NT Rama Rao Birth Anniversary: ಇವರಂಥ ಜನಪ್ರಿಯ ನಟ ಮತ್ತು ಜನಾನುರಾಗಿ ನಾಯಕ ಶತಮಾನಕ್ಕೊಬ್ಬರೇ

ದಕ್ಷಿಣ ಭಾರತದ ಆಗಿನ ಎಲ್ಲ ಜನಪ್ರಿಯ ನಟಿಯರ ಜೊತೆ ನಾಯಕನಾಗಿ ನಟಿಸಿ ಮಿಂಚಿದ ರಾಮರಾವ್ ಅವರಲ್ಲಿ ರಾಜಕೀಯದಲ್ಲೂ ಜನನಾಯಕನಾಗಿ ದುಡಿಯುವ ಉಮೇದಿ ಹುಟ್ಟಿಕೊಂಡಿತ್ತು. ತೆಲುಗು ಮಾತಾಡುವ ಜನರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದೊಂದಿಗೆ ಅವರು1982 ರಲ್ಲಿ ಟಿಡಿಪಿ ಪಕ್ಷವನ್ನು ಹುಟ್ಟು ಹಾಕಿದರು.

NT Rama Rao Birth Anniversary: ಇವರಂಥ ಜನಪ್ರಿಯ ನಟ ಮತ್ತು ಜನಾನುರಾಗಿ ನಾಯಕ ಶತಮಾನಕ್ಕೊಬ್ಬರೇ
ಎನ್ ಟಿ ರಾಮರಾವ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 28, 2022 | 8:05 AM

ನಮಗೆಲ್ಲ ಎನ್ ಟಿ ಆರ್ (NTR) ಅಂತಲೇ ಚಿರಪರಿಚಿತರಾಗಿರುವ ನಂದಮೂರಿ ತಾರಕ ರಾಮರಾವ್ ಅವರು ಬದುಕಿದ್ದರೆ ಇಂದು ತಮ್ಮ 99ನೇ ಜನ್ಮದಿನವನ್ನು (ಜನನ: ಮೇ 28, 1923) ಆಚರಿಸಿಕೊಳ್ಳುತ್ತಿದ್ದರು. ಅವರು ಗತಿಸಿ 26 ವರ್ಷಗಳಾಗಿವೆ. ಲಾರ್ಜರ್ ದ್ಯಾನ್ ಲೈಫ್ (larger than life) ಅಂತ ಹೇಳ್ತೀವಲ್ಲ ಹಾಗಿತ್ತು ಅವರ ಬದುಕು. ಸರ್ಕಾರೀ ಅಧಿಕಾರಿಯಾಗಿ, ನಟ, ನಿರ್ದೇಶಕನಾಗಿ, ತೆಲುಗು ದೇಶಂ ಪಕ್ಷದ (TDP) ಸಂಸ್ಥಾಪಕ ಮತ್ತು ಮೂರು ಬಾರಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ದುಡಿದ ಅವರು ಈಗಲೂ ತೆಲುಗು ಭಾಷಿಕರ ಹೃದಯಗಳಲ್ಲಿ ಶಾಶ್ವತ ಉಳಿದು ಬಿಟ್ಟಿದ್ದಾರೆ ಅಂದರೆ ಉತ್ಪ್ರೇಕ್ಷೆ ಅನಿಸದು. ನಟನಾಗಿ ಅವರು ತೆಲುಗು ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಮತ್ತು ಆ ಪಟ್ಟವನ್ನು ಸುಮಾರು ಮೂರು ದಶಕಗಳವರೆಗೆ ಕಾಯ್ದುಕೊಂಡಿದ್ದರು. ಅವರ ಸಮಕಾಲೀನರಲ್ಲಿ ಹಲವಾರು ನಟರು ಸ್ಟಾರ್ ಗಳಾಗಿ ಮೆರೆದರೂ ಜನಪ್ರಿಯತೆಯಲ್ಲಿ ಅವರಲ್ಲಿ ಯಾರಿಗೂ ಎನ್ ಟಿ ಆರ್ ಅವರನ್ನು ಮೀರಿಸಲು ಸಾಧ್ಯಗಲಿಲ್ಲ. ಆ ಜನಪ್ರಿಯತೆಯೇ ಅವರಿಗೆ ರಾಜಕಾರಣದಲ್ಲೂ ಪ್ರಚಂಡ ಯಶಸ್ಸು ದೊರಕಿಸಿತು.

ರಾಮರಾವ್ ಅವರು ಮಚಲಿಪಟ್ನಂ ಹೆಸರಿನ ಒಂದು ಚಿಕ್ಕ ಕರಾವಳಿ ತೀರದ ಪಟ್ಟಣದಲ್ಲಿ ಒಂದು ಬಡ ಕುಟುಂಬದಲ್ಲಿ ಹುಟ್ಟಿ ಅಖಂಡ ಆಂಧ್ರಪ್ರದೇಶದ (ಈಗ ಅದು ಎರಡು ಭಾಗವಾಗಿದೆ) ತೆಲುಗುಬಿಡ್ಡ ನಾಗಿ ಬೆಳೆದಿದ್ದು ಮಾತ್ರ ಪವಾಡಸದೃಶ ಮಾರಾಯ್ರೇ.

ತಮ್ಮೂರಿಗೆ ಹತ್ತಿರದ ಗುಂಟೂರಿನ ಆಂಧ್ರ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಬಳಿಕ ಅವರು ಆಗಿನ ಬ್ರಿಟಿಷ್ ಸಾಮ್ರಾಜ್ಯದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ನಾಗರಿಕ ಸೇವೆ ಪರೀಕ್ಷೆ ಬರೆದು ಪಾಸಾಗಿ ಉಪ-ನೋಂದಣಾಧಿಕಾರಿಯಾಗಿ ನೌಕರಿಗೆ ಸೇರಿದರು. ಅವರ ಪೋಸ್ಟಿಂಗ್ ಅಗಿದ್ದು ಅದೇ ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿ.

ಆದರೆ ಕೈ ತುಂಬಾ ಸಂಬಳ ಬರುತ್ತಿದ್ದರೂ ಸರ್ಕಾರೀ ನೌಕರಿ ಅವರಿಗೆ ರುಚಿಸಲಿಲ್ಲ. ಚಿತ್ರನಟನಾಗುವ ಅದಮ್ಯ ಬಯಕೆ ಮನಸ್ಸಿನಲ್ಲೇ ಪೋಷಿಸುತ್ತಿದ್ದ ಎನ್ ಟಿ ಆರ್ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟರು. ಭಾರತೀಯ ಚಿತ್ರರಂಗ ಇನ್ನೂ ಶೈಶವಾವಸ್ಥೆಯಲ್ಲಿದ್ದ ದಿನಗಳವು. ರಾಮರಾಯರ ಚೊಚ್ಚಲು ಸಿನಿಮಾ ‘ಮನ ದೇಸಂ’ 1949 ರಿಲೀಸ್ ಆಗಿತ್ತು.

ಆ ಸಿನಿಮಾ ಗಳಿಸಿದ ಪ್ರಚಂಡ ಯಶಸ್ಸು ತೆಲುಗಿನ ಮೊದಲ ಸ್ಟಾರ್ ಹುಟ್ಟಿಗೆ ಕಾರಣವಾಯ್ತು.

ಅಲ್ಲಿಂದ 1982 ರವರೆಗೆ ಅವರ ಹಿಂತಿರುಗಿ ನೋಡದೆ ಸುಮಾರು 300 ಚಿತ್ರಗಳಲ್ಲಿ ನಟಿಸಿದರು. ಸಿನಿಮಾ ದಿಗ್ದರ್ಶನಕ್ಕೂ ಇಳಿದ ಅವರು 12 ಚಿತ್ರಗಳನ್ನು ನಿರ್ದೇಸಿದರು. 50 ರ ದಶಕದಲ್ಲಿ ಪ್ರಾಂತೀಯ ಭಾಷೆಗಳಲ್ಲಿ ಪೌರಾಣಿಕ ಚಿತ್ರಗಳೇ ಹೆಚ್ಚು ತಯಾರಾಗುತ್ತಿದ್ದವು ಮತ್ತು ಕೃಷ್ಣನ ಪಾತ್ರಕ್ಕೆ ಎನ್ ಟಿ ಅರ್ ಅವರಿಗಿಂತ ಚೆನ್ನಾಗಿ ಬೇರೆ ಯಾರೂ ಸೂಟ್ ಆಗಲಾರರು ಅನ್ನೋ ಮಾತು ಆಗ ಜನಜನಿತವಾಗಿತ್ತು.

ದಕ್ಷಿಣ ಭಾರತದ ಆಗಿನ ಎಲ್ಲ ಜನಪ್ರಿಯ ನಟಿಯರ ಜೊತೆ ನಾಯಕನಾಗಿ ನಟಿಸಿ ಮಿಂಚಿದ ರಾಮರಾವ್ ಅವರಲ್ಲಿ ರಾಜಕೀಯದಲ್ಲೂ ಜನನಾಯಕನಾಗಿ ದುಡಿಯುವ ಉಮೇದಿ ಹುಟ್ಟಿಕೊಂಡಿತ್ತು. ತೆಲುಗು ಮಾತಾಡುವ ಜನರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದೊಂದಿಗೆ ಅವರು1982 ರಲ್ಲಿ ಟಿಡಿಪಿ ಪಕ್ಷವನ್ನು ಹುಟ್ಟು ಹಾಕಿದರು.

ಸಿನಿಮಾ ಕ್ಷೇತ್ರದಲ್ಲಿ ಗಳಿಸಿದ್ದ ಜನಾನುರಾಗ ಮತ್ತು ಪಾಪ್ಯುಲಾರಿಟಿ ಅವರನ್ನು ಅತ್ಯಂತ ಪ್ರಭಾವಿ ನಾಯಕನಾಗಿ ಬೆಳೆಸಿತು. ತನಗೆ ಎದುರಾಳಿಗಳೇ ಇಲ್ಲವೆಂದು ಬೀಗುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಆಂಧ್ರಪ್ರದೇಶದಲ್ಲಿ ಮರ್ಮಾಘಾತವಾಯಿತು. 1983 ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಟಿಡಿಪಿಗೆ ಚುನಾವಣಾ ಅಯೋಗದಿಂದ ಮಾನ್ಯತೆ ಸಿಕ್ಕಿರದ ಕಾರಣ ಎನ್ ಟಿ ಆರ್ ತಮ್ಮ ಪಕ್ಷದ ಸದಸ್ಯರನ್ನು ಟಿಡಿಪಿ-ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿ ಚುನಾವಣೆ ಗೆದ್ದು ಕಾಂಗ್ರೆಸ್ ಪಕ್ಷದ ನೆರವಿನೊಂದಿಗೆ ಸರ್ಕಾರ ರಚಿಸಿದರು.

1956 ರಲ್ಲಿ ಆಂಧ್ರಪ್ರದೇಶ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೂ ಎನ್ ಟಿ ಅರ್ ಅವರದ್ದಾಯಿತು.

ಆದರೆ ಮುಖ್ಯಮಂತ್ರಿಯಾಗಿ ಅವರ ಮೊದಲ ಅವಧಿ ಎರಡು ವರ್ಷಗಳಿಗಿಂತ ಕಡಿಮೆ ಅವಧಿಗೆ ಮೊಟಕುಗೊಂಡಿತು. 1984 ಆಗಸ್ಟನಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಳ್ಳುತ್ತಿದ್ದ ಅವರಿಗೆ ಬೇರೆ ರೀತಿ ಆಘಾತ ಎದುರಾಯಿತು. ಕಾಂಗ್ರೆಸ್ ನೇತೃತ್ವದ ಆಗಿನ ಕೇಂದ್ರ ಸರ್ಕಾರ ಆಂಧ್ರ ಪದೇಶ ರಾಜ್ಯಪಾಲರ ಮೂಲಕ ಎನ್ ಟಿ ಆರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಸರಿಸಿ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಕಾಂಗ್ರೆಸ್ ನ ನಾದೇಂಡ್ಲ ಭಾಸ್ಕರ ರಾವ್ ಮುಖ್ಯಮಂತ್ರಿಯಾಗುವಂತೆ ನೋಡಿಕೊಂಡಿತು. ಆದರೆ ಕೇವಲ ಒಂದು ತಿಂಗಳ ಬಳಿಕ ಅವರು ಟಿಡಿಪಿ ಸದಸ್ಯರ ಬೆಂಬಲ ಪುನಃ ಸಂಘಟಿಸಿ ಎರಡನೇ ಅವಧಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ವಾಪಸ್ಸಾದರು.

1984 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಟಿಡಿಪಿ ಕಂಡ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಅವರು ಆಂಧ್ರಪದೇಶ ವಿಧಾನ ಸಭೆಗೆ ಹೊಸ ಜನಾದೇಶ ಪಡೆಯಲು ನಿರ್ಧರಿಸಿ 1985 ರಲ್ಲಿ ಅದನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗವನ್ನು ಕೋರಿದರು. ಅದರ ಫಲಿತಾಂಶವೇನಾಯಿತು ಗೊತ್ತಾ ಮಾರಾಯ್ರೇ? ಅಸೆಂಬ್ಲಿಯ 292 ಸೀಟುಗಳ ಪೈಕಿ 202 ರಲ್ಲಿ ಎನ್ ಟಿ ಆರ್ ಜಯಭೇರಿ ಬಾರಿಸಿ ಮುಖ್ಯಮಂತ್ರಿಯಾಗಿ ಮುಂದುವರಿದರು.

ರಾಮರಾಯರು ಮುಖ್ಯಮಂತ್ರಿಯಾಗಿ ಮೊದಲ ಎರಡು ಅವಧಿಯಲ್ಲಿ ಬಡತನ ರೇಖೆಗಿಂತ ಕೆಳಗಿದ್ದ ಜನರಿಗೆ ಬಟ್ಟೆ, ಸಬ್ಸಿಡಿಗಳು, ಆಹಾರ ಮತ್ತು ವಸತಿ ಸೇರಿದಂತೆ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಕಾರ್ಯಕ್ರಮವನ್ನು ಪ್ರಾರಂಭಿಸಿ ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವ ಮೂಲಕ ಲಕ್ಷಾಂತರ ಗೃಹಿಣಿಯರ ಕಣ್ಣೀರು ಒರೆಸಿದರು.

ಈ ಕ್ರಮಗಳು ರಾಮರಾಯರ ವರ್ಚಸ್ಸು ಮತ್ತು ಜನಪ್ರಿಯತೆ ಹೆಚ್ಚಿಸಿದ್ದು ನಿಜವಾದರೂ ಸರ್ಕಾರದ ವೆಚ್ಚಗಳನ್ನು ಗಣನೀಯವಾಗಿ ಹೆಚ್ಚಿಸಿದವಲ್ಲದೆ ತೆರಿಗೆಯ ಆದಾಯವನ್ನು ಕಡಿಮೆ ಮಾಡಿದವು.

ಅವರ ಜನಪ್ರಿಯ ಕಾರ್ಯಕ್ರಮಗಳೇ ಅವರಿಗೆ ಮುಳುವಾದವು ಮಾರಾಯ್ರೇ. 1989 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಕೇವಲ 74 ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಅಧಿಕಾರಕ್ಕೆ ಬಂತು. ಎನ್‌ಟಿಆರ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನೇತೃತ್ವ ವಹಿಸಿದ್ದರು ಮತ್ತು ಪಕ್ಷದ ರಾಜಕೀಯ ನೆಲೆಯನ್ನು ಬಲಪಡಿಸಲು ಹಗಲಿರುಳು ಶ್ರಮಿಸಿದರು.

ಅವರ ಪ್ರಯತ್ನಗಳು ಫಲ ನೀಡಿ 1994 ರ ಅಸೆಂಬ್ಲಿ ಚುನಾವಣೆಯಲ್ಲಿ ಟಿಡಿಪಿ 216 ಸ್ಥಾನಗಳನ್ನು ಗೆದ್ದು ಎನ್‌ಟಿಆರ್ ಮೂರನೇ ಅವಧಿಗೆ ಮುಖ್ಯಮಂತ್ರಿಯಾದರು.

NTR with his first wife Basavarama Taraka

ಮೊದಲ ಪತ್ನಿ ಬಸವರಮಾ ತಾರತರೊಂದಿಗೆ ಎನ್​ಟಿಆರ್

ಪದ್ಮಶ್ರೀ ಪುರಸ್ಕೃತ ಎನ್ ಟಿ ಆರ್ ಅವರ ಖಾಸಗಿ ಬದುಕನ್ನು ನೋಡುವುದಾದರೆ ಕೇವಲ ತಮ್ಮ 20 ನೇ ವಯಸ್ಸಿನಲ್ಲಿ 1942 ರಲ್ಲಿ ಬಸವರಮಾ ತಾರಕಂ ಅವರನ್ನು ಮದುವೆಯಾದರು. ದಂಪತಿಗೆ ಚಿತ್ರನಟರಾದ ನಂದಮೂರಿ ಹರಿಕೃಷ್ಣ, ನಂದಮೂರಿ ಬಾಲಕೃಷ್ಣ ಸೇರಿದಂತೆ 8 ಗಂಡುಕ್ಕಳು ಮತ್ತು ಕೇಂದ್ರ ಸಚಿವೆಯಾಗಿದ್ದ ದಗ್ಗುಬಟ್ಟಿ ಪುರಂದೇಶ್ವರಿ ಸೇರಿದಂತೆ 4 ಹೆಣ್ಣಮಕ್ಕಳು.

1985 ರಲ್ಲಿ ಬಸವರಮಾ ನಿಧನರಾದ ಮೇಲೆ 1993 ರಲ್ಲಿ ಅವರು ಲಕ್ಷ್ಮೀ ಪಾರ್ವತಿ ಅವರನ್ನು ವಿವಾಹವಾದರು.

ಪಾರ್ವತಿ ಅವರು ಎನ್ ಟಿ ಆರ್ ಅವರ ಉತ್ತರಾಧಿಕಾರಿಯಾಗಲು ಪ್ರಯತ್ನಿಸಿದಾಗ ಟಿಡಿಪಿಯಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದವು. ಅಷ್ಟರಲ್ಲಾಗಲೇ ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕಕೊಂಡಿದ್ದ ಎನ್ ಟಿ ಆರ್ ಅಳಿಯ ನಾರಾ ಚಂದ್ರಬಾಬು ನಾಯ್ಡು ಅವರಿಗೆ ಪಾರ್ವತಿ ಅವರ ಹಸ್ತಕ್ಷೇಪ ಸರಿಕಾಣದೆ ಹೋದಾಗ ತಮ್ಮ ಮಾವನ ವಿರುದ್ಧವೇ ಸಂಚು ಮಾಡಿ ಮುಖ್ಯಮಂತ್ರಿ ಗದ್ದುಗೆಯನ್ನು ಸೆಳೆದುಕೊಂಡುಬಿಟ್ಟರು. ಆಗಸ್ಟ್ 1995 ರಲ್ಲಿ ನಾಯ್ಡು ಟಿಡಿಪಿ ಅಧ್ಯಕ್ಷರಾಗಿ ಆಯ್ಕೆಗೊಂಡು ಮುಖ್ಯಮಂತ್ರಿಯಾಗಿಯೂ ಆದರು.

ಒಂದು ವರ್ಷದ ನಂತರ ದಶಕಗಳವರೆಗೆ ತೆಲುಗು ಜನರ ಹೃದಯ ಸಾಮ್ರಾಟರಾಗಿದ್ದ ಎನ್ ಟಿ ರಾಮರಾವ್ ಹೃದಯಾಘಾತದಿಂದ ನಿಧನರಾದರು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್