ರಾಹುಲ್ ಗಾಂಧಿ ಸೂಚನೆಯಂತೆ ಹಿಮಂತ ಶರ್ಮ ವಿರುದ್ಧ ಸುಳ್ಳು ಆರೋಪ; ಪವನ್ ಖೇರಾ ಬಗ್ಗೆ ಕಿರಣ್ ರಿಜಿಜು ಟೀಕೆ

ಅಸ್ಸಾಂ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಅವರ ಪತ್ನಿ ವಿರುದ್ಧ ಮಾಡಿದ ಗಂಭೀರ ಆರೋಪಗಳು ಉಲ್ಟಾ ಹೊಡೆದ ನಂತರ, ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಬಹುಮಾನವಾಗಿ ರಾಜ್ಯಸಭಾ ಸ್ಥಾನವನ್ನು ನೀಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು ಆರೋಪಿಸಿದ್ದಾರೆ. ಅರುಣಾಚಲ ಪ್ರದೇಶದ ನದಿಯೊಂದರಲ್ಲಿ ಕಿರಣ್ ರಿಜಿಜು ಈಜುತ್ತಿರುವ ವಿಡಿಯೋ ಹಾಗೂ ರಾಹುಲ್ ಗಾಂಧಿ ವಿರುದ್ಧ ಅವರು ಮಾಡಿದ್ದರೆನ್ನಲಾದ ಟೀಕೆಯ ಬಳಿಕ ಪವನ್ ಖೇರಾ ಮತ್ತು ಕಿರಣ್ ರಿಜಿಜು ನಡುವೆ ಆರಂಭವಾದ ಮಾತಿನ ಚಕಮಕಿಯ ನಡುವೆಯೇ ಈ ಹೊಸ ಆರೋಪ ಕೇಳಿಬಂದಿದೆ.

ರಾಹುಲ್ ಗಾಂಧಿ ಸೂಚನೆಯಂತೆ ಹಿಮಂತ ಶರ್ಮ ವಿರುದ್ಧ ಸುಳ್ಳು ಆರೋಪ; ಪವನ್ ಖೇರಾ ಬಗ್ಗೆ ಕಿರಣ್ ರಿಜಿಜು ಟೀಕೆ
Kiren Rijiju
Image Credit source: PTI

Updated on: Aug 26, 2026 | 7:31 PM

ನವದೆಹಲಿ, ಆಗಸ್ಟ್ 26: ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಹಾಗೂ ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ನಡುವಿನ ಮಾತಿನ ಸಮರ ತೀವ್ರಗೊಂಡಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ರಾಹುಲ್ ಗಾಂಧಿಯವರೇ ಪವನ್ ಖೇರಾಗೆ ಸೂಚಿಸಿದ್ದರು ಎಂದು ಕಿರಣ್ ರಿಜಿಜು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಸಚಿವ ಕಿರಣ್ ರಿಜಿಜು, ಈ ಸುಳ್ಳು ಆರೋಪಗಳು ಉಲ್ಟಾ ಹೊಡೆದ ನಂತರ, ಪವನ್ ಖೇರಾಗೆ ಅರ್ಹತೆಯಿಲ್ಲದಿದ್ದರೂ ಬಹುಮಾನವಾಗಿ ರಾಜ್ಯಸಭಾ ಸ್ಥಾನವನ್ನು ನೀಡಲಾಯಿತು ಎಂದು ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕರೇ ತಮಗೆ ತಿಳಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

“ಅಸ್ಸಾಂ ಚುನಾವಣೆಯ ಕೊನೆಯ ಗಳಿಗೆಯಲ್ಲಿ ಹಿಮಂತ ಬಿಸ್ವ ಶರ್ಮಾ ಮತ್ತು ರಿನಿಕಿ ಅವರ ವಿರುದ್ಧ ಸುಳ್ಳು ಆರೋಪ ಮಾಡಲು ಪವನ್ ಖೇರಾಗೆ ರಾಹುಲ್ ಗಾಂಧಿ ಹೇಳಿದ್ದರು ಎಂದು ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರೇ ನನಗೆ ತಿಳಿಸಿದ್ದಾರೆ. ಈ ಸುಳ್ಳು ಆರೋಪಗಳು ಉಲ್ಟಾ ಹೊಡೆದಾಗ, ಪವನ್ ಖೇರಾಗೆ ರಾಜ್ಯಸಭಾ ಸ್ಥಾನವನ್ನು ಬಹುಮಾನವಾಗಿ ನೀಡಲಾಯಿತು!” ಎಂದು ಕಿರಣ್ ರಿಜಿಜು ಪೋಸ್ಟ್ ಮಾಡಿದ್ದಾರೆ.


ಪವನ್ ಖೇರಾ ಮಾಡಿದ್ದ ಆರೋಪಗಳೇನು?:

ಅಸ್ಸಾಂ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ಪವನ್ ಖೇರಾ, ಹಿಮಂತ ಬಿಸ್ವ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಭಾರತ, ಯುಎಇ ಮತ್ತು ಈಜಿಪ್ಟ್ ಸೇರಿದಂತೆ ಹಲವು ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ, ದುಬೈನಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ ಹಾಗೂ ಅಮೆರಿಕ ನೋಂದಾಯಿತ ಸಂಸ್ಥೆಯ ಮೂಲಕ ಆಸ್ತಿ ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಕರ್ನಾಟಕ ಸಂಪುಟದಲ್ಲಿ ಮಹಿಳಾ ಸಚಿವರಿಲ್ಲ ಎಂದ ಕಿರಣ್ ರಿಜಿಜುಗೆ ಸಿಎಂ ಡಿಕೆ ಶಿವಕುಮಾರ್ ತಿರುಗೇಟು

ಆದರೆ, ಈ ಆರೋಪಗಳು ರಾಜಕೀಯ ಪ್ರೇರಿತ ಹಾಗೂ ಸುಳ್ಳು ಎಂದು ಹಿಮಂತ ಬಿಸ್ವ ಶರ್ಮಾ ತಳ್ಳಿಹಾಕಿದ್ದರು. ಗುವಾಹಟಿಯಲ್ಲಿ ಪವನ್ ಖೇರಾ ವಿರುದ್ಧ ಎಫ್‌ಐಆರ್ ದಾಖಲಾಗಿ, ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಅವರ ನಿವಾಸದಲ್ಲೂ ಶೋಧ ನಡೆಸಿದ್ದರು. ಗುವಾಹಟಿ ಹೈಕೋರ್ಟ್ ಜಾಮೀನು ನಿರಾಕರಿಸಿದರೂ, ನಂತರ ಸುಪ್ರೀಂ ಕೋರ್ಟ್ ಖೇರಾಗೆ ಮುಂಗಡ ಜಾಮೀನು ಮಂಜೂರು ಮಾಡಿತ್ತು. ಆದರೆ, ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದಲೇ ಈ ಹೇಳಿಕೆ ನೀಡಲಾಗಿತ್ತು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.


ರಾಜ್ಯಸಭಾ ಸ್ಥಾನದ ವಿವಾದ:

ಈ ಆರೋಪಗಳ ವಿವಾದ ಮುಗಿದ ಬಳಿಕ, ಜೂನ್ ತಿಂಗಳಿನಲ್ಲಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಿಂದ ಪವನ್ ಖೇರಾ ಅವರನ್ನು ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ಇದನ್ನು ಕಿರಣ್ ರಿಜಿಜು “ಸುಳ್ಳು ಆರೋಪ ಮಾಡಿದ್ದಕ್ಕೆ ಸಿಕ್ಕ ಬಹುಮಾನ” ಎಂದು ಕರೆದಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ವಿಧೇಯಕದ ಕುರಿತು ರಾಹುಲ್ ಗಾಂಧಿ- ಸಚಿವ ಕಿರಣ್ ರಿಜಿಜು ನಡುವೆ ತೀವ್ರ ವಾಕ್ಸಮರ

ಟ್ವೀಟ್ ವಾರ್ ಶುರುವಾಗಿದ್ದು ಹೇಗೆ?:

ಅರುಣಾಚಲ ಪ್ರದೇಶದ ನದಿಯೊಂದರಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಈಜುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ “ರಾಹುಲ್ ಗಾಂಧಿ ಹೆಸರೆತ್ತದೆ ಕಿರಣ್ ರಿಜಿಜುಗೆ ಅರ್ಧ ಬೆತ್ತಲೆಯಾಗಿ ಈಜಲು ಸಹ ಸಾಧ್ಯವಿಲ್ಲ” ಎಂದು ವ್ಯಂಗ್ಯವಾಡಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಸಚಿವ ಕಿರಣ್ ರಿಜಿಜು “ನಾನು 8 ಬಾರಿ ಚುನಾವಣೆ ಗೆದ್ದು ಬಂದಿದ್ದೇನೆ, ನೀವು ಮೊದಲ ಬಾರಿಗೆ ರಾಜ್ಯಸಭಾ ನಾಮನಿರ್ದೇಶನದಿಂದ ಬಂದಿರುವ ಸದಸ್ಯ. ಅಸಭ್ಯವಾಗಿ ಮಾತನಾಡಬೇಡಿ” ಎಂದು ಎಚ್ಚರಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us