
ನವದೆಹಲಿ, ನವೆಂಬರ್ 23: ರಾಷ್ಟ್ರ ರಾಜಧಾನಿ ದೆಹಲಿಯ ಜಾಮಾ ಮಸೀದಿ ಪೊಲೀಸ್ ಠಾಣೆಯೊಳಗೆ ವಿಚಾರಣೆಗೆ ಕರೆಸಲಾಗಿದ್ದ ವ್ಯಕ್ತಿಯೊಬ್ಬ ಐವರು ಪೊಲೀಸ್ ಸಿಬ್ಬಂದಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿ, ಬಳಿಕ ಬೈಕ್ ಕದ್ದು ಪರಾರಿಯಾಗಲು ಯತ್ನಿಸಿದ ಘಟನೆ ಇಂದು ನಡೆದಿದೆ. ಆತನನ್ನು ಬೆನ್ನಟ್ಟಿದ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ತನ್ನ ತಾಯಿ ಮತ್ತು ಸಹೋದರಿಗೆ ಕಿರುಕುಳ ನೀಡಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ನಬೀಲ್ ಎಂಬ ಆರೋಪಿಯನ್ನು ಜಾಮಾ ಮಸೀದಿ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆಸಲಾಗಿತ್ತು. ಮಧ್ಯಾಹ್ನ 2.30ರ ಸುಮಾರಿಗೆ ವಿಚಾರಣೆ ನಡೆಯುತ್ತಿದ್ದಾಗ ಆಕ್ರೋಶಗೊಂಡ ಆರೋಪಿ, ಏಕಾಏಕಿ ಚಾಕು ಹೊರತೆಗೆದು ಪೊಲೀಸರ ಕುತ್ತಿಗೆ ಮತ್ತು ಮುಖಕ್ಕೆ ಇರಿದಿದ್ದಾನೆ. ಈ ದಾಳಿಯಲ್ಲಿ ಇಬ್ಬರು ಸಬ್-ಇನ್‌ಸ್ಪೆಕ್ಟರ್‌ಗಳು, ಒಬ್ಬ ಎಎಸ್‌ಐ ಮತ್ತು ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳು ಸೇರಿದಂತೆ ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಬೈಕ್ ಕದ್ದು ಪರಾರಿ:
ಪೊಲೀಸ್ ಠಾಣೆಯೊಳಗೆ ದಾಳಿ ನಡೆಸಿದ ತಕ್ಷಣ ಆರೋಪಿ ಹೊರಗೆ ಓಡಿಹೋಗಿ, ಬೈಕನ್ನು ಕದ್ದು ಹಳೆಯ ದೆಹಲಿಯ ಚಿಟ್ಲಿ ಕಬರ್ ಪ್ರದೇಶದತ್ತ ಪರಾರಿಯಾಗಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ತಂಡವು ಆರೋಪಿಯನ್ನು ಬೆನ್ನಟ್ಟಿ ಸುತ್ತುವರಿದಿದೆ. ಈ ವೇಳೆಯೂ ಆತ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸಲು ಮುಂದಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶದ ಮನೆಯಲ್ಲಿ ಹ್ಯಾಂಡ್‌ಪಂಪ್‌ನಲ್ಲಿ ನೀರಿನ ಬದಲು ಹರಿದ ಕಳ್ಳಭಟ್ಟಿ ಸಾರಾಯಿ; ಮಹಿಳೆ ಬಂಧನ
ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಉಪ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ. ಠಾಣೆಯೊಳಗೆ ಆರೋಪಿ ಚಾಕು ತಂದಿದ್ದು ಹೇಗೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ