ದೆಹಲಿ: ಕೇವಲ 15 ನಿಮಿಷಗಳಲ್ಲಿ ಕೊವಿಡ್-19 ಸೋಂಕು ಪತ್ತೆಮಾಡುವ ಮತ್ತು ಭಾರತದಲ್ಲಿ ಪ್ರಥಮಬಾರಿಗೆ ತಯಾರಾಗಿರುವ ಕೊರೊನಾ ವೈರಸ್ ತ್ವರಿತ-ಟೆಸ್ಟಿಂಗ್ ಕಿಟ್ ಅನ್ನು ಗುರುವಾರದಂದು ಮಾರುಕಟ್ಟೆಗೆ ಲಾಂಚ್ ಮಾಡಲಾಗಿದ್ದು, ದೇಶದಾದ್ಯಂತ ಮೆಡಿಕಲ್ ಸ್ಟೋರ್ಗಳಲ್ಲಿ ಇದು ಎರಡು-ಮೂರು ದಿನಗಳಲ್ಲಿ ಲಭ್ಯವಾಗಲಿದೆ ಎಂದು ಇದನ್ನು ತಯಾರಿಸಿರುವ ಪುಣೆಯ ಮೈಲ್ಯಾಬ್ ಡಿಸ್ಕವರಿ ಸಲ್ಯೂಶನ್ಸ್ ಲಿಮಿಟೆಡ್ ಸಂಸ್ಥೆ ತಿಳಿಸಿದೆ. ಕಂಪನಿ ನೀಡಿರುವ ಮಾಹಿತಿ ಪ್ರಕಾರ ಕಿಟ್ನ ಹೆಸರು ಕೋವಿಸೆಲ್ಫ್ ಅಗಿದ್ದು ಅದರ ಬೆಲೆ ರೂ. 250 ಆಗಿದೆ.
ಮೈಲ್ಯಾಬ್ ಡಿಸ್ಕವರಿ ಸಲ್ಯೂಶನ್ಸ್ ಸಂಸ್ಥೆಯು ಮನೆಯಲ್ಲೇ ಟೆಸ್ಟ್ ಮಾಡಿಕೊಳ್ಳಬಹುದಾದ ಕೋವಿಡ್-19 ಸೆಲ್ಫ್ ಟೆಸ್ಟ್ ಕಿಟ್ ಅನ್ನು ಭಾರತೀಯ ವೈದ್ಯಕೀಯ ಸಂಶೋಧನೆ ಕೌನ್ಸಿಲ್ನಿಂದ (ಐಸಿಎಮ್ಆರ್) ಅನುಮೋದನೆ ಪಡೆದ ನಂತರ ವಾಣಿಜ್ಯವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಭಾರತದ ಜನರು ತಮ್ಮ ಮನೆಗಳಲ್ಲೇ ಕೋವಿಡ್-19 ಟೆಸ್ಟ್ ಮಾಡಿಕೊಳ್ಳಬಹುದಾದ ಮೊದಲ ಕಿಟ್ಇದಾಗಿದೆ. ಭಾರತದ ಪೋಸ್ಟಲ್ ಇಂಡೆಕ್ಸ್ ನಂಬರ್ ಕೋಡ್ (ಪಿನ್ಕೋಡ್) ಹೊಂದಿರುವ ಶೇಕಡಾ 95 ಊರುಗಳಿಗೆ ಇದನ್ನು ಸರಬರಾಜು ಮಾಡಲಾಗುವುದು, ಮತ್ತು ಫಾರ್ಮಾಸಿ ಮತ್ತು ಡ್ರಗ್ಹೌಸ್ಗಳಲ್ಲಿ ಶಾಪ್ಗಳಲ್ಲಿ ಇದು ಓವರ್ ದಿ ಕೌಂಟರ್ ಸಾಮಗ್ರಿಯಾಗಿ ದೊರೆಯುವುದು, ಎಂದು ಕಂಪನಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ದೇಹದಲ್ಲಿ ಕೊವಿಡ್-19 ಸೋಂಕನ್ನು ಪತ್ತೆಮಾಡುವ ಱಪಿಡ್ ಌಂಟಿಜೆನ್ ಟೆಸ್ಟ್ ಕಿಟ್ (ಆರ್ಎಟಿ) ವಾಣಿಜ್ಯವಾಗಿ ಮಾರಾಟ ಮಾಡಲು ಮೇ 19 ರಂದು ಐಸಿಎಮ್ಆರ್ ಅನುಮೋದನೆ ನೋಡಿತ್ತು. ಮನೆಗಳಲ್ಲೇ ಮಾಡುವ ಪ್ರಿಗ್ನೆನ್ಸಿ ಟೆಸ್ಟ್ನಂತೆಯೇ ಕೊವಿಡ್-10 ಟೆಸ್ಟ್ ಮಾಡಬಹುದು.
ಜನರು ಈ ಕಿಟ್ ಅನ್ನು ಈ-ಕಾಮರ್ಸ್ ಪ್ಲಾಟ್ಫಾರ್ಮಗಳ ಮೂಲಕ ಆನ್ಲೈನಲ್ಲೂ ತರಿಸಿಕೊಳ್ಳಬಹುದು. ಕಂಪನಿಯು ಗುರುವಾರದಂದು 10 ಲಕ್ಷ ಕಿಟ್ಗಳನ್ನು ಮಾರಕಟ್ಟೆಗೆ ಬಿಟ್ಟಿದೆ. ಬೇಡಿಕೆಯ ಆಧಾರದ ಮೇಲೆ ಪ್ರತಿವಾರ ಕಿಟ್ನ 70 ಲಕ್ಷ ಯುನಿಟ್ಗಳನ್ನು ಮಾರ್ಕೆಟ್ಗೆ ಬಿಡುವುದಾಗಿ ಕಂಪನಿ ತಿಳಿಸಿದೆ. ಈ ಕಿಟ್ ಮುಂದಿನ 2—3 ದಿನಗಳಲ್ಲಿ ಭಾರತದೆಲ್ಲೆಡೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ಐಸಿಎಮ್ಆರ್ನ ಮಾರ್ಗಸೂಚಿಗಳ ಪ್ರಕಾರ ಈ ಕಿಟ್ ಅನ್ನು ಸೋಂಕಿನ ಲಕ್ಷಣ ಇರುವವರು ಅಥವಾ ಇಲ್ಲದಿರುವವರು ಮತ್ತು ಸೋಂಕಿತರೊಂದಿಗೆ ನೇರವಾಗಿ ಸಂಪರ್ಕದಲ್ಲಿರುವರು ಉಪಯೋಗಿಸಬಹುದಾಗಿದೆ. ಮೂಗಿನ ಮಧ್ಯಭಾಗದ ಸ್ವ್ಯಾಬ್ ಟೆಸ್ಟ್ಗಾಗಿ ವಿನ್ಯಾಸಗೊಳಿಸಲಾಗಿರುವ ಇದು 15 ನಿಮಿಷಗಳಲ್ಲಿ ವೈರಸ್ ಅನ್ನು ಪತ್ತೆ ಮಾಡುತ್ತದೆ. ಪ್ರತಿ ಕಿಟ್ ಒಂದು ಟೆಸ್ಟಿಂಗ್ ಕಿಟ್, ಸೂಚನೆಗಳ ಹಸ್ತಪ್ರತಿ, ಮತ್ತು ಅದನ್ನು ಉಪಯೋಗಿಸಿದ ನಂತರ ಸುರಕ್ಷಿತವಾಗಿ ಡಿಸ್ಪೋಸ್ ಮಾಡಲು ಒಂದು ಬ್ಯಾಗ್ ಮೊದಲಾದವುಗಳನ್ನು ಒಳಗೊಂಡಿರುತ್ತದೆ. ಒಂದು ಕಿಟ್ನಿಂದ ಒಂದು ಟೆಸ್ಟ್ ಮಾತ್ರ ಮಾಡಬಹುದು.
‘ಮನೆಯಲ್ಲೆ ಟೆಸ್ಟ್ ಮಾಡಿಕೊಳ್ಳುವುದು ಸೋಂಕಿನ ಹರಡುವಿಕೆಯನ್ನು ತಗ್ಗಿಸುತ್ತದೆ. ಕೋವಿಸೆಲ್ಫ್ ಕಿಟ್ ದೇಶದಾದ್ಯಂತ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಅದರಲ್ಲೂ ವಿಶೇಷವಾಗಿ ಟೆಸ್ಟಿಂಗ್ ಸೌಲಭ್ಯಗಳಿಲ್ಲದ ಗ್ರಾಮೀಣ ಭಾಗದ ಜನರಿಗೆ ಅದನ್ನು ತಲುಪಿಸುವುದು ನಮ್ಮ ಗುರಿಯಾಗಿದೆ,’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಸ್ಮುಖ್ ರಾವಲ್ ಹೇಳಿದ್ದಾರೆ.
ಇದನ್ನೂ ಓದಿ: ಬಾಯಿ ಒಣಗುತ್ತಿದೆಯಾ? ಯಾವುದಕ್ಕೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ; ಹೊಸ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತಿದೆ ಡೆಡ್ಲಿ ವೈರಸ್