ಶರಿಯಾ ಕಾನೂನಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ಮಹಿಳೆ; ಯಾರೀಕೆ?
ಶರಿಯತ್ ಅನ್ನು 'ಪ್ರತಿಗಾಮಿ' ಎಂದು ಕರೆದ ಕೇರಳದ ಮುಸ್ಲಿಂ ಮಹಿಳ ಶರಿಯಾ ಬದಲು ತನಗೆ ಉತ್ತರಾಧಿಕಾರ ಕಾನೂನನ್ನು ಅನ್ವಯ ಮಾಡಬೇಕೆಂದು ಕೇರಳದ ಮಾಜಿ ಮುಸ್ಲಿಮರು (ಎಕ್ಸ್ ಮುಸ್ಲಿಮ್ಸ್ ಆಫ್ ಕೇರಳ) ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಕೋರಿದೆ. ಪ್ರತಿವಾದಿ ಅಫಿಡವಿಟ್ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ 4 ವಾರಗಳ ಕಾಲಾವಕಾಶ ನೀಡಿದೆ. ಹಾಗಾದರೆ, ಈ ಮಹಿಳೆ ಯಾರು? ಶರಿಯಾ ಕಾನೂನಿನ ಬಗ್ಗೆ ಆಕೆಯ ಅಸಮಾಧಾನವೇಕೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.
![ಶರಿಯಾ ಕಾನೂನಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ಮಹಿಳೆ; ಯಾರೀಕೆ?](https://images.tv9kannada.com/wp-content/uploads/2025/01/muslim.jpg?w=1280)
ನವದೆಹಲಿ: ಮೋದಿ ನೇತೃತ್ವದ ಸರ್ಕಾರದ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಕೇರಳದ ಮಹಿಳೆಯೊಬ್ಬರು ತನಗೆ ಇಸ್ಲಾಂ ಧರ್ಮದ ಶರಿಯತ್ ಕಾನೂನಿನ ಬದಲು ಭಾರತೀಯ ಉತ್ತರಾಧಿಕಾರ ಕಾನೂನಿನಡಿ ತನ್ನ ಆಸ್ತಿಯನ್ನು ಮಗಳ ಹೆಸರಿಗೆ ಬರೆಯಲು ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾಳೆ. ತಾನು ಇಸ್ಲಾಂ ಧರ್ಮದಲ್ಲಿ ಹುಟ್ಟಿದ್ದರೂ ಇಸ್ಲಾಂ ಧರ್ಮವನ್ನು ಪಾಲಿಸುತ್ತಿಲ್ಲ. ನಾನು ನಾಸ್ತಿಕಳಾಗಿದ್ದೇನೆ. ನಮಗೆ ಶರಿಯತ್ ಕಾನೂನನ್ನು ಅನಸರಿಸಲು ಇಷ್ಟವಿಲ್ಲ. ಶರಿಯಾ ಕಾನೂನಿನ ಬದಲು ತನಗೆ ಭಾರತೀಯ ಜಾತ್ಯತೀಯ ಉತ್ತರಾಧಿಕಾರ ಕಾನೂನನ್ನು ಅನುಸರಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು 4 ವಾರಗಳೊಳಗೆ ಅಭಿಪ್ರಾಯ ತಿಳಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಹಾಗೇ, ಶರಿಯಾ ಕಾನೂನು ಅನುಸರಿಸುವುದು ಅವರವರ ಆಯ್ಕೆಯೇ? ಎಂದು ಕೋರ್ಟ್ ಪ್ರಶ್ನಿಸಿದೆ.
ಜಾತ್ಯತೀತ ಉತ್ತರಾಧಿಕಾರ ಹಕ್ಕುಗಳಿಗಾಗಿ ಮುಸ್ಲಿಂ ಮಹಿಳೆ ಸಲ್ಲಿಸಿರುವ ಅರ್ಜಿಯ ಕುರಿತು ಕೇಂದ್ರದ ನಿಲುವನ್ನು ನ್ಯಾಯಾಲಯ ಕೋರಿದೆ. ಕೇರಳದ ಎಕ್ಸ್ ಮುಸ್ಲಿಮ್ಸ್ ಆಫ್ ಕೇರಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಿ.ಎಂ. ಸಫಿಯಾ ಈ ಅರ್ಜಿ ಸಲ್ಲಿಸಿದ ಮಹಿಳೆ. ಅಲಪ್ಪುಳ ಮೂಲದ ಸಫಿಯಾ ಅವರ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠದ ಮುಂದೆ ವಿಚಾರಣೆಗೆ ಬಂದಿತು.
ಮುಸ್ಲಿಂ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯು ಆಸ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಜಾತ್ಯತೀತ ಕಾನೂನುಗಳನ್ನು ಪಾಲಿಸಬಹುದೇ? ಅಥವಾ ಮುಸ್ಲಿಮರ ವೈಯಕ್ತಿಕ ಕಾನೂನಾದ ಶರಿಯಾವನ್ನೇ ಪಾಲಿಸಬೇಕೇ? ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಯಾರು ಈ ಸಫಿಯಾ?:
ಕೇರಳದ ಸಫಿಯಾ ಮುಸ್ಲಿಂ ಧರ್ಮದಲ್ಲಿ ಜನಿಸಿದ್ದಾರೆ. ಆಕೆ ಬೇರೆ ಧರ್ಮವನ್ನು ಪಾಲಿಸುತ್ತಿಲ್ಲವಾದರೂ ಅವರು ನಾಸ್ತಿಕರಾಗಿದ್ದಾರೆ. ಅನಿವಾರ್ಯತೆಯ ಕಾರಣಕ್ಕೆ ಮುಸ್ಲಿಂ ಧರ್ಮದಲ್ಲೇ ಉಳಿಯಲು ಬಯಸಿರುವ ಸಫಿಯಾ ಮುಸ್ಲಿಂ ಧರ್ಮದಲ್ಲಿ ಜಾರಿಯಲ್ಲಿರುವ ಶರಿಯಾ ಕಾನೂನನ್ನು ಅನುಸರಿಸಲು ಸಿದ್ಧರಿಲ್ಲ. ಆಕೆ ಶರಿಯತ್ ಕಾನೂನನ್ನು ಪ್ರತಿಗಾಮಿ ಎಂದು ಕರೆದಿದ್ದಾರೆ. ತಾನು ಸ್ವತಂತ್ರವಾಗಿ ಭಾರತೀಯ ಉತ್ತರಾಧಿಕಾರ ಕಾನೂನನ್ನು ಅನುಸರಿಸಬಹುದೇ? ಎಂದು ಆಕೆ ಪ್ರಶ್ನಿಸಿದ್ದಾರೆ. ಹಾಗೇ, ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ತನ್ನ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಬಯಸುತ್ತೇನೆ ಎಂದು ಆಕೆ ವಾದಿಸಿದ್ದಾರೆ.
ಇದನ್ನೂ ಓದಿ: ಜಾಮೀನಿನಲ್ಲಿರುವ ದರ್ಶನ್ ಸೇರಿ ಏಳು ಆರೋಪಿಗಳಿಗೆ ನೋಟಿಸ್ ಕೊಟ್ಟ ಸುಪ್ರೀಂ ಕೋರ್ಟ್
ಮುಸ್ಲಿಂ ಮಹಿಳೆಯರು ತಮ್ಮ ಪೋಷಕರ ಆಸ್ತಿಯ ಮೂರನೇ ಒಂದು ಭಾಗವನ್ನು ಮಾತ್ರ ಆನುವಂಶಿಕವಾಗಿ ಪಡೆಯಲು ಶರಿಯತ್ ಕಾನೂನಿನಲ್ಲಿ ಅವಕಾಶವಿದೆ. ತಮ್ಮ ಹಕ್ಕನ್ನು ಸೀಮಿತಗೊಳಿಸುವ ಶರಿಯತ್ ಕಾನೂನಿನ ನಿಬಂಧನೆಗಳನ್ನು ಉಲ್ಲೇಖಿಸಿರುವ ಸಫಿಯಾ, ನ್ಯಾಯಾಲಯವು ಈ ಬಗ್ಗೆ ಘೋಷಣೆಯನ್ನು ನೀಡದಿದ್ದರೆ ನನಗೆ ನನ್ನ ಆಸ್ತಿಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಆಸ್ತಿಯನ್ನು ನನ್ನ ಮಗಳಿಗೆ ನೀಡಲು ಕಾನೂನಿನ ತೊಡಕು ಎದುರಾಗುತ್ತದೆ. ನನ್ನ ಆಸ್ತಿಗೆ ಉತ್ತರಾಧಿಕಾರಿಗಳು ಇಲ್ಲದಂತಾಗುತ್ತದೆ ಎಂದು ವಾದಿಸಿದ್ದಾರೆ.
“ಶರಿಯತ್ ಕಾನೂನಿನ ಪ್ರಕಾರ, ಇಸ್ಲಾಂ ಧರ್ಮವನ್ನು ತೊರೆಯುವ ವ್ಯಕ್ತಿಗಳನ್ನು ಸಮುದಾಯವು ಬಹಿಷ್ಕರಿಸುತ್ತದೆ ಮತ್ತು ಅವರ ಆನುವಂಶಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ” ಎಂದು ಅವರು ವಾದಿಸಿದ್ದಾರೆ. ಸಫಿಯಾ ಕೇರಳದವರಾಗಿದ್ದು, ತನ್ನ ಎಲ್ಲಾ ಆಸ್ತಿಯನ್ನು ತನ್ನ ಮಗಳಿಗೆ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅರ್ಜಿಯ ಪ್ರಕಾರ, ಅವರ ಮಗ ಆಟಿಸಂನಿಂದ ಬಳಲುತ್ತಿದ್ದಾನೆ. ಅವರ ಮಗಳು ಆತನ ಜವಾಬ್ದಾರಿ ತೆಗೆದುಕೊಂಡಿದ್ದು, ಆಕೆಯೇ ಆತನ ಆರೈಕೆದಾರರಾಗಿದ್ದಾರೆ. ಹೀಗಾಗಿ, ಸಂಪೂರ್ಣ ಆಸ್ತಿಯನ್ನು ಮಗಳ ಹೆಸರಿಗೆ ಬರೆಯಲು ಅವರು ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ, ಶರಿಯತ್ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ.
ಶರಿಯಾ ಕಾನೂನಿನ ಪ್ರಕಾರ, ಪೋಷಕರ ಆಸ್ತಿಯ ವಿಭಜನೆಯ ನಂತರ ಮಗನಿಗೆ ಮಗಳ ಎರಡು ಪಟ್ಟು ದೊಡ್ಡ ಪಾಲು ಆಸ್ತಿ ಸಿಗುತ್ತದೆ. ಹೀಗಾಗಿ, ಡೌನ್ ಸಿಂಡ್ರೋಮ್ ಹೊಂದಿರುವ ನನ್ನ ಮಗ ನಿಧನರಾದರೆ, ನನ್ನ ಮಗಳು ಆಸ್ತಿಯ ಮೂರನೇ ಒಂದು ಭಾಗವನ್ನು ಮಾತ್ರ ಪಡೆಯುತ್ತಾಳೆ. ಉಳಿದ ಆಸ್ತಿಯನ್ನು ಸಂಬಂಧಿಕರಿಗೆ ಹಂಚಿಕೆ ಮಾಡಲಾಗುವುದು ಎಂದು ಸಫಿಯಾ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮ ಕುರಿತ ವಿವಾದ; ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ಕೋರ್ಟ್ ರಿಲೀಫ್
ಸಫಿಯಾ ತನ್ನ ಅರ್ಜಿಯಲ್ಲಿ, ತಾನು ಮತ್ತು ತನ್ನ ಪತಿ ಇಸ್ಲಾಂ ಧರ್ಮವನ್ನು ಪಾಲಿಸದ ಕಾರಣದಿಂದ ಭಾರತೀಯ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ತನ್ನ ಆಸ್ತಿಯನ್ನು ವಿತರಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಪ್ರಸ್ತುತ, ಭಾರತೀಯ ಉತ್ತರಾಧಿಕಾರ ಕಾಯ್ದೆ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ. ಈ ಕಾರಣದಿಂದಾಗಿ ಸಫಿಯಾ ಅವರ ಅರ್ಜಿಯು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ