ತಿಹಾರ್ ಜೈಲಿನಲ್ಲಿ ಮೊಬೈಲ್ ಬೇಟೆ: ಟಾಯ್ಲೆಟ್ ಫ್ಲಶ್ ಟ್ಯಾಂಕ್, ಮರದ ಬುಡ, ಬೆನ್ನಿಗೆ ಕಟ್ಟಿ ಬಚ್ಚಿಟ್ಟಿದ್ದ 350 ಫೋನ್‌ಗಳು ಜಪ್ತಿ
ದೆಹಲಿಯ ತಿಹಾರ್ ಜೈಲಿನಲ್ಲಿ ಮೊಬೈಲ್ ಫೋನ್ ಅಕ್ರಮ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆರ್ಟಿಐ ತನಿಖೆಯಲ್ಲಿ ಬಯಲಾಗಿದೆ. 2020-2025ರ ಅವಧಿಯಲ್ಲಿ 350 ಫೋನ್‌ಗಳನ್ನು (ಹೆಚ್ಚಾಗಿ ಮಿನಿ ಫೋನ್‌ಗಳು) ಟಾಯ್ಲೆಟ್, ಮರದ ಬುಡ, ಖೈದಿಗಳ ಬೆನ್ನಿಗೆ ಕಟ್ಟಿದ ಸ್ಥಿತಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಕೈದಿಗಳು ಅಕ್ರಮ ಸಂವಹನಕ್ಕಾಗಿ ಹ್ಯಾಂಡ್‌ಮೇಡ್ ಚಾರ್ಜರ್‌ಗಳನ್ನು ಸಹ ಬಳಸುತ್ತಿದ್ದರು.

ನವದೆಹಲಿ, ಅಕ್ಟೋಬರ್ 21: ಏಷ್ಯಾದ ಅತ್ಯಂತ ದೊಡ್ಡ ಮತ್ತು ಕಟ್ಟುನಿಟ್ಟಿನ ಭದ್ರತೆಯ ಕಾರಾಗೃಹವೆನಿಸಿರುವ ದೆಹಲಿಯ ತಿಹಾರ್ ಜೈಲಿನಲ್ಲಿ ಮೊಬೈಲ್ ಫೋನ್ ಕಳ್ಳಸಾಗಣೆ ಎಗ್ಗಿಲ್ಲದೆ ಸಾಗಿದೆ. ಗಿಡಗಳ ಪಾಟ್‌ಗಳು, ಅರಳಿ ಮರದ ಬುಡ, ಶೌಚಾಲಯದ ಫ್ಲಶ್ ಟ್ಯಾಂಕ್‌ಗಳು, ಕುಡಿಯುವ ನೀರಿನ ಪೈಪ್‌ಗಳು, ವಾಟರ್ ಫಿಲ್ಟರ್ (RO) ಅಷ್ಟೇ ಅಲ್ಲದೆ ಕೈದಿಯೊಬ್ಬನ ಬೆನ್ನಿಗೆ ಕಟ್ಟಿದ್ದ ಸ್ಥಿತಿಯಲ್ಲೂ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಮಾಹಿತಿ ಹಕ್ಕು ಕಾಯ್ದೆ (RTI) ಅಡಿ ಪಡೆದ ಅಧಿಕೃತ ದಾಖಲೆಗಳಿಂದ ಈ ಆಘಾತಕಾರಿ ಸತ್ಯಾಂಶ ಬಯಲಾಗಿದೆ.
ತಿಹಾರ್ ಮತ್ತು ಮಂಡೋಲಿ ಸೇರಿದಂತೆ ಒಟ್ಟು 15 ಕೇಂದ್ರ ಕಾರಾಗೃಹಗಳ ಸಂಕೀರ್ಣದಲ್ಲಿ ಸುಮಾರು 10,000ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಇವುಗಳಲ್ಲಿ ಸೆಂಟ್ರಲ್ ಜೈಲ್ ನಂ.3 ನೀಡಿರುವ ಮಾಹಿತಿಯ ಪ್ರಕಾರ, 2020 ರಿಂದ 2025ರ ಅವಧಿಯಲ್ಲಿ ಒಟ್ಟು 285 ಕಾರ್ಯಾಚರಣೆಗಳನ್ನು ನಡೆಸಿ 350 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖೈದಿಗಳ ಮೊದಲ ಆಯ್ಕೆ ಮಿನಿ ಮೊಬೈಲ್ ಜೈಲಿನೊಳಗೆ ಫೋನ್ ಬಚ್ಚಿಡಲು ಸುಲಭವಾಗುವಂತೆ ಚಿಕ್ಕದಾಗಿದ್ದರೆ ಉತ್ತಮ ಎಂಬ ಸೂತ್ರವನ್ನು ಕೈದಿಗಳು ಪಾಲಿಸುತ್ತಿದ್ದಾರೆ.
ಕೀಚೌಡ ಫೋನ್‌ಗಳದ್ದೇ ಕಾರುಬಾರು: ಜಪ್ತಿಯಾದ ಮೊಬೈಲ್‌ಗಳಲ್ಲಿ ಬರೋಬ್ಬರಿ ಶೇ.58 (202 ಫೋನ್‌ಗಳು) ಹೆಬ್ಬೆರಳಿನ ಗಾತ್ರದ ಚೀನಾ ನಿರ್ಮಿತ ‘ಕೀಚೌಡ’ ಮಿನಿ ಫೋನ್‌ಗಳಾಗಿವೆ. ಕೇವಲ 1,000 ರೂ. ಆಸುಪಾಸಿನ ಬೆಲೆಯ ಈ ಫೋನ್‌ಗಳು ಬಚ್ಚಿಡಲು ಅತಿ ಸುಲಭ.
ಸ್ಯಾಮ್‌ಸಂಗ್ ಡ್ಯುಯೋಸ್: ಎರಡನೇ ಸ್ಥಾನದಲ್ಲಿ ಸಣ್ಣ ಗಾತ್ರದ ಸ್ಯಾಮ್‌ಸಂಗ್ ಡ್ಯುಯೋಸ್ ಕೀಪ್ಯಾಡ್ ಫೋನ್‌ಗಳಿದ್ದು, ಇಂತಹ 88 ಫೋನ್‌ಗಳು (25%) ಸಿಕ್ಕಿವೆ.
ಇತರ ಬ್ರ್ಯಾಂಡ್‌ಗಳು: ಒಪ್ಪೋ, ರೆಡ್‌ಮಿ, ವಿವೋ, ರಿಯಲ್‌ಮಿ ಸೇರಿದಂತೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಸಿಕ್ಕಿದ್ದು, ಅತ್ಯಂತ ದುಬಾರಿ ಐಫೋನ್ (ಕೇವಲ 2) ಮತ್ತು ನೋಕಿಯಾ ಸ್ಮಾರ್ಟ್‌ಫೋನ್‌ಗಳು (6) ಕೂಡ ಪತ್ತೆಯಾಗಿವೆ.
ಬಚ್ಚಿಡಲು ನಾನಾ ಕಸರತ್ತು: ಕೈಯಲ್ಲೇ ಚಾರ್ಜರ್ ತಯಾರಿ
ಗೋಡೆ ಮತ್ತು ನೆಲದೊಳಗೆ ಗುಪ್ತ ಜಾಗ: ಜೈಲಿನ ಆವರಣದಲ್ಲಿ ಕಟ್ಟಡ ದುರಸ್ತಿ ಮತ್ತು ಅಗೆಯುವ ಕೆಲಸ ಮಾಡುವಾಗ ನೆಲದಡಿಯಿಂದ, ಬ್ಯಾರಕ್‌ನ ಗೋಡೆಗಳ ಪೊಟರೆಗಳಿಂದ ಮತ್ತು ಟಿಫಿನ್ ಬಾಕ್ಸ್‌ಗಳಿಂದ ಫೋನ್‌ಗಳನ್ನು ಹೊರತೆಗೆಯಲಾಗಿದೆ. ಪತ್ತೆಯಾಗದಂತೆ ತಡೆಯಲು 17 ಮೊಬೈಲ್‌ಗಳ ಐಎಂಇಐ ಸಂಖ್ಯೆಗಳನ್ನು ಅಳಿಸಿಹಾಕಲಾಗಿತ್ತು.
ಜೈಲಿನೊಳಗೆ ವಿದ್ಯುತ್ ತಂತಿಗಳನ್ನು ಜೋಡಿಸಿ ಖೈದಿಗಳೇ ತಯಾರಿಸಿದ್ದ 19 ಸುಧಾರಿತ “ಹ್ಯಾಂಡ್‌ಮೇಡ್ ಚಾರ್ಜರ್‌ಗಳು” ಪತ್ತೆಯಾಗಿವೆ. ಇದರ ಜೊತೆಗೆ ಪೆನ್‌ಡ್ರೈವ್, ಇಯರ್‌ಫೋನ್ ಮತ್ತು ಮೆಮೊರಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂಟರ್ನೆಟ್ ಕರೆಗಳ (VoIP) ಬಳಕೆಯೂ ಜೈಲಿನೊಳಗೆ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳು ಗಮನಿಸಿದ್ದಾರೆ.
ತಮಿಳುನಾಡು ವಿಶೇಷ ಪೊಲೀಸ್ ಪಡೆಯಿಂದ (TNSP) ಅನಿರೀಕ್ಷಿತ ತಪಾಸಣೆ ಮತ್ತು ಶೋಧ ಕೈಗೊಂಡಿದ್ದಾರೆ. ಮೊಬೈಲ್ ಸಿಗ್ನಲ್ ಕಟ್ ಮಾಡಲು ಜಾಮರ್‌ಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಸಲಾಗಿದೆ. ನಿಯಮ ಉಲ್ಲಂಘಿಸಿ ಮೊಬೈಲ್ ಬಳಸಿದ 60ಕ್ಕೂ ಹೆಚ್ಚು ಕೈದಿಗಳಿಗೆ ಕಠಿಣ ಆಡಳಿತಾತ್ಮಕ ಶಿಕ್ಷೆ ವಿಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
