Maratha Reservation: ಮರಾಠಾ ಮೀಸಲಾತಿ ಕಾನೂನಿನ ಪ್ರಕಾರ ಇಲ್ಲ ಎಂದು ತೀರ್ಪು ನೀಡಿದ ಸರ್ವೋಚ್ಛ ನ್ಯಾಯಾಲಯ
SC Verdict on Maratha Reservation: ಮರಾಠಾ ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳಿಗೆ ಅನ್ವಯವಾಗುವ ತೀರ್ಪು ನೀಡಿರುವ ಸರ್ವೋಚ್ಛ ನ್ಯಾಯಾಲಯ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡುವುದು ಕಾನೂನಿನ ಪ್ರಕಾರ ಸರಿಯಲ್ಲ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳೂ ಈ ಹಿಂದೆ ಕೈಗೊಂಡ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.
ಮರಾಠಾ ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳಿಗೆ ಅನ್ವಯವಾಗುವ ತೀರ್ಪು ನೀಡಿರುವ ಸರ್ವೋಚ್ಛ ನ್ಯಾಯಾಲಯ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡುವುದು ಕಾನೂನಿನ ಪ್ರಕಾರ ಸರಿಯಲ್ಲ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳೂ ಈ ಹಿಂದೆ ಮೀಸಲಾತಿ ಸಂಬಂಧ ಕೈಗೊಂಡ ನಿರ್ಧಾರದಿಂದ ಹಿಂದೆ ಸರಿಯಬೇಕಾದ ಸಾಧ್ಯತೆ ಇದೆ. ಈ ಸರ್ವೋಚ್ಚ ನ್ಯಾಯಾಲಯದ ತೀರ್ಮಾನ ಇನ್ನುಳಿದ ರಾಜ್ಯಗಳ ಮೀಸಲಾತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಉದಾಹರಣೆಗೆ, ತಮಿಳು ನಾಡು 65 ಪ್ರತಿಶತಕ್ಕಿಂತ ಜಾಸ್ತಿ ಮೀಸಲಾತಿ ತಂದಿದೆ. ಅದೇ ರೀತಿ ಕರ್ನಾಟಕದಲ್ಲಿ ಕೂಡ ಮೀಸಲಾತಿಯನ್ನು ಜಾಸ್ತಿ ಮಾಡುವ ಬೇಡಿಕೆಗೆ ಸರಕಾರ ಒಪ್ಪಿಗೆ ಸೂಚಿಸಿ ಸುಪ್ರೀಂ ಕೋರ್ಟ್ಗೆ ತನ್ನ ಅಫಿಡವಿಟ್ ಸಲ್ಲಿಸಿತ್ತು. ಪಂಚಮಸಾಲಿ, ಲಿಂಗಾಯತ ಒಕ್ಕಲಿಗೆ ಹೀಗೆ ಎಲ್ಲರೂ ಮೀಸಲಾತಿ ಕೇಳುತ್ತಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನ ಸದರಿ ನಿರ್ಣಯ ಮಹತ್ವಾದ್ದಾಗಿದೆ.
ಈ ಆದೇಶದ ಮೂಲಕ ಮರಾಠಾ ಸಮುದಾಯಕ್ಕೆ ಮಹಾರಾಷ್ಟ್ರ ಸರ್ಕಾರವು 2018ರಲ್ಲಿ ಸರ್ಕಾರಿ ಕೆಲಸ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ನೀಡಿದ್ದ ಮೀಸಲಾತಿ ರದ್ದಾಗಿದೆ. ಮೀಸಲಾತಿ ಪ್ರಮಾಣವು ಶೇ.50ಕ್ಕಿಂತ ಹೆಚ್ಚಿರುವ ಕಾರಣ ಅದು ಕಾನೂನಿನ ಪ್ರಕಾರ ತಪ್ಪು ಎನ್ನಲಾಗಿದೆ. ಜಸ್ಟೀಸ್ ಅಶೋಕ್ ಭೂಷಣ್, ಎಲ್.ನಾಗೇಶ್ವರ ರಾವ್, ಎಸ್.ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಹಾಗೂ ಎಸ್.ರವೀಂದ್ರ ಭಟ್ ಅವರನ್ನೊಳಗೊಂಡ ಪೀಠ ತೀರ್ಪು ನೀಡಿದೆ.
ಈ ಹಿಂದೆ ಸಂಸತ್ತಿನಲ್ಲಿ ತರಲಾದ ತಿದ್ದುಪಡಿಯ ಕಾರಣ ರಾಜ್ಯ ಸರ್ಕಾರ ಯಾವುದೇ ಜಾತಿಯನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗವೆಂದು ಸೇರ್ಪಡೆಗೊಳಿಸುವ ಅಧಿಕಾರ ಹೊಂದಿಲ್ಲ. ರಾಜ್ಯ ಸರ್ಕಾರವೇನಿದ್ದರೂ ಕೇಂದ್ರದ ಗಮನಕ್ಕೆ ಇದನ್ನು ತರಬಹುದು. ನಂತರ ಆ ಜಾತಿಯನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಮಾತ್ರ ಇರುತ್ತದೆ ಎನ್ನುವುದನ್ನು ಉಲ್ಲೇಖಿಸಲಾಗಿದೆ.
ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನ ಪ್ರಸ್ತುತ ಆದೇಶದಿಂದಾಗಿ ಈಗಾಗಲೇ ಮೀಸಲಾತಿ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಸೀಟ್ ಪಡೆದವರಿಗಾಗಲೀ, ಕೆಲಸ ಗಿಟ್ಟಿಸಿಕೊಂಡವರಿಗಾಗಲೀ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಶೇ.50ರಷ್ಟು ಮೀಸಲಾತಿಯನ್ನು ಲಕ್ಷ್ಮಣರೇಖೆಯಂತೆ ಪಾಲಿಸಬೇಕು; ಮರಾಠಾ ಮಿಸಲಾತಿ ಕುರಿತು ಹಿರಿಯ ವಕೀಲ ಅರವಿಂದ ದಾತಾರ್ ವಾದ
Published On - 10:52 am, Wed, 5 May 21