ಬಾಂಗ್ಲಾದೇಶಕ್ಕೆ ವಿದ್ಯುತ್ ರಫ್ತು: ಮಾರ್ಗಸೂಚಿ ಬಿಗಿಗೊಳಿಸಿದ ಭಾರತ
ಬಾಂಗ್ಲಾದೇಶದಲ್ಲಿ ರಾಜಕೀಯ ಪ್ರಕ್ಷುಬದ್ಧತೆ ಹೆಚ್ಚಾದ ಬೆನ್ನಲ್ಲೇ ನೆರೆ ದೇಶಕ್ಕೆ ವಿದ್ಯುತ್ ಪೂರೈಕೆ ಮಾಡುವುದಕ್ಕೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಆದಾಗ್ಯೂ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ಅದಾನಿ ಪವರ್ ಮುಂದುವರಿಸಿದೆ. ವಿದ್ಯುತ್ ಸಚಿವಾಲಯದ ಪರಿಷ್ಕೃತ ಮಾರ್ಗ ಸೂಚಿಯಲ್ಲಿ ಏನಿದೆ ಮತ್ತು ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಸುತ್ತಿರುವ ಬಗ್ಗೆ ಅದಾನಿ ಪವರ್ ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ.
ನವದೆಹಲಿ, ಆಗಸ್ಟ್ 17: ನೆರೆಯ ಬಾಂಗ್ಲಾದೇಶದಲ್ಲಿ ಉದ್ಭವಿಸಿರುವ ರಾಜಕೀಯ ಪ್ರಕ್ಷುಬದ್ಧತೆ, ಹಿಂಸಾಚಾರ, ಆರ್ಥಿಕ ಮುಗ್ಗಟ್ಟಿನ ಬೆನ್ನಲ್ಲೇ ವಿದ್ಯುತ್ ರಫ್ತು ಸಂಬಂಧ ಈ ಹಿಂದೆ ರೂಪಿಸಿದ್ದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ನೂತನ ನೀತಿಯಡಿ, ವಿದ್ಯುತ್ ಆಮದು ಮಾಡಿಕೊಳ್ಳುತ್ತಿರುವ ದೇಶಗಳು ಬಿಲ್ ಬಾಕಿ ಇರಿಸಿಕೊಂಡರೆ ಆ ದೇಶಗಳಿಗೆ ಕಳುಹಿಸುವ ವಿದ್ಯುತ್ ಅನ್ನು ಭಾರತದೊಳಗಿನ ಇತರ ಗ್ರಿಡ್ಗಳಿಗೆ ಪೂರೈಸಲು ಅವಕಾಶ ಮಾಡಿಕೊಡಲಾಗಿದೆ.
ಸದ್ಯ ಜಾರ್ಖಂಡ್‌ನ ಗೊಡ್ಡಾದಲ್ಲಿರುವ ‘ಅದಾನಿ ಪವರ್’ ವಿದ್ಯುತ್ ಸ್ಥಾವರದಿಂದ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯಾಗುತ್ತಿದೆ. ಈ ಸ್ಥಾವರದಲ್ಲಿ ಉತ್ಪಾದನೆಯಾಗುವ ಎಲ್ಲ 1,600 ಮೆಗಾವ್ಯಾಟ್ ವಿದ್ಯುತ್ ಅನ್ನು ಬಂಗ್ಲಾದೇಶಕ್ಕೇ ಪೂರೈಸಲಾಗುತ್ತಿದೆ. ಕೇಂದ್ರ ಸರ್ಕಾರದ ಹೊಸ ನಿಯಮದಿಂದಾಗಿ, ಈ ಸ್ಥಾವರದ ವಿದ್ಯುತ್ ಅನ್ನು ದೇಶೀಯ ಗ್ರಿಡ್ಗಳಿಗೆ ಪೂರೈಸಲು ಅವಕಾಶ ದೊರೆತಿದೆ.
ಕೇಂದ್ರ ಮಾಡಿರುವ ತಿದ್ದುಪಡಿ ಏನು?
ಭಾರತೀಯ ವಿದ್ಯುತ್ ಸಚಿವಾಲಯವು ಈ ತಿಂಗಳ ಆರಂಭದಲ್ಲಿ ವಿದ್ಯುತ್ ಆಮದು ಮತ್ತು ರಫ್ತಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಿದೆ. ಹೊಸ ನಿಯಮಗಳ ಪ್ರಕಾರ ರಫ್ತು-ಆಧಾರಿತ ಸ್ಥಾವರಗಳಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ದೇಶೀಯವಾಗಿ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ. ಸ್ಥಾವರವು ತನ್ನ ರಫ್ತು ಬದ್ಧತೆಗಳನ್ನು ಪೂರೈಸಲು ಸಾಧ್ಯವಾಗದಿದ್ದರೆ ಅಥವಾ ವಿದ್ಯುತ್ ಖರೀದಿ ಒಪ್ಪಂದದ (ಪಿಪಿಎ) ಅಡಿಯಲ್ಲಿ ಸಮಸ್ಯೆಗಳಿದ್ದರೆ ದೇಶೀಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಂದರೆ, ಖರೀದಿ ಒಪ್ಪಂದದ ಪ್ರಕಾರ ಬಿಲ್ ಪಾವತಿಸದೆ ಬಾಕಿ ಇರಿಸಿಕೊಂಡರೂ ಈ ನಿಯಮ ಅನ್ವಯವಾಗಲಿದೆ.
ಅದಾನಿ ಪವರ್ ಹೇಳಿದ್ದೇನು?
‘ನಾವು ಜಾರ್ಖಂಡ್‌ನ ಗೊಡ್ಡಾ ಸ್ಥಾವರದಿಂದ ಬಾಂಗ್ಲಾದೇಶಕ್ಕೆ ನಿರಂತರ ವಿದ್ಯುತ್ ನೀಡುತ್ತಿದ್ದೇವೆ. ಬೇಡಿಕೆಯ ಪಟ್ಟಿ ಮತ್ತು ವಿದ್ಯುತ್ ಖರೀದಿ ಒಪ್ಪಂದದ ನಿಬಂಧನೆಗಳ ಪ್ರಕಾರ ಜವಾಬ್ದಾರಿಗಳನ್ನು ಪೂರೈಸಲು ಬದ್ಧರಾಗಿದ್ದೇವೆ’ ಎಂದು ಅದಾನಿ ಪವರ್ ಪ್ರಕಟಣೆ ತಿಳಿಸಿದೆ.
2017ರಲ್ಲಿ ಬಾಂಗ್ಲಾ ಜತೆ ಆಗಿತ್ತು ಒಪ್ಪಂದ
ಢಾಕಾದಲ್ಲಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರದ ಅವಧಿಯಲ್ಲಿ 2017 ರಲ್ಲಿ ಸಹಿ ಮಾಡಿದ ಒಪ್ಪಂದದ ಅಡಿಯಲ್ಲಿ ಅದಾನಿ ಗ್ರೂಪ್ ಸಂಸ್ಥೆಯು ಬಾಂಗ್ಲಾದೇಶಕ್ಕೆ ವಿದ್ಯುತ್ ಮಾರಾಟ ಮಾಡುತ್ತಿದೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಸಿಎಎ ಅಡಿಯಲ್ಲಿ 188 ಪಾಕಿಸ್ತಾನಿ ಹಿಂದೂಗಳಿಗೆ ಭಾರತೀಯ ಪೌರತ್ವವನ್ನು ನೀಡಲು ಅಮಿತ್ ಶಾ ಒಪ್ಪಿಗೆ
2018 ರಲ್ಲಿ ನರೇಂದ್ರ ಮೋದಿ ಸರ್ಕಾರವು ನೆರೆಯ ದೇಶಗಳಿಗೆ ವಿದ್ಯುತ್ ಸರಬರಾಜು ಮಾಡಲು ಮೀಸಲಾದ ವಿದ್ಯುತ್ ಸ್ಥಾವರಗಳಿಗೆ ಸಂಬಂಧಿಸಿ ಮಾರ್ಗಸೂಚಿಗಳನ್ನು ಸ್ಥಾಪಿಸಿತ್ತು. ಇದೀಗ ಅದೇ ಮಾರ್ಗಸೂಚಿಗೆ ತಿದ್ದುಪಡಿ ಮಾಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ