
ಪಣಜಿ, ಆಗಸ್ಟ್ 6: ಸುಮಾರು 13 ವರ್ಷಗಳ ಹಿಂದೆ ಗೋವಾದ ರೆಸಾರ್ಟ್ ಒಂದರಲ್ಲಿ ನಡೆದ ತೆಹೆಲ್ಕಾ ಥಿಂಕ್‌ಫೆಸ್ಟ್ ಕಾರ್ಯಕ್ರಮದಲ್ಲಿ ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ‘ತೆಹಲ್ಕಾ’ ನಿಯತಕಾಲಿಕೆಯ ಸ್ಥಾಪಕ ತರುಣ್ ತೇಜ್‌ಪಾಲ್ (Tarun Tejpal) ಅವರನ್ನು ದೋಷಿ ಎಂದು ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು, ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. 2021ರಲ್ಲಿ ವಿಚಾರಣಾ ನ್ಯಾಯಾಲಯವು ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ವಜಾಗೊಳಿಸಿದ ಹೈಕೋರ್ಟ್, 2 ವಾರಗಳ ಒಳಗೆ ಗೋವಾ ಪೊಲೀಸರ ಮುಂದೆ ಶರಣಾಗುವಂತೆ ತೇಜ್‌ಪಾಲ್‌ಗೆ ಆದೇಶ ನೀಡಿದೆ.
ಈ ಪ್ರಕರಣವು 2013 ರ ನವೆಂಬರ್ನದ್ದಾಗಿದ್ದು, ಗೋವಾದ ರೆಸಾರ್ಟ್ ಒಂದರಲ್ಲಿ ‘ತೆಹಲ್ಕಾ’ ಆಯೋಜಿಸಿದ್ದ ವಾರ್ಷಿಕ ‘ಥಿಂಕ್‌ಫೆಸ್ಟ್’ ಕಾರ್ಯಕ್ರಮದ ವೇಳೆ ಲಿಫ್ಟ್‌ನಲ್ಲಿ ತೇಜ್‌ಪಾಲ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳಾ ಉದ್ಯೋಗಿ ಆರೋಪಿಸಿದ್ದರು. ಆದರೆ, ತರುಣ್ ತೇಜ್‌ಪಾಲ್ ಇದನ್ನು ನಿರಾಕರಿಸಿದ್ದರು.
ಇಂದು ಬೆಳಿಗ್ಗೆ ಹೈಕೋರ್ಟ್ ತಮಗೆ ಶಿಕ್ಷೆಯನ್ನು ಖಚಿತಪಡಿಸುತ್ತಿದ್ದಂತೆಯೇ ತೇಜ್‌ಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ದೋಷಾರೋಪಣೆಯ ಆದೇಶವನ್ನು ಒಂದು ವಾರಗಳ ಕಾಲ ಅಮಾನತಿನಲ್ಲಿಡುವಂತೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಆದರೆ ಮಧ್ಯಾಹ್ನ ಹೈಕೋರ್ಟ್ ಅವರಿಗೆ 10 ವರ್ಷಗಳ ಶಿಕ್ಷೆ ಘೋಷಿಸಿ, ಶರಣಾಗಲು 2 ವಾರಗಳ ಕಾಲಾವಕಾಶ ನೀಡಿದೆ. ಇದು ತೇಜ್‌ಪಾಲ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಮೇಲ್ಮನವಿಯನ್ನು ಮುಂದುವರಿಸಲು ಅಥವಾ ತಿದ್ದುಪಡಿ ಮಾಡಲು ಸಮಯಾವಕಾಶ ಕಲ್ಪಿಸಲಿದೆ.
ಇದನ್ನೂ ಓದಿ: Tarun Tejpal: ತರುಣ್ ತೇಜ್‌ಪಾಲ್‌ಗೆ ಭಾರಿ ಆಘಾತ: 2013ರ ಅತ್ಯಾಚಾರ ಪ್ರಕರಣದಲ್ಲಿ ತೇಜ್‌ಪಾಲ್ ದೋಷಿ, ಹೈಕೋರ್ಟ್ ತೀರ್ಪು
ತಮ್ಮ ವಿರುದ್ಧ ಆದೇಶ ಹೊರಬಿದ್ದಾಗ ತರುಣ್ ತೇಜ್‌ಪಾಲ್ ನ್ಯಾಯಾಲಯದಲ್ಲಿಯೇ ಇದ್ದರು. ಈ ವೇಳೆ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ಮಾತನಾಡಿದ ತೇಜ್‌ಪಾಲ್, ತಮಗೀಗ 62 ವರ್ಷ ವಯಸ್ಸಾಗಿದ್ದು, ಕರುಣೆ ತೋರುವಂತೆ ಮನವಿ ಮಾಡಿದರು. “ನನಗೆ 62 ವರ್ಷ. ನಾನು ರಾಜಕೀಯಕ್ಕೆ ಬಲಿಯಾಗಿದ್ದೇನೆ ಎಂದು ಭಾವಿಸುತ್ತೇನೆ. ನನಗೆ ಹೆಂಡತಿಯಿದ್ದಾರೆ, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇದಕ್ಕಿಂತ ಹೆಚ್ಚು ಹೇಳಲು ಏನೂ ಇಲ್ಲ. ನಾವು ಮೇಲ್ಮನವಿ ಸಲ್ಲಿಸಬಹುದು ಅಷ್ಟೇ. ದಯವಿಟ್ಟು ನನ್ನ ಮೇಲೆ ಕರುಣೆ ತೋರಿ” ಎಂದು ತೇಜ್‌ಪಾಲ್ ಹೇಳಿದರು.
#WATCH | Goa | After being convicted in 2013 sexual assault case, Tehelka magazine Founder Tarun Tejpal says, “We will surely approach the Supreme Court. They are after me due to political vendetta and work done by Tehelka. We fought the case for 7.5 years in the trial court and… pic.twitter.com/9A2u9wnCQD
— ANI (@ANI) August 6, 2026
ತರುಣ್ ತೇಜ್‌ಪಾಲ್ ಅವರ ಕರುಣೆಯ ಅರ್ಜಿಯನ್ನು ವಿರೋಧಿಸಿದ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪತ್ರಕರ್ತ ತರುಣ್ ತೇಜ್‌ಪಾಲ್ ಸಂತ್ರಸ್ತೆಗೆ ತಂದೆಯ ಸಮಾನರಾಗಿದ್ದರು. ಸಮಾಜಕ್ಕೆ ಪ್ರಬಲ ಸಂದೇಶ ರವಾನಿಸಲು ಸೂಕ್ತ ಉದಾಹರಣೆಯನ್ನು ಸೃಷ್ಟಿಸಬೇಕು ಎಂದು ಹೇಳಿದರು. “ಸಂತ್ರಸ್ತೆ ತಮ್ಮ ಮಗಳ ವಯಸ್ಸಿನ ಹುಡುಗಿಯಾಗಿದ್ದರೂ ಅವರು ಅತ್ಯಾಚಾರ ಎಸಗಿದ್ದಾರೆ. ಆ ಯುವತಿಗೆ ತಂದೆಯಂತಿದ್ದವರು ಇಂತಹ ಕೃತ್ಯದಲ್ಲಿ ತೊಡಗಬಾರದಿತ್ತು. ಆ ಸಂತ್ರಸ್ತೆ ನಿರಾಕರಿಸಿದರೂ ಅವರು ಮುಂದಿನ 2 ದಿನಗಳ ಕಾಲ ಸತತವಾಗಿ ದೌರ್ಜನ್ಯ ಎಸಗುವುದನ್ನು ಮುಂದುವರಿಸಿದರು” ಎಂದು ಮೆಹ್ತಾ ಹೇಳಿದರು.
ಇದನ್ನೂ ಓದಿ: ನ್ಯಾಯಾಂಗದ ಅಧಿಕಾರಿಗಳು ಸರ್ಕಾರಿ ನೌಕರರಲ್ಲ; ನ್ಯಾಯಾಧೀಶರ ನಿವೃತ್ತಿ ವಯಸ್ಸು ಹೆಚ್ಚಳದ ಕುರಿತು ಸುಪ್ರೀಂ ಕೋರ್ಟ್ ಅಭಿಮತ
ಏನಿದು ಪ್ರಕರಣ?:
ಗೋವಾದ ಬಾಂಬೋಲಿಮ್‌ನಲ್ಲಿರುವ ಗ್ರಾಂಡ್ ಹಯಾತ್ ಹೋಟೆಲ್‌ನ ಲಿಫ್ಟ್‌ನಲ್ಲಿ ಹಿರಿಯ ಪತ್ರಕರ್ತ ತರುಣ್ ತೇಜ್‌ಪಾಲ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾಜಿ ‘ತೆಹಲ್ಕಾ’ ಸಹೋದ್ಯೋಗಿಯೊಬ್ಬರು ಆರೋಪಿಸಿದ್ದರು. ಆ ಸಮಯದಲ್ಲಿ ‘ತೆಹಲ್ಕಾ’ ಅತ್ಯಂತ ಪ್ರಭಾವಿ ತನಿಖಾ ನಿಯತಕಾಲಿಕೆಗಳಲ್ಲಿ ಒಂದಾಗಿತ್ತು ಮತ್ತು ತೇಜ್‌ಪಾಲ್ ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿದ್ದರು. ತೇಜ್‌ಪಾಲ್ ಅವರನ್ನು 2013ರ ನವೆಂಬರ್ 30ರಂದು ಬಂಧಿಸಲಾಯಿತು. ಆದರೆ, 1 ವರ್ಷದ ಒಳಗಾಗಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
ಗೋವಾ ಸೆಷನ್ಸ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ 2017ರಲ್ಲಿ ಪ್ರಾರಂಭವಾಯಿತು. 2021ರಲ್ಲಿ ಸೆಷನ್ಸ್ ಕೋರ್ಟ್ ತೇಜ್‌ಪಾಲ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆ ಪ್ರಕರಣದಲ್ಲಿ ಇದೀಗ ತೀರ್ಪು ಹೊರಬಿದ್ದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ