಯಾಗಲೀ ನಡೆಯುವ ಪ್ರತಿಭಟನೆಗಳ ಮೇಲೆ ನಿಗಾ ಇರಿಸಲಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




