ರಾಮ ಮಂದಿರದ ಕಾಣಿಕೆಗೆ ‘AI’ ಕಾವಲು: ಪ್ರತಿ ರೂಪಾಯಿಯನ್ನೂ ಟ್ರ್ಯಾಕ್ ಮಾಡಲು ಎಸ್‌ಐಟಿ ಮಾಸ್ಟರ್ ಪ್ಲ್ಯಾನ್
ರಾಮ ಮಂದಿರದಲ್ಲಿ ನಡೆದ ಕಾಣಿಕೆ ಕಳ್ಳತನಕ್ಕೆ ಕಡಿವಾಣ ಹಾಕಲು ಎಸ್‌ಐಟಿ AI-ಆಧಾರಿತ ಕಣ್ಗಾವಲು ವ್ಯವಸ್ಥೆ ಶಿಫಾರಸು ಮಾಡಿದೆ. ಇದು ಅನುಮಾನಾಸ್ಪದ ಚಲನವಲನ, ನಗದು ಸ್ಕ್ಯಾನಿಂಗ್ ಮೂಲಕ ಸಂಪೂರ್ಣ ಪಾರದರ್ಶಕತೆ ಖಚಿತಪಡಿಸುತ್ತದೆ. ಎಸ್‌ಬಿಐ ಮೇಲಿನ ಆಕ್ರೋಶದ ನಂತರ ಬ್ಯಾಂಕ್ ಬದಲಾವಣೆಗೆ ಟ್ರಸ್ಟ್ ಚಿಂತಿಸಿದೆ. ಅಲ್ಲದೆ, ಆರೋಪಿಗಳ ಆಸ್ತಿ ಜಪ್ತಿ ಮತ್ತು ವಿಐಪಿ ಪಾಸ್ ದಂಧೆಗೂ ಬೀಗ ಹಾಕಲಾಗಿದೆ.

ಅಯೋಧ್ಯೆ, ಜುಲೈ 13: ಕೇವಲ 40 ದಿನಗಳಲ್ಲಿ 70 ಬಾರಿ ದೇಣಿಗೆ ಹಣವನ್ನು ಲೂಟಿ ಮಾಡಿದ ರಾಮ ಮಂದಿರ(Ram Mandir)ದ ಸಿಬ್ಬಂದಿ ಕೃತ್ಯದಿಂದ ಎಚ್ಚೆತ್ತಿರುವ ವಿಶೇಷ ತನಿಖಾ ತಂಡ, ಭವಿಷ್ಯದಲ್ಲಿ ಇಂತಹ ಕಳ್ಳತನಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ಜಗತ್ತಿನ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ತರಲು ಶಿಫಾರಸು ಮಾಡಿದೆ. ಜುಲೈ 15 ರೊಳಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಕೆಯಾಗಲಿರುವ ಎಸ್‌ಐಟಿಯ ಅಂತಿಮ ವರದಿಯಲ್ಲಿ ಈ ಮಹತ್ವದ ತಂತ್ರಜ್ಞಾನದ ಅಳವಡಿಕೆಗೆ ಪ್ರಮುಖ ಆದ್ಯತೆ ನೀಡಲಾಗಿದೆ.
ಏನಿದು ‘ಎಐ’ ಆಧಾರಿತ ಕಾವಲು ತಂತ್ರಜ್ಞಾನ?
ಪ್ರಸ್ತುತ ಇರುವ ಸಾಧಾರಣ ಸಿಸಿಟಿವಿಗಳು ಕೇವಲ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತವೆ. ಆದರೆ ಪ್ರಸ್ತಾವಿತ ಎಐ ಕಣ್ಗಾವಲು ವ್ಯವಸ್ಥೆಯು ಅತ್ಯಂತ ಹೈಟೆಕ್ ಆಗಿರಲಿದೆ. ಅನುಮಾನಾಸ್ಪದ ಚಲನವಲನ ಪತ್ತೆ: ದೇಣಿಗೆ ಹಣ ಎಣಿಸುವಾಗ ನೌಕರರು ಕೈಗಳನ್ನು ಬಟ್ಟೆಯೊಳಗೆ ಹಾಕಿಕೊಳ್ಳುವುದು, ನೋಟುಗಳನ್ನು ಅಸಹಜವಾಗಿ ಮಡಿಚುವುದು ಅಥವಾ ಕ್ಯಾಮೆರಾದ ಕಣ್ಣು ತಪ್ಪಿಸಲು ಯತ್ನಿಸಿದರೆ ಈ ಎಐ ಸಾಫ್ಟ್‌ವೇರ್ ತಕ್ಷಣವೇ ‘ರೆಡ್ ಅಲರ್ಟ್’ ಸಂದೇಶವನ್ನು ಭದ್ರತಾ ಕೊಠಡಿಗೆ ರವಾನಿಸುತ್ತದೆ.
ನಗದು ಸ್ಕ್ಯಾನಿಂಗ್: ಕೌಂಟರ್‌ಗೆ ಬರುವ ಪ್ರತಿ ನೋಟು ಹಾಗೂ ಬೆಲೆಬಾಳುವ ಆಭರಣಗಳ ಡಿಜಿಟಲ್ ಟ್ರ್ಯಾಕಿಂಗ್ ಈ ತಂತ್ರಜ್ಞಾನದ ಮೂಲಕ ಸಾಧ್ಯವಾಗಲಿದ್ದು, ಎಣಿಕೆ ಪ್ರಕ್ರಿಯೆಯಲ್ಲಿ ಶೇ.100 ಪಾರದರ್ಶಕತೆ ಬರಲಿದೆ.
ಮತ್ತಷ್ಟು ಒದಿ: ರಾಮ ಮಂದಿರ ದೇಣಿಗೆ ಹಗರಣ:ಬೆಳಗ್ಗೆ ಫೋನ್ ಕಾಲ್, ಮಧ್ಯಾಹ್ನ ಕೋಟಿ ಕಳ್ಳತನ, ಏನೇನೆಲ್ಲಾ ನಡೀತು?
ಬ್ಯಾಂಕ್ ಬದಲಾವಣೆಗೆ ಟ್ರಸ್ಟ್ ಮುಂದು, ಎಸ್‌ಬಿಐ ವಿರುದ್ಧ ಚಂಪತ್ ರೈ ಆಕ್ರೋಶ
ಪ್ರಸ್ತುತ ರಾಮ ಮಂದಿರದ ಎಲ್ಲಾ ಕಾಣಿಕೆ ಹಣವನ್ನು ಅಯೋಧ್ಯೆಯ ನಯಾ ಘಾಟ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಟಿಯಾ (SBI) ಶಾಖೆಯಲ್ಲಿ ಜಮಾ ಮಾಡಲಾಗುತ್ತಿತ್ತು. ಆದರೆ, ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಕಳ್ಳತನಕ್ಕೆ ಕಾರಣ ಎಂದು ಎಸ್‌ಐಟಿ ಮುಂದೆ ಗಂಭೀರ ಆರೋಪ ಮಾಡಿದ್ದಾರೆ.
ಹಣ ಎಣಿಸುವ ಸಿಬ್ಬಂದಿಗಳಿಗೆ ಜೇಬಿಲ್ಲದ ಸಮವಸ್ತ್ರ ನೀಡುವುದು ಹಾಗೂ ಕಡ್ಡಾಯ ದೈಹಿಕ ತಪಾಸಣೆಯಂತಹ ಕನಿಷ್ಠ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಲು ಎಸ್‌ಬಿಐ ವಿಫಲವಾಗಿದೆ ಎಂದು ಅವರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿ ಅವರು ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಇನ್ಮುಂದೆ ಕಾಣಿಕೆ ಹಣವನ್ನು ಬೇರೆ ಬ್ಯಾಂಕ್‌ಗೆ ವರ್ಗಾಯಿಸಲು ಅಥವಾ ಹಲವು ಬ್ಯಾಂಕುಗಳಲ್ಲಿ ಹಂಚಿಕೆ ಮಾಡಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ.
ಆರೋಪಿಗಳ ಇಡೀ ಆಸ್ತಿ ಜಪ್ತಿಗೆ ಮುಹೂರ್ತ
ಈ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂದಿರದ ನೌಕರರು ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ. ಅವರಿಂದ ಸುಮಾರು 80 ಲಕ್ಷ ರೂ. ನಗದು ಮತ್ತು ಭಾರಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳ್ಳತನದ ವ್ಯಾಪ್ತಿ ದೊಡ್ಡದಿರುವುದರಿಂದ, ಆರೋಪಿಗಳು ಕದ್ದ ಹಣದಿಂದ ಅಯೋಧ್ಯೆಯ ಹೊರಗೆ ಅಥವಾ ತಮ್ಮ ಸಂಬಂಧಿಕರ ಹೆಸರಿನಲ್ಲಿ ಬೇರೆಲ್ಲೂ ಆಸ್ತಿ ಖರೀದಿಸಿದ್ದಾರೆಯೇ ಎಂದು ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ , ಬ್ಯಾಂಕುಗಳು ಮತ್ತು ಸಬ್-ರೆಜಿಸ್ಟ್ರಾರ್ ಕಚೇರಿಗಳಿಂದ ಚರ-ಸ್ಥಿರ ಆಸ್ತಿಗಳ ಸಂಪೂರ್ಣ ವಿವರವನ್ನು ಎಸ್‌ಐಟಿ ಪಡೆದುಕೊಂಡಿದೆ. ತಪ್ಪಿತಸ್ಥರ ಇಡೀ ಆಸ್ತಿಯನ್ನು ಜಪ್ತಿ ಮಾಡಲು ಸರ್ಕಾರ ಸಜ್ಜಾಗಿದೆ.
ಜೈಲಿನಲ್ಲಿರುವ ಇಬ್ಬರು ಪ್ರಮುಖ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಪೊಲೀಸ್ ಕಸ್ಟಡಿಗೆ ಕೋರಲಾಗಿದ್ದು, ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಜುಲೈ 14 ರಂದು ಇದರ ತೀರ್ಪು ನೀಡಲಿದೆ.
ವಿಐಪಿ ಪಾಸ್ ದಂಧೆಗೂ ಬಿತ್ತು ಬೀಗ
ಮಂದಿರದ ದೇಣಿಗೆ ಕಳ್ಳತನದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಟ್ರಸ್ಟ್‌ನ ಒಳಗಿದ್ದ ಮತ್ತೊಂದು ದೊಡ್ಡ ದಂಧೆಯನ್ನು ಮುಚ್ಚಿಹಾಕಲಾಗಿದೆ.
ಐಡಿ ಕಾರ್ಡ್‌ಗಳ ರದ್ದು: ಮಂದಿರದ ಮಾಜಿ ಪದಾಧಿಕಾರಿಗಳಾದ ಚಂಪತ್ ರಾಯ್, ಗೋಪಾಲ್ ರಾವ್ ಮತ್ತು ಅನಿಲ್ ಮಿಶ್ರಾ ಅವರ ಹೆಸರಿನಲ್ಲಿದ್ದ ಹಳೆಯ ಗುರುತಿನ ಚೀಟಿಗಳನ್ನು ಟ್ರಸ್ಟ್ ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದೆ.
ನಕಲಿ ಪಾಸ್‌ಗಳಿಗೆ ಬ್ರೇಕ್: ಈ ಹಿಂದೆ ಇವರ ರುಜುವಾತುಗಳನ್ನು ಬಳಸಿ ವಿಐಪಿ ಪ್ರವೇಶಕ್ಕಾಗಿ ಅಕ್ರಮವಾಗಿ ಇಶ್ಯೂ ಮಾಡಲಾಗುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಿಐಪಿ ಪಾಸ್‌ಗಳು ಇಂದಿನಿಂದ ಸಂಪೂರ್ಣ ಅಮಾನ್ಯವಾಗಿವೆ. ಮಂದಿರದ ಆಡಳಿತವನ್ನು ಸಂಪೂರ್ಣವಾಗಿ ಕಾರ್ಪೊರೇಟ್ ಮಾದರಿಯಲ್ಲಿ ಹೈಟೆಕ್ ಮಾಡಲು ಟ್ರಸ್ಟ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




