ಒಡಿಶಾ ಕರಾವಳಿಯಲ್ಲಿ ಮುಳುಗಿದ ಪನಾಮಾ ಸರಕು ಹಡಗು; ಇಬ್ಬರ ರಕ್ಷಣೆ, 22 ನಾವಿಕರಿಗಾಗಿ ಹುಡುಕಾಟ

ಒಡಿಶಾದ ಪಾರಾದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲಿ ದೂರದ ಬಂಗಾಳ ಕೊಲ್ಲಿಯಲ್ಲಿ ಸಿಂಗಾಪುರಕ್ಕೆ ತೆರಳುತ್ತಿದ್ದ ಪನಾಮಾ ಧ್ವಜ ಹೊಂದಿದ್ದ ಸರಕು ಹಡಗೊಂದು ಮುಳುಗಡೆಯಾಗಿದೆ. ಹಡಗಿನಲ್ಲಿ ಒಟ್ಟು 24 ಮಂದಿ ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ. ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಭಾರತೀಯ ಕರಾವಳಿ ಪಡೆ ಮತ್ತು ಭಾರತೀಯ ನೌಕಾಪಡೆಯು ಜಂಟಿಯಾಗಿ ಭಾರಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ಹಡಗಿನ ಕೊನೆಯ ಲೊಕೇಶನ್ ಸಿಕ್ಕ ಸ್ಥಳದ ಸುತ್ತಮುತ್ತ ಸಂಚರಿಸುತ್ತಿದ್ದ ಇತರ ಹಡಗುಗಳನ್ನು ಎಚ್ಚರಿಸಲಾಗಿದ್ದು, ಸಿಬ್ಬಂದಿಯನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ನೆರವಾಗುವಂತೆ ವಿನಂತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಡಗು ಮುಳುಗಲು ನಿಖರವಾದ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಒಡಿಶಾ ಕರಾವಳಿಯಲ್ಲಿ ಮುಳುಗಿದ ಪನಾಮಾ ಸರಕು ಹಡಗು; ಇಬ್ಬರ ರಕ್ಷಣೆ, 22 ನಾವಿಕರಿಗಾಗಿ ಹುಡುಕಾಟ
Cargo Ship
Image Credit source: TV9

Updated on: Aug 22, 2026 | 11:24 PM

ಭುವನೇಶ್ವರ, ಆಗಸ್ಟ್ 22: ಒಡಿಶಾದ ಕರಾವಳಿ ಬಳಿಯ ಬಂಗಾಳ ಕೊಲ್ಲಿಯಲ್ಲಿ 24 ಸಿಬ್ಬಂದಿಯಿದ್ದ ಪನಾಮಾ ಧ್ವಜದ ಸರಕು ಹಡಗೊಂದು (Cargo Ship) ಮುಳುಗಡೆಯಾಗಿದೆ. ಹಡಗಿನೊಂದಿಗಿನ ಸಂಪರ್ಕ ಕಡಿತಗೊಂಡ ಬೆನ್ನಲ್ಲೇ ಭಾರತೀಯ ಕರಾವಳಿ ಪಡೆ ಮತ್ತು ಭಾರತೀಯ ನೌಕಾಪಡೆಯು ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ಈಗಾಗಲೇ ಇಬ್ಬರನ್ನು ರಕ್ಷಿಸಲಾಗಿದ್ದು, 22 ಜನರು ನಾಪತ್ತೆಯಾಗಿದ್ದಾರೆ.

20 ಚೀನಾ, 3 ಮ್ಯಾನ್ಮಾರ್ ಮತ್ತು ಓರ್ವ ಬಾಂಗ್ಲಾದೇಶದ ಪ್ರಜೆಯನ್ನು ಒಳಗೊಂಡಿದ್ದ ‘ಎಮ್‌ವಿ ಓಷನ್ ವಿನ್ನರ್’ (MV Ocean Winner) ಹಡಗಿನೊಂದಿಗಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ ಎಂಬ ಮಾಹಿತಿ ತಮಗೆ ಲಭ್ಯವಾಗಿತ್ತು ಎಂದು ಭಾರತೀಯ ಕರಾವಳಿ ಪಡೆ ತಿಳಿಸಿದೆ. ಕರಾವಳಿ ಪಡೆಯು ಇದುವರೆಗೆ ಇಬ್ಬರು ನಾವಿಕರನ್ನು ರಕ್ಷಿಸಿದ್ದು, ನಾಪತ್ತೆಯಾದ ಉಳಿದ 22 ಮಂದಿ ಸಿಬ್ಬಂದಿಗಾಗಿ ಕಡಲಿನಲ್ಲಿ ಹುಡುಕಾಟ ಮುಂದುವರಿದಿದೆ. ಈ ಹಡಗು ಒಡಿಶಾದ ಪಾರಾದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲಿ ದೂರದಲ್ಲಿ ಮುಳುಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ: ‘ವಾಣಿಜ್ಯ ಹಡಗು, ನಾವಿಕರ ಮೇಲಿನ ದಾಳಿ ತಡೆಯಿರಿ’; ಇರಾನ್ ವಿದೇಶಾಂಗ ಸಚಿವರ ಜೊತೆ ಭಾರತ ಮಾತುಕತೆ

ಹಡಗು ಮುಳುಗುವ ಮುನ್ನವೇ ‘ಎಮ್‌ವಿ ಓಷನ್ ವಿನ್ನರ್’ ಜೊತೆಗಿನ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಮಾಹಿತಿ ಬಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಡಗು ಕಬ್ಬಿಣದ ಅದಿರು ಹೊತ್ತು ಶುಕ್ರವಾರ ಒಡಿಶಾ ಕರಾವಳಿಯಿಂದ ಸಿಂಗಾಪುರದತ್ತ ಪ್ರಯಾಣ ಬೆಳೆಸಿತ್ತು. ಆರಂಭದಲ್ಲಿ ಹಡಗಿನಲ್ಲಿದ್ದ ಎಷ್ಟು ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದರು. ಆದರೆ ನಂತರ ಕರಾವಳಿ ಪಡೆಯು ಇಬ್ಬರನ್ನು ರಕ್ಷಿಸಿರುವುದಾಗಿ ಖಚಿತಪಡಿಸಿದೆ.


ಕರಾವಳಿ ಪಡೆ ಮತ್ತು ನೌಕಾಪಡೆಯ ಜಂಟಿ ಕಾರ್ಯಾಚರಣೆ:

ಹಡಗಿನ ಸಂಪರ್ಕ ಕಡಿತಗೊಂಡು ಮುಳುಗಡೆಯಾದ ವಿಷಯ ತಿಳಿದ ತಕ್ಷಣವೇ ಭಾರತೀಯ ಕರಾವಳಿ ಪಡೆ ಮತ್ತು ಭಾರತೀಯ ನೌಕಾಪಡೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ. ಘಟನಾ ಸ್ಥಳದ ಸುತ್ತಮುತ್ತಲಿದ್ದ ಇತರ ವಾಣಿಜ್ಯ ಹಡಗುಗಳಿಗೂ ಮುನ್ನೆಚ್ಚರಿಕೆ ನೀಡಿ, ರಕ್ಷಣಾ ಕಾರ್ಯಕ್ಕೆ ನೆರವಾಗುವಂತೆ ಸೂಚಿಸಲಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:22 pm, Sat, 22 August 26

Loading...
Unable to load recommendations.
Follow Us