ಪತಿ ಪತ್ನಿಯೊಂದಿಗೆ ಮಾತನಾಡದೇ ಇರುವುದು ಕ್ರೌರ್ಯವಲ್ಲ: ಸುಪ್ರೀಂಕೋರ್ಟ್
ಪತ್ನಿಯೊಂದಿಗೆ ಮಾತನಾಡದೆ ಇರುವುದು 'ಕ್ರೌರ್ಯ'ವಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ದಾಂಪತ್ಯದಲ್ಲಿನ ಸಣ್ಣ ಭಿನ್ನಾಭಿಪ್ರಾಯಗಳು ಸಹಜ. ಕೇವಲ ಮಾತುಕತೆ ನಿಲ್ಲಿಸುವುದನ್ನು ಕಾನೂನಾತ್ಮಕ ಕ್ರೌರ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಸುಳ್ಳು ಆರೋಪಗಳನ್ನು ತಡೆಯುವ ಸಲುವಾಗಿ, ಪತಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ಆದೇಶಿಸಿದೆ. ಕೌಟುಂಬಿಕ ವ್ಯಾಜ್ಯಗಳಲ್ಲಿನ ಪಾರದರ್ಶಕತೆಗಾಗಿ ಈ ತೀರ್ಪು ಪ್ರಮುಖವಾಗಿದೆ.

ನವದೆಹಲಿ, ಜೂನ್ 05: ಪತಿ ದಿನಗಟ್ಟಲೆ ಪತ್ನಿಯೊಂದಿಗೆ ಮಾತನಾಡದೇ ಇರುವುದು ಕ್ರೌರ್ಯವಲ್ಲ ಎಂದು ಸುಪ್ರೀಂಕೋರ್ಟ್(Supreme Court) ಅಭಿಪ್ರಾಯಪಟ್ಟಿದೆ. ಪತ್ನಿಯ ಆತ್ಮಹತ್ಯೆ ಪ್ರಕರಣವೊಂದರ ಸುದೀರ್ಘ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು, ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಹಾಗೂ ಅದರ ಭಾಗವಾಗಿ ಕೆಲವು ದಿನಗಳ ಕಾಲ ದಂಪತಿಗಳ ನಡುವೆ ಮಾತುಕತೆ ನಿಲ್ಲುವುದು ಸಹಜ ಪ್ರಕ್ರಿಯೆಯಾಗಿದ್ದು, ಅದನ್ನು ಕಾನೂನಾತ್ಮಕ ‘ಕ್ರೌರ್ಯ’ಎಂದು ಪರಿಗಣಿಸಲು ಸಾಧ್ಯವಿಲ್ಲ ದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು, ಮದ್ರಾಸ್ ಹೈಕೋರ್ಟ್ ವಿಧಿಸಿದ್ದ ಮೂರು ವರ್ಷಗಳ ಜೈಲು ಶಿಕ್ಷೆಯ ತೀರ್ಪನ್ನು ರದ್ದುಗೊಳಿಸಿ, ಪತಿ ಹಾಗೂ ಆತನ ಕುಟುಂಬಸ್ಥರನ್ನು ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಸಂಪೂರ್ಣವಾಗಿ ದೋಷಮುಕ್ತಗೊಳಿಸಿ (ಖುಲಾಸೆ) ಆದೇಶ ಹೊರಡಿಸಿದೆ.
ಮದುವೆಯಾದ ಕೆಲವು ದಿನಗಳ ನಂತರ ಮಹಿಳೆಯು ವೀಸಾ ಪ್ರಕ್ರಿಯೆಯ ತಾಂತ್ರಿಕ ಕಾರಣಗಳಿಂದಾಗಿ ಮಸ್ಕತ್‌ನಲ್ಲಿದ್ದ ಪತಿಯೊಂದಿಗೆ ಹೋಗಲು ಸಾಧ್ಯವಾಗಲಿಲ್ಲ. ಆಕೆ ತನ್ನ ಪೋಷಕರ ಮನೆಯಲ್ಲಿದ್ದಾಗ, ಕೌಟುಂಬಿಕ ಅಸಮಾಧಾನದ ಹಿನ್ನೆಲೆಯಲ್ಲಿ ಪತಿಯು ಸುಮಾರು 13 ದಿನಗಳ ಕಾಲ ದೂರವಾಣಿ ಮೂಲಕ ಮಾತನಾಡಲು ನಿರಾಕರಿಸಿದ್ದರಿಂದ ನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಆಧಾರದ ಮೇಲೆ ಪತಿ ಮತ್ತು ಅತ್ತೆ-ಮಾವಂದಿರ ವಿರುದ್ಧ ವರದಕ್ಷಿಣೆ ಕಿರುಕುಳದ ಮೊಕದ್ದಮೆ ದಾಖಲಿಸಲಾಗಿತ್ತು.
ಮತ್ತಷ್ಟು ಓದಿ: ಕರ್ನಾಟಕ ಹೈಕೋರ್ಟ್ಗೆ ಜಡ್ಜ್ಗಳಾಗಿ 6 ವಕೀಲರ ನೇಮಕಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು
ಕೆಳ ನ್ಯಾಯಾಲಯಗಳು ಭಾವನಾತ್ಮಕವಾಗಿ ಶಿಕ್ಷೆ ವಿಧಿಸಿದ್ದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಕೇವಲ 13 ದಿನಗಳ ಕಾಲ ಫೋನ್‌ನಲ್ಲಿ ಮಾತನಾಡದಿರುವುದನ್ನು ಕ್ರೌರ್ಯ ಅನ್ನಲಾಗದು ಎಂದು ಹೇಳಿದೆ. ಪತ್ನಿಯು ತನ್ನ ಪೋಷಕರ ಮನೆಗೆ ಹೋಗಿದ್ದಕ್ಕೆ ಪತಿ ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯ ದಾಂಪತ್ಯದ ಭಾಗವೇ ಹೊರತು, ಅದು ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವಂತಹ ಗಂಭೀರ ಅಪರಾಧವಲ್ಲ ಎಂದು ನ್ಯಾಯಪೀಠವು ತೀರ್ಪು ನೀಡಿದೆ.
ಇಂತಹ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಕೇವಲ ಆರೋಪಗಳನ್ನು ಮಾಡುವ ಬದಲಾಗಿ, ಪತಿಯು ನಿಜಕ್ಕೂ ಮಹಿಳೆಗೆ ಮಾನಸಿಕವಾಗಿ ತೀವ್ರ ಹಿಂಸೆ ನೀಡಿದ್ದಾನೆಯೇ ಎಂಬುದನ್ನು ಸಾಬೀತುಪಡಿಸಬೇಕು ಎಂದು ನ್ಯಾಯಾಲಯ ಪುನರುಚ್ಚರಿಸಿದೆ.
ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲದಿದ್ದರೆ, ಕೇವಲ ಸಂವಹನದ ಕೊರತೆಯು ಕ್ರೌರ್ಯದ ವ್ಯಾಪ್ತಿಗೆ ಬರುವುದಿಲ್ಲ. ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಸುಳ್ಳು ಅಥವಾ ಸಾಕ್ಷ್ಯರಹಿತ ಆರೋಪಗಳು ಬಂದಾಗ, ತಾವು ನಿರಪರಾಧಿಗಳು ಎಂದು ಸಾಬೀತುಪಡಿಸುವ ಹೊರೆ ಆರೋಪಿಗಳ ಮೇಲಿರುವುದಿಲ್ಲ; ಬದಲಿಗೆ ಆರೋಪ ಹೊರಿಸಿದವರೇ ಅದನ್ನು ಸಾಬೀತುಪಡಿಸಬೇಕು.
ಸುಪ್ರೀಂ ಕೋರ್ಟ್‌ನ ಈ ತೀರ್ಪು ಕೌಟುಂಬಿಕ ವ್ಯಾಜ್ಯಗಳಲ್ಲಿ ಕಾನೂನಿನ ಪಾರದರ್ಶಕ ಬಳಕೆಯನ್ನು ಖಚಿತಪಡಿಸಿದೆ. ಸಣ್ಣಪುಟ್ಟ ಕೌಟುಂಬಿಕ ಜಗಳಗಳನ್ನು ಕ್ರಿಮಿನಲ್ ಅಪರಾಧಗಳಾಗಿ ಬಿಂಬಿಸುವುದನ್ನು ತಡೆಯುವ ಮೂಲಕ, ಈ ತೀರ್ಪು ಮುಗ್ಧ ಕುಟುಂಬಗಳಿಗೆ ನ್ಯಾಯ ಒದಗಿಸಿದೆ ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




