‘ಹೆದರಿ ತಲೆಬಾಗಲ್ಲ, ತಿರುಗಿಬೀಳುತ್ತೇವೆ’; ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಮಮತಾ ಬ್ಯಾನರ್ಜಿ

ಟಿಎಂಸಿ ಪಕ್ಷದ ಅಭ್ಯರ್ಥಿ ಚುನಾವಣಾ ಅಖಾಡದಿಂದ ಹಿಂದೆ ಸರಿದ ಕಾರಣದಿಂದ ಮಮತಾ ಬ್ಯಾನರ್ಜಿ ನಂದಿಗ್ರಾಮ ಉಪಚುನಾವಣೆಯಲ್ಲಿ 'ಇಂಡಿಯಾ' ಒಕ್ಕೂಟದ ಭಾಗವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ನೀಡುವುದಾಗಿ ತೀರ್ಮಾನ ಕೈಗೊಂಡಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಸಲು ಗಡುವು ಮುಗಿದಿರುವುದರಿಂದ ಮಮತಾ ಬ್ಯಾನರ್ಜಿ ಈ ತಕ್ಷಣದ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ, ಅಕ್ಟೋಬರ್ 6ರಂದು ನಡೆಯಲಿರುವ ಈ ಉಪಚುನಾವಣೆಯು ಈಗ ಬಿಜೆಪಿ ಹಾಗೂ ಕಾಂಗ್ರೆಸ್-ಮಮತಾ ಬ್ಯಾನರ್ಜಿ ಪಕ್ಷದ ಮೈತ್ರಿಕೂಟದ ನಡುವಿನ ನೇರ ಕದನವಾಗಿ ಮಾರ್ಪಟ್ಟಿದೆ.

‘ಹೆದರಿ ತಲೆಬಾಗಲ್ಲ, ತಿರುಗಿಬೀಳುತ್ತೇವೆ’; ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Image Credit source: PTI

Updated on: Sep 18, 2026 | 6:16 PM

ಕೊಲ್ಕತ್ತಾ, ಸೆಪ್ಟೆಂಬರ್ 18: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಇಂದು ಹೊಸ ತಿರುವು ಸಿಕ್ಕಿದೆ. ನಂದಿಗ್ರಾಮದ ಟಿಎಂಸಿ ಅಭ್ಯರ್ಥಿಯಾಗಿದ್ದ ಸಂಚಿತಾ ಪ್ರಧಾನ್ ಡೇ ಅವರನ್ನು ಭೇಟಿಯಾಗಿ ಸಿಎಂ ಸುವೇಂದು ಅಧಿಕಾರಿ ಮಾತುಕತೆ ನಡೆಸಿದ ಬೆನ್ನಲ್ಲೇ ಆಕೆ ತನ್ನ ನಾಮಪತ್ರ ವಾಪಾಸ್ ಪಡೆಯುವ ಮೂಲಕ ಮಮತಾ ಬ್ಯಾನರ್ಜಿಗೆ ಶಾಕ್ ನೀಡಿದ್ದರು. ಈಗಾಗಲೇ ನಾಮಪತ್ರ ಸಲ್ಲಿಸುವ ದಿನಾಂಕವೂ ಮುಗಿದಿರುವುದರಿಂದ ಮಮತಾ ಬ್ಯಾನರ್ಜಿಗೆ ಬಿಜೆಪಿಯ ಈ ತಂತ್ರಗಾರಿಕೆಯಿಂದ ಕೈ ಕಟ್ಟಿಹಾಕಿದಂತಾಗಿತ್ತು. ಆದರೂ ಬಿಜೆಪಿಯ ವಿರುದ್ಧ ಮತ್ತೊಂದು ತಂತ್ರ ಹೆಣೆದಿರುವ ಮಮತಾ ಬ್ಯಾನರ್ಜಿ ಕೂಡಲೇ ಸುದ್ದಿಗೋಷ್ಠಿ ನಡೆಸಿ, ನಂದಿಗ್ರಾಮದ ಉಪಚುನಾವಣೆಯಲ್ಲಿ ತಮ್ಮ ಪಕ್ಷ ಇಂಡಿಯಾ ಬಣದ ಭಾಗವಾಗಿರುವ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲಿದೆ ಎಂದು ಘೋಷಿಸಿದ್ದಾರೆ.

“ರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ವಿರುದ್ಧದ ‘ಇಂಡಿಯಾ’ ಒಕ್ಕೂಟದ ಹೋರಾಟವನ್ನು ಬಲಪಡಿಸಲು ನಾವು ನಂದಿಗ್ರಾಮ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ನೀಡುತ್ತಿದ್ದೇವೆ” ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿಯವರ ಈ ನಿರ್ಧಾರದಿಂದಾಗಿ ನಂದಿಗ್ರಾಮ ಇದೀಗ ಕಾಂಗ್ರೆಸ್​ ಮತ್ತು ಬಿಜೆಪಿಯ ನೇರ ಹಣಾಹಣಿಯ ಕ್ಷೇತ್ರವಾಗಿ ಪರಿಣಮಿಸಿದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ಉಪಚುನಾವಣೆಯಲ್ಲಿ ತಮ್ಮ ಬಣವು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿದೆ ಎಂದು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ತಮ್ಮ ಪಕ್ಷವು ಕಾಂಗ್ರೆಸ್ ಅಭ್ಯರ್ಥಿಯನ್ನೇ ಬೆಂಬಲಿಸಲಿದೆ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನಂದಿಗ್ರಾಮ ಉಪಚುನಾವಣೆಗೆ ಹೊಸ ತಿರುವು; ಸುವೇಂದು ಭೇಟಿ ಬೆನ್ನಲ್ಲೇ ನಾಮಪತ್ರ ಹಿಂಪಡೆದ ಮಮತಾ ಬಣದ ಅಭ್ಯರ್ಥಿ

‘ತಲೆಬಾಗಲ್ಲ, ಹೋರಾಡುತ್ತೇವೆ’ ಎಂದ ದೀದಿ:

ರಿತಬ್ರತ ಬ್ಯಾನರ್ಜಿ ಬಣದ ಜೊತೆಗಿನ ಕಾನೂನು ಸಮರದ ಮಧ್ಯೆ ತಮ್ಮ ಪಕ್ಷದ ಮೂಲ ಹೆಸರು ಮತ್ತು ‘ಹೂವು-ಹುಲ್ಲು’ ಗುರುತನ್ನು ಕಳೆದುಕೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, “ನಾನು ಎಂದಿಗೂ ತಲೆಬಾಗುವುದಿಲ್ಲ, ಶರಣಾಗುವುದೂ ಇಲ್ಲ. ನಾವು ಇನ್ನಷ್ಟು ಗಟ್ಟಿಯಾಗಿ ತಿರುಗಿಬೀಳುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಾಹುಲ್ ಗಾಂಧಿ ಮತ್ತು ಕೇಜ್ರಿವಾಲ್ ಬೆಂಬಲ:

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ತಮಗೆ ಕರೆ ಮಾಡಿ, ಬಿಜೆಪಿಯನ್ನು ಎದುರಿಸಲು ವಿಪಕ್ಷಗಳ ಒಗ್ಗಟ್ಟು ಅಗತ್ಯ ಎಂದು ಒತ್ತಾಯಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಆಪ್‌ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ತಮಗೆ ಬೆಂಬಲ ಸೂಚಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಟಿಎಂಸಿಯ ಮೂಲ ಹೆಸರು ಮತ್ತು ಚಿಹ್ನೆ ಫ್ರೀಜ್: ಮಮತಾ ಬಣಕ್ಕೆ ಫುಟ್ಬಾಲ್, ಬಂಡಾಯ ಬಣಕ್ಕೆ ಲಕೋಟೆ ಗುರುತು

ರಿತಬ್ರತ ಬಣವನ್ನು ‘ಬಿಜೆಪಿಯ ಎ-ಟೀಮ್’ ಎಂದು ಕರೆದ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಜಾಪ್ರಭುತ್ವದ ಇತಿಹಾಸದಲ್ಲೇ “ಕಪ್ಪು ದಿನ” ಎಂದು ಟೀಕಿಸಿದ್ದಾರೆ. “ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ನನ್ನಿಂದ ಬೇರ್ಪಡಿಸಲು ಸಾಧ್ಯವಿಲ್ಲ, ಅದು ನನ್ನ ಕೊನೆ ಉಸಿರಿನವರೆಗೂ ನನ್ನೊಂದಿಗೆ ಇರುತ್ತದೆ” ಎಂದಿದ್ದಾರೆ.

2026ರ ಚುನಾವಣಾ ಸೋಲಿನ ನಂತರ ರಿತಬ್ರತ ಬ್ಯಾನರ್ಜಿ ಮಮತಾ ಬ್ಯಾನರ್ಜಿ ವಿರುದ್ಧ ದಂಗೆಯೆದ್ದಿದ್ದರು. ಇಬ್ಬರೂ ತಾವೇ ಅಸಲಿ ಟಿಎಂಸಿ ಎಂದು ಪ್ರತಿಪಾದಿಸಿದ್ದರಿಂದ, ಚುನಾವಣಾ ಆಯೋಗವು ನಂದಿಗ್ರಾಮ ಮತ್ತು ರೆಜಿನಗರ ಉಪಚುನಾವಣೆಗೆ ಮೂಲ ಹೆಸರು-ಗುರುತನ್ನು ತಡೆಹಿಡಿದಿದೆ. ಮಮತಾ ಬಣಕ್ಕೆ ‘ಫುಟ್‌ಬಾಲ್ ಆಟಗಾರ’ ಹಾಗೂ ರಿತಬ್ರತ ಬಣಕ್ಕೆ ‘ಲಕೋಟೆ (ಕವರ್)’ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us