ಅತ್ಯಾಚಾರ ಸಂತ್ರಸ್ತೆಯ ಪೋಷಕರ ಫೋಟೊ ಶೇರ್ ಮಾಡಿದ ರಾಹುಲ್ ವಿರುದ್ಧ ಕ್ರಮಕ್ಕೆ ಎನ್​​​ಸಿಪಿಸಿಆರ್ ಒತ್ತಾಯ

ಅತ್ಯಾಚಾರ ಸಂತ್ರಸ್ತೆಯ ಪೋಷಕರ ಫೋಟೊ ಶೇರ್ ಮಾಡಿದ ರಾಹುಲ್ ವಿರುದ್ಧ ಕ್ರಮಕ್ಕೆ ಎನ್​​​ಸಿಪಿಸಿಆರ್ ಒತ್ತಾಯ
ರಾಹುಲ್ ಗಾಂಧಿ

Delhi Cantt Case: ರಾಹುಲ್ ಗಾಂಧಿಯವರ ಟ್ವೀಟ್ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಆಯೋಗ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

TV9kannada Web Team

| Edited By: Rashmi Kallakatta

Aug 04, 2021 | 8:44 PM

ದೆಹಲಿ: ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 9 ವರ್ಷದ ದಲಿತ ಹುಡುಗಿಯ ಪೋಷಕರ ಫೋಟೊಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ ನಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಬುಧವಾರ ಟ್ವಿಟರ್ ಇಂಡಿಯಾಕ್ಕೆ ನೋಟಿಸ್ ನೀಡಿದೆ. ರಾಹುಲ್ ಗಾಂಧಿಯವರ ಟ್ವೀಟ್ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಆಯೋಗ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಬುಧವಾರ ರಾಹುಲ್ ಗಾಂಧಿ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಿದ್ದು ಕಾನೂನು ಹೋರಾಟದಲ್ಲಿ ನಿಮ್ಮೊಂದಿಗೆ ಇದ್ದೇವೆ. ಇದರಿಂದ ಒಂದು ಇಂಚು ಸಹ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. ಆಕೆಯ ತಾಯಿ ಮತ್ತು ತಂದೆಯ ಕಣ್ಣೀರು ಒಂದೇ ಒಂದು ವಿಷಯವನ್ನು ಹೇಳುತ್ತದೆ – ಅವರ ಮಗಳು, ದೇಶದ ಮಗಳು ನ್ಯಾಯಕ್ಕೆ ಅರ್ಹಳು. ಕಾನೂನು ಹೋರಾಟದಲ್ಲಿ ನಾನು ಅವರೊಂದಿಗೆ ಇದ್ದೇನೆ ಎಂದು ರಾಹುಲ್ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ ನಂತರ ಟ್ವೀಟ್ ಮಾಡಿದ್ದಾರೆ.

ಅವರಿಗೆ ಸಹಾಯ ಮಾಡುವುದು ನನ್ನ ಕೆಲಸ ಎಂದು ಮಾತ್ರ ನನಗೆ ತಿಳಿದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ದೆಹಲಿ ಮಹಿಳಾ ಆಯೋಗವು (DCW) ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ ಮತ್ತು ನಗರ ಪೊಲೀಸರನ್ನು ಕರೆಸಿಕೊಂಡಿದೆ. ಬಾಲಕಿ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆಮಾಡಿದ್ದಾರೆ. ಆನಂತರ ಶವವನ್ನು ಸ್ಮಶಾನದ ಅರ್ಚಕ ಬಲವಂತವಾಗಿ ದಹನ ಮಾಡಿದ್ದಾರೆ. ಬಾಲಕಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾಳೆ ಎಂದು ಅವರು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಸ್ಮಶಾನದಲ್ಲಿ ಅರ್ಚಕ ರಾಧೆ ಶ್ಯಾಮ್ (55) ಮತ್ತು ಇತರ ಮೂವರು ಉದ್ಯೋಗಿಗಳಾದ ಕುಲದೀಪ್ ಕುಮಾರ್ (63), ಲಕ್ಷ್ಮಿ ನಾರಾಯಣ್ (48) ಮತ್ತು ಮೊಹ್ಮದ್ ಸಲೀಂ (49) ಅವರನ್ನು ಸೋಮವಾರ ಬಂಧಿಸಲಾಗಿದೆ. ಭಾನುವಾರ ಸಂಜೆ ಬಾಲಕಿ ತನ್ನ ಮನೆಯ ಸಮೀಪದ ಸ್ಮಶಾನಕ್ಕೆ ಕೂಲರ್‌ನಿಂದ ನೀರು ತೆಗೆದುಕೊಳ್ಳಲು ಹೋಗಿದ್ದಳು. ಸುಮಾರು 30 ನಿಮಿಷಗಳ ನಂತರ ಅಲ್ಲಿನ ಅರ್ಚಕ ರಾಧೇ ಶ್ಯಾಮ್ ಮತ್ತು ಬಾಲಕಿಯ ತಾಯಿಗೆ ಪರಿಚಿತರಾಗಿರುವ ಮೂರು ಜನರು ಆಕೆಯನ್ನು ಕರೆದು ಬಾಲಕಿಯ ದೇಹವನ್ನು ತೋರಿಸಿದರು, ನೀರು ಪಡೆಯುವಾಗ ವಿದ್ಯುತ್ ತಗುಲಿರುವುದಾಗಿ ಅವರು ಹೇಳಿದ್ದರು.

ಪೊಲೀಸರಿಗೆ ಮಾಹಿತಿ ನೀಡಿದರೆ, ಮರಣೋತ್ತರ ಪರೀಕ್ಷೆ ನಡೆಯುತ್ತದೆ. ಹುಡುಗಿಯ ಅಂಗಗಳನ್ನು ತೆಗೆಯಲಾಗುವುದು ಎಂದು ಆರೋಪಿಗಳು ಹೇಳಿದ್ದು ಮೃತದೇಹವನ್ನು ಸುಡಲು ಒತ್ತಾಯಿಸಿದರು ಎಂದಿದ್ದಾರೆ.

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಪ್ರಕರಣಗಳ ಕುರಿತು ಮಾತನಾಡದ ರಾಹುಲ್ ಮೇಲೆ ಬಿಜೆಪಿ ವಾಗ್ದಾಳಿ ರಾಹುಲ್ ಗಾಂಧಿ ಈ ಪ್ರಕರಣವನ್ನು ತನ್ನ ರಾಜಕೀಯ ವಿಷಯವಾಗಿ ಬಳಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತು. ಆದಾಗ್ಯೂ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಒದಗಿಸಲು ಕಾನೂನು ಮತ್ತು ಸುವ್ಯವಸ್ಥೆ ತ್ವರಿತವಾಗಿ ಕಾರ್ಯವೆಸಗಿದೆ ಎಂದು ಬಿಜೆಪಿ ಹೇಳಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ನಮ್ಮ ಪಕ್ಷಕ್ಕೆ ರಾಹುಲ್ ಗಾಂಧಿಯೊಂದಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು. ಅವರು ಮೊದಲು ಹುಡುಗಿಯ ಕುಟುಂಬವನ್ನು ಭೇಟಿ ಮಾಡಿದರು, ನ್ಯಾಯಕ್ಕಾಗಿ ಕರೆ ನೀಡಿದರು ಆದರೆ ಖಂಡನೀಯವಾದದ್ದು ಗಾಂಧಿ ಕುಟುಂಬದ “ಸೆಲೆಕ್ಟಿವಿಸಂ”. ಏಕೆಂದರೆ ಅವರು ರಾಜಸ್ಥಾನ, ಪಂಜಾಬ್ ಮತ್ತು ಛತ್ತೀಸ್‌ಗಢದಂತಹ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ದಲಿತ ಹುಡುಗಿಯರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಎಂದಿಗೂ ಟ್ವೀಟ್ ಮಾಡಿಲ್ಲ, ಮಾತನಾಡಿಲ್ಲ ಎಂದು ಪಾತ್ರಾ ವಾಗ್ದಾಳಿ ನಡೆಸಿದ್ದಾರೆ. “ನೀವು ನಿಮ್ಮ ಕಣ್ಣು ಮುಚ್ಚಿ ಮತ್ತು ಅದರಿಂದ ನಿಮಗೆ ರಾಜಕೀಯ ಲಾಭವಾಗುತ್ತದೆ ಎಂದು ಭಾವಿಸಿದಾಗ ಮಾತ್ರ ತೆರೆಯುವುದಾದರೆ ಇದು ಭಯಾನಕವಾಗಿದೆ. ದೆಹಲಿ ಪೊಲೀಸರು ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದಿದ್ದಾರೆ ಪಾತ್ರಾ.

ಮಾಯಾವತಿ ಕಠಿಣ ಕ್ರಮಕ್ಕೆ ಮಾಯಾವತಿ ಒತ್ತಾಯ ಬಹುಜನ ಸಮಾಜ ಪಕ್ಷದ (BSP) ಅಧ್ಯಕ್ಷೆ ಮಾಯಾವತಿ ಕೂಡ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

“ಅತ್ಯಾಚಾರದ ನಂತರ ಒಂಬತ್ತು ವರ್ಷದ ದಲಿತ ಬಾಲಕಿಯನ್ನು ಬರ್ಬರವಾಗಿ ಹತ್ಯೆಗೈದು ದೆಹಲಿಯಲ್ಲಿ ಆಕೆಯ ದೇಹವನ್ನು ಸುಟ್ಟುಹಾಕುವುದು ತುಂಬಾ ದುಃಖಕರ ಮತ್ತು ನಾಚಿಕೆಗೇಡಿನ ಸಂಗತಿ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

” ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಿಎಸ್‌ಪಿ ಒತ್ತಾಯಿಸುತ್ತದೆ” ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದರು.

ಇದನ್ನೂ ಓದಿ: 9 ಹರೆಯದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಮೆಜಿಸ್ಟೀರಿಯಲ್ ತನಿಖೆಗೆ ಅರವಿಂದ್ ಕೇಜ್ರಿವಾಲ್ ಆದೇಶ

ಇದನ್ನೂ ಓದಿ: ಈ ದೇಶದ ಮಗಳಿಗೆ ನ್ಯಾಯ ಸಿಗಲೇಬೇಕು; ಕೊಲೆಯಾದ ದೆಹಲಿ ಬಾಲಕಿಯ ಕುಟುಂಬದ ಪರ ನಿಂತ ರಾಹುಲ್ ಗಾಂಧಿ

(NCPCR issues a notice to Twitter India after Rahul Gandhi tweeted photos of the parents of Dalit minor rape victim)

Follow us on

Related Stories

Most Read Stories

Click on your DTH Provider to Add TV9 Kannada