ಜಾರ್ಖಂಡ್ ನ್ಯಾಯಾಧೀಶರ ಹತ್ಯೆ ಪ್ರಕರಣ; ಸಿಬಿಐನಿಂದ ವಿಶೇಷ ತನಿಖಾ ತಂಡ ರಚನೆ
Jharkhand Judge Death Case: ಜುಲೈ 28ರಂದು ಜಾರ್ಖಂಡ್ನ ಧನ್ಬಾದ್ ನ್ಯಾಯಾಧೀಶ ಉತ್ತಮ್ ಆನಂದ್ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆಟೋ ಅವರಿಗೆ ಡಿಕ್ಕಿ ಹೊಡೆದಿತ್ತು. ಈ ಪ್ರಕರಣವನ್ನು ಸಿಬಿಗೆ ತನಿಖೆಗೆ ವಹಿಸಲಾಗಿದೆ.
ರಾಂಚಿ: ಜಾರ್ಖಂಡ್ನ ಧನ್ಬಾದ್ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ಆಟೋದಲ್ಲಿ ಗುದ್ದಿ ಕೊಲೆ ಮಾಡಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಅಪಘಾತವೆಂದು ಬಿಂಬಿಸಲು ಆಟೋದಲ್ಲಿ ಗುದ್ದಿ ನ್ಯಾಯಾಧೀಶರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು, ತನಿಖೆಗಾಗಿ ಇಂದು 20 ವಿಶೇಷ ಅಧಿಕಾರಿಗಳ ತಂಡವೊಂದನ್ನು ರಚಿಸಲಾಗಿದೆ.
ಜಾರ್ಖಂಡ್ನ 49 ವರ್ಷದ ಧನ್ಬಾದ್ ನ್ಯಾಯಾಧೀಶರ ಹಿಟ್ ಆ್ಯಂಡ್ ರನ್ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕಳೆದ ಶನಿವಾರ ನಿರ್ಧರಿಸಿದ್ದರು. ಜುಲೈ 28ರಂದು ನ್ಯಾಯಾಧೀಶ ಉತ್ತಮ್ ಆನಂದ್ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆಟೋವೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರ ಸ್ಥಳದಲ್ಲೇ ಮೃತಪಟ್ಟಿದ್ದರು. ಇದೊಂದು ಅಪಘಾತ ಎಂದು ಮೊದಲು ನಂಬಲಾಗಿತ್ತು. ಆದರೆ, ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದಾಗ ಇದು ಪೂರ್ವನಿರ್ಧರಿತ ಕೊಲೆ ಎಂಬುದು ಖಚಿತವಾಗಿತ್ತು.
ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಘಟನೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದ್ದು, ಆಟೋ ಚಾಲಕ ಉದ್ದೇಶಪೂರ್ವಕವಾಗಿ ಉತ್ತಮ್ ಆನಂದ್ ಅವರಿಗೆ ಡಿಕ್ಕಿ ಹೊಡೆದಿದ್ದಈ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಡಿಕ್ಕಿ ಹೊಡೆದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಇದರ ಮಾಲೀಕರಿಂದ ಆಟೋವನ್ನು ಕದ್ದು ತಂದು ನ್ಯಾಯಾಧೀಶರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಿಂದ ವಿಷಯ ಬೆಳಕಿಗೆ ಬಂದಿತ್ತು.
ನ್ಯಾಯಾಧೀಶ ಉತ್ತಮ್ ಆನಂದ್, ಇತ್ತೀಚೆಗೆ ಹೈಪ್ರೊಫೈಲ್ ಕೇಸ್ವೊಂದರ ವಿಚಾರಣೆ ನಡೆಸಿದ್ದರು. ಅದರಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಇದೇ ಸಿಟ್ಟಿಗೆ ಹತ್ಯೆ ಮಾಡಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇತ್ತೀಚೆಗಷ್ಟೇ ಮಾಜಿ ಶಾಸಕರ ಆಪ್ತರಾಗಿದ್ದ ರಂಜಯ್ ಕೊಲೆ ಪ್ರಕರಣದಂತಹ ಹಲವಾರು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಅಲ್ಲದೇ ಆರೋಪಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದರು. ಹೀಗಿರುವಾಗಲೇ ಈ ಘಟನೆ ಸಂಭವಿಸಿದ್ದು, ಆಟೋ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದೆ ಎಂದು ಮೃತ ನ್ಯಾಯಾಧೀಶರ ತಂದೆ ಸದಾನಂದ್ ಪ್ರಸಾದ್ ಆರೋಪಿಸಿದ್ದರು.
ಸಿಬಿಐನಿಂದ ರಚಿಸಲ್ಪಟ್ಟಿರುವ ವಿಶೇಷ ತನಿಖಾಧಿಕಾರಿಗಳ ತಂಡದ ಜೊತೆ ದೆಹಲಿಯ ಸೆಂಟ್ರಲ್ ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ ಎಕ್ಸ್ಪರ್ಟ್ ಕೂಡ ಇದ್ದಾರೆ. ಇಂದು ಸಿಬಿಐ ಈ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದ್ದು, ಶೀಘ್ರದಲ್ಲೇ ಈ ಸಾವಿನ ಹಿಂದಿನ ಅಸಲಿ ವಿಷಯ ಬಯಲಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಜಾರ್ಖಂಡ್ ನ್ಯಾಯಾಧೀಶರ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ನೀಡಲು ಸಿಎಂ ಹೇಮಂತ್ ಸೊರೆನ್ ನಿರ್ಧಾರ
(Jharkhand Judge Death CBI forms SIT to probe into death of Dhanbad district judge Hit and Run Case)