Farmers Protest: ಸೂರ್ಯಕಾಂತಿ ಬೀಜಕ್ಕೆ ಎಂಎಸ್‌ಪಿ ಬೇಡಿಕೆ: ಕುರುಕ್ಷೇತ್ರದಲ್ಲಿ ಹರ್ಯಾಣ-ದೆಹಲಿ ಹೆದ್ದಾರಿಗೆ ತಡೆಯೊಡ್ಡಿ ರೈತರ ಪ್ರತಿಭಟನೆ

ರೈತರನ್ನು ಬೆಂಬಲಿಸಲು ಇಲ್ಲಿಗೆ ಬಂದಿದ್ದೇವೆ. ನಾವು ಕೂಡ ರೈತ ಕುಟುಂಬದಿಂದ ಬಂದವರು. ರಸ್ತೆಯಲ್ಲಿ ನಿಂತಿರುವ ರೈತರೊಂದಿಗೆ ನಾವು ನಿಲ್ಲುತ್ತೇವೆ. ರೈತರ ಪ್ರತಿಭಟನೆಯ ಸಂದರ್ಭದಲ್ಲೂ ನಾವು ರೈತರನ್ನು ಬೆಂಬಲಿಸಿದ್ದೇವೆ, ನಮ್ಮ ಬೆಂಬಲ ಅವರಿಗೆ ಇದ್ದೇ ಇರುತ್ತದೆ  ಎಂದ ಕುಸ್ತಿಪಟು ಬಜರಂಗ್ ಪುನಿಯಾ

Farmers Protest: ಸೂರ್ಯಕಾಂತಿ ಬೀಜಕ್ಕೆ ಎಂಎಸ್‌ಪಿ ಬೇಡಿಕೆ: ಕುರುಕ್ಷೇತ್ರದಲ್ಲಿ ಹರ್ಯಾಣ-ದೆಹಲಿ ಹೆದ್ದಾರಿಗೆ ತಡೆಯೊಡ್ಡಿ ರೈತರ ಪ್ರತಿಭಟನೆ
ರೈತರ ಪ್ರತಿಭಟನೆ
Follow us
ರಶ್ಮಿ ಕಲ್ಲಕಟ್ಟ
|

Updated on: Jun 12, 2023 | 4:35 PM

ದೆಹಲಿ: ಸೂರ್ಯಕಾಂತಿ ಬೆಳೆ (Sunflower crop) ಖರೀದಿಯಲ್ಲಿ ಕನಿಷ್ಠ ಬೆಂಬಲ ಬೆಲೆ (MSP) ಪಡೆಯದಿರುವುದನ್ನು ವಿರೋಧಿಸಿ ಹರ್ಯಾಣದ (Haryana Farmers) ರೈತರು ಇಂದು ದೆಹಲಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಘೋಷಿಸಿದ ಪರಿಹಾರದಿಂದ ತೃಪ್ತರಾಗಿಲ್ಲ ಎಂದು ರೈತರು ಪ್ರತಿಭಟನೆ (Famers Protest)  ನಡೆಸುತ್ತಿದ್ದಾರೆ. ಕುರುಕ್ಷೇತ್ರ ಜಿಲ್ಲೆಯ ಪೀಪ್ಲಿ ಗ್ರಾಮದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಂಚಾರ ನಿರ್ಬಂಧಿಸುವ ನಿರ್ಧಾರ ಕೈಗೊಂಡರು. ಆದಾಗ್ಯೂ, ದಟ್ಟಣೆ ತಪ್ಪಿಸಲು ದೆಹಲಿ-ಚಂಡೀಗಢ ಮಾರ್ಗದಲ್ಲಿ ಸಂಚಾರವನ್ನು ಬದಲಾಯಿಸಲಾಗಿದೆ. ಹರ್ಯಾಣ, ಪಂಜಾಬ್, ಯುಪಿ ಮತ್ತು ಇತರ ನೆರೆಯ ರಾಜ್ಯಗಳ ರೈತ ಮುಖಂಡರು ತಮ್ಮ ಬೇಡಿಕೆ ಮುಂದಿಟ್ಟು ‘ಎಂಎಸ್‌ಪಿ ದಿಲಾವೋ, ಕಿಸಾನ್ ಬಚಾವೋ’ ಮಹಾಪಂಚಾಯತ್‌ಗಾಗಿ ಪೀಪ್ಲಿ ಧಾನ್ಯ ಮಾರುಕಟ್ಟೆಯಲ್ಲಿ ಜಮಾಯಿಸಿದ್ದರು.

ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಶನಿವಾರದಂದು ಭವಂತರ್ ಭರ್ಪೈ ಯೋಜನೆ (ಬಿಬಿವೈ) ಅಡಿಯಲ್ಲಿ 36,414 ಎಕರೆಗಳಲ್ಲಿ ಸೂರ್ಯಕಾಂತಿ ಬೆಳೆದ  8,528 ರೈತರಿಗೆ ಮಧ್ಯಂತರ ‘ಭರ್ಪಾಯಿ (ಪರಿಹಾರ)’ ₹ 29.13 ಕೋಟಿಗಳನ್ನು ಡಿಜಿಟಲ್ ಮೂಲಕ ಬಿಡುಗಡೆ ಮಾಡಿದರುರಾಜ್ಯ ಸರ್ಕಾರವು ಈ ವರ್ಷದ ಆರಂಭದಲ್ಲಿ ಸೂರ್ಯಕಾಂತಿ ಬೆಳೆಯನ್ನು ಬಿಬಿವೈ ಅಡಿಯಲ್ಲಿ ಸೇರಿಸುವುದಾಗಿ ಘೋಷಿಸಿತ್ತು. ಈ ಯೋಜನೆಯ ಮೂಲಕ ಎಂಎಸ್‌ಪಿಗಿಂತ ಕಡಿಮೆ ಮಾರಾಟವಾದ ಉತ್ಪನ್ನಗಳ ಬದಲಾಗಿ ರೈತರಿಗೆ ನಿಗದಿತ ಪರಿಹಾರವನ್ನು ಪಾವತಿಸುತ್ತದೆ. ರಾಜ್ಯ ಸರ್ಕಾರವು ಎಂಎಸ್‌ಪಿಗಿಂತ ಕಡಿಮೆ ಮಾರಾಟವಾಗುವ ಸೂರ್ಯಕಾಂತಿ ಬೆಳೆಗೆ ಯೋಜನೆಯಡಿ ಮಧ್ಯಂತರ ಬೆಂಬಲವಾಗಿ ಪ್ರತಿ ಕ್ವಿಂಟಲ್‌ಗೆ ₹ 1,000 ನೀಡುತ್ತಿದೆ.

ರಾಜ್ಯ ಸರ್ಕಾರ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಲ್‌ಗೆ ₹ 6,400 ಎಂಎಸ್‌ಪಿ ದರದಲ್ಲಿ ಖರೀದಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲ ನೀಡಿದ್ದ ರೈತ ನಾಯಕ ರಾಕೇಶ್ ಟಿಕಾಯತ್ ಮಹಾಪಂಚಾಯತ್‌ನಲ್ಲಿ ಭಾಗವಹಿಸಿದ್ದರು.ಅದೇ ವೇಳೆ ಕಿಸಾನ್ ಮಹಾಪಂಚಾಯತ್‌ನಲ್ಲಿ  ಕುಸ್ತಿಪಟ ಬಜರಂಗ್ ಪುನಿಯಾ ಕೂಡಾ ಭಾಗವಹಿಸಿದ್ದಾರೆ,.

ರೈತರನ್ನು ಬೆಂಬಲಿಸಲು ಇಲ್ಲಿಗೆ ಬಂದಿದ್ದೇವೆ. ನಾವು ಕೂಡ ರೈತ ಕುಟುಂಬದಿಂದ ಬಂದವರು. ರಸ್ತೆಯಲ್ಲಿ ನಿಂತಿರುವ ರೈತರೊಂದಿಗೆ ನಾವು ನಿಲ್ಲುತ್ತೇವೆ. ರೈತರ ಪ್ರತಿಭಟನೆಯ ಸಂದರ್ಭದಲ್ಲೂ ನಾವು ರೈತರನ್ನು ಬೆಂಬಲಿಸಿದ್ದೇವೆ, ನಮ್ಮ ಬೆಂಬಲ ಅವರಿಗೆ ಇದ್ದೇ ಇರುತ್ತದೆ  ಎಂದು ಪುನಿಯಾ ಹೇಳಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ (ಚಾರುಣಿ) ಮುಖ್ಯಸ್ಥ ಗುರ್ನಾಮ್ ಸಿಂಗ್ ಚಾರುಣಿ ನೇತೃತ್ವದ ರೈತರು ಜೂನ್ 6 ರಂದು ಶಹಾಬಾದ್ ಬಳಿ ಆರು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಸರ್ಕಾರವು ಸೂರ್ಯಕಾಂತಿ ಬೀಜಗಳನ್ನು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಖರೀದಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿ ಲಾಠಿ ಚಾರ್ಜ್ ನಡೆಸಿದರು.ನಂತರ, ಅದರ ಅಧ್ಯಕ್ಷರು ಸೇರಿದಂತೆ ಒಂಬತ್ತು BKU (ಚಾರುಣಿ) ನಾಯಕರನ್ನು ಗಲಭೆ ಮತ್ತು ಕಾನೂನುಬಾಹಿರ ಸಭೆ ಸೇರಿದಂತೆ ವಿವಿಧ ಆರೋಪಗಳ ಮೇಲೆ ಬಂಧಿಸಲಾಯಿತು.

ಮಹಾಪಂಚಾಯತ್‌ನ್ನು ಉದ್ದೇಶಿಸಿ ಮಾತನಾಡಿದ ಕೆಲವು ರೈತ ಮುಖಂಡರು ಸರ್ಕಾರದ ರೈತ ವಿರೋಧಿ ನೀತಿ ಮತ್ತು ಅವರ ನಾಯಕರ ವಿರುದ್ಧ ಪೊಲೀಸ್ ಕ್ರಮಗಳನ್ನು ಟೀಕಿಸಿದರು. ಸರ್ಕಾರವು ಸೂರ್ಯಕಾಂತಿ ಬೀಜಗಳನ್ನು ಎಂಎಸ್‌ಪಿ ದರದಲ್ಲಿ ಖರೀದಿಸಬೇಕು. ಅದೇ ವೇಳೆ ಇತ್ತೀಚೆಗೆ ಶಹಾಬಾದ್‌ನಲ್ಲಿ ಬಂಧಿಸಲಾದ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಕೆಲವು ರೈತ ಸಂಘಟನೆಗಳು ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ ಖಟ್ಟರ್, ನಿಮ್ಮ ದಾರಿ ತಪ್ಪಿಸುತ್ತಿರುವವರ ಮಾತಿಗೆ ಮರುಳಾಗಬೇಡಿ ಎಂದು ಖಟ್ಟರ್ ಹೇಳಿದ್ದಾರೆ.

ಇದನ್ನೂ ಓದಿ: Supreme Court: ದೆಹಲಿಯಲ್ಲಿ ಸದ್ಯಕ್ಕೆ ದ್ವಿಚಕ್ರ ಟ್ಯಾಕ್ಸಿ ಓಡಿಸುವಂತಿಲ್ಲ: ಸುಪ್ರೀಂ

ರಾಜ್ಯವು ಎಂಎಸ್‌ಪಿ ದರದಲ್ಲಿ ರಾಗಿಯನ್ನು ಖರೀದಿಸಿದಾಗ, ಇತರ ರಾಜ್ಯಗಳ ರೈತರು ತಮ್ಮ ಬೆಳೆಗಳನ್ನು ರಾಜ್ಯದ ಮಂಡಿಗಳಲ್ಲಿ ಮಾರಾಟ ಮಾಡುತ್ತಿರುವುದು ನಂತರ ಕಂಡುಬಂದಿದೆ ಎಂದು ಖಟ್ಟರ್ ಶನಿವಾರ ಹೇಳಿದ್ದಾರೆ. ಈಗ ಸೂರ್ಯಕಾಂತಿ ಸಂಗ್ರಹಣೆಯಲ್ಲಿ ಇದೇ ರೀತಿಯ ಸಾಧ್ಯತೆಗಳು ಉದ್ಭವಿಸುತ್ತಿವೆ. ಹಾಗಾಗಿ, ಮಾರುಕಟ್ಟೆ ದರವು ಏರಿಳಿತಗೊಳ್ಳುತ್ತಿರುವ ಕಾರಣ ನಾವು ಮುನ್ನೆಚ್ಚರಿಕೆಯಾಗಿ ಮಧ್ಯಂತರ ಭರ್ಪಾಯಿ ಘೋಷಿಸಿದ್ದೇವೆ ಎಂದಿದ್ದಾರೆ ಅವರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ